ಪಾರು, ಮಂಗಳ ಗೌರಿ ಮದುವೆ, ವಧು ಧಾರಾವಾಹಿಗಳಲ್ಲಿ ನಟಿಸಿದ್ದ ನಟ ಶ್ರೀಧರ್ ನಿಧನ
ಕಿಚ್ಚ ಸುದೀಪ್ ಜತೆಗೆ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸಿದ್ದ, ಪಾರು, ಮಂಗಳ ಗೌರಿ ಮದುವೆ, ವಧು ಹಾಗೂ ಇನ್ನೂ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ ನಟ ಶ್ರೀಧರ್ ನಾಯ್ಕ್ ಅವರು ಸೋಮವಾರ ನಿಧನರಾಗಿದ್ದಾರೆ.

ಕಿಚ್ಚ ಸುದೀಪ್ ಜತೆಗೆ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸಿದ್ದ, ಪಾರು, ಮಂಗಳ ಗೌರಿ ಮದುವೆ, ವಧು ಹಾಗೂ ಇನ್ನೂ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ ನಟ ಶ್ರೀಧರ್ ನಾಯ್ಕ್ ಅವರು ಸೋಮವಾರ ನಿಧನರಾಗಿದ್ದಾರೆ. ಕಳೆದ ತಿಂಗಳು ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುದ್ದಿ ವೈರಲ್ ಆಗಿತ್ತು. ಇವರು ಇನ್‌ಫೆಕ್ಷನ್‌ನಿಂದ ಗುರುತು ಸಿಗದಂತೆ ಕೃಶವಾಗಿದ್ದರು. ಪ್ರತಿಭಾವಂತ ನಟನ ಈ ಸ್ಥಿತಿ ನೋಡಿ ಎಲ್ಲರೂ ಮರುಗಿದ್ದರು. ಇದೀಗ ಇವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಅಪ್ತರು, ಸಹ ಕಲಾವಿದರು ನಿಧನ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಇವರು ಮಂಗಳ ಗೌರಿ, ಪಾರು, ಮನೆಯೇ ಮಂತ್ರಾಲಯ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿಯೂ ನಟಿಸಿದ್ದರು. ರಾಜಾ ಮಾರ್ತಾಂಡ, ಈಶ ಮಹೇಶ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ವರದಿಗಳ ಪ್ರಕಾರ ಶ್ರೀಧರ್ ನಾಯ್ಕ್ ಅವರ ಆರೋಗ್ಯ ಕಳೆದ ಹಲವು ತಿಂಗಳುಗಳಿಂದ ಹದಗೆಟ್ಟಿತ್ತು. ಕೌಟುಂಬಿಕ ತೊಂದರೆಯಿಂದ ಒಂಟಿಯಾಗಿದ್ದರು. ಹಣದ ಸಮಸ್ಯೆಯಿದ ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲವಂತೆ. ದೇಹದಲ್ಲಿ ವಿಟಮಿನ್, ಪ್ರೋಟೀನ್ ಕಡಿಮೆಯಾಗಿ ಆರಂಭದಲ್ಲಿ ಜ್ವರ ಬಂದಿತ್ತಂತೆ. ಬಳಿಕ, ಕಾಲು ಊದಿಕೊಳ್ಳಲಾರಂಭಿಸಿತ್ತು. ಆರಂಭದಲ್ಲಿ ಆಯುರ್ವೇದಿಕ್ ಡಾಕ್ಟರ್ ಬಳಿ ಚಿಕಿತ್ಸೆ ಪಡೆದಿದ್ದರು. ಡಾಕ್ಟರ್ 20 ದಿನಗಳ ಪಥ್ಯ ಮಾಡಲು ಹೇಳಿದ್ದರು. ಅದನ್ನು ಫಾಲೋ ಮಾಡಲು ಇವರಿಗೆ ಆಗಿರಲಿಲ್ಲ. ಬಳಿಕ ಇಡೀ ದೇಹ ಊದಿಕೊಂಡಿತ್ತು. ಬಳಿಕ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಕಳೆದ ತಿಂಗಳು ಇವರ ಆರೋಗ್ಯದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಕಮಲಿ ಸೀರಿಯಲ್ ನಟಿ ಕೂಡ ಸಹಾಯ ಮಾಡಿ ಎಂದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಹಂಚಿಕೊಂಡಿದ್ದರು. ಕಿತಾ ಅವರು ಇನ್‌ಸ್ಟಾಗ್ರಾಂನಲ್ಲಿ ಶ್ರೀಧರ್ ಅವರ ಫೋಟೋ ಹಂಚಿಕೊಡಿದ್ದಾರೆ. "ನಟ ಶ್ರೀಧರ್ ಅವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿ ಸಾಕಷ್ಟು ತೊಂದರೆಯಲ್ಲಿದ್ದಾರೆ. ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಇವರನ್ನು ಅಡ್ಮಿಟ್ ಮಾಡಲಾಗಿದೆ. ಎಲ್ಲರೂ ದಯವಿಟ್ಟು ಇವರಿಗೆ ಸಹಾಯ ಮಾಡಿ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ" ಎಂದು ನಟಿ ಅಂಕಿತಾ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದರು.
ಸ್ವತಃ ಶ್ರೀಧರ್ ಅವರು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. "ನಮಸ್ತೇ, ನಾನು ಶ್ರೀಧರ್ ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದೇನೆ. ಆಸ್ಪತ್ರೆಯ ಖರ್ಚು ಭರಿಸಲಾಗದಷ್ಟು ತೊಂದರೆಯಾಗಿದೆ. ಬೆಂಗಳೂರಿನ ಹೆಬ್ಬಾಳದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೇನೆ. ದಿನಕ್ಕೆ ಆಸ್ಪತ್ರೆ ಮತ್ತು ಔಷಧ ಖರ್ಚು ಹತ್ತು ಹದಿನೈದು ಸಾವಿರ ಆಗುತ್ತಿದೆ. ತಾವೆಲ್ಲರೂ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ಶ್ರೀಧರನನ್ನು ಕಾಪಾಡಿ, ನನ್ನನ್ನು ಬದುಕಿಸಲು ಪ್ರಯತ್ನಿಸಿ" ಎಂದು ಅವರು ಭಾವುಕರಾಗಿ ಮನವಿ ಮಾಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.