ನೂರಾರು ಸಿನಿಮಾ ಮಾಡಿದ್ರು ಇನ್ನೂ ಬಾಡಿಗೆ ಮನೆಯಲ್ಲೇ ಬದುಕು, ಒಂಟಿ ಜೀವಕ್ಕೆ ಕ್ಯಾನ್ಸರ್‌ ಗಂಟುಬಿತ್ತು; ಗಟ್ಟಿಮೇಳ ಸೀರಿಯಲ್‌ ನಟಿ ಕಮಲಶ್ರೀ
ಕನ್ನಡ ಸುದ್ದಿ  /  ಮನರಂಜನೆ  /  ನೂರಾರು ಸಿನಿಮಾ ಮಾಡಿದ್ರು ಇನ್ನೂ ಬಾಡಿಗೆ ಮನೆಯಲ್ಲೇ ಬದುಕು, ಒಂಟಿ ಜೀವಕ್ಕೆ ಕ್ಯಾನ್ಸರ್‌ ಗಂಟುಬಿತ್ತು; ಗಟ್ಟಿಮೇಳ ಸೀರಿಯಲ್‌ ನಟಿ ಕಮಲಶ್ರೀ

ನೂರಾರು ಸಿನಿಮಾ ಮಾಡಿದ್ರು ಇನ್ನೂ ಬಾಡಿಗೆ ಮನೆಯಲ್ಲೇ ಬದುಕು, ಒಂಟಿ ಜೀವಕ್ಕೆ ಕ್ಯಾನ್ಸರ್‌ ಗಂಟುಬಿತ್ತು; ಗಟ್ಟಿಮೇಳ ಸೀರಿಯಲ್‌ ನಟಿ ಕಮಲಶ್ರೀ

Actress Kamalshree: ಗಟ್ಟಿಮೇಳ ಧಾರಾವಾಹಿ ನಟಿ ಕಮಲಶ್ರೀ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಇನ್ನೂ ಬಾಡಿಗೆ ಮನೆಯಲ್ಲಿರುವ ಬಗ್ಗೆ ಮಾತನಾಡಿರುವ ಅವರು ಜೀವನ ಹೇಗೆ ಸಾಗುತ್ತಿದೆ ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಗಟ್ಟಿಮೇಳ ಸೀರಿಯಲ್‌ ನಟಿ ಕಮಲಶ್ರೀ
ಗಟ್ಟಿಮೇಳ ಸೀರಿಯಲ್‌ ನಟಿ ಕಮಲಶ್ರೀ

Gattimela Serial Actress Kamalashree: ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಹಿರಿಯ ನಟಿ ಕಮಲಶ್ರೀ ಅವರೀಗ‌ ಸ್ತನಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಕಮಲಶ್ರೀ ಅವರು ಇಳಿ ವಯಸ್ಸಿನಲ್ಲಿ ಏಕಾಂಗಿಯಾಗಿ ಬದುಕುತ್ತಿರೋದು ನಿಜಕ್ಕೂ ಬೇಸರದ ಸಂಗತಿ. ಈ ಬಗ್ಗೆ ಅವರು ಪಂಚಮಿ ಟಾಕ್ಸ್ʼ ಯುಟ್ಯೂಬ್‌ ಚಾನೆಲ್‌ ಜೊತೆಗೆ ಮಾತನಾಡಿದ್ದಾರೆ.

ಕಮಲಶ್ರೀಗೆ ಕ್ಯಾನ್ಸರ್‌ ಕಾಯಿಲೆ!

ಹೌದು, ಮದುವೆಯಾದರೂ ಚಿಕ್ಕಂದಿನಿಂದಲೇ ಗಂಡನಿಂದ ದೂರವೇ ಉಳಿದಿದ್ದಾರೆ ಕಮಲಶ್ರೀ. ತಾಯಿ ಜೊತೆಯೇ ಅವರು ಇದ್ದರು. ನೂರು ವರ್ಷಗಳ ಕಾಲ ಬದುಕಿದ್ದ ಕಮಲಶ್ರೀ ತಾಯಿ ಸುಂದರಶ್ರೀ ಕೂಡ ನಾಟಕಗಳಲ್ಲಿ ಅಭಿನಯಿಸಿದ್ದರು. ಮೊದಲ ಮದುವೆ ಮುರಿದ ಮೇಲೆ ಕಮಲಶ್ರೀ ಮತ್ತೆ ಮದುವೆ ಆಗಲೇ ಇಲ್ಲ. ಗಂಡ- ಮಕ್ಕಳು ಸಂಸಾರ ಇಲ್ಲದ ಕಮಲಶ್ರೀ ಈಗ ಏಕಾಂಗಿಯಾಗಿ ಬದುಕುತ್ತಿದ್ದಾರೆ. ಕಮಲಶ್ರೀ ಅವರಿಗೆ ಸಂಬಂಧಿಕರು ಇದ್ದರೂ ಕೂಡ, ಆಗಾಗ ಸಹಾಯ ಮಾಡುತ್ತಾರಂತೆ.

ಇನ್ನು ಈ ವಯಸ್ಸಿನಲ್ಲಿ ಕ್ಯಾನ್ಸರ್‌ ಬಂದಿರೋದಿಕ್ಕೆ ಸರ್ಜರಿ ಮಾಡೋಕಾಗಲ್ಲ, ಕಿಮೋ ಕೊಡೋಕೆ ಆಗೋದಿಲ್ಲ ಎಂದು ವೈದ್ಯರು ಹೇಳಿದ್ದಾರಂತೆ. ಹಿರಿಯ ನಟಿ ಉಮಾಶ್ರೀ, ಗಿರಿಜಾ ಲೋಕೇಶ್‌, ಮೈಸೂರು ಮಾಲತಿ, ವೀಣಾ ವೆಂಕಟೇಶ್‌, ಗಟ್ಟಿಮೇಳ ಧಾರಾವಾಹಿ ನಟಿ ಅಶ್ವಿನಿ ಮುಂತಾದವರು ಕಮಲಶ್ರೀಗೆ ಹಣದ ಸಹಾಯ ಮಾಡಿದ್ದಾರೆ. ಇನ್ನೂ ಕೆಲವರು ದವಸಧಾನ್ಯಗಳನ್ನು ನೀಡಿದ್ದಾರೆ. ಸದ್ಯ ನಟನೆ ಮಾಡಲು ಶಕ್ತಿ ಇಲ್ಲದ ಸ್ಥಿತಿಯಲ್ಲಿರುವ ಅವರು ಹೀಗೆ ಸಹಾಯ ಮಾಡಿದವರ ಹಣದಿಂದ ಬದುಕು ನಡೆಸುತ್ತಿದ್ದಾರೆ.

ಏಕಾಂಗಿ ಜೀವನ!

“ನನಗೆ ಗಂಡ- ಮಕ್ಕಳು ಸಂಸಾರ ಇರಬೇಕಿತ್ತು ಅಂತ ನಿತ್ಯವೂ ಅನಿಸುತ್ತೆ. ಆದರೆ ನನ್ನ ಹಣೆಯಲ್ಲಿ ಇದೆಲ್ಲ ಬರೆದಿಲ್ಲ ಅಷ್ಟೇ. ನಾನು ಹೋದ ಜನ್ಮದಲ್ಲಿ ಯಾರ ಸಂಸಾರ ಹಾಳು ಮಾಡಿದ್ನೋ ಏನೋ ಈ ಜನ್ಮದಲ್ಲಿ ದೇವರು ನಂಗೆ ಇದೆಲ್ಲ ಕೊಟ್ಟಿಲ್ಲ. ನನ್ನ ಅಕ್ಕನ ಮಗಳಿಗೆ ನನ್ನ ಕಂಡ್ರೆ ಇಷ್ಟ, ಅವಳೇ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾಳೆ, ಊಟ-ತಿಂಡಿ ಏನಾದರೂ ತಂದುಕೊಡ್ತಾಳೆ. ನನಗೆ ಯಾರಿಗೂ ಭಾರ ಆಗೋಕೆ ಇಷ್ಟ ಇಲ್ಲ. ನಾನು ಯಾರಿಗಾದ್ರೂ ಫೋನ್‌ ಮಾಡಿದ್ರೆ ಸಹಾಯ ಕೇಳೋಕೆ ಫೋನ್‌ ಮಾಡ್ತಿದೀನಿ ಅಂತ ಅಂದುಕೊಳ್ತಾರೆ. ಹೀಗಾಗಿ ನಾನು ಯಾರಿಗೂ ಫೋನ್‌ ಮಾಡೋಕೆ ಹೋಗೋದಿಲ್ಲ” ಎಂದು ಕಮಲಶ್ರೀ ಅವರು ಹೇಳಿದ್ದಾರೆ.

ಯಾಕೆ ಆಸ್ತಿ ಮಾಡಿಡಲಿಲ್ಲ?

“ನಾವು ನಟಿಸುವ ಧಾರಾವಾಹಿ, ಸಿನಿಮಾಗಳಲ್ಲಿ ಸಂಭಾವನೆ ಕಡಿಮೆ ಇರುತ್ತದೆ. ಬೆಳಗ್ಗೆಯಿಂದ ರಾತ್ರಿವರೆಗೆ ದುಡಿದ್ರೂ ಕೂಡ ಒಮ್ಮೊಮ್ಮೆ ಸಂಭಾವನೆಯೇ ಕೊಡೋದಿಲ್ಲ, ಕೆಲವರು ಫೋನ್‌ ಮಾಡಿದರೆ ರಿಸೀವ್‌ ಮಾಡೋದಿಲ್ಲ, ಇನ್ನೂ ಕೆಲವರು ಯಾವಾಗಲೋ ಹಣ ಕೊಡ್ತಾರೆ. ನಮಗೆ ಪದೇ ಪದೆ ಸಮಸ್ಯೆಗಳು ಬಂದಿರೋದಿಕ್ಕೆ ದುಡಿದ ಹಣವೆಲ್ಲ ಖರ್ಚಾಗೋಯ್ತು. ಹೀಗಾಗಿ ನಾನು ಆಸ್ತಿ ಮಾಡೋಕೆ ಆಗಲಿಲ್ಲ. ನಾನು ಇನ್ನೂ ಪುಟ್ಟದಾದ ಬಾಡಿಗೆ ಮನೆಯಲ್ಲಿದ್ದೀನಿ” ಎಂದು ಕಮಲಶ್ರೀ ಹೇಳಿದ್ದಾರೆ.

ಎಲ್ಲರೂ ಚೆನ್ನಾಗಿರಲಿ..!

“ಮಾಸ್ಟರ್‌ ಹಿರಣ್ಣಯ್ಯ ಅವರ ನಾಟಕಗಳಲ್ಲಿ ನಾನು ನಟಿಸಿದ್ದೇನೆ. ಅವರು ಸತ್ತಾಗ ನನಗೆ ಹೋಗಿ ನೋಡಲು ಆಗಲೇ ಇಲ್ಲ. ಅದೊಂದು ಬೇಸರ ಇದೆ. ಆ ಟೈಮ್‌ನಲ್ಲಿ ನನಗೆ ಹುಷಾರಿಲ್ಲದೆ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಇತ್ತೀಚೆಗೆ ಅವರ ಮನೆಗೆ ಹೋಗಿ ಹಿರಣ್ಣಯ್ಯ ಅವರ ಪತ್ನಿಯನ್ನು ಭೇಟಿಯಾದೆ. ಗಟ್ಟಿಮೇಳ ಧಾರಾವಾಹಿಯಲ್ಲಿ ನಾನು ಚೆನ್ನಾಗಿ ನಟಿಸುತ್ತಿದ್ದೆ ಅಂತ ಅವರು ಹೇಳಿದರು. ಅಷ್ಟೇ ಅಲ್ಲದೆ ಸಹಾಯ ಮಾಡೋದಾಗಿ ಹೇಳಿದರು. ನನಗೆ ಸಹಾಯ ಮಾಡಿದವರೆಲ್ಲರೂ ಖುಷಿಯಾಗಿ ಇರಬೇಕು, ನೆಮ್ಮದಿಯಾಗಿ ಇರಬೇಕು ಅಂತ ನಾನು ಹಾರೈಸುವೆ” ಎಂದು ಕಮಲಶ್ರೀ ಹೇಳಿದ್ದಾರೆ.

ವರದಿ: ಪದ್ಮಶ್ರೀ ಭಟ್.‌ ಪಂಚಮಿ ಟಾಕ್ಸ್‌

Whats_app_banner