ಪಾರ್ವತಿ ಜಗನ್ಮಾತೆಯಾದ ಭಕ್ತಿ ಪ್ರಧಾನ ಕಥೆಯೊಂದಿಗೆ ಬರ್ತಿದೆ ಶ್ರೀ ದೇವೀ ಮಹಾತ್ಮೆ ಧಾರಾವಾಹಿ; ವೀಕ್ಷಣೆ ಎಲ್ಲಿ, ಯಾವಾಗ?
ಸ್ಟಾರ್ ಸುವರ್ಣ ವಾಹಿನಿ ಇದೀಗ ಪ್ರೇಕ್ಷಕರಿಗೆ ಮತ್ತೊಂದು ಭಕ್ತಿ ಪ್ರಧಾನ ಕಥೆಯೊಂದನ್ನು ಅರ್ಪಿಸುತ್ತಿದೆ. ಅದೇ ಶ್ರೀ ದೇವೀ ಮಹಾತ್ಮೆ. ಯಾವಾಗಿನಿಂದ ಪ್ರಸಾರ, ಈ ಧಾರಾವಾಹಿಯ ಕಥೆಯ ತಿರುಳೇನು? ಇಲ್ಲಿದೆ ಮಾಹಿತಿ.
Shri Devi Mahathme: ಕನ್ನಡ ಕಿರುತೆರೆಯಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುವ ಸಲುವಾಗಿ ಗುರು ರಾಘವೇಂದ್ರ ವೈಭವ, ಹರ ಹರ ಮಹಾದೇವ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಹಾಗೂ ಎಡೆಯೂರು ಶ್ರೀ ಸಿದ್ದಲಿಂಗೇಶ್ವರದಂತಹ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ಇದೀಗ ನಿಮ್ಮ ಮನರಂಜನೆಯನ್ನು ದುಪ್ಪಟ್ಟುಗೊಳಿಸಲು ಜಗವನು ಕಾಯುವ ಕರುಣೆಯ ತಾಯಿ 'ಪಾರ್ವತಿ'ಯ ಕಥೆಯನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ ಅದೇ ಶ್ರೀ ದೇವೀ ಮಹಾತ್ಮೆ.
ಭಕ್ತಿ ಪ್ರಧಾನ ಕಥೆಯಲ್ಲಿ ಏನಿರಲಿದೆ
ಪುರಾಣಗಳ ಪ್ರಕಾರ ಸತಿಯು ಅತ್ಯಂತ ಸುಂದರವಾಗಿರುತ್ತಾಳೆ. ತಪಸ್ವಿ ಶಿವನಿಗೆ ಮನಸೋಲುವ ಸತಿ, ಮುಂದೆ ಪಾರ್ವತಿಯಾಗಿ ಹೇಗೆ ಮರು ಜನ್ಮತಾಳುತ್ತಾಳೆ? ಹಾಗೂ ಮಹಾಕಾಳಿಯ ರುದ್ರಾವತಾರವನ್ನು ಏಕೆ ಧರಿಸುತ್ತಾಳೆ? ಎಂಬುದರ ಜೊತೆಗೆ ಜಗನ್ಮಾತೆಯ ಮಹಿಮೆಯನ್ನು, ಪವಾಡಗಳನ್ನು ಅರ್ಥಗರ್ಭಿತವಾಗಿ ಎಳೆ ಎಳೆಯಾಗಿ ಮನಮುಟ್ಟುವಂತೆ ಜನರಿಗೆ ತಿಳಿಸುವುದೇ 'ಶ್ರೀ ದೇವೀ ಮಹಾತ್ಮೆ'ಯ ಮುಖ್ಯ ಉದ್ದೇಶ.
ಮೈನವಿರೇಳಿಸುವ ಗ್ರಾಫಿಕ್ಸ್
ಇನ್ನು ಈ ಧಾರಾವಾಹಿಯು ಅದ್ದೂರಿಯಾಗಿ, ಅಮೋಘ ಸೆಟ್‌ಗಳು ಮತ್ತು ಅತ್ಯದ್ಭುತವಾಗಿರುವ ಗ್ರಾಫಿಕ್ಸ್ ತಂತ್ರಜ್ಞಾನಗಳಿಂದ ಚಿತ್ರೀಕರಣಗೊಳ್ಳುತ್ತಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರೋಮೋಗಳಿಗೆ ಜನರು ಮನಸೋತಿದ್ದು, ಧಾರಾವಾಹಿಯನ್ನು ನೋಡಲು ಕಾತರತೆಯಿಂದ ಕಾಯುತ್ತಿದ್ದಾರೆ. ಶಿವನ ಪಾತ್ರವನ್ನು ಅರ್ಜುನ್ ರಮೇಶ್, ಪಾರ್ವತಿಯ ಪಾತ್ರವನ್ನು ಜೀವಿತಾ ವಸಿಷ್ಠ ನಿರ್ವಹಿಸುತ್ತಿದ್ದಾರೆ. ಜೊತೆಗೆ ಈ ಪೌರಾಣಿಕ ಧಾರಾವಾಹಿಯು ಅತ್ಯುತ್ತಮ ತಾರಾಗಣವನ್ನು ಹೊಂದಿದ್ದು, ನಂದಿ ಮೂವೀಸ್ ನಿರ್ಮಾಣ ಸಂಸ್ಥೆಯು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಯಾವಾಗಿನಿಂದ ಪ್ರಸಾರ?
ಪಾರ್ವತಿ ಜಗನ್ಮಾತೆಯಾದ ಕಥೆ ಶ್ರೀ ದೇವೀ ಮಹಾತ್ಮೆ ಇದೇ ಜುಲೈ 1ರಿಂದ ಸೋಮ- ಶನಿವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸೀರಿಯಲ್ ಆಗಮನದ ಹಿನ್ನೆಲೆಯಲ್ಲಿ ಗೌರಿ ಶಂಕರ ಧಾರಾವಾಹಿ ಪ್ರಸಾರದ ಸಮಯ ಬದಲಾವಣೆ ಆಗಲಿದೆ. ಗೌರಿಶಂಕರ ಸೋಮವಾರದಿಂದ ಸಂಜೆ 6.30 ಪ್ರಸಾರವಾಗಲಿದೆ.
ವಿಭಾಗ