ಸ್ನೇಹಾ ಪಾತ್ರ ಅಂತ್ಯ ಆಗಿದ್ದಕ್ಕೆ ಬೇಸರ ಆಗಿದೆ, ವೀಕ್ಷಕರಿಗೆ ಖುಷಿ ಸಿಗೋ ಎಪಿಸೋಡ್‌ ತೋರಿಸ್ತೀವಿ: ನಿರ್ದೇಶಕ ಆರೂರು ಜಗದೀಶ್‌ ಸಂದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  ಸ್ನೇಹಾ ಪಾತ್ರ ಅಂತ್ಯ ಆಗಿದ್ದಕ್ಕೆ ಬೇಸರ ಆಗಿದೆ, ವೀಕ್ಷಕರಿಗೆ ಖುಷಿ ಸಿಗೋ ಎಪಿಸೋಡ್‌ ತೋರಿಸ್ತೀವಿ: ನಿರ್ದೇಶಕ ಆರೂರು ಜಗದೀಶ್‌ ಸಂದರ್ಶನ

ಸ್ನೇಹಾ ಪಾತ್ರ ಅಂತ್ಯ ಆಗಿದ್ದಕ್ಕೆ ಬೇಸರ ಆಗಿದೆ, ವೀಕ್ಷಕರಿಗೆ ಖುಷಿ ಸಿಗೋ ಎಪಿಸೋಡ್‌ ತೋರಿಸ್ತೀವಿ: ನಿರ್ದೇಶಕ ಆರೂರು ಜಗದೀಶ್‌ ಸಂದರ್ಶನ

ಖಾಸಗಿ ವಾಹಿನಿಯಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಆಗುತ್ತಿದೆ. ಕಳೆದ ಎರಡು ವರ್ಷಗಳಿಂದ ಟಿಆರ್‌ಪಿಯಲ್ಲಿ ಸದ್ದು ಮಾಡಿದ್ದ ಈ ಸೀರಿಯಲ್‌, ಆಮೇಲೆ ಹಳೇ ಸ್ನೇಹಾ ಪಾತ್ರದ ಅಂತ್ಯದ ಕಾರಣಕ್ಕೆ ಭಾರಿ ಸೌಂಡ್‌ ಮಾಡ್ತಿದೆ. ಇನ್ಮುಂದೆ ಕಥೆ ಹೇಗೆ ಸಾಗಲಿದೆ ಎಂದು ನಿರ್ದೇಶಕ ಆರೂರು ಜಗದೀಶ್‌ ಅವರು ಮಾತನಾಡಿದ್ದಾರೆ. (ಸಂದರ್ಶನ: ಪದ್ಮಶ್ರೀ ಭಟ್)

ನಿರ್ದೇಶಕ ಆರೂರು ಜಗದೀಶ್‌ ಸಂದರ್ಶನ
ನಿರ್ದೇಶಕ ಆರೂರು ಜಗದೀಶ್‌ ಸಂದರ್ಶನ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಾರನ್ನು ಸಾಯಿಸಿದ್ರಿ, ಆದರೂ ಅವರನ್ನು ಮತ್ತೆ ಸೀರಿಯಲ್‌ಗೆ ಕರೆಸಿ, ನಮಗೆ ಕಂಠಿ ಗೋಳಾಟ ನೋಡೋಕೆ ಆಗ್ತಿಲ್ಲ, ಕಂಠಿಯನ್ನು ಇನ್ಯಾರ ಜೊತೆಯೋ ಮದುವೆ ಮಾಡಬೇಡಿ, ಆ ರೀತಿ ಮಾಡಿದ್ರೆ ಚೆನ್ನಾಗಿ ಕಾಣಿಸಲ್ಲ ಅಂತ ವೀಕ್ಷಕರು ನಿತ್ಯವೂ ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿರುತ್ತಾರೆ. ಈ ಬಗ್ಗೆ ನಿರ್ದೇಶಕ ಆರೂರು ಜಗದೀಶ್‌ ಅವರು Panchami Talks ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ.

ಸ್ನೇಹಾ ಪಾತ್ರವನ್ನು ಅಂತ್ಯ ಮಾಡಬೇಕಾದ ಅನಿವಾರ್ಯತೆ!

ನಟಿ ಸಂಜನಾ ಬುರ್ಲಿ ಅವರು ಸ್ನೇಹಾ ಪಾತ್ರವನ್ನು ನಿಭಾಯಿಸುತ್ತಿದ್ದರು. ಸಂಜನಾ ಬುರ್ಲಿ ಅವರಿಗೆ ಹೆಚ್ಚಿನ ಶಿಕ್ಷಣ ಪಡೆಯುವ ಆಸೆ ಇತ್ತು. ಹೀಗಾಗಿ ಅವರು ಬೆಂಗಳೂರು ಬಿಟ್ಟು ಬೇರೆ ಕಡೆಗೆ ಹೋಗಬೇಕಿತ್ತು. ಆಗ ಸೀರಿಯಲ್‌ ಬಿಡುವ ಅಗತ್ಯತೆ ಇತ್ತು. ಕಳೆದ ಒಂದು ವರ್ಷದ ಹಿಂದೆಯೇ ಸಂಜನಾ ಅವರು ಸೀರಿಯಲ್‌ನಿಂದ ಹೊರಗಡೆ ಬರುವ ನಿರ್ಧಾರ ಮಾಡಿದ್ದರು.

ಯಾಕೆ ರಿಪ್ಲೇಸ್‌ಮೆಂಟ್‌ ಮಾಡಲಿಲ್ಲ?

ಈ ಬಗ್ಗೆ ಮಾತನಾಡಿರುವ ಆರೂರು ಜಗದೀಶ್‌ ಅವರು “ಸ್ನೇಹಾಗೆ ಡಿಸಿ ಆಗುವ ಕನಸಿತ್ತು. ಅದನ್ನು ನನಸು ಮಾಡದೆ ಇದ್ದರೆ ಈ ಪಾತ್ರಕ್ಕೆ ನ್ಯಾಯ ಒದಗಿಸಲಾಗುವುದಿಲ್ಲ. ಇನ್ನೊಂದು ಕಡೆ ಸಂಜನಾ ಬುರ್ಲಿ ಅವರು ಧಾರಾವಾಹಿಯಿಂದ ಹೊರಗಡೆ ಬರುವ ನಿರ್ಧಾರಕ್ಕೆ ಬಂದಿದ್ದರು. ಒಂದು ಪಾತ್ರಕ್ಕೆ ಇನ್ನೋರ್ವ ಕಲಾವಿದರನ್ನು ಹಾಕಿಕೊಂಡು ತೆರೆ ಮೇಲೆ ತರುವ ಪ್ರಯೋಗಗಳನ್ನು ನಾವು ಈಗಾಗಲೇ ಮಾಡಿದ್ದೇವೆ. ಈಗ ಮತ್ತೆ ಈ ಪ್ರಯತ್ನ ಮಾಡೋದು ಬೇಡ ಅಂತ ನಾವು ಹಳೇ ಸ್ನೇಹಾ ಪಾತ್ರವನ್ನು ಅಂತ್ಯ ಮಾಡಿದ್ದೇವೆ. ಹೀಗಾಗಿ ಆದಷ್ಟು ಬೇಗ ಸ್ನೇಹಾಳನ್ನು ಡಿಸಿ ಮಾಡಿಸಿ ಪಾತ್ರ ಅಂತ್ಯ ಮಾಡಿದ್ದೇವೆ. ಸಂಜನಾ ಬೇಗ ಸೀರಿಯಲ್‌ನಿಂದ ಹೊರಗಡೆ ಹೋಗಬೇಕಿತ್ತು.‌ ಆದರೆ ಡಿಸಿ ಮಾಡುವ ಸಲುವಾಗಿ ನಾವು ಒದ್ದಾಡಿಕೊಂಡು ಡಿಸಿ ಮಾಡಿ, ಅಷ್ಟೇ ಅಲ್ಲದೆ ಸಕಲ ಸರ್ಕಾರಿ ಗೌರವದ ಜೊತೆಯಲ್ಲಿ ನಾವು ಸ್ನೇಹಾ ಅಂತ್ಯಕ್ರಿಯೆ ಶೂಟಿಂಗ್‌ ಮಾಡಿದ್ದೆವು” ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಕಥೆ ಹೇಗೆ ಸಾಗುತ್ತೆ?

“ಸ್ನೇಹಾಳಿಗೆ ಹೋಲಿಸಿದರೆ ಕಂಠಿ ಪಾತ್ರಕ್ಕೆ ಅಷ್ಟು ಸ್ಕೋಪ್‌ ಇರಲಿಲ್ಲ. ಇಷ್ಟು ದಿನ ಕಂಠಿ ಸ್ನೇಹಾಗೆ ಬೆಂಬಲ ಕೊಟ್ಟುಕೊಳ್ಳುತ್ತಾ ಬಂದಿದ್ದಾನೆ. ಈಗ ಕಂಠಿ ಸ್ಟ್ಯಾಂಡ್‌ ತಗೊಂಡು ಕಥೆಯನ್ನು ಮುಂದುವರೆಸುತ್ತಾನೆ. ಹೊಸ ಸ್ನೇಹಾ ಪಾತ್ರದ ಎಂಟ್ರಿಯಾಗಿದೆ. ಮುಂದಿನ ದಿನಗಳಲ್ಲಿ ಕಥೆ ಬೇರೆ ರೀತಿಯೇ ಸಾಗಲಿದೆ. ಒಟ್ಟಿನಲ್ಲಿ ಹಳೇ ಸ್ನೇಹಾ ಪಾತ್ರ ಮುಕ್ತಾಯ ಆಯ್ತು ಅಂತ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಆದರೆ ಅವರಿಗೆ ಖುಷಿಯಾಗುವ ರೀತಿಯಲ್ಲಿ ಇನ್ಮುಂದೆ ಕಥೆ ಬರಲಿದೆ, ಅದಕ್ಕಂತೂ ಮೋಸ ಇಲ್ಲ” ಎಂದು ಆರೂರು ಜಗದೀಶ್‌ ಹೇಳಿದ್ದಾರೆ.

ವೀಕ್ಷಕರು ಏನು ಹೇಳ್ತಿದ್ದಾರೆ?

ಸದ್ಯ ವೀಕ್ಷಕರಿಗೆ ಕಂಠಿ ಹಾಗೂ ಹೊಸ ಸ್ನೇಹಾ ಮದುವೆ ಆಗಲಿದೆ, ಈ ರೀತಿ ಆಗಬಾರದು ಎಂದು ವೀಕ್ಷಕರು ಬಯಸುತ್ತಿದ್ದಾರೆ. ಹೊಸ ಸ್ನೇಹಾ ಎಂಟ್ರಿ ಆಗಿರೋದರಿಂದ ಕಥೆ ಯಾವ ರೀತಿಯ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಕುತೂಹಲ ಇದೆ.

ದೊಡ್ಡ ತಾರಾಬಳಗವಿರುವ ಸೀರಿಯಲ್!‌

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಶುರುವಾಗಿ ಮೂರು ವರ್ಷವಾಗುತ್ತಾ ಬಂತು. ಈ ಧಾರಾವಾಹಿ ಶುರುವಾದಾಗಿನಿಂದಲೂ ಟಿಆರ್‌ಪಿಯಲ್ಲಿ ನಂ 1 ಸ್ಥಾನದಲ್ಲಿತ್ತು. ಆ ನಂತರ ಧಾರಾವಾಹಿ ಟೈಮಿಂಗ್‌ ಬದಲಾವಣೆ ಮಾಡಲಾಯ್ತು. ಆಮೇಲೆ ಟಿಆರ್‌ಪಿಯಲ್ಲಿ ಇಳಿಕೆ ಕಂಡರೂ ಕೂಡ, ಈಗ ಸುಧಾರಿಸಿಕೊಂಡಿದೆ. ಅಂದಹಾಗೆ ಹೊಸ ಸ್ನೇಹಾ ಪಾತ್ರದಲ್ಲಿ ನಟಿ ಅಪೂರ್ವ ನಾಗರಾಜ್‌ ಅವರು ಅಭಿನಯಿಸುತ್ತಿದ್ದಾರೆ. ಕಂಠಿ ಪಾತ್ರದಲ್ಲಿ ಧನುಷ್‌ ಎನ್‌ ಎಸ್‌ ನಟಿಸುತ್ತಿದ್ದಾರೆ. ಹಿರಿಯ ನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Whats_app_banner