ಕಿಚ್ಚನ ಸಂಚಿಕೆಗೆ ಡಿಮಾಂಡಪ್ಪೋ ಡಿಮಾಂಡ್, ಮಗದೊಮ್ಮೆ ಗೆದ್ದು ಬೀಗಿದ ಬಿಗ್ ಬಾಸ್; ಸೀರಿಯಲ್ ಟಿಆರ್‌ಪಿಯಲ್ಲಿ ಕಿಂಗ್ ಯಾರು?
Bigg Boss Kannada 11 TRP: ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಕನ್ನಡ 11 ಟಿಆರ್‌ಪಿಯಲ್ಲಿ ಕಮಾಲ್ ಮಾಡುತ್ತಿದೆ. ಕಿಚ್ಚ ನಡೆಸಿಕೊಡುವ ಈ ಶೋ ಎರಡಂಕಿ ದಾಟುತ್ತಿದೆ. ಈ ಮೂಲಕ ಸೀರಿಯಲ್‌ಗಳಿಗೂ ಟಾಂಗ್ ಕೊಡುತ್ತಿದೆ. ಹಾಗಾದರೆ, ಈ ಶೋ ಜತೆಗೆ ಟಾಪ್ 10 ಕನ್ನಡದ ಸೀರಿಯಲ್‌ಗಳು ಯಾವವು? ಇಲ್ಲಿದೆ ವಿವರ
Kannada Serial TRP: ಕನ್ನಡ ಕಿರುತೆರೆಯಲ್ಲಿ ಇದೀಗ ಬಿಗ್‌ಬಾಸ್‌ನದ್ದೇ ಸುದ್ದಿ. ಬಿಗ್ ಮನೆಯಲ್ಲಿ ನಿತ್ಯ ಒಂದಿಲ್ಲೊಂದು ತರಹೇವಾರಿ ಟಾಸ್ಕ್‌ಗಳು ವೀಕ್ಷಕರ ಮನ ಗೆಲ್ಲುತ್ತಿವೆ. ಸ್ಪರ್ಧಿಗಳ ಮಾತಿನ ಸಮರವೂ ವೀಕ್ಷಕರಿಗೆ ರುಚಿಸುತ್ತಿದೆ. ವಾರಾಂತ್ಯದಲ್ಲಿ ಕಿಚ್ಚನ ಆಗಮನದಿಂದ ಶೋ ಮತ್ತಷ್ಟು ಮಗದಷ್ಟು ಫ್ರೆಶ್ ಎನಿಸುತ್ತಿದೆ. ಈಗಿರುವಾಗಲೇ ಈಗ ಇದೇ ಬಿಗ್ ಬಾಸ್‌ನ ಟಿಆರ್‌ಪಿ ಹೊರಬಿದ್ದಿದೆ. ವಾರದ ದಿನಗಳಲ್ಲಿಯೂ ಕಮಾಲ್ ಮಾಡುತ್ತಿರುವ ಈ ಶೋ, ಶನಿವಾರ ಮತ್ತು ಭಾನುವಾರವೂ ಒಳ್ಳೆಯ ನಂಬರ್ಸ್ ಪಡೆಯುತ್ತಿದೆ. ಹಾಗಾದರೆ, ಬಿಗ್‌ಬಾಸ್ ಜತೆಗೆ ಕನ್ನಡದ ಸೀರಿಯಲ್‌ಗಳಿಗೆ ಸಿಕ್ಕ ಟಿಆರ್ ಎಷ್ಟು? ಯಾವೆಲ್ಲ ಸೀರಿಯಲ್‌ಗಳು ಟಾಪ್‌ನಲ್ಲಿವೆ? ಇಲ್ಲಿದೆ ಮಾಹಿತಿ.
ಬಿಗ್‌ಬಾಸ್‌ಗೆ ಸಿಕ್ಕಿದ್ದೆಷ್ಟು?
ಸದ್ಯ ಹೊರಬಿದ್ದಿರುವ ಬಿಗ್‌ಬಾಸ್‌ನ ಟಿಆರ್‌ಪಿ ಕಳೆದ ವಾರದಲ್ಲ. ಬದಲಾಗಿ, ಗೋಲ್ಡ್ ಸುರೇಶ್ ಅವರಿಗೆ ಸೆಡೆ ಪದ ಪ್ರಯೋಗಿಸಿದ್ದ ರಜತ್‌ಗೆ, ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡ ವಾರದ ಟಿಆರ್‌ಪಿ. ಶನಿವಾರ ಮತ್ತು ಭಾನುವಾರ ಹೆಚ್ಚು ವೀಕ್ಷಕರನ್ನು ಸೆಳೆದ ಈ ಶೋ, ವಾರದ ಐದು ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ 7.2 ಟಿಆರ್‌ಪಿ ಪಡೆದಿದೆ. ಅದೇ ರೀತಿ ಶನಿವಾರ 9.7 ಮತ್ತು ಭಾನುವಾರ 9.1 ಟಿಆರ್‌ಪಿ ಪಡೆದುಕೊಂಡಿದೆ. ಅದರಲ್ಲೂ ಭಾನುವಾರದ ನಗರ ಪ್ರದೇಶದ ಟಿಆರ್‌ಪಿ ಎರಡಂಕಿ ದಾಟಿದೆ. ಅಂದರೆ. 10.3 ಟಿಆರ್‌ಪಿ ಸಿಕ್ಕಿದೆ. ಈ ಮೂಲಕ ಕಿಚ್ಚನ ಶೋಗೆ ಬೇಡಿಕೆ ಹೆಚ್ಚು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಸೀರಿಯಲ್‌ಗಳ ಲೆಕ್ಕಾಚಾರ ಹೇಗಿದೆ?
ಇನ್ನು ಕನ್ನಡದ ಸೀರಿಯಲ್‌ಗಳ ಟಿಆರ್‌ಪಿ ಲೆಕ್ಕಾಚಾರದಲ್ಲಿಯೂ ಭಾರಿ ಏರಿಳಿತವಾಗಿದೆ. ಹಾಗಾದರೆ ಈ ವಾರದ ಸೀರಿಯಲ್ ಟಿಆರ್ ಹೇಗಿದೆ, ಯಾವ ಧಾರಾವಾಹಿ ಟಾಪ್ ಸ್ಥಾನದಲ್ಲಿದೆ? ಟೈಮ್ ಸ್ಲಾಟ್ ಬದಲಾದರೂ, ಪುಟ್ಟಕ್ಕನ ಮಕ್ಕಳು ಸೀರಿಯಲ್ ಮತ್ತೆ ಮೊದಲ ಸ್ಥಾನಕ್ಕೆ ಬಂದಿತ್ತು. ಆದರೆ, ಈ ವಾರವೂ ಮೊದಲ ಸ್ಥಾನ ಉಳಿಸಿಕೊಳ್ಳುವಲ್ಲಿ ಈ ಧಾರಾವಾಹಿ ಹಿಂದುಳಿದಿದೆ. ಅಂದರೆ, ಲಕ್ಷ್ಮೀ ನಿವಾಸ ಸೀರಿಯಲ್ 9.2 ಟಿಆರ್‌ಪಿ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದೆ. ಇತ್ತ ಅದರ ನಂತರದ ಸ್ಥಾನದಲ್ಲಿ 8.0 ಟಿಆರ್‌ಪಿಯೊಂದಿಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಇದೆ.
ಅದೇ ರೀತಿ ವೀಕ್ಷಕರಿಗೆ ಕುತೂಹಲಭರಿತ ಕಥೆಯ ಮೂಲಕವೇ ಸೆಳೆದಿರುವ, ಮೊದಲ ಸ್ಥಾನಕ್ಕೆ ಪೈಪೋಟಿವೊಡ್ಡುವ ಅಮೃತಧಾರೆ ಸೀರಿಯಲ್ ಈ ವಾರ ಮೂರನೇ ಸ್ಥಾನದಲ್ಲಿದೆ. 7.8 ಟಿಆರ್‌ಪಿ ಪಡೆಯುವ ಮೂಲಕ ಅಣ್ಣಯ್ಯ ಧಾರಾವಾಹಿ ಜತೆಗೆ ಸರಿಸಮ ಸ್ಥಾನ ಹಂಚಿಕೊಂಡಿದೆ. ಈ ಎರಡೂ ಧಾರಾವಾಹಿಗಳು ಕಳೆದ 7.8 ಟಿಆರ್‌ಪಿ ಪಡೆದುಕೊಂಡು ಮೂರನೇ ಸ್ಥಾನದಲ್ಲಿ ಉಳಿದಿವೆ.
ಒಂದೇ ರೇಟಿಂಗ್ ಪಡೆದ ಕಲರ್ಸ್ ಲಕ್ಷ್ಮೀಯರು
ಇನ್ನು ಕಲರ್ಸ್ ಕನ್ನಡದ ಎರಡು ಪ್ರಮುಖ ಧಾರಾವಾಹಿಗಳಾದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ, ಈ ವಾರ ಒಳ್ಳೆಯ ನಂಬರ್ ಪಡೆದುಕೊಂಡು, ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿವೆ. ಹಿಂದಿನ ವಾರಗಳಲ್ಲಿ ಟಾಪ್ ಐದಕ್ಕೂ ಬಾರದೇ ಇದ್ದ ಈ ಸೀರಿಯಲ್‌ಗಳು, ಈ ಸಲ ಬಂಪರ್ ಎಂಬಂತೆ 7.4 ಟಿಆರ್‌ಪಿ ಪಡೆದುಕೊಂಡು, ನಾಲ್ಕನೇ ಸ್ಥಾನವನ್ನು ಅಲಂಕರಿಸಿವೆ. ಈ ಮೂಲಕ ಟಾಪ್ ಐದರಲ್ಲಿ ಮೊದಲ ಮೂರು ಜೀ ಕನ್ನಡದ ಧಾರಾವಾಹಿಗಳಿದ್ದರೆ, ನಂತರದ ಸ್ಥಾನದಲ್ಲಿ ಕಲರ್ಸ್ ಸೀರಿಯಲ್‌ಗಳಿವೆ.
ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಸದಾ ಟಾಪ್ ಐದರಲ್ಲಿ ಕಾಣಿಸಿಕೊಳ್ಳುತ್ತದೆ. ಅದರಂತೆ ಈ ಸಲವೂ 6.9 ಟಿಆರ್‌ಪಿಯೊಂದಿಗೆ ಐದನೇ ಸ್ಥಾನ ಪಡೆದರೆ, ಕಲರ್ಸ್ ಕನ್ನಡದ ರಾಮಾಚಾರಿ 5.9 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ. ನಿನಗಾಗಿ 5.8 ಟಿಆರ್‌ಪಿ ಪಡೆದರೆ, ರೋಚಕ ತಿರುವುಗಳ ಮೂಲಕ ವೀಕ್ಷಕರ ಗಮನ ಸೆಳೆದ ಸೀತಾ ರಾಮ 5.4 ಟಿಆರ್‌ಪಿ ಗಿಟ್ಟಿಸಿಕೊಂಡಿದೆ. ಈ ಮೂಲಕ ಏಳನೇ ಸ್ಥಾನದಲ್ಲಿದೆ. ಬ್ರಹ್ಮಗಂಟು ಧಾರಾವಾಹಿ 5.,3 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದ್ದರೆ. ಕಲರ್ಸ್ ಕನ್ನಡದ ಶ್ರೀಗೌರಿ 4.6 ಟಿಆರ್‌ಪಿಯೊಂದಿಗೆ ಒಂಭತ್ತನೇ ಸ್ಥಾನದಲ್ಲಿದೆ. ದೃಷ್ಟಿಬೊಟ್ಟು ಸೀರಿಯಲ್ 4.5 ಟಿಆರ್‌ಪಿ ಪಡೆದು 10ನೇ ಸ್ಥಾನದಲ್ಲಿದೆ.
ವಿಭಾಗ