Kannada Serial TRP: ಬಿಗ್‌ಬಾಸ್ ಮನೆಯಲ್ಲಿ ಹೈಡ್ರಾಮಾ! ಕುಸಿಯುತ್ತಿದೆ ಧಾರಾವಾಹಿಗಳ ಟಿಆರ್‌ಪಿ, ಹೀಗಿದೆ ವಾರದ ಏರಿಳಿತದ ಲೆಕ್ಕ
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಈ ಸಲ ಹತ್ತು ಹಲವು ವಿಶೇಷಗಳು ಘಟಿಸಿವೆ. ಅದೆಲ್ಲದರ ಪರಿಣಾಮ, ಈ ಶೋಗೆ ವೀಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾರದಿಂದ ವಾರಕ್ಕೆ ಟಿಆರ್‌ಪಿ ಏರಿಕೆಯಾಗುತ್ತಿದ್ದಾರೆ. ಕೆಲ ಸೀರಿಯಲ್‌ಗಳ ಟಿಆರ್‌ಪಿ ಪಾತಾಳಕ್ಕಿಳಿದಿದೆ.
Kannada Serial TRP: ಈ ಸಲ ಕಿರುತೆರೆ ಕ್ಷೇತ್ರದಲ್ಲಿ ಬಿಗ್‌ಬಾಸ್ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ನಿತ್ಯ ಒಂದಲ್ಲ ಒಂದು ಕಾಂಟ್ರವರ್ಸಿ ಮೂಲಕ ಮುಂದಿರುವ ಈ ಶೋ, ಟಿಆರ್‌ಪಿ ವಿಚಾರದಲ್ಲೂ ಮುಂದಡಿ ಇಟ್ಟಿದೆ. ವಾರದಿಂದ ವಾರಕ್ಕೆ ಏರಿಕೆ ಕಾಣುತ್ತಲೇ ಸಾಗುತ್ತಿದೆ. 10ನೇ ವಾರಕ್ಕೆ ಕಾಲಿರಿಸಿರುವ ಈ ಶೋ, ಅಪಾರ ವೀಕ್ಷಕ ಬಳಗವನ್ನೇ ಗಿಟ್ಟಿಸಿಕೊಳ್ಳುತ್ತಿದೆ. ಈ ಒಂದು ಶೋನ ಗರಿಷ್ಟ ವೀಕ್ಷಣೆ ಇತರೆ ಸೀರಿಯಲ್‌ಗಳ ಮೇಲೆಯೂ ಪ್ರಭಾವ ಬೀರುತ್ತಿದೆ. ಟಾಪ್‌ನಲ್ಲಿದ್ದ ಧಾರಾವಾಹಿಗಳು ಟಿಆರ್‌ಪಿಯಲ್ಲಿ ಕನಿಷ್ಟ ಮಟ್ಟ ತಲುಪಿವೆ.
ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಪಾಸಿಟಿವ್ ವಿಚಾರಕ್ಕಿಂತ ನೆಗೆಟಿವ್ ಆಗಿಯೇ ಈ ಶೋ ಮುನ್ನೆಲೆಗೆ ಬಂದಿದೆ. ವೀಕ್ಷಕರಿಂದಲೂ ಈ ಸಲ ಹೆಚ್ಚೆಚ್ಚು ಟೀಕೆಗಳನ್ನೇ ಪಡೆದುಕೊಂಡಿದೆ. ಶೋ ಆರಂಭವಾದಾಗಿನಿಂದ ಜಗಳ, ಮುನಿಸು, ಮನಸ್ತಾಪಗಳ ಮೂಲಕವೇ ಸದ್ದು ಮಾಡಿದ್ದು ಹೆಚ್ಚು. ವಾರಕ್ಕೆರಡು ದಿನ ಬರುವ ಸುದೀಪ್, ಮನೆ ಮಂದಿಯನ್ನು ಶಾಂತ ಮಾಡಿ, ಸಮಸ್ಯೆ ತಿಳಿಗೊಳಿಸಿ ಪಾಠ ಮಾಡಿ ಹೋಗುವ ಏಪಿಸೋಡ್‌ಗಳಿಗೂ ಹೆಚ್ಚಿನ ವೀಕ್ಷಕರಿದ್ದಾರೆ.
ಈ ವಾರವೂ ಟಿಆರ್‌ಪಿಯಲ್ಲಿ ಬಿಗ್‌ಬಾಸ್ ಮುಂದು
ಬಿಗ್‌ಬಾಸ್ ಆರಂಭದ ಎರಡು ವಾರ ಹೊರತುಪಡಿಸಿದರೆ, ಅದಾದ ಮೇಲೆ ಹೆಚ್ಚು ವೀಕ್ಷಕರನ್ನು ಸಂಪಾದಿಸುತ್ತಿದೆ. ದಿನಕಳೆದಂತೆ, ಈ ವರೆಗಿನ ಕನ್ನಡದ ಯಾವ ಬಿಗ್‌ಬಾಸ್‌ಗೂ ಸಿಗದ ಟಿಆರ್‌ಪಿ ಸೀಸನ್ 10ಕ್ಕೆ ಸಿಕ್ಕಿದೆ. ಅದನ್ನು ಸ್ವತಃ ಕಲರ್ಸ್ ಕನ್ನಡ ಅಧಿಕೃತವಾಗಿ ಹೇಳಿಕೊಂಡಿದೆ. ಇದೀಗ ಈ ವಾರದ ಟಿಆರ್‌ಪಿ ಲೆಕ್ಕಾಚಾರದ ಬಗ್ಗೆ ಹೇಳುವುದಾದರೆ, ಸೋಮವಾರದಿಂದ ಶುಕ್ರವಾರದವರೆಗೆ 7.6 ಟಿಆರ್‌ಪಿ ಪಡೆದುಕೊಂಡರೆ, ಶನಿವಾರ ಮತ್ತು ಭಾನುವಾರ ಕಿಚ್ಚನ ಪಂಚಾಯ್ತಿಗೆ 8.4 ಟಿಆರ್‌ಪಿ ಸಿಕ್ಕಿದೆ. ಈ ಮೂಲಕ ಆನೆ ನಡೆದಿದ್ದೇ ದಾರಿ ಎಂಬಂತೆ, ಸಾಗುತ್ತಿದೆ ಬಿಗ್ ಬಾಸ್.
ಸೀರಿಯಲ್ ಟಿಆರ್‌ಪಿ ಕಥೆ ಏನು?
ಅದೇ ರೀತಿ ಸೀರಿಯಲ್‌ಗಳ ಟಿಆರ್‌ಪಿ ವಿಚಾರದಲ್ಲೂ ಒಂದಷ್ಟು ಬದಲಾವಣೆಗಳಾಗಿವೆ. ಬಿಗ್‌ಬಾಸ್ ಶೋ ಹಿನ್ನಲೆಯಲ್ಲಿ ಪ್ರೈಂ ಟೈಮ್ 9:30ರಿಂದ 11:00 ಅವಧಿಯಲ್ಲಿನ ಸೀರಿಯಲ್‌ಗಳ ವೀಕ್ಷಣೆ ತಗ್ಗಿದೆ. ಇನ್ನುಳಿದ ಧಾರಾವಾಹಿಗಳ ಟಿಆರ್‌ಪಿ ಲೆಕ್ಕಾಚಾರದಲ್ಲಿ ಏರಿಳಿತ ಕಂಡಿದೆ. ಹಾಗಾದರೆ, ಯಾವ ಸೀರಿಯಲ್ ಯಾವ ಸ್ಥಾನದಲ್ಲಿದೆ?
ಆರಂಭದಿಂದಲೂ ಮೊದಲ ಸ್ಥಾನದಲ್ಲಿರುವುದು ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್. ಎರಡು ವರ್ಷ ಪೂರೈಸಿರುವ ಈ ಧಾರಾವಾಹಿ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ. ಅದೇ ರೀತಿ ಗೌತಮ್ ಮತ್ತು ಭೂಮಿಕಾ ಜೋಡಿಯ ಅಮೃತಧಾರೆ ಸೀರಿಯಲ್ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಗಟ್ಟಿಮೇಳ ಧಾರಾವಾಹಿ ಗಟ್ಟಿಯಾಗಿ ನಿಂತಿದೆ. ನಾಲ್ಕನೇ ನಾಲ್ಕರಲ್ಲಿ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ, ಐದರಲ್ಲಿ ಶ್ರೀರಸ್ತು ಶುಭಮಸ್ತು ಮುಂದುವರಿದಿದೆ.
ಇನ್ನೂ ಒಂದೂವರೆ ತಿಂಗಳೂ ಇದೇ ಕಥೆ- ವ್ಯಥೆ!
ಸೀತಾ ರಾಮ ಸೀರಿಯಲ್ ಬಿಗ್‌ಬಾಸ್ ಶುರುವಾಗುವುದಕ್ಕೂ ಮುನ್ನ ಎರಡನೇ ಸ್ಥಾನದಲ್ಲಿತ್ತು. ಇದೀಗ ಟಾಪ್ ಐದರಲ್ಲಿ ಕಾಣೆಯಾಗಿದೆ. ಮತ್ತೆ ಹಳೇ ಲಯಕ್ಕೆ ಬರಬೇಕೆಂದರೆ, ಇನ್ನೂ ಒಂದೂವರೆ ತಿಂಗಳು ಕಳೆಯಲೇ ಬೇಕು. ಬಿಗ್ ಬಾಸ್ ಮುಗಿದ ಬಳಿಕವಷ್ಟೇ ಮತ್ತೆ ಎಂದಿನಂತೆ ಮುನ್ನುಗ್ಗುವ ಸಾಧ್ಯತೆ ಇದೆ.