ಭಾಗ್ಯಕ್ಕನ ತಂಗಿಗೆ ಜೋಡಿಯಾಗಿ ಭಾಗ್ಯಲಕ್ಷ್ಮೀಗೆ ಎಂಟ್ರಿ ಕೊಟ್ಟ ರಾಜೇಶ್ ಧ್ರುವ ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ ಅಂತಿದ್ದಾರೆ
Rajesh Dhruva in Bhagya Lakshmi Serial: ಅಗ್ನಿಸಾಕ್ಷಿ ಖ್ಯಾತಿಯ ನಟ ರಾಜೇಶ್ ಧ್ರುವ ಕಲರ್ಸ್ ಕನ್ನಡದ ಪ್ರಸಿದ್ಧ ಧಾರಾವಾಹಿ ‘ಭಾಗ್ಯಲಕ್ಷ್ಮೀ‘ಗೆ ಎಂಟ್ರಿ ಕೊಟ್ಟಿದ್ದಾರೆ. ಭಾಗ್ಯಕ್ಕನ ತಂಗಿ ಪೂಜಾಗೆ ಜೋಡಿಯಾಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದೀಗ ರಾಜೇಶ್ ಧ್ರುವ ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ ಅಂತಿದ್ದಾರೆ. ಯಾಕೆ ಅಂತೀರಾ, ಮುಂದೆ ಓದಿ.

Rajesh Dhruva in Bhagya Lakshmi Serial: ನಟ ರಾಜೇಶ್ ಧ್ರುವ ಕನ್ನಡದಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು, ಕಲರ್ಸ್ ಕನ್ನಡದ ‘ಅಗ್ನಿಸಾಕ್ಷಿ‘. ಅಗ್ನಿಸಾಕ್ಷಿಯ ಅಖಿಲ್ ಪಾತ್ರ ಇಂದಿಗೂ ಜನಮಾನಸದಲ್ಲಿ ಹಾಗೇ ಉಳಿದುಕೊಂಡಿದೆ. ಇಂತಿಪ್ಪ ರಾಜೇಶ್ ಕಲರ್ಸ್ ಕನ್ನಡದಲ್ಲಿ ‘ಶ್ರೀಗೌರಿ‘ ಧಾರಾವಾಹಿಯಲ್ಲಿ ಖಳನಟನ ಪಾತ್ರ ನಿರ್ವಹಿಸಿದ್ದರು. ಅದಾದ ಮೇಲೆ ಇದೀಗ ಮತ್ತೆ ಕಲರ್ಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಿಶನ್ ಪಾತ್ರದಲ್ಲಿ ನಟಿಸುತ್ತಿರುವ ಇವರು ಭಾಗ್ಯಕ್ಕನ ತಂಗಿ ಪೂಜಾಗೆ ಜೋಡಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪೂಜಾಗೆ ಕಾಲೇಜ್‌ನಲ್ಲಿ ಸೂಪರ್ ಸೀನಿಯರ್ ಆಗಿದ್ದ ಕಿಶನ್ ಕಂಪನಿಯಲ್ಲೇ ಪೂಜಾಗೆ ಕೆಲಸ ಸಿಕ್ಕಿದೆ. ಇನ್ನು ಪೂಜಾ–ಕಿಶನ್ ಲವ್ ಸ್ಟೋರಿ ಸ್ಟಾರ್ಟ್ ಆಗಬಹುದು ಎಂದು ಕಿರುತೆರೆ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಭಾಗ್ಯ ತನ್ನ ತಂಗಿಗೆ ಯೋಗ್ಯ ವರನನ್ನು ನೋಡಿ ಮದುವೆ ಮಾಡಿಸುವ ಜವಾಬ್ದಾರಿ ನನ್ನದು ಎಂದು ತಾಯಿಗೆ ಮಾತು ಕೊಟ್ಟಿದ್ದಾಳೆ. ಹಾಗಾದರೆ ಕಿಶನ್–ಪೂಜಾ ಮಧ್ಯೆ ಲವ್ ಶುರು ಆಗುತ್ತಾ, ಭಾಗ್ಯಕ್ಕ ಪೂಜಾಗೆ ನೋಡುವ ಹುಡುಗ ಯಾರಾಗಿರಬಹುದು ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕಿದೆ.
ಕೆಲ ದಿನಗಳ ಹಿಂದೆ ಭಾಗ್ಯಲಕ್ಷ್ಮೀ ಧಾರಾವಾಹಿ ಸದ್ಯದಲ್ಲೇ ಮುಗಿಯಲಿದೆ ಎಂಬ ಗಾಳಿ ಸುದ್ದಿಯೂ ಹರಡಿತ್ತು. ಆದರೆ ಇದೀಗ ಹೊಸ ಪಾತ್ರದ ಮೂಲಕ ರಾಜೇಶ್ ಧ್ರುವ ಎಂಟ್ರಿ ಕೊಟ್ಟಿರುವುದು ಧಾರಾವಾಹಿ ಮುಗಿಯುತ್ತದೆ ಎನ್ನುವ ಗಾಳಿಸುದ್ದಿಗೆ ಬ್ರೇಕ್ ಹಾಕಿದಂತಾಗಿದೆ. ಈ ಎಲ್ಲದರ ನಡುವೆ ನಟ ರಾಜೇಶ್ ಧ್ರುವ ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ ಅಂತಿದ್ದಾರೆ. ಹೀಗೆಕೆ ಅಂತ ನೀವು ಯೋಚನೆ ಮಾಡ್ತಾ ಇದೀರಾ, ಖಂಡಿತ ವಿಷ್ಯ ಇದೆ.
ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ ಅಂತಿರೋದ್ಯಾಕೆ ರಾಜೇಶ್
ರಾಜೇಶ್ ಧ್ರುವ ಭಾಗ್ಯಲಕ್ಷ್ಮೀಗೆ ಎಂಟ್ರಿ ಕೊಟ್ಟಿರುವುದು ಮಾತ್ರವಲ್ಲ ಇವರು ಸದ್ಯ ಸುವರ್ಣ ವಾಹಿನಿ, ಉದಯ ವಾಹಿನಿ ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ. ಜೀ ಕನ್ನಡ ಒಂದು ಹೊರತು ಪಡಿಸಿ ಬಹುತೇಕ ಎಲ್ಲಾ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ರಾಜೇಶ್ ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ ಅಂತಿದ್ದಾರೆ.
ಉದಯ ವಾಹಿನಿಯ ‘ನಾತಿಚರಾಮಿ‘ ಧಾರಾವಾಹಿಯಲ್ಲಿ ನಾಯಕಿಯ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ರಾಜೇಶ್. ಹಲವು ವರ್ಷಗಳ ಬಳಿಕ ಸುವರ್ಣ ವಾಹಿನಿಗೆ ಮರಳಿರುವ ರಾಜೇಶ್ ಧ್ರುವ ಶಾರದೆ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಶಾರದೆಯ ಗಂಡನ ಪಾತ್ರಕ್ಕೆ ಬಣ್ಣ ಹಚ್ಚಿರುವ ಇವರು ಇಲ್ಲಿ ಮತ್ತೊಮ್ಮೆ ಖಳನಟನಾಗಿ ಕಾಣಿಸಿದ್ದಾರೆ. ಹೆಂಡತಿ–ಮಗಳು ಇದ್ದರೂ ಪಟ್ಟಣದಲ್ಲಿ ಮತ್ತೊಂದು ಮದುವೆಯಾಗಿ ಅವರನ್ನು ಬೀದಿ ಪಾಲು ಮಾಡುವ ಪಾತ್ರ ಇವರದ್ದು.
ರಾಜೇಶ್ ಧ್ರುವ ಹಿನ್ನೆಲೆ
ಶಿರಸಿ ಮೂಲದ ರಾಜೇಶ್ ಧ್ರುವ ಆರಂಭದಲ್ಲಿ ಡಾನ್ಸ್ ಕ್ಲಾಸ್ ನಡೆಸುತ್ತಿದ್ದರು. ನಂತರ ಅವರು ಅಗ್ನಿಸಾಕ್ಷಿ ಧಾರಾವಾಹಿಗೆ ಆಯ್ಕೆಯಾಗುತ್ತಾರೆ. ಈ ಪಾತ್ರದ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗುವ ಧ್ರುವ ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ ಎನ್ನುವ ಚಿತ್ರವನ್ನು ನಿರ್ದೇಶನ ಮಾಡುವ ಜೊತೆಗೆ ನಾಯಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಸದ್ಯ ಬೇರೆ ಬೇರೆ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದು, ಎಲ್ಲೆಲ್ಲೂ ನಾನೇ ಅಂತಿದ್ದಾರೆ.
