Vadhu Serial: ಶುರುವಾದ ಆರೇ ತಿಂಗಳಿಗೆ ಮುಕ್ತಾಯವಾಗ್ತಿದೆ ಡಿವೋರ್ಸ್‌ ಲಾಯರ್‌ ಮದುವೆ ಕಥೆ
ಕನ್ನಡ ಸುದ್ದಿ  /  ಮನರಂಜನೆ  /  Vadhu Serial: ಶುರುವಾದ ಆರೇ ತಿಂಗಳಿಗೆ ಮುಕ್ತಾಯವಾಗ್ತಿದೆ ಡಿವೋರ್ಸ್‌ ಲಾಯರ್‌ ಮದುವೆ ಕಥೆ

Vadhu Serial: ಶುರುವಾದ ಆರೇ ತಿಂಗಳಿಗೆ ಮುಕ್ತಾಯವಾಗ್ತಿದೆ ಡಿವೋರ್ಸ್‌ ಲಾಯರ್‌ ಮದುವೆ ಕಥೆ

Vadhu: ಕಲರ್ಸ್ ಕನ್ನಡದಲ್ಲಿ ಡೈವೋರ್ಸ್ ಲಾಯರ್ ಮದುವೆ ಕಥೆ ಪ್ರಸಾರವಾಗಲು ಆರಂಭವಾಗಿ ಇನ್ನು 6 ತಿಂಗಳು ಕೂಡ ಕಳೆದಿಲ್ಲ. ಈಗಾಗಲೇ ಈ ಧಾರಾವಾಹಿ ಮುಕ್ತಾಯದ ಮಾತು ಕೇಳಿಬರುತ್ತಿದೆ. ಹೌದು ‘ವಧು‘ ಧಾರಾವಾಹಿ ಸದ್ಯದಲ್ಲೇ ಅಂತ್ಯವಾಗಲಿದೆ.

ಶುರುವಾದ ಆರೇ ತಿಂಗಳಿಗೆ ಮುಕ್ತಾಯವಾಗ್ತಿದೆ ಡಿವೋರ್ಸ್‌ ಲಾಯರ್‌ ಮದುವೆ ಕಥೆ
ಶುರುವಾದ ಆರೇ ತಿಂಗಳಿಗೆ ಮುಕ್ತಾಯವಾಗ್ತಿದೆ ಡಿವೋರ್ಸ್‌ ಲಾಯರ್‌ ಮದುವೆ ಕಥೆ

ಕಲರ್ಸ್ ಕನ್ನಡದಲ್ಲಿ ಕಳೆದ ಐದಾರು ತಿಂಗಳಿಂದೀಚೆಗೆ ಕೆಲವು ಹೊಸ ಧಾರಾವಾಹಿಗಳು ಪ್ರಸಾರ ಆರಂಭಿಸಿದ್ದವು. ಇದರಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದ್ದು ಡೈವೋರ್ಸ್ ಲಾಯರ್ ಮದುವೆ ಕಥೆ ಇರುವ ವಧು. ಮೇಕಿಂಗ್ ಪ್ರೋಮೊದ ಮೂಲಕ ಈ ಧಾರಾವಾಹಿ ನಿರೀಕ್ಷೆ ಹುಟ್ಟಿಸಿತ್ತು. ಜೊತೆಗೆ ಧಾರಾವಾಹಿಯಲ್ಲಿ ಹಲವು ಖ್ಯಾತ ನಟ, ನಟಿಯರು ನಟಿಸುತ್ತಿದ್ದಾರೆ. ಟಿಎಸ್‌ ಸೀತಾರಾಂ ಅವರು ಕೂಡ ಇದರಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದರು.

ವಿನಯಾ ಪ್ರಸಾದ್‌, ಸುಧಾ ಬೆಳವಾಡಿ ಮೊದಲಾದವರು ನಟಿಸುತ್ತಿರುವ ಡೈವೋರ್ಸ್ ಲಾಯರ್ ಮದುವೆ ಕಥೆ ಪ್ರೋಮೊದಲ್ಲಿ ನಿರೀಕ್ಷೆ ಹುಟ್ಟಿಸಿದಷ್ಟು ಧಾರಾವಾಹಿ ಆರಂಭವಾದ ಮೇಲೆ ಯಶಸ್ಸು ಕಾಣಲಿಲ್ಲ. ಆರಂಭದಿಂದಲೂ ಈ ಧಾರಾವಾಹಿ ಮೇಲೆ ಪ್ರೇಕ್ಷಕರು ಒಲವು ತೋರಲಿಲ್ಲ. ನಂತರ ಧಾರಾವಾಹಿ ಪ್ರಸಾರದ ಸಮಯ ಬದಲಾವಣೆ ಮಾಡಲಾಯಿತು. ಆದರೂ ಕಿರುತೆರೆ ಪ್ರೇಕ್ಷಕರು ಇದರತ್ತ ಒಲವು ತೋರಲಿಲ್ಲ.

ಶ್ರೀಕಾಂತ್‌, ದುರ್ಗಾಶ್ರೀ, ಸೋನಿ ಮುಲೆವಾ ಈ ಧಾರಾವಾಹಿಯಲ್ಲಿ ಹೈಲೈಟ್‌. ಈ ಮೂವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಆದರೂ ಯಾಕೋ ಕಥೆ ಜನರಿಗೆ ಇಷ್ಟವಾದಂತೆ ಕಾಣುತ್ತಿಲ್ಲ.

ಇದೀಗ ಈ ಧಾರಾವಾಹಿ ಸದ್ಯದಲ್ಲಿ ಮುಕ್ತಾಯವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಧಾರಾವಾಹಿ ಆರಂಭವಾಗಿ 6 ತಿಂಗಳು ಕಳೆಯುವ ಮೊದಲೇ ಗುಡ್‌ಬೈ ಹೇಳುತ್ತಿದೆ. ಜೂನ್‌ಗೆ ಈ ಧಾರಾವಾಹಿ ಪ್ರಸಾರ ಮುಗಿಯಲಿದೆ ಎಂದು ಸುದ್ದಿ ಹರಿದಾಡುತ್ತಿದೆ. 

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಾಕಲಾಗಿದೆ. ಅದಕ್ಕೆ ಕಾಮೆಂಟ್ ಮಾಡಿರುವ ಕಿರುತೆರೆ ಪ್ರೇಮಿಗಳು ಕಲರ್ಸ್‌ ಕನ್ನಡಕ್ಕೆ ರಾಮ್‌ಜಿ ಅವರ ಜೈ ಮಾತಾ ಪ್ರೊಡಕ್ಷನ್ ಮೇಲೆ ಮಾತ್ರ ಒಲವು ಎಂದಿದ್ದಾರೆ. ಕೆಲವರು ಧಾರಾವಾಹಿ ಕಥೆ ಚೆನ್ನಾಗಿಲ್ಲ ಮುಕ್ತಾಯವಾಗುವುದು ಉತ್ತಮ ಎಂದಿದ್ದಾರೆ. ಈ ಪೋಸ್ಟ್‌ಗೆ ಏನೆಲ್ಲಾ ಕಾಮೆಂಟ್ಸ್‌ಗಳು ಬಂದಿವೆ ನೋಡಿ.

ನೆಟ್ಟಿಗರ ಕಾಮೆಂಟ್ಸ್‌ಗಳು 

‌ಕಲರ್ಸ್ ಕನ್ನಡದವರಿಗೆ ರಾಮ್‌ಜಿ ಜೈ ಮಾತಾ ಪ್ರೊಡಕ್ಷನ್ ಧಾರಾವಾಹಿಗಳು ಮಾತ್ರ ಇಷ್ಟವಾಗುತ್ತದೆ ಅನ್ನಿಸುತ್ತದೆ. ಅದಕ್ಕೆ ಬೇರೆ ಪ್ರೊಡಕ್ಷನ್ ಧಾರಾವಾಹಿಗಳನ್ನು ಅವರು ಹೆಚ್ಚು ದಿನ ಓಡಿಸೊಲ್ಲ. ಶೃತಿ ನಾಯ್ಡು, ದಿಲೀಪ್ ರಾಜ್ ಅವರ ಪ್ರೊಡಕ್ಷನ್‌ನ ಧಾರಾವಾಹಿಗಳು ಚೆನ್ನಾಗಿದ್ರೂ ಅವುಗಳನ್ನು ಹೆಚ್ಚು ದಿನ ಓಡಿಸೊಲ್ಲ. ಬೇಗ ಎಂಡ್ ಮಾಡ್ತಾರೆ ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ಧಾರಾವಾಹಿ ನಿಜಕ್ಕೂ ಚೆನ್ನಾಗಿ ಬರ್ತಿಲ್ಲ ಅಂತ ಒಬ್ರು ಕಾಮೆಂಟ್ ಮಾಡಿದ್ರೆ, ಕಲರ್ಸ್ ಅವರು ಪೂರ್ತಿ ಸ್ಲಾಟ್‌ ರಾಮ್‌ಜಿ ಬಿಟ್ಟು ಕೊಡಬೇಕು ಅಂತ ನಿರ್ಧಾರ ಮಾಡಿದಾರೆ ಅನ್ಸುತ್ತೆ ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಒಳ್ಳೆ ಸೀರಿಯಲ್‌ಗಳು ಯಾವುದು ಬೇಡ ಅನ್ಸುತ್ತೆ ಕಲರ್ಸ್ ಅವ್ರಿಗೆ, ಕಿತ್ತೋದ್ ರಾಮ್‌ಜಿ ಸೀರಿಯಲ್ ಸ್ಟಾಪ್ ಮಾಡಿ. ಭಾಗ್ಯಲಕ್ಷ್ಮೀ ಸ್ಟಾಪ್ ಮಾಡಿ‘ ಇನ್ನೊಬ್ಬರು ಕಾಮೆಂಟ್‌ನಲ್ಲಿ ಬರೆದಿದ್ದಾರೆ. ‘ರಾಮಾಚಾರಿ, ಭಾಗ್ಯಲಕ್ಷ್ಮೀಗಿಂತ ಈ ಸೀರಿಯಲ್ ನಿಜಕ್ಕೂ ಬೆಟರ್‘ ಅಂತ ಕಿರುತೆರೆ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner