ಚೊಚ್ಚಲ ಧಾರಾವಾಹಿಯಿಂದಲೇ ಪರಭಾಷೆಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಬ್ರೋ ಗೌಡ; ತೆಲುಗಿನತ್ತ ಲಕ್ಷ್ಮೀ ಬಾರಮ್ಮದ ವೈಷ್ಣವ್
ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ 2 ವರ್ಷಗಳ ಕಾಲ ಕನ್ನಡ ಕಿರುತೆರೆ ಪ್ರೇಕ್ಷರನ್ನು ರಂಜಿಸಿದ್ದ ವೈಷ್ಣವ್ ಅಲಿಯಾಸ್ ಶಮಂತ್ ಗೌಡ ಇದೀಗ ತೆಲುಗಿನತ್ತ ಪಯಣ ಬೆಳೆಸಿದ್ದಾರೆ. ತೆಲುಗು ಧಾರಾವಾಹಿವೊಂದರಲ್ಲಿ ಬ್ರೋ ಗೌಡ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸೋಷಿಯಲ್ ಮಿಡಿಯಾ ಇನ್ಫ್ಲುಯೆನ್ಸರ್ ಆಗಿದ್ದ ಬ್ರೋ ಗೌಡ ಅಲಿಯಾಸ್ ಶಮಂತ್ ಗೌಡ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೈಷ್ಣವ್ ಪಾತ್ರದ ಮೂಲಕ ಕನ್ನಡಿಗರ ಮನೆ ಮನಗಳಿಗೆ ಹತ್ತಿರವಾಗುತ್ತಾರೆ. ಸುಮಾರು 2 ವರ್ಷಗಳ ಕಾಲ ವೈಷ್ಣವ್ ಪಾತ್ರಕ್ಕೆ ಜೀವ ತುಂಬಿದ್ದಾರೆ ಶಮಂತ್.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಬ್ರೋ ಗೌಡ ಅವರ ಚೊಚ್ಚಲ ಧಾರಾವಾಹಿಯಾಗಿತ್ತು. ಮೊದಲ ಧಾರಾವಾಹಿಯಲ್ಲೇ ಅದ್ಭುತವಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು ಶಮಂತ್. ಮೊದಲ ಧಾರಾವಾಹಿಯೇ ಅವರ ಅದೃಷ್ಟ ಬದಲಿಸಿದಂತಿದೆ. ಅವರು ಈಗ ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ. ತೆಲುಗಿನ ಹೊಸ ಧಾರಾವಾಹಿಯೊಂದಕ್ಕೆ ನಾಯಕನಾಗಿ ಬ್ರೋ ಗೌಡ ಆಯ್ಕೆಯಾಗಿದ್ದಾರೆ.
ಶಮಂತ್ ಯಾವ ಚಾನೆಲ್‌ನ, ಯಾವ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಶಮಂತ್ ಗೌಡ ತೆಲುಗು ಧಾರಾವಾಹಿಯೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನು ಬ್ರೋ ಗೌಡ ಕೂಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮೊದಲ ಧಾರಾವಾಹಿಯಿಂದಲೇ ನೇರವಾಗಿ ತೆಲುಗಿನಲ್ಲಿ ಅವಕಾಶ ಪಡೆದಿರುವುದಕ್ಕೆ ಇವರ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಆಲ್ ದಿ ಬೆಸ್ಟ್ ಜೊತೆಗೆ ಇನ್ನಷ್ಟು ಅವಕಾಶಗಳು ಸಿಗಲಿ ಎಂದು ಹಾರೈಸುತ್ತಿದ್ದಾರೆ.
ಕನ್ನಡ ಸಾಕಷ್ಟು ನಟ–ನಟಿಯರು ತೆಲುಗಿನ ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ನಟಿಸುತ್ತಿದ್ದು, ಆ ಸಾಲಿಗೆ ಈಗ ಬ್ರೋ ಗೌಡ ಸೇರಲಿದ್ದಾರೆ. ಟಿಕ್ ಟಾಕ್ ವಿಡಿಯೊಗಳ ಮೂಲಕ ಫೇಮಸ್ ಆದ ಶಮತ್ ಅಲಿಯಾಸ್ ಬ್ರೋ ಗೌಡ ಬಿಗ್‌ಬಾಸ್ ಸ್ಪರ್ಧಿಯೂ ಆಗಿದ್ದರು.
ಸಿನಿಮಾ ರಂಗಕ್ಕೂ ಕಾಲಿರಿಸಿರುವ ಬ್ರೋ ಗೌಡ ಕನ್ನಡದ ಮೊದಲ ಜಾಂಬಿ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಮಾತ್ರವಲ್ಲ ಈ ಚಿತ್ರದ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಇತ್ತೀಚೆಗಷ್ಟೇ ಶಮಂತ್ ತಾವು ಇಷ್ಟಪಟ್ಟ ಹುಡುಗಿ ಜೊತೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು.
ಒಂದೇ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದು ಮಾತ್ರವಲ್ಲ, ಕನ್ನಡಿಗರ ಮನೆ ಮಗನಂತಾದ ಬ್ರೋ ಗೌಡ, ತೆಲುಗು ಮಂದಿಗೂ ಇಷ್ಟವಾಗ್ತಾರಾ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.
