ಮನೆಯವರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಶ್ರಾವಣಿ; ಸುಬ್ಬು ಮದುವೆ ಸತ್ಯ ತಿಳಿಯಲು ಬಂದ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮನೆಯವರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಶ್ರಾವಣಿ; ಸುಬ್ಬು ಮದುವೆ ಸತ್ಯ ತಿಳಿಯಲು ಬಂದ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಮನೆಯವರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಶ್ರಾವಣಿ; ಸುಬ್ಬು ಮದುವೆ ಸತ್ಯ ತಿಳಿಯಲು ಬಂದ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಗಂಡನ ಮನೆಯವರನ್ನು ಒಲಿಸಿಕೊಳ್ಳಲು ಶ್ರಾವಣಿ ಹರಸಾಹಸ, ವರದನ ಮದುವೆಗೆ ಅರ್ಜೆಂಟ್ ಮಾಡುತ್ತಿರುವ ಇಂದ್ರಮ್ಮ, ಸುಬ್ಬು ಮದುವೆ ಸತ್ಯ ತಿಳಿಯಲು ಬಂದ ಶ್ರೀವಲ್ಲಿ, ಸುಬ್ಬು ಮೇಲೆ ಹರಿಹಾಯ್ದ ಮದನ್‌, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 12ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 12ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 12ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 12ರ ಸಂಚಿಕೆಯಲ್ಲಿ ಬೆಳಿಗ್ಗೆ ಮನೆಯವರೆಲ್ಲರೂ ಏಳುವ ಮೊದಲೇ ಎದ್ದ ಶ್ರಾವಣಿ ಮನೆಗೆಲಸವನ್ನೆಲ್ಲಾ ಮಾಡಿ, ಸ್ನಾನ ಮಾಡಿ, ದೇವರ ಪೂಜೆ ಮಾಡಿ, ಬೆಳಿಗ್ಗೆಗೆ ತಿಂಡಿ, ಕಾಫಿಯನ್ನು ಕೂಡ ಮಾಡಿರುತ್ತಾಳೆ. ಮಾವ ಎದ್ದು ಬಂದಾಗ ಅವರಿಗೆ ಕಾಫಿ ಕೊಟ್ಟು ನೀವು ಈ ಮನೆಯ ಯಜಮಾನ ಎಂದು ಹೇಳಿ ಹಾಲ್‌ನಲ್ಲಿ ಕುಳಿತುಕೊಳ್ಳಲು ಹೇಳುತ್ತಾಳೆ. ಎದ್ದು ಬಂದ ವಿಶಾಲಾಕ್ಷಿಗೆ ಮನೆಯೆಲ್ಲಾ ಗುಡಿಸಿ ಒರೆಸಿ ಇರುವುದು ನೋಡಿ ಶಾಕ್ ಆಗುತ್ತದೆ. ದೇವರ ಪೂಜೆ ಆಗಿರುವುದು ನೋಡಿ ಹೆಣ್ಣುಮಕ್ಕಳನ್ನು ಕರೆದು ಇದೆಲ್ಲಾ ಯಾರು ಮಾಡಿದ್ದು ಕೇಳುತ್ತಾರೆ. ಶ್ರಾವಣಿಯೇ ಮಾಡಿದ್ದು ಎಂದು ಗೊತ್ತಾದಾಗ ಉರಿದು ಬೀಳುತ್ತಾರೆ. ಆದರೆ ಶ್ರಾವಣಿಗೆ ಮಾತ್ರ ತಾನು ಹೀಗೆಲ್ಲಾ ಮಾಡಿ ಮನೆಯವರನ್ನು ಒಲಿಸಿಕೊಳ್ಳಬಹುದು ಎಂದೆನಿಸುತ್ತದೆ.

ಸುಬ್ಬುಗೆ ಶ್ರಾವಣಿ ಮೇಲೆ ಪ್ರೀತಿಯಿಲ್ಲ ಎನ್ನುವ ಶ್ರೀವಲ್ಲಿ

ಸುಬ್ಬು ಕೆಲಸಕ್ಕೆಂದು ಹೊರಟಾಗ ಅವನ ಹಿಂದೆಯೇ ಬರುವ ಶ್ರಾವಣಿ ಅವನಿಗೆ ಡಬ್ಬಿ ಕೊಡಬೇಕು ಎನ್ನುವ ಆಸೆ ಹೊಂದಿರುತ್ತಾಳೆ. ಅಷ್ಟೊತ್ತಿಗೆ ಅಲ್ಲಿಗೆ ಬರುವ ಶ್ರೀವಲ್ಲಿ ಸುಬ್ಬು ಬಳಿ ‘ಸುಬ್ಬು ನಾನು ನಿನ್ನ ಜೊತೆ ಮಾತನಾಡಬೇಕು, ನಿನಗೆ ಶ್ರಾವಣಿ ಮೇಲೆ ನಿಜಕ್ಕೂ ಪ್ರೀತಿ ಇದ್ಯಾ, ನೀವು ಅವಳನ್ನು ಪ್ರೀತಿಸಿ ಮದುವೆ ಆಗಿದ್ದಾ, ಹಾಗಿದ್ದ ಮೇಲೆ ನನ್ನ ಜೊತೆ ಮದುವೆಯಾಗಲು ಯಾಕೆ ಒಪ್ಪಿಕೊಂಡೆ‘ ಎಂದೆಲ್ಲಾ ಪ್ರಶ್ನೆ ಕೇಳುತ್ತಾಳೆ. ಅಲ್ಲದೇ ತಾನು ಇಂದು ಉತ್ತರ ತಿಳಿದುಕೊಳ್ಳದೇ ಇಲ್ಲಿಂದ ಹೋಗುವುದಿಲ್ಲ ಎಂದು ಹಟ ಹಿಡಿಯುತ್ತಾಳೆ. ಅವಳ ಮಾತು ಕೇಳಿ ಕೋಪ ಮಾಡಿಕೊಳ್ಳುವ ಶ್ರಾವಣಿ ‘ಶ್ರೀವಲ್ಲಿ ನೀನು ಏನೇನೋ ಮಾತನಾಡಬೇಡ, ಪ್ರೀತಿಯಿಲ್ಲದೇ ಸುಬ್ಬು ನನ್ನ ಕುತ್ತಿಗೆಗೆ ತಾಳಿ ಕಟ್ಟಿಲ್ಲ. ಮದುವೆಯಾದ ಹುಡುಗನ ಮುಂದೆ ಆಡುವ ಮಾತಲ್ಲ ಇದು‘ ಎಂದು ಅವಳಿಗೆ ಜೋರು ಮಾಡುತ್ತಾಳೆ. ಮಾತಿಗೆ ಮಾತು ಬೆಳೆದಾಗ ಕೋಪಗೊಳ್ಳುವ ಸುಬ್ಬು ಇಬ್ಬರಿಗೂ ಸುಮ್ಮನೆ ಇರಿ ಎಂದು ಗದರುತ್ತಾನೆ. ಅಲ್ಲದೇ ಕೋಪಗೊಂಡು ಬೈಕ್ ಹತ್ತಿ ಹೊರಟು ಬಿಡುತ್ತಾನೆ. ಮನೆಗೆ ಹೋಗುವಾಗ ಶ್ರೀವಲ್ಲಿ ಶ್ರಾವಣಿಗೆ ‘ಸುಬ್ಬುಗೆ ನಿನ್ನ ಮೇಲೆ ಪ್ರೀತಿ ಇಲ್ಲ ಎಂದರೆ ನಾನು ಅವನನ್ನು ಪಡೆದುಕೊಂಡೇ ತೀರುತ್ತೇನೆ‘ ಎಂದು ಸವಾಲು ಹಾಕುತ್ತಾಳೆ. ಶ್ರಾವಣಿ ಕೂಡ ‘ಸುಬ್ಬು ನನ್ನವನು, ಅವನಿಗೆ ನನ್ನ ಮೇಲೆ ಪ್ರೀತಿ ಇದೆ ಎಂಬುದನ್ನು ನಾನು ಜಗತ್ತಿಗೆ ತೋರಿಸುತ್ತೇನೆ‘ ಎಂದು ಮನದಲ್ಲೇ ಸವಾಲು ಹಾಕುತ್ತಾಳೆ.

ಮಗನಿಗೆ ಮದುವೆ ಮಾಡಲು ಅರ್ಜೆಂಟ್ ಮಾಡುತ್ತಿರುವ ಇಂದ್ರಮ್ಮ

ಇತ್ತ ಇಂದ್ರಮ್ಮ ಇನ್ನೈದು ದಿನಗಳಲ್ಲಿ ವರದನಿಗೆ ಮದುವೆ ಮಾಡಿಸಬೇಕು ಹುಡುಗಿ ನೋಡಬೇಕು ಎಂದು ತಂಗಿ ಬಳಿ ಮಾತಾಡುತ್ತಿರುತ್ತಾಳೆ. ತಂಗಿ ಹೇಳಿದ ಹುಡುಗಿಯರು ಇಂದ್ರಮ್ಮನಿಗೆ ಇಷ್ಟವಾಗುವುದಿಲ್ಲ. ಹೇಗಾದರೂ ವರಲಕ್ಷ್ಮೀ ಜೊತೆ ವರದನ ಮದುವೆ ಆಗುವುದು ತಪ್ಪಿಸಬೇಕು ಎಂದು ಇಂದ್ರಮ್ಮ ಪಟ ತೊಟ್ಟಿರುತ್ತಾಳೆ. ಅಕ್ಕ–ತಂಗಿ ಮಾತನಾಡುವುದನ್ನೆಲ್ಲಾ ವರದ ಶ್ರಾವಣಿಗೆ ಕಾಲ್ ಮಾಡಿ ಕೇಳಿಸುತ್ತಾನೆ. ಆಗ ಶ್ರಾವಣಿ ನಿಮ್ಮಮ್ಮ 5ದಿನ ಸಮಯ ಕೊಟ್ರೆ ನಾನು 4ನೇ ದಿನಕ್ಕೆ ನಿಮ್ಮ ಮದುವೆ ಮಾಡಿಸುತ್ತೇನೆ ಎಂದು ಶ್ರಾವಣಿ ವರದನಿಗೆ ಭರವಸೆ ನೀಡುತ್ತಾಳೆ.

ಶ್ರಾವಣಿ ಅಂದುಕೊಂಡಂತೆ ಸುಬ್ಬು ಅವಳನ್ನು ಹೆಂಡತಿ ಎಂದು ಒಪ್ಪಿಕೊಳ್ಳುತ್ತಾನಾ, ವರದ–ವರಲಕ್ಷ್ಮೀಗೆ ಮದುವೆ ಮಾಡಿಸಲು ಶ್ರಾವಣಿಗೆ ಸಾಧ್ಯವಾಗುತ್ತಾ, ಶ್ರಾವಣಿ ನಿಧಾನಕ್ಕೆ ಮನೆಯವರ ಮನಸ್ಸು ಗೆಲ್ಲುತ್ತಾಳಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner