ಸುಬ್ರಹ್ಮಣ್ಯನ ಸನ್ನಿಧಾನದಲ್ಲಿ ವಿಶಾಲು–ಸುಬ್ಬು, ಶ್ರಾವಣಿ ಅಂದುಕೊಂಡಂತೆ ಒಂದಾಗ್ತಾರಾ ತಾಯಿ–ಮಗ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಸುಬ್ರಹ್ಮಣ್ಯನ ದರ್ಶನಕ್ಕೆ ಹೋಗುವಾಗ ತಲೆ ಸುತ್ತಿ ಬಿದ್ದ ತಾಯಿಗೆ ಅರಿವಾಗದಂತೆ ಆರೈಕೆ ಮಾಡ್ತಾನೆ ಸುಬ್ಬು. ಅಮ್ಮ, ಮಗ ಕುಕ್ಕೆಗೆ ಹೋದ ವಿಚಾರವನ್ನು ಶ್ರೀವಲ್ಲಿಗೆ ತಿಳಿಸುತ್ತಾಳೆ ಕಾಂತಮ್ಮ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್ 19ರ ಸಂಚಿಕೆಯ ವಿವರ.

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 19ರ ಸಂಚಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಸ್ ಇಳಿದ ಶ್ರಾವಣಿ, ಪದ್ಮನಾಭ ಒಂದು ಕಡೆ ಚಹಾ ಕುಡಿಯುತ್ತಾ ಉಭಯಕುಶಲೋಪರಿ ಮಾತನಾಡುತ್ತಾ ನಿಂತಿರುತ್ತಾರೆ. ಸುಬ್ಬು ಹಾಗೂ ವಿಶಾಲಾಕ್ಷಿ ಇಬ್ಬರೂ ಒಂದೇ ಲಾಡ್ಜ್‌ನಲ್ಲಿ ಫ್ರೆಶ್ಅಪ್ ಆಗಲು ರೂಮ್ ಮಾಡಿರುತ್ತಾರೆ. ಆದರೆ ಸುಬ್ಬಗೆ ತಾಯಿ ಬಂದಿರುವುದು ತಿಳಿದಿಲ್ಲ, ವಿಶಾಲುಗೆ ಮಗ ಬಂದಿರುವುದು ತಿಳಿದಿರುವುದಿಲ್ಲ. ಸುಬ್ರಹ್ಮಣ್ಯ ಸನ್ನಿಧಾನದ ಬಗ್ಗೆ ಮಾತನಾಡುತ್ತಾ ತಾವು ಕೂಡ ಫ್ರೆಶ್ ಆಗಲು ರೂಮ್ ಕಡೆ ಹೊರಡುತ್ತಾರೆ ಮಾವ–ಸೊಸೆ.
ದಾರಿಯಲ್ಲಿ ತಲೆ ಸುತ್ತಿ ಬೀಳುವ ವಿಶಾಲು
ಲಾಡ್ಜ್‌ನಲ್ಲಿ ಫ್ರೆಶ್‌ಅಪ್ ಆಗಿ ದೇವಸ್ಥಾನದ ಕಡೆ ಹೊರಡುವ ವಿಶಾಲಾಕ್ಷಿಗೆ ದಾರಿ ತಿಳಿಯುವುದಿಲ್ಲ. ಬಿಸಿಲು ಬೇರೆ ನೆತ್ತಿ ಎತ್ತರಕ್ಕೆ ಏರಿರುತ್ತದೆ. ಆಗ ಅವಳಿಗೆ ಹಿಂದೆಲ್ಲಾ ಮಗನ ಜೊತೆ ಬಂದಾಗ ಅವನು ಎಷ್ಟು ಜೋಪಾನವಾಗಿ ಕರೆದುಕೊಂಡು ಹೋಗುತ್ತಿದ್ದ ಎಂಬುದು ನೆನಪಾಗುತ್ತದೆ. ಆಗ ಎದುರಿಗೆ ಬರುವ ವ್ಯಕ್ತಿಯಲ್ಲಿ ದೇವಸ್ಥಾನಕ್ಕೆ ಯಾವ ಕಡೆ ಹೋಗಬೇಕು ಎಂದು ಕೇಳುತ್ತಾಳೆ. ಆತ ‘ದೇವಸ್ಥಾನ ದೂರ ಇದೆ. ನೀವು ಆಟೊದಲ್ಲಿ ಹೋಗಿ‘ ಎಂದರೂ ಕೇಳದೇ ‘ಹರಕೆ ಇದೆ, ನಡೆದುಕೊಂಡೇ ಹೋಗ್ತೀನಿ‘ ಅಂತ ಹೇಳಿ ಬಿಸಿಲನ್ನೂ ಲೆಕ್ಕಿಸದೇ ನಡೆದೇ ಹೊರಡುತ್ತಾಳೆ. ಇತ್ತ ಎದುರೇ ತಾಯಿ ಇದ್ರೂ ಕಾಣದೇ ಆಟೊ ಹಿಡಿಯಲು ಹೋಗುತ್ತಾನೆ ಸುಬ್ಬು. ವಿಶಾಲಾಕ್ಷಿಗೆ ಸ್ವಲ್ಪ ದೂರ ಬರುವಷ್ಟರಲ್ಲಿ ತಲೆಸುತ್ತು ಬರುತ್ತದೆ. ಜನರೆಲ್ಲಾ ಆಕೆಯನ್ನು ಸುತ್ತುವರಿದಿರುತ್ತಾರೆ. ಆಟೊದಲ್ಲಿ ಬರುತ್ತಿರುವ ಸುಬ್ಬು ಜನರ ಗುಂಪು ನೋಡಿ ಆಟೊ ನಿಲ್ಲಿಸಲು ಹೇಳುತ್ತಾನೆ. ಆದರೆ ಸೇರಿರುವ ಜನರ ನಡುವೆ ಆತನಿಗೆ ಬಿದ್ದಿರುವುದು ತನ್ನ ತಾಯಿಯೇ ಎಂಬುದು ತಿಳಿದಿರುವುದಿಲ್ಲ. ಆದರೂ ಯಾರೋ ಬಿದಿದ್ದಾರೆ ಎಂದು ತಿಳಿದು ಓಡಿ ಅಂಗಡಿಗೆ ಹೋಗಿ ನೀರು, ಜ್ಯೂಸ್ ತಂದುಕೊಟ್ಟು ಹೊರಡುತ್ತಾನೆ. ನೀರು ಕುಡಿದು ಸುಧಾರಿಸಿಕೊಂಡ ವಿಶಾಲಾಕ್ಷಿಗೆ ನೀರು ಕೊಟ್ಟಿದ್ದು ತನ್ನ ಮಗನೇ ಎಂದು ತಿಳಿಯದೇ ಯಾರ ಹೆತ್ತ ಮಗನೋ, ಚೆನ್ನಾಗಿರಲಿ ಎಂದು ಹಾರೈಸುತ್ತಾಳೆ.
ಸುಬ್ಬು–ವಿಶಾಲು ಒಟ್ಟಿಗೆ ದೇವಸ್ಥಾನದೊಳಗೆ ಹೋಗುವಂತೆ ಮಾಡಿದ ಶ್ರಾವಣಿ–ಪದ್ಮನಾಭ
ಇತ್ತ ಆಟೊದಲ್ಲಿ ಹೊರಟ ಸುಬ್ಬು ದೇವಸ್ಥಾನಕ್ಕೆ ಬೇಗ ಬರುತ್ತಾನೆ. ಆದರೆ ಅಷ್ಟೊತ್ತಿಗಿನ್ನೂ ವಿಶಾಲು ದೇವಸ್ಥಾನ ತಲುಪಿ ಇರುವುದಿಲ್ಲ. ಇಬ್ಬರೂ ಒಟ್ಟಿಗೆ ದೇವಸ್ಥಾನಕ್ಕೆ ಹೋದರೆ ಮಾತ್ರ ತಮ್ಮ ಪ್ಲಾನ್ ಸಕ್ಸಸ್ ಆಗುತ್ತೆ ಅನ್ನೋದು ಶ್ರಾವಣಿಗೆ ಗೊತ್ತಿರುತ್ತದೆ. ಅದಕ್ಕೆ ಅವಳು ಮಾವನಿಂದ ಗಂಡನಿಗೆ ಕಾಲ್ ಮಾಡಿಸಿ ಮಾಲೆ ತರಲು ಕಳುಹಿಸುವಂತೆ ಹೇಳುತ್ತಾಳೆ. ಸುಬ್ಬು ಅತ್ತ ಹೋಗಿದ್ದೇ ತಡ, ಇತ್ತ ವಿಶಾಲಾಕ್ಷಿ ದೇವಸ್ಥಾನದ ಬಾಗಿಲಿಗೆ ಬರುತ್ತಾಳೆ. ಕೂಡಲೇ ಸುಬ್ಬುಗೆ ಕಾಲ್ ಮಾಡುವ ಪದ್ಮನಾಭ ಈಗಲೇ ದೇವಸ್ಥಾನಕ್ಕೆ ಹೋಗು ಮಾಲೆ ಆಮೇಲೆ ತಂದ್ರಾಯ್ತು ಅಂತ ಅವಸರ ಮಾಡುತ್ತಾರೆ. ಒಟ್ಟು ವಿಶಾಲಾಕ್ಷಿ ಹಾಗೂ ಸುಬ್ಬು ಒಂದೇ ಸಮಯಕ್ಕೆ ದೇವರ ಮುಂದೆ ಬಂದು ನಿಲ್ಲುತ್ತಾರೆ.
ಕಾಂತಮ್ಮನ ಚಾಡಿ, ಶ್ರೀವಲ್ಲಿಗೆ ವರಲಕ್ಷ್ಮೀ ವಾರ್ನಿಂಗ್
ಸುಬ್ಬು ಹಾಗೂ ಶ್ರಾವಣಿ, ಪದ್ಮನಾಭ, ವಿಶಾಲಾಕ್ಷಿ ಎಲ್ಲರೂ ಬೇರೆ ಬೇರೆಯಾಗಿ ದೇವಸ್ಥಾನಕ್ಕೆ ಹೋದ ವಿಚಾರಕ್ಕೆ ರಕ್ಕೆ ಪುಕ್ಕ ಕಟ್ಟಿ ಹೇಳುವ ಮೂಲಕ ಶ್ರೀವಲ್ಲಿಯ ತಲೆಗೆ ಹುಳ ಬಿಡುತ್ತಾಳೆ ಕಾಂತಮ್ಮ. ಅಲ್ಲದೇ ಅವರೆಲ್ಲಾ ಒಂದಾಗಿದ್ದಾರೆ, ನಮ್ಮೆದುರು ನಾಟಕ ಮಾಡುತ್ತಿದ್ದಾರೆ. ನೀನು ಹೀಗೆ ಇದ್ದರೆ ನಿನಗೆ ಈ ಮನೆಗೆ ಸೊಸೆಯಾಗಿ ಬರಲು ಸಾಧ್ಯವೇ ಆಗುವುದಿಲ್ಲ ಎಂದು ಶ್ರೀವಲ್ಲಿಯಲ್ಲಿ ಶ್ರಾವಣಿ ಬಗ್ಗೆ ಮತ್ತಿಷ್ಟು ರೋಷ ಬರುವಂತೆ ಮಾಡುತ್ತಾಳೆ. ಇತ್ತ ಶ್ರೀವಲ್ಲಿ ಕಾಂತಮ್ಮ ಹೇಳಿದ್ದನ್ನೆಲ್ಲಾ ವಿಜಯಾಂಬಿಕಾಗೆ ಕಾಲ್ ಮಾಡಿ ಹೇಳ್ತಾಳೆ. ಆಗ ವಿಜಯಾಂಬಿಕಾ ಮೊದಲು ಕೂಡ ಹೇಳಿದಂತೆ ವರಲಕ್ಷ್ಮೀಗೆ ಟಾರ್ಚರ್ ಕೊಡಬೇಕು ಎಂದು ಹೇಳುತ್ತಾಳೆ. ವಿಜಯಾಂಬಿಕಾ ಜೊತೆ ಮಾತನಾಡಿ ತಿರುಗಿ ನೋಡಿದ್ರೆ ಇಲ್ಲಿ ವರಲಕ್ಷ್ಮೀ ನಿಂತಿರುತ್ತಾಳೆ. ಆರಂಭದಲ್ಲಿ ಶ್ರೀವಲ್ಲಿ ಮಾತು ಕೇಳಿಸಿಕೊಳ್ಳದಂತೆ ಇರುವ ವರ, ಕೊನೆಯಲ್ಲಿ ಅವಳಿಗೆ ಒಂದು ವಾರ್ನಿಂಗ್ ಕೊಡ್ತಾಳೆ. ಸುಬ್ಬು ಅಣ್ಣ ಹಾಗೂ ಶ್ರಾವಣಿ ಅತ್ತಿಗೆ ಎಂದಿಗೂ ದೂರ ಆಗಬಾರದು, ದೂರ ಆಗೋಕೆ ನಾನು ಬಿಡೋದು ಇಲ್ಲ. ನೀನು ಆ ಪ್ರಯತ್ನ ಮಾಡ್ತಾ ಇದ್ರೆ ಒಂದೇ ಬಿಟ್ಟು ಬಿಡು ಎಂದು ಕಡಕ್ ವಾರ್ನಿಂಗ್ ಕೊಟ್ಟು ರೂಮ್‌ನಿಂದ ಹೊರಡುತ್ತಾಳೆ.
ವಿಜಯಾಂಬಿಕಾ ಅಂದುಕೊಂಡಂತೆ ವರಲಕ್ಷ್ಮೀಗೆ ಟಾರ್ಚರ್ ಕೊಡೋದು ಶ್ರಾವಣಿ ಮೇಲೆ ಪರಿಣಾಮ ಬೀರುತ್ತಾ, ಸುಬ್ಬು–ವಿಶಾಲು ಸುಬ್ರಹ್ಮಣ್ಯ ಸನ್ನಿಧಾನದಲ್ಲಿ ಒಂದಾಗಬೇಕು ಅನ್ನೋ ಶ್ರಾವಣಿ ಕನಸು ನನಸಾಗುತ್ತಾ, ಶ್ರೀವಲ್ಲಿಗೆ ಸುಬ್ಬು ಸಿಗೋಕೆ ಸಾಧ್ಯಾನಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ
‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.
ಪಾತ್ರ ಪರಿಚಯ
ವೀರೇಂದ್ರ– ಮೋಹನ್
ವಿಜಯಾಂಬಿಕಾ – ಸ್ನೇಹ ಈಶ್ವರ್
ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್
ಸುಬ್ಬು – ಅಮೋಘ್
ಪದ್ಮನಾಭ – ಬಾಲರಾಜ್
ಪಿಂಕಿ – ಪ್ರತಿ ಶೆಟ್ಟಿ
ಮದನ್ – ಅರ್ಥವ
ಕಾಂತಮ್ಮ – ಭವಾನಿ ಪ್ರಕಾಶ್
ವಂದನಾ – ಜ್ಯೋತಿ
