ಶ್ರೀವಲ್ಲಿ ಮುಂದಿಟ್ಟುಕೊಂಡು ವಿಜಯಾಂಬಿಕಾ ಹೊಸ ಗೇಮ್‌ ಪ್ಲಾನ್, ಮೊದಲ ಬಾರಿಗೆ ತವರು ಮನೆಯತ್ತ ಮಿನಿಸ್ಟರ್ ಮಗಳು; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೀವಲ್ಲಿ ಮುಂದಿಟ್ಟುಕೊಂಡು ವಿಜಯಾಂಬಿಕಾ ಹೊಸ ಗೇಮ್‌ ಪ್ಲಾನ್, ಮೊದಲ ಬಾರಿಗೆ ತವರು ಮನೆಯತ್ತ ಮಿನಿಸ್ಟರ್ ಮಗಳು; ಶ್ರಾವಣಿ ಸುಬ್ರಹ್ಮಣ್ಯ

ಶ್ರೀವಲ್ಲಿ ಮುಂದಿಟ್ಟುಕೊಂಡು ವಿಜಯಾಂಬಿಕಾ ಹೊಸ ಗೇಮ್‌ ಪ್ಲಾನ್, ಮೊದಲ ಬಾರಿಗೆ ತವರು ಮನೆಯತ್ತ ಮಿನಿಸ್ಟರ್ ಮಗಳು; ಶ್ರಾವಣಿ ಸುಬ್ರಹ್ಮಣ್ಯ

ಮದುವೆಯಾದ ಮೇಲೆ ಮೊದಲ ಬಾರಿಗೆ ಗಂಡನೊಂದಿಗೆ ತವರು ಮನೆಗೆ ಹೋಗುವ ಖುಷಿಯಲ್ಲಿ ಶ್ರಾವಣಿ, ಮೊಮ್ಮಗಳು ಮನೆಗೆ ಬರುತ್ತಿದ್ದಾಳೆ ಎಂಬ ಸಂಭ್ರಮದಲ್ಲಿ ತೇಲುತ್ತಿದ್ದಾರೆ ಲಲಿತಾದೇವಿ. ಶ್ರೀವಲ್ಲಿ ಮುಂದಿಟ್ಟುಕೊಂಡು ವಿಜಯಾಂಬಿಕಾ ಹೊಸ ಪ್ಲಾನ್. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಮಾರ್ಚ್‌ 27ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 27ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 27ರ ಸಂಚಿಕೆ

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 27ರ ಸಂಚಿಕೆಯಲ್ಲಿ ಸುಬ್ಬು ಯಜಮಾನರ ಮನೆಯಿಂದ ಬಂದಾಗ ಕಾಫಿ ತರುವ ಶ್ರಾವಣಿ ‘ಸುಬ್ಬು ನಿನ್ನ ಜೊತೆ ಒಂದು ವಿಚಾರ ಹೇಳಬೇಕು‘ ಎನ್ನುತ್ತಾಳೆ. ಸುಬ್ಬು ಕೂಡ ‘ಮೇಡಂ, ನಿಮ್ಮ ಜೊತೆ ಏನೋ ಹೇಳಬೇಕು‘ ಎನ್ನುತ್ತಾನೆ. ಆಗ ಶ್ರಾವಣಿ ‘ಸುಬ್ಬು ಅ‍ಪ್ಪ ಕಾಲ್ ಮಾಡಿದ್ರು, ಅವರು ನಮ್ಮಿಬ್ಬರನ್ನೂ ಮನೆಗೆ ಬರಲು ಹೇಳಿದ್ದಾರೆ, ನನ್ನ ಜೊತೆ ಎಷ್ಟು ಪ್ರೀತಿಯಿಂದ ಮಾತನಾಡಿದ್ರು ಗೊತ್ತಾ, ನಂಗಂತೂ ಅವರು ಮನೆಗೆ ಕರೆದಿದ್ದು ತುಂಬಾ ಖುಷಿ ಆಯ್ತು‘ ಎನ್ನುತ್ತಾರೆ. ಆಗ ಸುಬ್ಬು ‘ಮೇಡಂ, ನಾನು ಕೂಡ ಇದನ್ನೇ ಹೇಳೋಕೆ ಬಂದಿದ್ದು. ಯಜಮಾನರು ನನಗೂ ಕೂಡ ಇದನ್ನೇ ಹೇಳಿದ್ರು ‘ನಿನ್ನ ಹೆಂಡ್ತಿ ಕರ್ಕೊಂಡು‘ ಅಂತ ಹೇಳೋಕೆ ಬಂದವನು ಅರ್ಧಕ್ಕೆ ನಿಲ್ಲಿಸುತ್ತಾನೆ. ಆಗ ಶ್ರಾವಣಿ ಅಪ್ಪ ಏನು ಹೇಳಿದ್ರು ಹೇಳು ಅಂದ್ರೆ ಶ್ರಾವಣಿ ಮೇಡಂನ ಕರ್ಕೊಂಡು ಮನೆಗೆ ಬಾ ಅಂದ್ರು ಅನ್ನುತ್ತಾನೆ. ಆದರೆ ಶ್ರಾವಣಿ ಅವನನ್ನು ಕಾಡಿಸಿ ಅವನ ಬಾಯಿಂದ ಹೆಂಡ್ತಿನಾ ಕರ್ಕೊಂಡ್ ಬಾ ಅಂತ ಅಪ್ಪ ಹೇಳಿದ್ದನ್ನು ಹೇಳಿಸಿಕೊಳ್ಳುತ್ತಾಳೆ.

ಮೊಮ್ಮಗಳು ಬರುವ ಸಂಭ್ರಮದಲ್ಲಿ ಲಲಿತಾದೇವಿ

ನಾಳೆ ಮೊಮ್ಮಗಳು ಮನೆಗೆ ಬರ್ತಾಳೆ, ಮದುವೆಯಾದ ಮೇಲೆ ಇದೇ ಮೊದಲ ಬಾರಿಗೆ ಅವಳು ತವರು ಮನೆಗೆ ಬರ್ತಾ ಇರೋದು ಎಂದು ಬಹಳ ಸಂಭ್ರಮದಲ್ಲಿ ಇರುತ್ತಾರೆ ಲಲಿತಾದೇವಿ. ಅವರು ಊಟ ಕೂಡ ಮಾಡದೇ ಕುಳಿತಿರುತ್ತಾರೆ. ಆಗ ಅವರನ್ನು ಊಟಕ್ಕೆ ಕರೆಯಲು ಬರುವ ವಂದನಾ ‘ಅಮ್ಮ, ನೀವಿನ್ನೂ ಊಟ ಮಾಡಿಲ್ಲ, ಊಟ ಮಾಡೋಣ‘ ಎಂದು ಕರೆಯುತ್ತಾಳೆ. ಆಗ ಲಲಿತಾದೇವಿ ‘ಶ್ರಾವಣಿ ಮನೆಗೆ ಬರುವ ಖುಷಿಯಲ್ಲಿ ನನಗೆ ಊಟ ಮಾಡೋದು ಕೂಡ ಮರೆತು ಹೋಗಿದೆ. ಮದುವೆಯಾದ ಮೇಲೆ ಅವಳು ಮೊದಲ ಬಾರಿಗೆ ತವರು ಮನೆಗೆ ಬರ್ತಾ ಇದಾಳೆ. ನಾಳೆ ಅವಳಿಗೆ ಇಲ್ಲಿ ಏನೇನು ಶಾಸ್ತ್ರ ನಡಿಬೇಕೋ ಅದೆಲ್ಲಾ ನಡೆಯಲೇಬೇಕು. ಯಾವುದರಲ್ಲೂ ಕೊರತೆ ಆಗಬಾರದು ಎಂದು ವಂದನಾಳಿಗೆ ಸಲಹೆ ನೀಡುತ್ತಾರೆ. ವಂದನಾಗೂ ಕೂಡ ಶ್ರಾವಣಿ ಮತ್ತೆ ಮನೆಗೆ ಬರುವುದು ಖುಷಿ ನೀಡಿರುತ್ತದೆ. ‘ಅಮ್ಮಾ, ಭಾವ ಹಾಗೂ ನಮ್ಮ ಮನೆಯವರು ಶ್ರಾವಣಿ ಮೇಲೆ ಕೋಪ ಮಾಡಿಕೊಂಡಿರುವುದು ನೋಡಿ, ಮತ್ತೆ ಈ ಮನೆಯಲ್ಲಿ ಅವಳಿಗೆ ಬರುವ ಅವಕಾಶ ಸಿಗುತ್ತೋ ಇಲ್ವೋ ಅಂದ್ಕೊಂಡ್ ಇದ್ದೆ. ಆದರೆ ನಿಮ್ಮ ದೆಸೆಯಿಂದ ಅವಳು ಮತ್ತೆ ಈ ಮನೆಗೆ ಬರುವ ಹಾಗಿದೆ‘ ಎಂದು ಸಂತಸ ವ್ಯಕ್ತಪಡಿಸುತ್ತಾಳೆ. ಇತ್ತ ಈ ವಿಚಾರ ಯಾವುದೂ ತಿಳಿಯದ ವಿಜಯಾಂಬಿಕಾ ಬೇರೆಯದ್ದೇ ಮಸಲತ್ತು ಮಾಡುತ್ತಿರುತ್ತಾಳೆ.

ವೀರು ಬಳಿ ನ್ಯಾಯ ಕೇಳುವಂತೆ ಶ್ರೀವಲ್ಲಿ ತಲೆ ಕೆಡಿಸಿದ ವಿಜಯಾಂಬಿಕಾ

ಮಗನ ಜೊತೆ ಶ್ರಾವಣಿ ನೆಮ್ಮದಿ ಕೆಡಿಸಬೇಕು ಎಂದು ಮಾತನಾಡುವ ವಿಜಯಾಂಬಿಕಾ ಈ ಪ್ಲಾನ್‌ಗೆ ಶ್ರೀವಲ್ಲಿಯೇ ಸರಿಯಾದ ಅಸ್ತ್ರ ಎಂದು ನಿರ್ಧಾರ ಮಾಡುತ್ತಾಳೆ. ಅವಳ ತಲೆ ಕೆಡಿಸಿ, ಅವಳನ್ನು ಮುಂದೆ ಇಟ್ಟುಕೊಂಡು ಹೊಸ ಪ್ಲಾನ್ ಮಾಡಲು ಸಿದ್ಧಳಾಗುತ್ತಾಳೆ. ಅದರಂತೆ ಶ್ರೀವಲ್ಲಿಗೆ ಕಾಲ್ ಮಾಡುವ ವಿಜಯಾಂಬಿಕಾ ಅವಳ ಎದುರು ಬಣ್ಣದ ಮಾತನಾಡಿ ‘ನನಗೆ ನಿನ್ನ ಬಗ್ಗೆಯೇ ಚಿಂತೆ, ನೀನು ಚೆನ್ನಾಗಿರಬೇಕು ಅನ್ನೋದೇ ನನ್ನ ಆಸೆ. ಆದರೆ ನಿನಗೆ ನ್ಯಾಯ ಸಿಗಬೇಕು. ನನ್ನ ತಮ್ಮ ನಿನ್ನನ್ನು ಮಗಳು ಅಂದುಕೊಂಡಿದ್ದಾನೆ. ಆದರೆ ನಿನ್ನ ಬದುಕಲ್ಲಿ ಆಗಿರುವುದು ಯಾವುದು ಅವನಿಗೆ ಗೊತ್ತಿಲ್ಲ, ಆದರೆ ಆ ಶ್ರಾವಣಿ ನೀನು ಪ್ರೀತಿಸಿ ಮದುವೆಯಾಗ ಬೇಕು ಎಂದುಕೊಂಡಿದ್ದ ಹುಡುಗನನ್ನು ಮದುವೆಯಾಗಿದ್ದಾಳೆ ಎಂದು ತಿಳಿದರೆ ಅವನು ಖಂಡಿತ ನಿನಗೆ ನ್ಯಾಯ ಕೊಡಿಸುತ್ತಾನೆ. ಆದರೆ ಈ ವಿಚಾರ ನೀನು ಅವನಿಗೆ ತಿಳಿಯುವ ಹಾಗೆ ಮಾಡಬೇಕು‘ ಎಂದು ಶ್ರೀವಲ್ಲಿ ತಲೆ ಕೆಡಿಸುತ್ತಾಳೆ, ಮಾತ್ರವಲ್ಲ ಎಂತಹ ಸಂದರ್ಭದಲ್ಲೂ ನಾನು ನಿನ್ನ ಜೊತೆ ನಿಲ್ತೀನಿ ಅನ್ನುತ್ತಾಳೆ. ಸುಬ್ಬು ಪ್ರೀತಿಯಲ್ಲಿ ಹುಚ್ಚಾಗಿದ್ದ ಶ್ರೀವಲ್ಲಿಗೆ ವಿಜಯಾಂಬಿಕಾ ತನ್ನನ್ನು ಆಟದ ಗೊಂಬೆ ಮಾಡಿಕೊಂಡಿದ್ದಾಳೆ ಎನ್ನುವುದು ಅರಿವೇ ಆಗುವುದಿಲ್ಲ. ಆದರೆ ವಿಜಯಾಂಬಿಕಾ ಪ್ಲಾನ್ ಬೇರೆಯದ್ದೇ ಆಗಿರುತ್ತದೆ. ಸುಬ್ಬು ಹಾಗೂ ಶ್ರಾವಣಿ ಮದುವೆಯಾದರೂ ಗಂಡ ಹೆಂಡತಿ ಥರ ಇಲ್ಲ ಎನ್ನುವುದು ಹಾಗೂ ಶ್ರೀವಲ್ಲಿ ಜೊತೆ ಸುಬ್ಬು ಮದುವೆ ನಿಶ್ಚಯ ಆಗಿದ್ದು ನಿಂತು ಹೋಗಿತ್ತು ಎನ್ನುವುದು ವೀರೇಂದ್ರನಿಗೆ ಗೊತ್ತಾಗಬೇಕು. ಆಗ ಅವನು ಶ್ರೀವಲ್ಲಿ ಜೊತೆ ಸುಬ್ಬು ಮದುವೆ ಮಾಡಿಸುತ್ತಾನೆ. ಆದರೆ ಶ್ರೀವಲ್ಲಿಯನ್ನು ಮುಂದಿಟ್ಟುಕೊಂಡು ವೀರುಯಿಂದ ಸುಬ್ಬುವನ್ನು ಶಾಶ್ವತವಾಗಿ ದೂರ ಮಾಡಬೇಕು, ಆಗ ಶ್ರಾವಣಿ ಈ ಮನೆಗೆ ಬರುತ್ತಾಳೆ, ಅವಳು ಬೇರೆ ಗತಿಯಿಲ್ಲದೇ ತನ್ನ ಮಗ ಮದನ್‌ನನ್ನು ಮದುವೆ ಆಗಬೇಕಾಗುತ್ತದೆ‘ ಎಂದೆಲ್ಲಾ ಕಿಲಾಡಿ ವಿಜಯಾಂಬಿಕಾ ಪ್ಲಾನ್ ಮಾಡಿರುತ್ತಾಳೆ.

ವಿಜಯಾಂಬಿಕಾ ಅಂದುಕೊಂಡಂತೆ ನಡೆಯುತ್ತಾ ಸುಬ್ಬು ಹಾಗೂ ಶ್ರಾವಣಿ ದೂರ ಆಗ್ತಾರಾ, ವೀರೇಂದ್ರ ಸುಬ್ಬುಗೂ ಶ್ರೀವಲ್ಲಿಗೂ ಮದುವೆ ಮಾಡಿಸ್ತಾರಾ, ಶ್ರಾವಣಿ ತವರು ಮನೆಗೆ ಬಂದ ಮೇಲೆ ಏನೆಲ್ಲಾ ನಡೆಯಬಹುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಬಗ್ಗೆ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ – ಐಶ್ಚರ್ಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner