ಅಮ್ಮ–ಅಪ್ಪನ ಎದುರು ಶ್ರಾವಣಿಗೆ ಕಾಲುಂಗುರ, ಕಾಲ್ಗೆಜ್ಜೆ ತೊಡಿಸಿದ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ
ಕನ್ನಡ ಸುದ್ದಿ  /  ಮನರಂಜನೆ  /  ಅಮ್ಮ–ಅಪ್ಪನ ಎದುರು ಶ್ರಾವಣಿಗೆ ಕಾಲುಂಗುರ, ಕಾಲ್ಗೆಜ್ಜೆ ತೊಡಿಸಿದ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ

ಅಮ್ಮ–ಅಪ್ಪನ ಎದುರು ಶ್ರಾವಣಿಗೆ ಕಾಲುಂಗುರ, ಕಾಲ್ಗೆಜ್ಜೆ ತೊಡಿಸಿದ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ

ಸುಬ್ಬು–ಶ್ರಾವಣಿ, ವರದ–ವರಲಕ್ಷ್ಮೀ ಹನಿಮೂನ್‌ಗೆ ಎಲ್ಲಿಗೆ ಹೋಗ್ತಾರೆ ಅಂತ ತಿಳಿದುಕೊಳ್ಳಲು ಶ್ರೀವಲ್ಲಿ ಪರದಾಟ. ಸಂಕಟದಲ್ಲೇ ಅಮ್ಮ–ಅಪ್ಪನ ಮುಂದೆ ಶ್ರಾವಣಿಗೆ ಕಾಲುಂಗುರ ತೊಡಿಸಿದ ಸುಬ್ಬು. ಮನೆಯಲ್ಲಿ ಧನಲಕ್ಷ್ಮೀ–ಕಾಂತಮ್ಮ ರಂಪಾಟ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಏಪ್ರಿಲ್ 11ರ ಸಂಚಿಕೆಯ ವಿವರ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 11ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 11ರ ಸಂಚಿಕೆ

Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 11ರ ಸಂಚಿಕೆಯಲ್ಲಿ ವಿಜಯಾಂಬಿಕಾ ಹೇಳಿದಂತೆ ಸುಬ್ಬು–ಶ್ರಾವಣಿ, ವರದ–ವರಲಕ್ಷ್ಮೀ ಹನಿಮೂನ್‌ಗೆ ಎಲ್ಲಿಗೆ ಹೋಗ್ತಾ ಇದ್ದಾರೆ ಎಂದು ತಿಳಿಯದೇ ಪರದಾಡುತ್ತಿದ್ದಾಳೆ ಶ್ರೀವಲ್ಲಿ. ಹೇಗಾದರೂ ಮಾಡಿ ಅವರು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು ಎಂದು ಹಟ ಹಿಡಿಯುವ ಅವಳು ಅಣ್ಣ–ಅತ್ತಿಗೆ ಮಾತು ಕದ್ದು ಕೇಳಿಸಿಕೊಳ್ಳಲು ಯೋಚಿಸುತ್ತಾಳೆ. ಸೀದಾ ಅವರ ಕೋಣೆಯ ಬಳಿಗೆ ಬಂದು ಹೊರಗಡೆ ಬಾಗಿಲ ಬಳಿ ನಿಲ್ಲುತ್ತಾಳೆ. ಆಗ ಅವಳಿಗೆ ವರಲಕ್ಷ್ಮೀ ತನ್ನ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಿರುವುದು ಕೇಳಿಸುತ್ತದೆ. ಆದರೂ ಸುಬ್ಬು ಮೇಲಿನ ಹುಚ್ಚು ಪ್ರೀತಿ ಅವಳನ್ನು ಎಲ್ಲ ರೀತಿಯಿಂದಲೂ ಕುರುಡು ಮಾಡಿರುತ್ತದೆ. ಬೇರೆಲ್ಲ ವಿಷಯ ಮಾತನಾಡಿದರೂ ಹನಿಮೂನ್‌ಗೆ ಎಲ್ಲಿಗೆ ಹೋಗ್ತೀವಿ ಅಂತ ವರಲಕ್ಷ್ಮೀ ಕೇಳಿದ್ದಕ್ಕೆ ಉತ್ತರ ಹೇಳುವುದಿಲ್ಲ ವರದ. ಸರ್ಪ್ರೈಸ್ ಅಲ್ಲಿಗೆ ಹೋದ ಮೇಲೆ ನಿಂಗೆ ಗೊತ್ತಾಗುತ್ತೆ ಬಿಡು ಅಂತಾನೆ. ಆಗ ವರಲಕ್ಷ್ಮೀ ನೀವು ಹೇಳಿಲ್ಲ ಅಂದ್ರೆ ಬಿಡಿ, ನಾನು ಫ್ಲೈಟ್ ಟಿಕೆಟ್ ನೋಡಿದ್ರೆ ಗೊತ್ತಾಗುತ್ತೆ ಅಂತಾಳೆ. ಆಗ ಶ್ರೀವಲ್ಲಿಗೆ ಅಣ್ಣ ಹೇಗೂ ಹೇಳಿಲ್ಲ, ಹೇಗಾದ್ರೂ ಮಾಡಿ ಫ್ಲೈಟ್ ಟಿಕೆಟ್ ಹುಡುಕಿ ನೋಡಬೇಕು ಎಂಬ ನಿರ್ಧಾರಕ್ಕೆ ಬರುತ್ತಾಳೆ. ವರದ–ವರಲಕ್ಷ್ಮೀ ಊಟಕ್ಕೆ ಹೊರಟಾಗ ಅವರ ಕೋಣೆ ಹೊಕ್ಕುವ ಶ್ರೀವಲ್ಲಿ ಫ್ಲೈಟ್ ಟಿಕೆಟ್‌ಗಾಗಿ ಹುಡುಕಾಟ ನಡೆಸುತ್ತಾಳೆ.

ಶ್ರಾವಣಿಗೆ ಕಾಲುಂಗುರ, ಕಾಲ್ಗೆಜ್ಜೆ ತೊಡಿಸಿದ ಸುಬ್ಬು

ಹನಿಮೂನ್‌ಗೆ ಹೋಗಲು ಬಟ್ಟೆ ಪ್ಯಾಕ್ ಮಾಡಿಕೊಳ್ಳುತ್ತಿರುವಾಗ ಸುಬ್ಬು–ಶ್ರಾವಣಿ ಕೋಣೆಗೆ ಬರುವ ಪದ್ಮನಾಭ ಸುಬ್ಬು ಬಳಿ ಶ್ರಾವಣಿ ಅಮ್ಮವರನ್ನು ಕರೆದುಕೊಂಡು ದೇವರ ಕೋಣೆಗೆ ಬಾ ಎಂದು ಹೇಳಿ ಹೋಗುತ್ತಾರೆ. ಯಾಕೆ ಎಂದು ಕೇಳಿದ್ರೂ ಹೇಳೋದಿಲ್ಲ. ಸುಬ್ಬುಗೆ ಟೆನ್‌ಷನ್ ಶುರುವಾಗುತ್ತದೆ. ದೇವರ ಕೋಣೆಗೆ ಹೋದಾಗ ಅಲ್ಲಿ ತಟ್ಟೆಯಲ್ಲಿ ಕಾಲುಂಗುರ ಇರಿಸಿ ಇರುವುದು ಕಾಣುತ್ತದೆ. ಕಾಲುಂಗುರ ನೋಡಿದ ಸುಬ್ಬು ಇದ್ಯಾಕಪ್ಪ ಈಗ ಅಂತ ಕೇಳ್ತಾನೆ. ಆಗ ಪದ್ಮನಾಭ ಶ್ರಾವಣಿ ಅಮ್ಮವರ ಕಾಲಲ್ಲಿ ಕಾಲುಂಗುರ ಇಲ್ಲ. ಕಾಲುಂಗುರ ಮುತ್ತೈದೆಯ ಲಕ್ಷಣ, ನೀನು ತಾಳಿ ಕಟ್ಟೋದು ಹೇಗೂ ನೋಡೋಕೆ ಆಗಿಲ್ಲ. ಈಗ ನಿನ್ನ ಹೆಂಡತಿಗೆ ಕಾಲುಂಗುರ ತೊಡಿಸೋದಾದ್ರೂ ನೋಡುತ್ತೇವೆ ಎನ್ನುತ್ತಾರೆ. ಆದರೆ ಮದುವೆಯೇ ಆಗದ ಸುಬ್ಬು ಶ್ರಾವಣಿಗೆ ಕಾಲುಂಗುರ ತೊಡಿಸಲು ಹಿಂಜರಿಯುತ್ತಾನೆ. ಆಗ ಪದ್ಮನಾಭ ನೀನು ಕಾಲುಂಗುರ ತೊಡಿಸಿಲ್ಲ ಅಂದ್ರೆ ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಹೆದರಿಸುತ್ತಾರೆ. ಆಗ ಬೇರೆ ದಾರಿ ಕಾಣದೆ ಸುಬ್ಬು ಶ್ರಾವಣಿಗೆ ಕಾಲುಂಗುರ ತೊಡಿಸುತ್ತಾನೆ, ಜೊತೆಗೆ ಅತ್ತೆ–ಮಾವ ಸೊಸೆಗೆಂದು ಪ್ರೀತಿಯಿಂದ ತಂದ ಕಾಲ್ಗೆಜ್ಜೆಯನ್ನೂ ತೊಡಿಸುತ್ತಾನೆ. ಮಗ ಸೊಸೆಗೆ ಕಾಲುಂಗುರ, ಕಾಲ್ಗೆಜ್ಜೆ ತೊಡಿಸುವುದನ್ನು ದೂರದಲ್ಲಿ ನಿಂತು ನೋಡಿ ಖುಷಿ ಪಡುತ್ತಾಳೆ ವಿಶಾಲಾಕ್ಷಿ. ಮಾವನ ಪ್ರೀತಿ ಕಂಡು ಶ್ರಾವಣಿಗೆ ಕಣ್ತುಂಬಿ ಬರುತ್ತದೆ.

ಮನೆಯಲ್ಲಿ ರಂಪ ಮಾಡುವ ಧನಲಕ್ಷ್ಮೀ

ಚಿನ್ನದ ಮೂಗುತಿ ತಂದಿದ್ದೇವೆ ಸರ್ಪ್ರೈಸ್ ಆಗಿ ಕೊಡಬೇಕು ಎಂದು ಹೇಳಿದ್ದನ್ನೇ ನೆನೆಯುವ ಧನಲಕ್ಷ್ಮೀ ಅಪ್ಪನನ್ನು ಹುಡುಕುತ್ತಿರುತ್ತಾಳೆ. ಅವಳು ಸುಬ್ಬು ಶ್ರಾವಣಿಗೆ ಕಾಲುಂಗುರ ಹಾಕೋದು ನೋಡಿದ್ರೆ ಸಮಸ್ಯೆಯಾಗುತ್ತದೆ ಎಂದು ವಿಶಾಲಾಕ್ಷಿ ಅವಳನ್ನು ತಡೆಯುತ್ತಾಳೆ. ಆದರೆ ಇದೆಲ್ಲವನ್ನು ಕದ್ದು ನೋಡಿರುವ ಕಾಂತಮ್ಮ–ಸುಂದರ ಧನಲಕ್ಷ್ಮೀಗೆ ಶ್ರಾವಣಿಗೆ ಕಾಲುಂಗುರ, ಕಾಲ್ಗೆಜ್ಜೆ ತಂದಿರುವುದನ್ನು ಹೇಳುತ್ತಾರೆ. ಅದನ್ನು ಕೇಳಿ ಮನೆಯಲ್ಲಿ ರಂಪ ಮಾಡುತ್ತಾಳೆ ಧನಲಕ್ಷ್ಮೀ. ಅವಳ ಕೋಪಕ್ಕೆ ಇನ್ನಷ್ಟು ತುಪ್ಪ ಸುರಿಯುತ್ತಾರೆ ಕಾಂತಮ್ಮ. ಆಗಲೂ ಶ್ರಾವಣಿಗೆ ಏನೂ ಇಲ್ಲದವಳು ಎಂದು ಹಂಗಿಸುವುದನ್ನು ಮರೆಯುವುದಿಲ್ಲ ಆಕೆ.

ಶ್ರೀವಲ್ಲಿಗೆ ಅಣ್ಣ–ಅತ್ತಿಗೆ, ಸುಬ್ಬು–ಶ್ರಾವಣಿ ಎಲ್ಲಿಗೆ ಹನಿಮೂನ್‌ಗೆ ಹೋಗ್ತಾರೆ ಅನ್ನೋದು ಗೊತ್ತಾಗುತ್ತಾ, ಶ್ರಾವಣಿ–ಸುಬ್ಬು ಹನಿಮೂನ್‌ಗೆ ಹೋಗದಂತೆ ತಡಿಬೇಕು ಅಂದುಕೊಂಡು ಕಾಂತಮ್ಮನ ಪ್ಲಾನ್ ಸಕ್ಸಸ್ ಆಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

‘ಶ್ರಾವಣಿ ಸುಬ್ರಹ್ಮಣ್ಯ‘ ಇದು ಜೀ ಕನ್ನಡ ವಾಹಿ ಬಗ್ಗೆಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ. ತೆಲುಗಿನ ‘ಅಬ್ಬಾಯಿಗಾರು ಅಮ್ಮಾಯಿಗಾರು ‘ ಧಾರಾವಾಹಿಯ ರಿಮೇಕ್‌. ಟೈಟಲ್‌ನಂತೆ ಇಲ್ಲಿ ಸುಬ್ಬು ಹಾಗೂ ಶ್ರಾವಣಿ ಕಥಾನಾಯಕ ಹಾಗೂ ನಾಯಕಿ.

ಪಾತ್ರ ಪರಿಚಯ

ವೀರೇಂದ್ರ– ಮೋಹನ್‌

ವಿಜಯಾಂಬಿಕಾ – ಸ್ನೇಹ ಈಶ್ವರ್

ಶ್ರಾವಣಿ –ಆಸಿಯಾ ಫಿರ್ಡೋಸ್‌

ಸುಬ್ಬು – ಅಮೋಘ್‌

ಪದ್ಮನಾಭ – ಬಾಲರಾಜ್‌

ಪಿಂಕಿ – ಪ್ರತಿ ಶೆಟ್ಟಿ

ಮದನ್ – ಅರ್ಥವ

ಕಾಂತಮ್ಮ – ಭವಾನಿ ಪ್ರಕಾಶ್

ವಂದನಾ – ಜ್ಯೋತಿ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner