ಶ್ರೇಷ್ಠಾಳನ್ನು ಎತ್ತಲು ಹೋಗಿ ಸೊಂಟ ಉಳುಕಿಸಿಕೊಂಡ ತಾಂಡವ್, ಅನಾಮಿಕ ಅತಿಥಿಗೆ ಭಾಗ್ಯಾಳಿಂದ ಶಾಖ ಚಿಕಿತ್ಸೆ; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 11ರ ಎಪಿಸೋಡ್‌ನಲ್ಲಿ ಶ್ರೇಷ್ಠಾ ಬೇಡಿಕೆ ಮೇರೆಗೆ ಅವಳನ್ನು ಎತ್ತಲು ಹೋಗಿ ತಾಂಡವ್ ಸೊಂಟ ಉಳುಕಿಸಿಕೊಳ್ಳುತ್ತಾನೆ. ಹೋಟೆಲ್‌ಗೆ ಬಂದ ಅತಿಥಿ ಯಾರೆಂದು ತಿಳಿಯದ ಭಾಗ್ಯಾ ಆತನ ಚಿಕಿತ್ಸೆಗಾಗಿ ಸಹನಾ ಬಳಿ ಉಪ್ಪು, ಬಿಸಿನೀರು ಕೊಟ್ಟು ಕಳಿಸುತ್ತಾಳೆ.
Bhagyalakshmi Kannada Serial: ಭಾಗ್ಯಾ, ಕೆಲಸದ ಮೇಲೆ ಮನೆಯಿಂದ ಹೊರಗೆ ಬಂದು ಐಷಾರಾಮಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾಳೆ. ಮನೆಯಲ್ಲಿ ಯಾರಿಗೂ ಹೇಳದೆ ಭಾಗ್ಯಾಗೆ ಬಂದ ಲಕ್ಕಿ ಡಿಪ್ ಕೂಪನ್ ಕದ್ದು ತಾಂಡವ್, ಶ್ರೇಷ್ಠಾ ಜೊತೆ ಕಪಲ್ ಟ್ರಿಪ್ ಬಂದು ಅದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾನೆ.
ಹಳೆ ಕಾಲದ ಪದ್ಧತಿ ವಿರುದ್ಧ ಕೋಪಗೊಂಡ ಶ್ರೇಷ್ಠಾ
ಐಷಾರಾಮಿ ಹೋಟಲ್ ನೋಡಿ ಶ್ರೇಷ್ಠಾ ಖುಷಿಯಾಗುತ್ತಾಳೆ. ಒಳಗೆ ಇನ್ನೂ ದೊಡ್ಡ ಮಟ್ಟದ ವೆಲ್‌ಕಮ್ ದೊರೆಯುತ್ತದೆ ಎಂದುಕೊಂಡವಳಿಗೆ ಆರತಿ ತಟ್ಟೆ ನೋಡಿ ಬೇಸರವಾಗುತ್ತದೆ. ಇದೇನು ಹಳೆ ಕಾಲದ ಪದ್ಧತಿ ನನಗೆ ಇಷ್ಟವಾಗುವುದಿಲ್ಲ ಎನ್ನುತ್ತಾಳೆ. ಶ್ರೇಷ್ಠಾ, ದುರಹಂಕರಾದ ಮಾತುಗಳನ್ನು ಕೇಳಿ ಸಹನಾ ಕೋಪಗೊಳ್ಳುತ್ತಾಳೆ. ಆದರೂ ಶ್ರೇಷ್ಠಾಗೆ ನಗುತ್ತಲೇ ಉತ್ತರ ಕೊಡುತ್ತಾಳೆ. ಈ ವಿಚಾರವನ್ನು ಭಾಗ್ಯಾಗೆ ಹೇಳಿದಾಗ ಅವರು ನಮ್ಮ ಅತಿಥಿ ಅವರೊಂದಿಗೆ ಹೀಗೆಲ್ಲಾ ವರ್ತಿಸಬೇಡಿ ಎಂದು ತಿಳಿಹೇಳುತ್ತಾಳೆ. ಹೋಟೆಲ್ ರೂಮ್‌ನಲ್ಲಿ ಲಗ್ಗೇಜ್ ಇಟ್ಟ ತಾಂಡವ್-ಶ್ರೇಷ್ಠಾ ಸುತ್ತಾಡಲು ಹೊರಗೆ ಬರುತ್ತಾರೆ.
ನಾವಿಬ್ಬರೂ ಆದಷ್ಟು ಬೇಗ ಮದುವೆ ಆಗೋಣ. ಆಗ ನಮ್ಮನ್ನು ಹೇಳೋರು, ಕೇಳೋರು ಯಾರೂ ಇರುವುದಿಲ್ಲ. ಇಷ್ಟೊತ್ತಿಗಾಗಲೇ ನಮ್ಮ ಮದುವೆ ಆಗುತ್ತಿತ್ತು. ಆದರೆ ನಿನ್ನ ಅಮ್ಮ, ಪೂಜಾ ಮಾಡಿದ ಕೆಲಸಕ್ಕೆ ಮದುವೆ ನಿಂತು ಹೋಯ್ತು ಎನ್ನುತ್ತಾಳೆ. ಕಳೆದುಹೋದದನ್ನು ನೆನೆಪಿಸಿಕೊಳ್ಳಬೇಡ ಎಂದು ತಾಂಡವ್ ಸಮಧಾನ ಮಾಡುತ್ತಾನೆ. ಅಷ್ಟರಲ್ಲಿ ಶ್ರೇಷ್ಠಾ ಕಣ್ಣು ಮತ್ತೊಂದು ಜೋಡಿ ಮೇಲೆ ಬೀಳುತ್ತದೆ. ಅವರಿಬ್ಬರೂ ನೋಡು ತಾಂಡವ್ ಎಷ್ಟು ಖುಷಿಯಿಂದ ಟೈಮ್ ಪಾಸ್ ಮಾಡುತ್ತಿದ್ದಾರೆ. ಆ ಹುಡುಗ, ತನ್ನ ಹುಡುಗಿಯನ್ನು ಎತ್ತಿಕೊಂಡಿರುವಂತೆ ನೀನೂ ನನ್ನನ್ನು ಎತ್ತಿಕೋ ಎನ್ನುತ್ತಾಳೆ. ಅದನ್ನು ಕೇಳಿ ತಾಂಡವ್ ಗಾಬರಿ ಆಗುತ್ತಾನೆ.
ಶ್ರೇಷ್ಠಾ ಭಾರಕ್ಕೆ ಸೊಂಟ ಉಳುಕಿಸಿಕೊಂಡ ತಾಂಡವ್
ಇಷ್ಟವಿಲ್ಲದಿದ್ದರೂ ತಾಂಡವ್ ಶ್ರೇಷ್ಠಾಳನ್ನು ಎತ್ತಲು ಹೋಗುತ್ತಾನೆ. ಆದರೆ ಅವಳ ಭಾರಕ್ಕೆ ಸೊಂಟ ಉಳುಕಿಸಿಕೊಳ್ಳುತ್ತಾನೆ. ಶ್ರೇಷ್ಠಾ ಕೂಡಾ ಕೆಳಗೆ ಬೀಳುತ್ತಾಳೆ. ಅವರಿಬ್ಬರನ್ನೂ ನೋಡಿ ಸಹನಾ ನಗುತ್ತಾಳೆ. ಈ ಅಂಕಲ್ ಆಂಟಿಗೆ ಇದೆಲ್ಲಾ ಬೇಕಿತ್ತಾ ಎಂದುಕೊಳ್ಳುತ್ತಾಳೆ. ಕೊನೆಗೆ ಅವಳೇ ಬಂದು ಶ್ರೇಷ್ಠಾಳನ್ನು ಮೇಲೆ ಎತ್ತುತ್ತಾಳೆ. ಮೇಡಂ ದಯವಿಟ್ಟು ನನಗೆ ಸಹಾಯ ಮಾಡಿ, ಸೊಂಟ ನೋವಿಗೆ ಏನಾದರೂ ಟ್ರೀಟ್‌ಮೆಂಟ್ ಬೇಕಿತ್ತು ಎಂದು ತಾಂಡವ್ ಮನವಿ ಮಾಡುತ್ತಾನೆ. ಈ ವಿಚಾರವನ್ನು ಸಹನಾ ಭಾಗ್ಯಾ ಬಳಿ ಬಂದು ಹೇಳುತ್ತಾಳೆ. ಹೋಟೆಲ್‌ಗೆ ಬಂದಿರುವ ಆ ಅತಿಥಿಗಳು ಯಾರು? ಸಹನಾ ಯಾರ ಬಗ್ಗೆ ಹೇಳುತ್ತಿದ್ದಾಳೆ ಎಂದು ಅರಿಯದ ಭಾಗ್ಯಾ ಅವರಿಗಾಗಿ ಬಿಸಿ ನೀರು, ಉಪ್ಪು ತಯಾರಿ ಮಾಡಿಕೊಡುತ್ತಾಳೆ.
ಸಹನಾ, ಉಪ್ಪು ಬಿಸಿನೀರು ಹಿಡಿದು ಶ್ರೇಷ್ಠಾ-ತಾಂಡವ್ ಉಳಿದುಕೊಂಡ ರೂಮ್‌ಗೆ ಬರುತ್ತಾಳೆ. ಉಪ್ಪು ಬಿಸಿ ನೀರು ನೋಡಿ ತಾಂಡವ್ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ನನ್ನ ಅಮ್ಮ ಕೂಡಾ ನನಗೆ ಇದೇ ಚಿಕಿತ್ಸೆ ಕೊಡುತ್ತಿದ್ದರು. ಆಗ ನನಗೆ ಬೇಗ ಗುಣಮುಖವಾಗುತ್ತಿತ್ತು ಎನ್ನುತ್ತಾನೆ. ನೀವು ಥ್ಯಾಂಕ್ಸ್ ಹೇಳಬೇಕಾಗಿದ್ದು ನನಗಲ್ಲ, ನಮ್ಮ ಬಾಸ್‌ಗೆ ಎಂದು ಸಹನಾ ಹೇಳುತ್ತಾಳೆ. ಶ್ರೇಷ್ಠಾ, ತಾಂಡವ್‌ಗೆ ಉಪ್ಪು ಬಿಸಿನೀರಿನಿಂದ ಶಾಖ ಕೊಡುತ್ತಾಳೆ. ಇದರಿಂದ ತಾಂಡವ್ ರಿಲೀಫ್ ಆಗುತ್ತಾನೆ. ಅದನ್ನು ಹೆಂಡತಿ ಭಾಗ್ಯಾ ಕಳಿಸಿದ್ದು ಅನ್ನೋದು ಗೊತ್ತಿಲ್ಲದೆ, ಯಾರೋ ಆ ಪುಣ್ಯಾತ್ಮರು ಅವರಿಂದ ನನಗೆ ನೋವು ಕಡಿಮೆ ಆಯ್ತು ಎನ್ನುತ್ತಾನೆ. ಲ್ಯಾಪ್‌ಟಾಪ್ ತೆಗೆದುಕೊಂಡು ಆಫೀಸ್ ಮೀಟಿಂಗ್‌ಗೆ ಹೊರಡುವ ತಾಂಡವ್‌ನನ್ನು ಶ್ರೇಷ್ಠಾ ತಡೆಯುತ್ತಾಳೆ. ಆಫೀಸ್ ಕೆಲಸ ಬಿಟ್ಟು ನೀನು ನನ್ನ ಜೊತೆ ಸಮಯ ಕಳೆಯಬೇಕು ಎಂದು ಶ್ರೇಷ್ಠಾ ತಾಕೀತು ಮಾಡುತ್ತಾಳೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗುತ್ತದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ