ಬಿಗ್ ಬಾಸ್ ಕನ್ನಡ 11: ಈ ಬಾರಿ ದೊಡ್ಮನೆಯೊಳಗೆ ಹೋಗಲಿದ್ದಾರಾ ಅದ್ವಿತಿ ಶೆಟ್ಟಿ-ಅಶ್ವಿತಿ ಶೆಟ್ಟಿ? ಪತ್ರಕರ್ತರ ಕೋಟಾದಿಂದ ಯಾರು?
ಪ್ರತಿ ಬಾರಿ ಬಿಗ್ ಬಾಸ್ ಸೀಸನ್ ಆರಂಭವಾದಾಗಲೆಲ್ಲಾ ಈ ಬಾರಿ ಯಾರು ಸ್ಪರ್ಧಿಗಳಾಗಿ ಹೋಗಬಹುದು ಎಂಬ ಚರ್ಚೆ ಆರಂಭವಾಗುತ್ತದೆ. ಈ ಬಾರಿ ಕೂಡಾ ಅದೇ ಮುಂದುವರೆದಿದೆ. ಕೆಲವೆಡೆ ನಿರೂಪಣೆ ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆ ಎದುರಾದರೆ ಮತ್ತೊಂದೆಡೆ ಸಂಭಾವ್ಯ ಸ್ಪರ್ಧಿಗಳ ಬಗ್ಗೆ ಮಾತುಕತೆ ನಡೆಯುತ್ತಿದೆ.
ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಅರಂಭವಾಗಿದೆ. ವಾಹಿನಿ ಸಕಲ ಸಿದ್ಧತೆ ಮಾಡುತ್ತಿದೆ. ಸ್ಪರ್ಧಿಗಳು ಉಳಿದುಕೊಳ್ಳುತ್ತಿರುವ ಮನೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗುತ್ತಿವೆ. ಇದುವರೆಗೂ ಕನ್ನಡದಲ್ಲಿ 10 ಸೀಸನ್‌ಗಳು ಯಶಸ್ವಿಯಾಗಿದೆ. ಹಿಂದಿ ಬಿಟ್ಟರೆ ಭಾರತೀಯ ಕಿರುತೆರೆಯಲ್ಲಿ ಹೆಚ್ಚು ಸೀಸನ್‌ಗಳು ಹೋಸ್ಟ್ ಆಗಿರುವುದು ಕನ್ನಡದಲ್ಲೇ. ವೀಕ್ಷಕರು ಕೂಡಾ ಈ ಬಾರಿಯ ಶೋ ನೋಡಲು ಕಾಯುತ್ತಿದ್ದಾರೆ.
ಹೊಸ ಸೀಸನ್ ನಿರೂಪಣೆ ಬಗ್ಗೆ ಇನ್ನೂ ಗೊಂದಲ
ಪ್ರತಿ ಬಾರಿಯಂತೆ ಈ ಬಾರಿಯ ಬಿಗ್ ಬಾಸ್ ಶೋ ಬಗ್ಗೆ ಚರ್ಚೆ ಆರಂಭವಾಗಿದೆ. ಕಳೆದ ಬಾರಿಗಿಂತ ತುಸು ಹೆಚ್ಚೇ ಎಂದರೂ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ ಈ ಕಾರ್ಯಕ್ರಮ ನಿರೂಪಣೆ ಯಾರು ಅನ್ನೋದು. ಪ್ರತಿ ಬಾರಿ ಕಾರ್ಯಕ್ರಮ ಆರಂಭವಾದಾಗಲೆಲ್ಲಾ ಇಷ್ಟು ವರ್ಷಗಳ ಕಾಲ ನಿರೂಪಣೆ ಮಾಡುತ್ತಿದ್ದ ಸುದೀಪ್ ಬದಲಿಗೆ ಈ ಬಾರಿ ಬೇರೆಯವರು ಬರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಸುದೀಪ್ ಅವರೇ ಮೊದಲ ಸೀಸನ್‌ನಿಂದ ಇಲ್ಲಿವರೆಗೂ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ಹೋಸ್ಟ್ ಮಾಡುತ್ತಾ ಬಂದಿದ್ದಾರೆ. ಈ ಬಾರಿ ಕೂಡಾ ಅದೇ ಚರ್ಚೆ ನಡೆಯುತ್ತಿದೆ. ಹಿಂದಿ, ತಮಿಳಿನಲ್ಲಿ ಈಗಾಗಲೇ ನಿರೂಪಕರು ಬದಲಾಗಿದ್ದಾರೆ.
ಹಿಂದಿಯಲ್ಲಿ ಸಲ್ಮಾನ್ ಖಾನ್ ಬದಲಿಗೆ ಅನಿಲ್ ಕಪೂರ್, ತಮಿಳಿನಲ್ಲಿ ಕಮಲ್ ಹಾಸನ್ ಬದಲಿಗೆ ವಿಜಯ್ ಸೇತುಪತಿ ಹೊಸದಾಗಿ ನಿರೂಪಣೆ ಮಾಡುತ್ತಿದ್ದಾರೆ. ಹಾಗಿದ್ರೆ ಕನ್ನಡದಲ್ಲಿ ಕೂಡಾ ಈ ಬಾರಿ ನಿರೂಪಕರು ಬದಲಾಗಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ಇದುವರೆಗೂ ಸುದೀಪ್ ಆಗಲೀ, ವಾಹಿನಿ ಆಗಲೀ ಅಧಿಕೃತ ಹೇಳಿಕೆ ನೀಡಿಲ್ಲ. ಈ ಬಾರಿ ರಮೇಶ್ ಅರವಿಂದ್ ಅಥವಾ ರಿಷಬ್ ಶೆಟ್ಟಿ ನಿರೂಪಣೆ ಮಾಡಬಹುದು ಎನ್ನಲಾಗುತ್ತಿದೆ. ಗಣೇಶ್ ಹೆಸರೂ ಕೇಳಿ ಬರುತ್ತಿದೆ. ವಾಹಿನಿಯು ಪ್ರೋಮೋ ಕೂಡಾ ರಿಲೀಸ್ ಮಾಡಿದೆ. ಈ ನಡುವೆ ಈ ಬಾರಿ ದೊಡ್ಮನೆಯೊಳಗೆ ಯಾರೆಲ್ಲಾ ಎಂಟ್ರಿ ಕೊಡಬಹುದು ಎಂಬ ಚರ್ಚೆ ಜೋರಾಗಿದೆ.
ಈ ಬಾರಿ ಅದ್ವಿತಿ ಶೆಟ್ಟಿ-ಅಶ್ವಿತಿ ಶೆಟ್ಟಿ ಎಂಟ್ರಿ?
ಈ ಬಾರಿ ನಟಿ ಪ್ರೇಮ, ಮಜಾ ಭಾರತ ಖ್ಯಾತಿಯ ರಾಘವೇಂದ್ರ, ತುಕಾಲಿ ಸಂತು ಪತ್ನಿ ಮಾನಸ ಜೊತೆಗೆ ಸೋಷಿಯಲ್ ಮೀಡಿಯಾ ಇನ್‌ಫ್ಲುಯರ್‌ಗಳು, ಕಿರುತೆರೆ ಕಲಾವಿದರು ದೊಡ್ಮನೆ ಸೇರಲಿದ್ದಾರೆ. ಇವರ ಜೊತೆಗೆ ಇನ್ನೂ ಕೆಲವು ಹೆಸರುಗಳು ಹೊಸದಾಗಿ ಕೇಳಿ ಬಂದಿದೆ. ಸ್ಯಾಂಡಲ್‌ವುಡ್ ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ-ಅಶ್ವಿತಿ ಶೆಟ್ಟಿ ಈ ಬಾರಿ ಸ್ಪರ್ಧಿಗಳಾಗಿ ಬರಬಹುದು ಎನ್ನಲಾಗುತ್ತಿದೆ. ಕಳೆದ ಸೀಸನ್‌ನಲ್ಲಿ ಕೂಡಾ ಇವರ ಹೆಸರು ಕೇಳಿಬಂದಿತ್ತು. ಒಂದು ವೇಳೆ ಈ ಬಾರಿ ಬಂದರೆ ಬಿಗ್ ಬಾಸ್ ಸೀಸನ್‌ಗಳಲ್ಲಿ ಇದು ಮೊದಲ ಪ್ರಯೋಗವಾಗಿದೆ.
ಇನ್ನು ಪತ್ರಕರ್ತರ ಕೋಟಾದಿಂದ ಈ ಬಾರಿ ಯಾರು ಹೋಗಬಹುದು ಎಂಬ ಪ್ರಶ್ನೆ ಎದುರಾಗಿದೆ. ಅಜಿತ್ ಹನಮಕ್ಕನವರ್, ಜೆಪಿ ಶೆಟ್ಟಿ, ರಾಧಾ ಹಿರೇಗೌಡರ್, ಹರೀಶ್ ನಾಗರಾಜು, ಸುಕನ್ಯಾ, ಸುಗುಣ ಹೆಸರು ಕೇಳಿಬರುತ್ತಿದೆ. ಕೆಲವು ದಿನಗಳಿಂದ ಅಜಿತ್ ಹನಮಕ್ಕನವರ್, ಜೆಪಿ ಶೆಟ್ಟಿ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡಿದ್ದಾರೆ, ಆದ್ದರಿಂದ ಇವರಿಬ್ಬರಲ್ಲಿ ಪಕ್ಕಾ ಒಬ್ಬರು ಬರೋದು ಗ್ಯಾರಂಟಿ ಎನ್ನಲಾಗುತ್ತಿದೆ. ಆದರೆ ಇತ್ತೀಚೆಗೆ ಸುಕನ್ಯಾ ಕೆಲಸಕ್ಕೆ ರಾಜೀನಾಮೆ ನೀಡಿದ್ದರು, ಬಹುಶ: ಅವರೇ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಾಲಿಡಬಹುದು ಎಂಬ ಮಾತೂ ಕೇಳಿಬರುತ್ತಿದೆ.
ಒಟ್ಟಿನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಅವರು ಬರಬಹುದು, ಇವರು ಬರಬಹುದು ಎನ್ನಲಾಗುತ್ತಿದೆ. ಇದೆಲ್ಲಾ ಪ್ರಶ್ನೆಗಳಿಗೆ, ಚರ್ಚೆಗಳಿಗೆ ಸೀಸನ್ ಆರಂಭವಾದ ದಿನ ಉತ್ತರ ದೊರೆಯಲಿದೆ. ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ, ಹಾಗಾದ್ರೆ ಆಂಕರ್ ಕೂಡಾ ಹೊಸಬರಾ? ಶೀಘ್ರದಲ್ಲೇ ಉತ್ತರ ದೊರೆಯಲಿದೆ.