Dr Bro: ಒಣಕ್ಕಂ ದೇವ್ರು.. ಹೊಸ ಕೆಲಸಕ್ಕೆ ಕೈ ಹಾಕಿದ ಡಾ.ಬ್ರೋ; ದೇಶ ಸುತ್ತೋದಷ್ಟೇ ಅಲ್ಲ ಇನ್ಮೇಲೆ ಕ್ರಿಕೆಟ್ ಅಪ್‌ಡೇಟ್ ಸಹ ಕೊಡ್ತಾರೆ ಗಗನ್
Dr bro Kannada: ಜಗತ್ತಿನ ವಿವಿಧ ದೇಶ ಸುತ್ತಿ ಅಲ್ಲಿನ ವೈಶಿಷ್ಟ್ಯಗಳ ಬಗ್ಗೆ ರಾಶಿಗಟ್ಟಲೆ ಮಾಹಿತಿ ಒದಗಿಸುತ್ತಿದ್ದ ಡಾ. ಬ್ರೋ ಇದೀಗ ಕ್ರೀಕೆಟ್ ವೀಕ್ಷಕರಿಗೂ ಮನರಂಜನೆಯ ಬಾಡೂಟ ಬಡಿಸಲು ಸಜ್ಜಾಗಿದ್ದಾರೆ. ಗಗನ್ ಶ್ರೀನಿವಾಸ್ ಜತೆಗೆ ಸ್ಟಾರ್ ಸ್ಪೋರ್ಟ್ಸ್ ಕೈ ಜೋಡಿಸಿದ್ದು, ಡಾ. ಬ್ರೋ ಅವರ ಕಿರು ವಿಡಿಯೋ ಬಿಡುಗಡೆ ಮಾಡಿದೆ.
Dr Bro Kannada: ಡಾ. ಬ್ರೋ ಅಂದ ತಕ್ಷಣ ಮೊದಲಿಗೆ ನೆನಪಿಗೆ ಬರುವುದು ನಮಸ್ಕಾರ ದೇವ್ರು ಅನ್ನೋ ಮಾತು. ಕೈಯಲ್ಲಿ ಕ್ಯಾಮರಾ ಹಿಡಿದು ತನ್ನ ನೋಡುಗ ಬಳಗಕ್ಕೆ ಇಡೀ ಜಗತ್ತನ್ನೇ ತೋರಿಸುವ ಈ ಹುಡುಗ, ಕರ್ನಾಟಕದ ಲಕ್ಷಾಂತರ ಮಂದಿಯ ಪ್ರೀತಿ ಸಂಪಾದಿಸಿದ್ದಾರೆ. ಯೂಟ್ಯೂಬ್ ಮೂಲಕ ವಿಶ್ವದ ಬೇರೆ ಬೇರೆ ದೇಶಗಳ ನೈಜ ಸ್ಥಿತಿ, ಅಲ್ಲಿನ ಜೀವನ, ಆಹಾರ ಪದ್ಧತಿಯನ್ನು ಎಳೆ ಎಳೆಯಾಗಿ ನೋಡುಗರಿಗೆ ಉಣಬಡಿಸುತ್ತಿದ್ದಾರೆ. ಇದೀಗ ಹೊಸ ಸಾಹಸವೊಂದಕ್ಕೂ ಕೈ ಹಾಕಲಿದ್ದಾರೆ.
ಕಳೆದ ಕೆಲ ದಿನಗಳಿಂದ ಸೋಮಾಲಿಯಾದಲ್ಲಿ ಬೀಡು ಬಿಟ್ಟಿದ್ದ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್, ಸೋಮಾಲಿಯಾದ ಜನರ ಜೀವನವನ್ನು, ನಡು ಬೀದಿಯಲ್ಲಿ ಹಣ ಮಾರಾಟ ಮಾಡುತ್ತಿದ್ದ ಅಲ್ಲಿನ ವ್ಯವಸ್ಥೆ, ಭಯೋತ್ಪಾದಕರ ಬಗ್ಗೆಯೂ ವಿಸ್ತ್ರತ ವಿಡಿಯೋ ಮಾಡಿದ್ದರು ಗಗನ್. ಇದೀಗ ಸೋಮಾಲಿಯಾದಿಂದ ಮತ್ತೆ ತವರು ಬೆಂಗಳೂರಿಗೆ ಡಾ. ಬ್ರೋ ಆಗಮಿಸಿದ್ದಾರೆ. ಈ ಸಲ ಕ್ಯಾಮರಾ ಹಿಡಿದು ದೇಶ ಸುತ್ತುವ ಬದಲು ಭಾರತದ ಪ್ರಮುಖ ನಗರಗಳಿಗೆ ಭೇಟಿ ನೀಡಲಿದ್ದಾರೆ. ಆ ಪೈಕಿ ಮೊದಲಿಗೆ ಚೆನ್ನೈಗೆ ಈಗಾಗಲೇ ತೆರಳಿದ್ದಾರೆ.
ಅಷ್ಟಕ್ಕೂ ವಿಚಾರ ಏನಿರಬಹುದೆಂಬ ಕುತೂಹಲ ನಿಮಗೂ ಇರಬಹುದು. ವಿಷ್ಯಾ ಏನಂದ್ರೆ, ಭಾರತದಲ್ಲೀಗ ಕ್ರಿಕೆಟ್ ಹಬ್ಬ ಶುರುವಾಗಿದೆ. ವಿಶ್ವ ಕಪ್ ಕ್ರಿಕೆಟ್ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಡಾ. ಬ್ರೋ ಭಾರತ ಪಂದ್ಯ ನಡೆಯುವ ಸ್ಟೇಡಿಯಂಗೆ ಎಂಟ್ರಿಕೊಡಲಿದ್ದಾರೆ. ಆ ಪೈಕಿ ಮೊದಲಿಗೆ ನಾಳೆ (ಅ. 08) ನಡೆಯಲಿರುವ ಇಂಡಿಯಾ ಆಸ್ಟ್ರೇಲಿಯಾ ಪಂದ್ಯಕ್ಕೆ ಡಾ. ಬ್ರೋ ಸಹ ಭೇಟಿ ನೀಡಿ ಪಂದ್ಯ ವೀಕ್ಷಿಸಲಿದ್ದಾರೆ. ಅಷ್ಟಕ್ಕೆ ಮುಗಿಯಲಿಲ್ಲ. ಪಂದ್ಯದ ಕಾಮೆಂಟರಿಯನ್ನೂ ತಮ್ಮ ಸ್ಟೈಲ್‌ನಲ್ಲಿಯೇ ಮಾಡಲಿದ್ದಾರೆ.
ಡಾ. ಬ್ರೋ ವಿದೇಶಿ ಸುತ್ತಾಟಕ್ಕೆ ಬ್ರೇಕ್ ಹಾಕಿ, ಸದ್ಯ ಚೆನ್ನೈನ ಚಿದಂಬರಂ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ. ಡಾ. ಬ್ರೋ ಜತೆಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕೈ ಜೋಡಿಸಿದ್ದು, ವಿಶೇಷ ವಿಡಿಯೋವೊಂದನ್ನೂ ಶೇರ್ ಮಾಡಿದೆ. ಹೀಗೆ ವಿಡಿಯೋ ಶೇರ್ ಆಗುತ್ತಿದ್ದಂತೆ, ಕ್ರಿಕೆಟ್ ಅಭಿಮಾನಿಗಳು ಮತ್ತು ಡಾ. ಬ್ರೋ ಅಭಿಮಾನಿಗಳಿಗೂ ಒಂದು ಕ್ಷಣ ಸರ್ಪ್ರೈಸ್ ಆಗಿದ್ದಾರೆ.
"ಎಂದಿನಂತೆ ಕೆಂಪೆಗೌಡ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ಗೆ ಬಂದೇ ಬಿಟ್ವಿ. ಆದರೆ ಈ ಸಲ ಸ್ಪೇಷಲ್ ಮಿಷನ್‌ಗೆ ಹೋಗ್ತಿದಿವಿ. ಒಣಕ್ಕಂ ದೇವ್ರು. ಚೆನ್ನೈಗೆ ಸುಸ್ವಾಗತ. ಚೆನ್ನೈ ಅಂತೂ 8ನೇ ತಾರೀಖಿಗೆ ಫುಲ್ ತಯಾರಿಯಾಗಿದೆ. ನೀವಲ್ಲಿ ನೋಡುತ್ತಿದ್ದೀರಾ ಚಿದಂಬರಂ ಸ್ಟೇಡಿಯಂ, ಇದರ ಕೆಪಾಸಿಟಿ 50 ಸಾವಿರ. ಮೂರು ದಿನಗಳ ಹಿಂದೆಯೇ ಟಿಕೆಟ್ ಸೋಲ್ಟ್ ಔಟ್ ಆಗಿವೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸ್ಟೇಡಿಯಂನಿಂದ್ಲೇ ಲೈಪ್ ಅಪ್‌ಡೇಟ್‌ಗ ಕೊಡ್ತಿರುತ್ತೆ. ನಾನಂತೂ ಗಂಟು ಮೂಟೆ ಹೊತ್ತುಕೊಂಡು ಬಂದಿದ್ದೇನೆ. ನಾನಂತೂ ಎಲ್ಲೆಲ್ಲಿ ವರ್ಲ್ಡ್ ಕಪ್ ನಡೆಯುತ್ತಿರುತ್ತೋ ಅಲ್ಲೆಲ್ಲ ಟ್ರಾವೆಲ್ ಮಾಡ್ತಿರ್ತೀನಿ. ನೀವೂ ನೋಡ್ತಿರಿ" ಎಂದಿದ್ದಾರೆ.
ನೆಟ್ಟಿಗರು ಏನಂದ್ರು?
ಡಾ. ಬ್ರೋ ಜತೆಗೆ ಸ್ಟಾರ್ ಸ್ಪೋರ್ಟ್ಸ್ ಕೊಲಾಬರೇಷನ್ ಮಾಡಿಕೊಳ್ಳುತ್ತಿದ್ದಂತೆ, ನೆಟ್ಟಿಗರು ಪುಳಕಗೊಂಡಿದ್ದಾರೆ. ಈ ಸಲ ಡಬಲ್ ಮನರಂಜನೆ ಹಾಗಾದರೆ ಎಂದು ಸಂಭ್ರಮಿಸುತ್ತಿದ್ದಾರೆ. ಇನ್ನು ಕೆಲವರು ಬಿಗ್‌ಬಾಸ್‌ಗೆ ಹೋಗ್ತಿಲ್ವಾ ಬ್ರೋ ಎಂದೂ ಪ್ರಶ್ನೆ ಮಾಡಿದ್ದಾರೆ. ನಿಮ್ಮನ್ನು ಬಿಗ್ ಸ್ಕ್ರೀನ್ ಮೇಲೆ ನೋಡೋಕೆ ಖುಷಿ ಆಗ್ತಿದೆ.. ಇದೀಗ ಎಲ್ಲರೂ ಡಾ. ಬ್ರೋ ಸಲುವಾಗಿಯಾದರೂ ಸ್ಟಾರ್ ಸ್ಪೋರ್ಟ್ ಕನ್ನಡವನ್ನು ನೋಡುತ್ತಾರೆ. ಸ್ಟಾರ್ ಸ್ಪೋರ್ಟ್ ಕನ್ನಡಕ್ಕೆ ಈಗ ಒಂದು ಕಳೆ ಬಂತು ಎಂದೂ ಕಾಮೆಂಟ್ ಮಾಡುತ್ತಿದ್ದಾರೆ.
ಮನರಂಜನೆ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ