Akshatha Kuki: ಬಿಗ್‌ಬಾಸ್‌ನಲ್ಲಿ ಮಿಂಚಿದ್ದ ಅಕ್ಷತಾ ಕುಕಿ ಪ್ಯಾರಿಸ್‌ನಲ್ಲಿ ಏನ್ಮಾಡ್ತಿದ್ದಾರೆ, ಫಾರಿನ್‌ ಲೈಫ್‌ ಹೇಗಿದೆ? ಸಂದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  Akshatha Kuki: ಬಿಗ್‌ಬಾಸ್‌ನಲ್ಲಿ ಮಿಂಚಿದ್ದ ಅಕ್ಷತಾ ಕುಕಿ ಪ್ಯಾರಿಸ್‌ನಲ್ಲಿ ಏನ್ಮಾಡ್ತಿದ್ದಾರೆ, ಫಾರಿನ್‌ ಲೈಫ್‌ ಹೇಗಿದೆ? ಸಂದರ್ಶನ

Akshatha Kuki: ಬಿಗ್‌ಬಾಸ್‌ನಲ್ಲಿ ಮಿಂಚಿದ್ದ ಅಕ್ಷತಾ ಕುಕಿ ಪ್ಯಾರಿಸ್‌ನಲ್ಲಿ ಏನ್ಮಾಡ್ತಿದ್ದಾರೆ, ಫಾರಿನ್‌ ಲೈಫ್‌ ಹೇಗಿದೆ? ಸಂದರ್ಶನ

ಸಂದರ್ಶನ- ಪದ್ಮಶ್ರೀ ಭಟ್‌: ʼಬಿಗ್‌ ಬಾಸ್ʼ‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರ ಆಗಿರೋ ದಾಂಡೇಲಿ ಹುಡುಗಿ ಅಕ್ಷತಾ ಕುಕಿ ಈಗ ಮದುವೆಯಾಗಿ ವಿದೇಶದಲ್ಲಿದ್ದಾರೆ. ದೊಡ್ಮನೆಯಲ್ಲಿ ಐಫೆಲ್‌ ಟವರ್‌ ನೋಡುವ ಆಸೆ ಹೊಂದಿದ್ದ ಅಕ್ಷತಾ ಈಗ ಮದುವೆಯಾಗಿ ವಿದೇಶದಲ್ಲಿದ್ದಾರೆ. ವಿದೇಶದಲ್ಲಿ ಅವರ ಜೀವನ ಹೇಗಿದೆ? ಈ ವಿಷಯಗಳ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಅಕ್ಷತಾ ಕುಕಿ ಸಂದರ್ಶನ
ಅಕ್ಷತಾ ಕುಕಿ ಸಂದರ್ಶನ

Akshata Kuki Interview: ‘ಬಿಗ್‌ ಬಾಸ್‌ ಕನ್ನಡ ಒಟಿಟಿʼ ಮೂಲಕ ವೀಕ್ಷಕರಿಗೆ ಹತ್ತಿರ ಆಗಿರೋ ಅಕ್ಷತಾ ಕುಕಿ ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ‘ಬಿಗ್‌ ಬಾಸ್ʼ ಶೋ ಮುಗಿಯುತ್ತಿದ್ದಂತೆ ಸೀರಿಯಲ್‌, ಸಿನಿಮಾ ಮಾಡೋಣ ಅಂತ ಅಂದುಕೊಂಡಿದ್ದ ಅಕ್ಷತಾಗೆ ಕಂಕಣಬಲ ಕೂಡಿ ಬಂದು ಮದುವೆ ಆಗೋಯ್ತು. ಈಗ ಜೀವನ ಹೇಗಿದೆ ಎಂದು ಅಕ್ಷತಾ ಕುಕಿ ಅವರು ಪಂಚಮಿ ಟಾಕ್ಸ್‌ ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ.

ಪ್ರ: ವಿದೇಶಿ ಜೀವನ ಹೇಗಿದೆ?

ಉ: ಫುಲ್‌ ಖುಷಿಯಲ್ಲಿ ವಿದೇಶಕ್ಕೆ ಹೋದೆ, ಅಲ್ಲಿನ ಚಳಿಗೆ ನಡುಗಿ ಹೋಗಿದ್ದೆ. ಆರಂಭದ ಮೂರು-ನಾಲ್ಕು ತಿಂಗಳು ಫುಲ್‌ ಸುತ್ತಾಡಿದೆ, ಆಮೇಲೆ ಚಿತ್ರರಂಗ, ಕುಟುಂಬವನ್ನು ಮಿಸ್‌ ಮಾಡಿಕೊಂಡು ಡೇಲಿ ವಾಪಾಸ್‌ ಹೋಗೋಣ ಅಂತ ಅಳುತ್ತಿದ್ದೆ. ಅಡುಗೆ ಮಾಡಲು ಬಾರದ ನಾನು ತುಂಬ ಕಷ್ಟಪಟ್ಟಿದ್ದೆ, ಅವಿನಾಶ್‌ ನನಗೆ ಸಹಾಯ ಮಾಡಿದರು. ಕನ್ನಡ ಮಾತಾಡೋರು ಅಲ್ಲಿ ಯಾರೂ ಇಲ್ಲ, ಅದಂತೂ ಬೇಸರ ತಂದಿತ್ತು. ನಾನು ಅವಿನಾಶ್‌ ಜೊತೆ ಬಿಟ್ಟು ಮಾತಾಡೋಕೆ ಅಲ್ಲಿ ಯಾರೂ ಇಲ್ಲ. ನನ್ನ ಬಾಲ್ಯಸ್ನೇಹಿತೆ, ಅವಿನಾಶ್‌ ಸ್ನೇಹಿತರು ಅಲ್ಲಿದ್ದಾರೆ. ಅವಕಾಶ ಸಿಕ್ಕಾಗ ಅವರ ಜೊತೆ ಮಾತಾಡ್ತಿದ್ದೆ.

ಪ್ರ: ವಿದೇಶದಲ್ಲಿ ಊಟದ ಸಮಸ್ಯೆ ಆಗಿರಬೇಕಲ್ಲವೇ?

ಉ: ವಿದೇಶದಲ್ಲಿ ಈಗ ಉತ್ತರ ಭಾರತ, ದಕ್ಷಿಣ ಭಾರತದ ಊಟ, ತಿಂಡಿ ಕೂಡ ಸಿಗುತ್ತದೆ. ಊಟಕ್ಕೇನು ಸಮಸ್ಯೆ ಇಲ್ಲ. ಆದರೆ ನಾವು ಮನೆಯಲ್ಲಿ ಜಾಸ್ತಿ ಅಡುಗೆ ಮಾಡಿಕೊಂಡು ತಿನ್ನುತ್ತೇವೆ.

ಪ್ರ: ಅಲ್ಲಿನ ವಾತಾವರಣ ಹೇಗಿದೆ?

ಉ: ಕರ್ನಾಟಕದಲ್ಲಿದ್ದಾಗ ಯಾವ ಕ್ಷಣಕ್ಕೆ ಎಲ್ಲಿಗೆ ಬೇಕಿದ್ರೂ ಹೋಗಬಹುದು, ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗಬಹುದು. ಆದರೆ ಅಲ್ಲಿ ಯಾರ ಮನೆಗೆ ಹೋಗಬೇಕಿದ್ರೂ ಅಪಾಯಿಂಟ್‌ಮೆಂಟ್‌ ತಗೊಂಡು ಹೋಗಬೇಕು. ಸಲೂನ್‌ಗೆ ಹೋಗಬೇಕು ಅಂದ್ರೆ ಮೊದಲೇ ಅಪಾಯಿಂಟ್‌ಮೆಂಟ್‌ ತಗೋಬೇಕು, ಶಾಪಿಂಗ್‌ಗೆ ಹೋಗಬೇಕು ಅಂದ್ರೆ ಕೇಳಿಕೊಂಡು ಹೋಗಬೇಕು. ಅಲ್ಲಿ ನಾವೇ ಪೆಟ್ರೋಲ್‌ ಹಾಕಿಕೊಳ್ಳಬೇಕು. ವಿದೇಶದಲ್ಲಿ ದುಡ್ಡಿದ್ದರೆ ಮಾತ್ರ ಜೀವನ. ಭಾರತದಲ್ಲಿ ನಾನ್ಯಾಕೆ ಮಾಡಿಕೊಳ್ಳಲಿ? ದುಡ್ಡು ಕೊಡ್ತೀನಿ, ಕೆಲಸ ಸಿಗತ್ತೆ ಅಂತ ಅಂದುಕೊಳ್ಳುವವರು ಇದ್ದಾರೆ. ಈ ರೀತಿ ಮನೋಭಾವ ಇದ್ದವರ ಅಹಂಕಾರ ವಿದೇಶಕ್ಕೆ ಹೋದರೆ ಪಕ್ಕಾ ಮುರಿಯುತ್ತದೆ. ಭಾರತ ಬಿಟ್ಟು ಬೇರೆ ಕಡೆ ಎಲ್ಲೇ ಹೋದರೂ ಕೂಡ ನಮ್ಮ ಕೆಲಸವನ್ನು ನಾವು ಮಾಡಿಕೊಂಡರೆ ಮಾತ್ರ ಬದುಕೋಕೆ ಸಾಧ್ಯ.

ಪ್ರ: ಭವಿಷ್ಯದ ಯೋಜನೆ ಬಗ್ಗೆ ಹೇಳಿ

: ನಾನು ವಿದೇಶದಲ್ಲಿ ನಟಿಸೋಕೆ ಆಗೋದಿಲ್ಲ. ಈಗಾಗಲೇ ಇಂಜಿನಿಯರಿಂಗ್‌ ಮುಗಿಸಿದ್ದೇನೆ. ಹೀಗಾಗಿ ನಾನು ಅಲ್ಲಿ ಐಟಿ ಸಂಬಂಧಿತ ಒಂದು ಕೋರ್ಸ್‌ ಮಾಡಿದೆ. ನನಗೆ ಅಲ್ಲಿ ಏನು ಕೆಲಸ ಮಾಡಬೇಕು ಅಂತ ಗೊತ್ತಾಗಿರಲಿಲ್ಲ, ಆಗ ಅವಿನಾಶ್‌ ಈ ಕೋರ್ಸ್‌ ಮಾಡು ಅಂತ ಹೇಳಿ ಸಲಹೆ ನೀಡಿದರು. ಮನೆಯಲ್ಲಿ ಸುಮ್ಮನೆ ಕೂರೋದು ತುಂಬ ಬೋರ್‌. ಈಗ ವಿದೇಶದಲ್ಲಿ ಕೆಲಸ ಹುಡುಕಬೇಕಿದೆ. ಜಾಬ್‌ ಸಿಕ್ಕಿಲ್ಲ ಅಂದ್ರೆ ಇನ್‌ಫ್ಲುಯೆನ್ಸರ್ಸ್‌ ಥರ ವಿಡಿಯೋ ಮಾಡಿಕೊಂಡು ಇರ್ತೀನಿ. ಅವಿನಾಶ್‌, ನಾನು ಭಾರತಕ್ಕೆ ಬಂದು ಇರುತ್ತೇವೆ. ಕಾಂಟ್ರ್ಯಾಕ್ಟ್‌ ಮುಗಿಯೋಕೆ ಕಾಯುತ್ತಿದ್ದೇವೆ. ಕರ್ನಾಟಕಕ್ಕೆ ಬಂದಕೂಡಲೇ ನಾನು ಮತ್ತೆ ಸಿನಿಮಾ, ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚುವೆ.

ಪ್ರ: ಶಿಕ್ಷಣ ಎಷ್ಟು ಮುಖ್ಯ?

ಉ: ಬೇರೆ ವಿದೇಶಕ್ಕೆ ಹೋಗಲು ಶಿಕ್ಷಣ ಬೇಕು, ಇಂಗ್ಲಿಷ್‌ ಬೇಕು ಎನ್ನುವ ಯೋಚನೆ ತಪ್ಪು. ಶಿಕ್ಷಣ ಮನುಷ್ಯನನ್ನು ಪರಿಪೂರ್ಣರನ್ನಾಗಿಸುತ್ತದೆ. ಶಿಕ್ಷಣ ಇದ್ದರೆ ಏನೇ ಇರಲಿ ನಾವು ನಮ್ಮ ಗುರಿಯನ್ನು ತಲುಪಬಹುದು, ಬದುಕಬಹುದು.

ಪ್ರ: ವಿದೇಶ ಹೇಗಿದೆ?

ಉ: ಪ್ಯಾರೀಸ್‌ನಲ್ಲಿ ಕಡಿಮೆ ಇಂಗ್ಲಿಷ್‌ ಮಾತಾಡ್ತಾರೆ. ಅಲ್ಲಿನ ಜನ- ಜೀವನ ಬೇರೆ ಥರ ಇದೆ. ಜನರ ಊಟ-ತಿಂಡಿ ಬೇರೆ ಇರುತ್ತದೆ. ಅಲ್ಲಿ ಜನರು ಬೆಳಗ್ಗೆಯೇ ಬ್ರೆಡ್‌ ತಿಂದು ಬಿಯರ್‌ ಕುಡಿಯುತ್ತಾರೆ. ಜನ ಅಂತ ಬಂದಾಗ ಎಲ್ಲರೂ ಸೇಮ್‌ ಅಂತ ಅನಿಸುತ್ತದೆ. ಬೆಳಗ್ಗೆಯೇ ಪಿಜ್ಜಾ, ಬರ್ಗರ್‌, ಫ್ರೆಂಚ್‌ ಫ್ರೈಸ್‌ ತಿನ್ನುವ ಅವರು ವರ್ಕೌಟ್‌ ಕೂಡ ಮಾಡುತ್ತಾರೆ. ಕಡಿಮೆ ಆಹಾರ ತಿನ್ನುವ ಅವರು ಆರೋಗ್ಯದ ಬಗ್ಗೆ ಜಾಸ್ತಿ ಗಮನ ಕೊಡ್ತಾರೆ. ಚಿಕ್ಕ ವಯಸ್ಸಿನಿಂದ ಅದೇ ರೀತಿ ಆಹಾರ ತಿನ್ನುವ ಅವರಿಗೆ ಎಲ್ಲವೂ ರೂಢಿ ಆಗಿರುತ್ತದೆ. ಅದೇ ಆಹಾರ ನಾವು ತಿಂದರೆ ಅನಾರೋಗ್ಯ ಉಂಟಾಗುತ್ತದೆ, ಸಿಕ್ಕಾಪಟ್ಟೆ ದಪ್ಪ ಆಗ್ತೀವಿ. ನೋಡಲು ಎಲ್ಲರೂ ಚೆನ್ನಾಗಿರುತ್ತದೆ. ಭಾರತದಂತೆ ಅಲ್ಲಿ ಜನರೂ ಕೂಡ ಅತಿಥಿ ಸತ್ಕಾರ ಮಾಡ್ತಾರೆ. ಚಿಕ್ಕ ಚಿಕ್ಕ ವಿಷಯಗಳಿಗೂ ಕ್ಷಮೆ ಕೇಳುತ್ತಾರೆ, ಥ್ಯಾಂಕ್ಯು ಹೇಳ್ತಾರೆ. ಒಂದು ಶಾಪ್‌ಗೆ ಹೋದಾಗ ಅಲ್ಲಿ ಒಬ್ಬರು ಬಾಗಿಲು ತೆಗೆದಾಗ ಇನ್ನೊಬ್ಬರು ಆ ಬಾಗಿಲ ಬಳಿ ಬರುತ್ತಿದ್ದರೆ ಆ ಬಾಗಿಲನ್ನು ಹಾಗೆಯೇ ಹಿಡಿದುಕೊಂಡು ನಿಂತಿರುತ್ತಾರೆ. ವಿದೇಶದಲ್ಲಿ ಎಲ್ಲರೂ ಅವರವರ ಕೆಲಸವನ್ನು ಮಾಡಿಕೊಂಡಿರುತ್ತಾರೆ, ಬೇರೆಯವರ ಬದುಕಿಗೆ ಮಧ್ಯಪ್ರವೇಶ ಮಾಡೋದಿಲ್ಲ.

(ಸಂದರ್ಶನ: ಪದ್ಮಶ್ರೀ ಭಟ್)

Whats_app_banner