ಗಂಡನಿಂದ ದೂರವಾಗಿದ್ದೇನೆ ಎಂಬ ಒಂದೇ ಕಾರಣಕ್ಕೆ ಇಷ್ಟೆಲ್ಲ ಟೀಕೆಗಳಾ? ಸ್ಯಾಡಿಸ್ಟ್ ಮನಸ್ಥಿತಿಗಳಿಗೆ ಖಡಕ್ ಉತ್ತರ ಕೊಟ್ಟ ನಿರೂಪಕಿ ಜಾಹ್ನವಿ
Kannada Television: ಕನ್ನಡ ಕಿರುತೆರೆಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ, ಸದ್ಯ ಕಲರ್ಸ್ ಕನ್ನಡದಲ್ಲಿ ಸವಿರುಚಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ನಡುವೆ ಆಗಾಗ ವೈಯಕ್ತಿಕ ವಿಚಾರಗಳಿಗೂ ಇವರು ಸುದ್ದಿಯಾಗುತ್ತಿರುತ್ತಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿನ ಕಟು ಮಾತುಗಳಿಗೆ ಪ್ರತ್ಯುತ್ತರ ನೀಡಿದ್ದಾರೆ.
Anchor Jhanvi: ಕನ್ನಡದ ಕಿರುತೆರೆ, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ತಮ್ಮದೇ ಆದ ಹೆಸರು ಮಾಡಿದವರು ನಟಿ, ನಿರೂಪಕಿ ಜಾಹ್ನವಿ. ನ್ಯೂಸ್ ಆಂಕರಿಂಗ್‌ನಿಂದ ಶುರುವಾದ ಇವರ ಜರ್ನಿ ಅದಾದ ಬಳಿಕ ರಿಯಾಲಿಟಿ ಶೋಗಳ ಮೂಲಕ ಮತ್ತಷ್ಟು ಹಿರಿದಾಯಿತು. ಮುಂದುವರಿದು ಬಣ್ಣದ ಲೋಕದಲ್ಲಿಯೂ ಗುರುತಿಸಿಕೊಂಡರು. ರೂಪೇಶ್ ಶೆಟ್ಟಿ ಅವರ ಅಧಿಪತ್ರ ಅನ್ನೋ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿಯೂ ನಟಿಸಿದ್ದಾರೆ ಜಾಹ್ನವಿ. ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸವಿರುಚಿ ಶೋವನ್ನು ನಡೆಸಿಕೊಡುತ್ತಿದ್ದಾರೆ. ಇಂತಿಪ್ಪ ಜಾಹ್ನವಿ ವೈಯಕ್ತಿಕ ವಿಚಾರವಾಗಿಯೂ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಕಳೆದ ವರ್ಷ ಪತಿ ಜತೆಗೆ ದೂರವಾಗಿದ್ದೇನೆ ಎಂದು ಜಾಹ್ನವಿ ಹೇಳಿಕೊಂಡಿದ್ದರು. ಇದೇ ವಿಚಾರವಾಗಿ ಜಾಲತಾಣಗಳಲ್ಲಿ ಕಟು ಟೀಕೆಗಳನ್ನು ಎದುರಿಸಿದ್ದಾರೆ. ಆ ಬಗ್ಗೆ ಸಾಕಷ್ಟು ಸ್ಪಷ್ಟನೆ ಕೊಟ್ಟರೂ, ಆ ಕೀಳು ಮಟ್ಟದ ಮಾತುಗಳು ಮಾತ್ರ ಈವರೆಗೂ ನಿಂತಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿದರೂ, ಯಾರೊಂದಿಗಾದರೂ ಕಾಣಿಸಿದರೂ ಕೆಟ್ಟ ಕಾಮೆಂಟ್‌ಗಳೇ ಸಂದಾಯವಾಗ್ತಿವೆ. ಗಂಡ ಬಿಟ್ಟವಳು ಎಂದೂ ಕಟುವಾಗಿ ಕಾಮೆಂಟಿಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ಈ ಬೇಸರದ ಬಗ್ಗೆ ಜಾಹ್ನವಿ ಮಾತನಾಡಿದ್ದಾರೆ.
ಕಟು ಟೀಕೆಗಳ ಬಗ್ಗೆ ಜಾಹ್ನವಿ ಮಾತು..
ಕಲಾಮಾಧ್ಯಮ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಜಾಹ್ನವಿ, "ಒಳ್ಳೆಯ ಮನಸ್ಥಿತಿ ಇರುವವರು ಯಾರೂ ಆ ರೀತಿ ಕಾಮೆಂಟ್ ಮಾಡಲ್ಲ. ಅವರೆಲ್ಲ ಸ್ಯಾಡಿಸ್ಟ್ ಮನೋಭಾವದವರು. ನಮ್ಮ ನಡುವೆ ವಾಸ್ತವವಾಗಿ ಆಗಿದ್ದೇನು? ಎಂಬ ಅರಿವಿಲ್ಲದೇ ಎಲ್ಲೋ ಕೂತ್ಕೊಂಡು ವಿಶ್ಲೇಷಣೆ ಮಾಡುವವರು ಮಾತ್ರ ಇಂಥದ್ದನ್ನು ಮಾಡಲು ಸಾಧ್ಯ. ಗಂಡ ಬಿಟ್ಟವಳು ಅಂತ ಕಾಮೆಂಟ್ ಹಾಕ್ತಾರೆ. ನಿನ್ನ ಡ್ರೆಸ್ ಚೆನ್ನಾಗಿಲ್ಲ, ಹಾಗಿದೆ, ಹೀಗಿದೆ.. ಎಂದೆಲ್ಲ ಕಾಮೆಂಟ್ ಮಾಡ್ತಾರೆ. ತುಂಬ ಕೆಳಮಟ್ಟಕ್ಕೆ ಇಳಿದು ಕಾಮೆಂಟ್ ಹಾಕ್ತಾರೆ. ಆದರೆ ನಾನು ಈ ಕುರಿತು ಯಾವತ್ತೂ ತಲೆ ಕೆಡಿಸಿಕೊಳ್ಳಲ್ಲ" ಎಂದಿದ್ದಾರೆ.
ಮುಂದುವರಿದು, "ಇಂಥ ಕಾಮೆಂಟ್ ಮಾಡುವವರ ಒಂದು ವರ್ಗವೇ ಇದೆ. ಬಹುಶಃ ಅವರಿಗೆ ಬೇರೆ ಕೆಲಸ ಇಲ್ಲ. ಇಂಥ ಕಾಮೆಂಟ್ ಮಾಡುವುದೇ ಅವರ ಫುಲ್‌ಟೈಮ್ ಕೆಲಸ ಆಗಿಬಿಟ್ಟಿರುತ್ತೆ. ಸ್ಯಾಡಿಸ್ಟ್ ಮನಸ್ಥಿತಿಗಳು ಇರಬಹುದು. ಮನೆಯಲ್ಲಿ ಅವರಿಗೂ ಹೆತ್ತವರು, ಅಕ್ಕ ತಂಗಿಯರು, ಹೆಂಡತಿ ಎಲ್ಲರೂ ಇರ್ತಾರೆ. ಆದರೂ ಇಂಥ ಕಾಮೆಂಟ್ ಹಾಕ್ತಾರೆ. ಅದ್ಯಾಕೆ ಅನ್ನೋದೇ ಗೊತ್ತಾಗಲ್ಲ. ಹಾಗಾಗಿ ನಾನು ಅಂಥವುಗಳಿಗೆ ತಲೆನೇ ಕೆಡಿಸಿಕೊಳ್ಳಲ್ಲ" ಎಂದಿದ್ದಾರೆ.
"ಎಷ್ಟೋ ಮಂದಿ ಆಪ್ತರು ನನ್ನ ಬಳಿ ಹೇಳಿದ್ರು, ಅಂಥ ಕಾಮೆಂಟ್‌ಗಳನ್ನು ಡಿಲಿಟ್ ಮಾಡು ಎಂದು. ಅದನ್ಯಾಕೆ ಡಿಲಿಟ್ ಮಾಡ್ಲಿ ಎಂದು ಅವರಿಗೆ ಹೇಳಿದ್ದೆ. ಆ ಕಾಮೆಂಟ್ ಹಾಗೇ ಇದ್ದರೆ ಕಾಮೆಂಟ್ ಮಾಡಿದವರು ಹೇಗೆ ಎಂಬುದನ್ನು ಅದು ತೋರಿಸುತ್ತೆ. ಒಂದು ವೇಳೆ ನಾನು ಅವುಗಳನ್ನು ಡಿಲಿಟ್ ಮಾಡ್ತಾ ಕೂತರೇ ನನ್ನ ಸಮಯವೇ ವೇಸ್ಟ್ ಆಗುತ್ತೆ. ನನಗಷ್ಟೇ ಅಲ್ಲ ಎಲ್ಲರಿಗೂ ಇದೇ ರೀತಿ ಮಾಡ್ತಾರೆ. ಇದರಿಂದ ಅವರಿಗೆ ಅದ್ಯಾವ ರೀತಿಯ ಖುಷಿ ಸಿಗುತ್ತೋ ಗೊತ್ತಿಲ್ಲ" ಎಂದು ಬೇಸರ ಹೊರಹಾಕಿದ್ದಾರೆ.
ಗಂಡ ಬಿಟ್ಟವಳು ಅನ್ನೋದು ತುಂಬ ಸುಲಭ..
"ಗಂಡ ಬಿಟ್ಟವಳು ಎನ್ನುವುದು ತುಂಬ ಸುಲಭ. ಆದರೆ ನಮ್ಮ ಜೀವನದಲ್ಲಿ ಏನೆನೆಲ್ಲ ಆಗಿರುತ್ತೆ ಅನ್ನೋದನ್ನ ಅವರು ಬಂದು ನೋಡಿರ್ತಾರಾ? ನಮ್ಮ ನಡುವೆ ಏನೇನಾಗಿದೆ ಅನ್ನೋದು ನಮಗೆ ಮಾತ್ರ ಗೊತ್ತು. ಅದು ಟಾಪ್ ಸೀಕ್ರೆಟ್. ಅದು ನಮ್ಮ ಫ್ಯಾಮಿಲಿಗೆ ಬಿಟ್ಟರೆ, ಹೊರಗೆಲ್ಲೂ ಗೊತ್ತಿಲ್ಲ. ಸಣ್ಣಪುಟ್ಟದನ್ನು ಹೊರಗಡೆ ಹೇಳಿದ್ದೇನೆ. ಎಲ್ಲವನ್ನೂ ಹೇಳಿಕೊಳ್ಳಬೇಕು ಅಂತೇನಿಲ್ಲ. ಒಮ್ಮೊಮ್ಮೆ ಹೇಳಿದರೂ, ಸಿಂಪತಿ ಸಲುವಾಗಿ ಹೇಳಿಕೊಂಡಿದ್ದಾರೆ ಎಂದೂ ಕಾಮೆಂಟ್ ಮಾಡ್ತಾರೆ. ಕೋಪದಲ್ಲಿ ಒಂದಷ್ಟು ವಿಚಾರ ಹೇಳಿಕೊಂಡಿರಬಹುದು. ಅದಕ್ಕೂ ನನಗೆ ರಿಗ್ರೇಟ್ ಇಲ್ಲ" ಎಂಬುದು ಜಾಹ್ನವಿ ಮಾತು.
ಅದು ಕೊಚ್ಚೆಗೆ ಕಲ್ಲು ಹಾಕಿದಂತೆ..
"ಅಲ್ಲಿ ಕೂತ್ಕೊಂಡು ಕಾಮೆಂಟ್ ಮಾಡುವುದು ಈಸಿ. ಗಂಡ ಬಿಟ್ಟವಳು ಇಂಥ ಬಟ್ಟೆ ಹಾಕಿದ್ದಾಳೆ. ಇವನ್ಯಾರೋ ಹೊಸ ಡ್ಯಾಶ್ ಡ್ಯಾಶ್.. ಇವಳ ಡ್ರೆಸ್ ನೋಡಿ, ಇವಳು ಹಂಗೆ ಹಿಂಗೆ.. ಒಂದು ರೀತಿ ಕೀಳು ಮಟ್ಟದ ಕಾಮೆಂಟ್‌ಗಳೇ ಜಾಸ್ತಿ. ಇದರ ಬಗ್ಗೆ ನನಗೆ ಚೂರೇ ಚೂರು ಕೀಳರಿಮೆ ಇಲ್ಲ. ನನ್ನ ಬಗ್ಗೆ, ನಾನು ಮಾಡುತ್ತಿರುವ ಕೆಲಸದ ಬಗ್ಗೆ ಖುಷಿ ಇದೆ. ಅವರು ಮಾಡೋದನ್ನು ನಾನು ತಡಿಯೋಕೇ ಆಗೋದೇ ಇಲ್ಲ. ಅವ್ರು ಇನ್ನಷ್ಟು ಜಾಸ್ತಿ ಮಾಡ್ತಾರೆ ಅದು ಅವರ ಮನಸ್ಥಿತಿ. ಅದನ್ನು ಒಂದು ರೀತಿ ಕೊಚ್ಚೆಗೆ ಹೋಲಿಕೆ ಮಾಡಬಹುದಷ್ಟೇ" ಎಂದಿದ್ದಾರೆ ಜಾಹ್ನವಿ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
ವಿಭಾಗ