Naa Ninna bidalaare Serial: ದುಷ್ಟಶಕ್ತಿಯ ಕಾಟಕ್ಕೆ ಸುಟ್ಟು ಕರಕಲಾದ ಅಂಬಿಕಾ ತಿಥಿ ಕಾರ್ಯ ನೆರವೇರುತ್ತಾ? ಮಾಟಗಾತಿ ಮಾಳವಿಕಾ ಪ್ಲಾನ್ ಏನು
Naa Ninna Bidalaare Serial: ಜೀ ಕನ್ನಡದಲ್ಲಿ ಸೋಮವಾರದಿಂದ ನಾ ನಿನ್ನ ಬಿಡಲಾರೆ ಹಾರರ್ ಥ್ರಿಲ್ಲರ್ ಸೀರಿಯಲ್ ಆರಂಭವಾಗಿದೆ. ಮೊದಲ ಎರಡು ದಿನಗಳ ಸಂಚಿಕೆಗಳ ಮೂಲಕ ವೀಕ್ಷಕರನ್ನು ಸೆಳೆದಿದೆ ಈ ಧಾರಾವಾಹಿ ಈಗ ನಿಧಾನಕ್ಕೆ ಕಥೆ ಒಂದೊಂದು ಗುಟ್ಟು ಬಿಟ್ಟುಕೊಡುತ್ತಿದೆ. ಅಂಬಿಕಾ ಸಾವಿನ ಹಿಂದಿನ ಕೈಗಳು ಕಾಣಿಸುತ್ತಿವೆ.

Naa Ninna Bidalaare Serial January 28 2025 Episode: ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಸೋಮವಾರದಿಂದ ಪ್ರಸಾರ ಆರಂಭಿಸಿದೆ. ಕಿರುತೆರೆ ವೀಕ್ಷಕರಿಗೆ ಹಾರರ್ ಥ್ರಿಲ್ಲರ್ ಕಥೆ ಹೇಳುವ ಮೂಲಕ ಹೊಸ ಕಥೆಯ ಜತೆಗೆ ಆಗಮಿಸಿದೆ ಜೀ ಕನ್ನಡ ವಾಹಿನಿ. ಈ ಹಿಂದೆ ಕಿರುತೆರೆಯಲ್ಲಿ ಗುರುತಿಸಿಕೊಂಡ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದೆ. ಪಾರು ಸೀರಿಯಲ್ ಮೂಲಕ ಮನೆ ಮಾತಾದ ನಟ ಶರತ್ ಪದ್ಮನಾಭ್, ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲೂ ಶರತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ನೀತಾ ಅಶೋಕ್ ಕಿರುತೆರೆಗೆ ಮರಳಿದರೆ, ಮತ್ತೋರ್ವ ನಾಯಕ ನಟಿಯಾಗಿ ರಿಷಿಕಾ ನಟಿಸುತ್ತಿದ್ದಾರೆ. ಚೂಟಿ ಪುಟಾಣಿ ಮಹಿತಾಗಿಲ್ಲಿ, ಹಿತಾ ಪಾತ್ರ ಸಿಕ್ಕಿದೆ.
ಕನ್ನಡ ಸಿನಿಮಾ ಮಾತ್ರವದಲ್ಲದೆ ರಂಗಭೂಮಿಯಲ್ಲಿಯೂ ಹೆಸರು ಮಾಡಿರುವ ಹಿರಿಯ ನಟ ಬಾಬು ಹಿರಣ್ಣಯ್ಯ ಮತ್ತು ನಟಿ ವೀಣಾ ಸುಂದರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಮಾಯಾ ಹೆಸರಿನ ಪಾತ್ರದಲ್ಲಿ ಖಳನಾಯಕಿಯಾಗಿ ರುಹಾನಿ ಶೆಟ್ಟಿ ಎಂಟ್ರಿಕೊಟ್ಟಿದ್ದಾರೆ. ಜಯದುರ್ಗ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಧಾರಾವಾಹಿಯನ್ನು ಸತೀಶ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಹೀಗೆ ಪ್ರಸಾರವಾದ ಈ ಧಾರಾವಾಹಿಯ ಮಂಗಳವಾರದ ಏಪಿಸೋಡ್ ಇಲ್ಲಿದೆ.
ಮಂಗಳವಾರದ ಸಂಚಿಕೆಯಲ್ಲಿಏನಾಯ್ತು?
ಹಿತಾ ಶಾಲೆಗೆ ಹೋಗಿ ಇನ್ನೇನು ಮನೆಗೆ ಮರಳಬೇಕು ಎನ್ನುವಷ್ಟರಲ್ಲಿ, ಮನೆಯಲ್ಲಿನ ಅಂಬಿಕಾಳ ಫೋಟೋ ಕೆಳಕ್ಕೆ ಬೀಳುತ್ತದೆ. ಇಡೀ ಮನೆ ಮಂದಿ ಗಾಬರಿಗೊಳಗಾಗುತ್ತಾರೆ. ಅಮ್ಮನ ಒಡೆದ ಫೋಟೋ ನೋಡಿ ಅಳುತ್ತಲೇ ಕೋಣೆ ಸೇರಿಕೊಳ್ಳುತ್ತಾಳೆ ಮಗಳು ಹಿತಾ. ಇತ್ತ ಶರತ್ ತನಗೆ ಬೇಕು ಅನ್ನೋ ಕಾರಣಕ್ಕೆ ಅಂಬಿಕಾಳನ್ನು ಕೊಲೆ ಮಾಡಿಸಿದ ಮಾಯಾ, ಶರತ್‌ಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾಳೆ. ಆದರೆ, ಶರತ್‌ಗೆ ಅಂಬಿಕಾಳದ್ದೇ ಚಿಂತೆ. ಅಂಬಿಕಾಳನ್ನು ಕೊಲೆ ಮಾಡಿಸಿ ಇಡೀ ಮನೆಗೂ ದಿಗ್ಬಂಧನ ಹಾಕಿಸಿದ್ದಾಳೆ ಮಾಯಾ.
ಇತ್ತ ಇದೇ ಅಂಬಿಕಾಳ ಅಪ್ಪ, ತನ್ನ ಹಿರಿ ಮಗಳು ಅಂಬಿಕಾ ಕಾಣೆಯಾದ ಮೇಲೆ ಮಾನಸಿಕವಾಗಿ ಕುಸಿದಿದ್ದಾನೆ. ಹುಚ್ಚನಂತೆ ಊರೆಲ್ಲ ಓಡಾಡುತ್ತಿದ್ದಾನೆ. ಕಿರಿ ಮಗಳು ದುರ್ಗಾಗೆ, ಅಪ್ಪ ಇದ್ರೂ ಇಲ್ಲದಂತೆ ಬದುಕುವ ಸ್ಥಿತಿ. ಅಮ್ಮ ಹೇಗೆ ಸತ್ತಳು, ಅಕ್ಕ ಹೇಗೆ ಕಾಣೆಯಾದಳು ಅನ್ನೋ ಪ್ರಶ್ನೆ ದುರ್ಗಾಳದ್ದು. ಮಾಟಗಾತಿಯೊಬ್ಬಳು ಅಂಬಿಕಾಳನ್ನು ಮೋಡಿ ಮಾಡಿ, ತನ್ನಕ್ಕೆ ವಶಕ್ಕೆ ಪಡೆದ ವಿಚಾರವನ್ನು ಕಿರಿ ಮಗಳು ದುರ್ಗಾ ಬಳಿ ಇನ್ನೂ ಹೇಳಿಲ್ಲ ಅವರಪ್ಪ. ದುರ್ಗಾ ಮುಂದೆ, ಗುರುದ್ರೋಹವಾಗಿದೆ ಎಂದಷ್ಟೇ ಹೇಳಿದ್ದಾನೆ.
ದುರ್ಗಾ, ತಾಯಿ ಇಲ್ಲದ ತಬ್ಬಲಿ. ಅಪ್ಪ ಇದ್ದರೂ ಇಲ್ಲದ ನೋವು. ಚಿಕ್ಕಪ್ಪ, ಚಿಕ್ಕಮ್ಮನ ಆಸರೆಯಲ್ಲಿ ಬೆಳದರೂ, ಚಿಕ್ಕಮ್ಮನದ್ದು ಸಹಿಸಲಾಗದ ಕಾಟ. ದುರ್ಗಾಳದ್ದು ನಿತ್ಯದ ನರಕದ ಪಾಡು. ಸಾಲಗಾರರ ಹಾವಳಿ ಜತೆಗೆ ಅವಮಾನವನ್ನೂ ಎದುರಿಸುತ್ತಿದ್ದಾಳೆ. ಇತ್ತ ಇನ್ನೊಂದು ಕಡೆ, ಅಮ್ಮನನ್ನು ಕಳೆದುಕೊಂಡ ಹಿತಾಗೆ ಅಪ್ಪ ಬೇಡವಾಗಿದ್ದಾನೆ. ಅಮ್ಮ ಇಲ್ಲದ ಮೇಲೆ ಅಪ್ಪನ ಮುಖ ನೋಡ್ತಿಲ್ಲ ಆ ಪುಟಾಣಿ. ಇದು ಅಪ್ಪ ಶರತ್‌ಗೂ ನುಂಗಲಾರದ ನೋವಾಗಿದೆ. ಒಂದೇ ಮನೆಯಲ್ಲಿದ್ದರೂ, ದೂರದಿಂದಲೇ ಮಗಳನ್ನು ನೋಡುವಂಥ ಸ್ಥಿತಿ ಆತನದ್ದು.
ನನ್ನ ದಾರಿಗೆ ಯಾರೇ ಅಡ್ಡ ಬಂದರೂ ನಾನು ಸುಮ್ಮನೆ ಬಿಡಲ್ಲ. ನಿನ್ನನ್ನೇ ಇಲ್ಲವಾಗಿಸಿದ್ದೇನೆ, ನಿನ್ನ ಮಗಳು ಯಾವ ಲೆಕ್ಕ. ನಿನ್ನ ನೆನಪುಗಳನ್ನೂ ಸುಟ್ಟು ಹಾಕ್ತಿನೆ ಎಂದು ಅಂಬಿಕಾಳ ಫೋಟೋ ಸುಟ್ಟುಹಾಕಿದ್ದಾಳೆ ಮಾಯಾ. ಇನ್ನೊಂದು ಬದಿಯಲ್ಲಿ ಮಗಳು ಹಿತಾ ಬಿಡಿಸಿದ ಚಿತ್ರದಲ್ಲಿನ ಅಚ್ಚರಿ ಕಂಡು ಶರತ್ ಶಾಕ್ ಆಗಿದ್ದಾನೆ. ಪ್ಲಾಶ್‌ಬ್ಯಾಕ್ ತೆರೆದುಕೊಂಡಿದೆ. ಯಾವುದೋ ಶಕ್ತಿ ಶರತ್‌ನನ್ನು ತನ್ನ ಹಿಡಿತಕ್ಕೆ ಪಡೆದು, ಅಂಬಿಕಾಳನ್ನು ತನ್ನ ಕಣ್ಣ ಮುಂದೆಯೇ ಸಾಯುವಂತೆ ಮಾಡಿದೆ. ಇದೇ ಘಟನೆ ದುರ್ಗಾ ಕನಸಲ್ಲೂ ಬಂದಿದೆ. ಪದೇ ಪದೆ ಅದೇ ಕನಸು ಬೀಳುತ್ತಿರುವುದಕ್ಕೂ ದುರ್ಗಾ ಭಯಪಟ್ಟಿದ್ದಾಳೆ. ಈ ನಡುಗೆ ಅಂಬಿಕಾಳ ತಿಥಿ ಕಾರ್ಯ ಮಾಡಲು, ನಿಗೂಢ ಜಾಗಕ್ಕೆ ಹೋಗಿದ್ದಾಳೆ ಶರತ್ ತಾಯಿ "ಮಾಟಗಾತಿ" ಮಾಳವಿಕಾ. ಆ ತಿಥಿ ಕಾರ್ಯ ನೇರವೇರಿದರೆ, ದೊಡ್ಡ ಶಕ್ತಿಯ ಪ್ರವೇಶವಾಗಲಿದೆ. ಒಟ್ಟಾರೆ ಒಂದಷ್ಟು ರೋಚಕ ತಿರುವಿನ ಜತೆಗೆ ಸಾಗುತ್ತಿದೆ ನಾ ನಿನ್ನ ಬಿಡಲಾರೆ ಸೀರಿಯಲ್.
ಏನಿದು ಕಥೆ?
ಶರತ್- ಅಂಬಿಕಾ ದಂಪತಿಗೆ ಮಗಳು ಹಿತಾನೇ ಪ್ರಪಂಚ. ಆದರೆ ಈ ಪುಟ್ಟ ಸಂಸಾರಕ್ಕೆ ಮಾಯಾ ಎಂಬ ಹೆಣ್ಣಿನ ಕೆಟ್ಟ ದೃಷ್ಟಿ ಬೀಳುತ್ತದೆ. ಶರತ್‌ನನ್ನು ಪಡೆದೇ ತೀರಬೇಕು ಎಂಬ ದುರಾಸೆಗೆ ಬಿದ್ದ ಮಾಯಾ ಅಂಬಿಕಾಳನ್ನು ಸಾಯಿಸುತ್ತಾಳೆ. ಇತ್ತ ತನ್ನ ದಾರಿಗೆ ಹಿತ ಅಡ್ಡವಾಗಿದ್ದಾಳೆ ಎಂದು ಆ ಪುಟ್ಟ ಕೂಸನ್ನು ಮುಗಿಸಲು ಮಾಯಾ ಸಂಚು ರೂಪಿಸುತ್ತಾಳೆ. ತನ್ನ ಮಗಳಿಗೆ ತೊಂದರೆ ಇದೆ ಎಂದು ಗೊತ್ತಾದ ಅಂಬಿಕಾ ಸತ್ತು ಹೋಗಿದ್ದರೂ ಮತ್ತೆ ಹೇಗೆ ಮರಳಿ ಬಂದು ಮಗಳನ್ನು ರಕ್ಷಿಸುತ್ತಾಳೆ ಎಂಬುದೂ ಕುತೂಹಲ ಮೂಡಿಸಿದೆ.
ಚಿಕ್ಕಂದಿನಲ್ಲಿಯೇ ಅಕ್ಕ ಅಂಬಿಕಾಳನ್ನು ಕಳೆದುಕೊಂಡ ದುರ್ಗಾ, ಆಕೆಯ ಬರುವಿಕೆಯನ್ನೇ ಎದುರು ನೋಡುತ್ತಿರುತ್ತಾಳೆ. ಅಕ್ಕನ ಬಾರದ ಹಿನ್ನೆಲೆಯಲ್ಲಿ ತಂಗಿ ದೇವರ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾಳೆ. ಈ ಅಕ್ಕ-ತಂಗಿಯ ಬದುಕು ಮತ್ತೆ ಸರಿಹೊಗೋದು ಹೇಗೆ? ಅಮ್ಮ ಮಗಳನ್ನು ಕೆಟ್ಟ ಹೆಂಗಸಿನ ಮಾಯೆಯಿಂದ ಹೇಗೆ ಕಾಪಾಡಿಕೊಳ್ತಾಳೆ? ಅಪ್ಪನ ಮೇಲಿನ ಮಗಳ ಕೋಪ ಯಾವಾಗ ಕಡಿಮೆ ಆಗುತ್ತೆ? ಇವೆಲ್ಲದರ ಸುತ್ತ ನಡೆಯುವ ಕಥೆಯೇ 'ನಾ ನಿನ್ನ ಬಿಡಲಾರೆ'!

ವಿಭಾಗ