ʻವಾಚ್ ಕೊಡುವ ನೆಪದಲ್ಲಿ ಕರೆದೊಯ್ದು ಬಾಗಿಲು ಹಾಕಿದ!ʼ ಜೀವನದ ಕರಾಳ ದಿನಗಳ ನೆನೆದ ʻಗೊಂಬೆʼ ನೇಹಾ ಗೌಡ
Actress Neha Gowda: ಕನ್ನಡ ಕಿರುತೆರೆ ನಟಿ ನೇಹಾ ಗೌಡ, ತಮ್ಮ ಜೀವನದಲ್ಲಿ ನಡೆದ ಮರೆಲಾರದ ಕರಾಳ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ವ್ಯಕ್ತಿಯೋರ್ವ ವಾಚ್ ಕೊಡುವ ನೆಪದಲ್ಲಿ, ನಡೆದುಕೊಂಡ ವರ್ತನೆ ಇಂದಿಗೂ ನೇಹಾ ಅವರ ಕಣ್ಣಿಗೆ ಕಟ್ಟಿದಂತಿದೆ. ಹೀಗಿದೆ ಅದರ ಪೂರ್ತಿ ವಿವರ.

Actress Neha Gowda: ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ ನೇಹಾ ಗೌಡ, ಸದ್ಯ ಮಗಳ ನಾಮಕರಣ ಸಂಭ್ರಮದಲ್ಲಿದ್ದಾರೆ. ಮಗಳಿಗೆ ಶಾರದಾ ಎಂದು ಹೆಸರಿಟ್ಟು, ಆ ಖುಷಿಯ ಕ್ಷಣಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಶೇರ್ ಮಾಡುತ್ತಿದ್ದಾರೆ. ಸದ್ಯ ನಟನೆಯಿಂದಲೂ ಕೊಂಚ ಅಂತರ ಕಾಯ್ದುಕೊಂಡು, ಮಗಳ ಆರೈಕೆಯಲ್ಲಿಯೇ ಕಾಲ ಕಳೆಯುತ್ತಿರುವ ನೇಹಾ ಗೌಡ. ಇಂತಿಪ್ಪ ನೇಹಾ ಗೌಡ, ತಮ್ಮ ಬದುಕಿನಲ್ಲಾದ ಕೆಟ್ಟ ಗಳಿಗೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಘಟನೆ ಇಂದಿಗೂ ಅವರ ಕಣ್ಣಿಗೆ ಕಟ್ಟಿದಂತಿದೆ. ಏನದು? ಇಲ್ಲಿದೆ ವಿವರ.
ಅಷ್ಟಕ್ಕೂ ಏನಾಗಿತ್ತು?
"ಆಗ ನಾನಿನ್ನು ಚಿಕ್ಕವಳು. ಹೊರಗಡೆ ಹೋಗಿದ್ದೆ. ಆಗ ಯಾರೋ ಒಬ್ಬರು ಬಂದು, ನಿಮ್ಮ ಅಪ್ಪ ವಾಚ್ ಕೊಟ್ಟಿದ್ದರು, ರೆಡಿ ಮಾಡಿಸೋದಕ್ಕೆ, ರೆಡಿಯಾಗಿದೆ ಬಾ ತೆಗೊಂಡು ಹೋಗು ಎಂದು ಕೇಳಿದ್ದಾರೆ. ಆಗ ನಾನು ಬರಲ್ಲ ಅಂದೆ, ಅವ್ರು ಫೋರ್ಸ್ ಮಾಡ್ತಿದ್ರು. ಆಗ ನಾನು ನಮ್ಮ ಅಪ್ಪನ ಹೆಸರೇನು ಹೇಳಿ ಎಂದು ಕೇಳಿದ್ದೇನೆ. ಅವ್ರು ಗೊತ್ತೋ ಗೊತ್ತಿಲ್ದೆನೋ ರಾಮ ರಾಮ ಅಂದ್ರು. ನಾನೇ ರಾಮಕೃಷ್ಣ ಅಂತ ಹೇಳಿಬಿಟ್ಟೆ. ಆಗ ನಾನು ನಮ್ಮಪ್ಪನ ಹೆಸರು ಕರೆಕ್ಟಾಗಿ ಹೇಳಿದ್ರಲ್ಲ ಅಂತ ಅವರ ಜೊತೆಗೆ ಹೊರಟೆ. ಚಿಕ್ಕಪೇಟೆಯಲ್ಲಿ ಸುತ್ತಾಡಿಸಿ ವಾಚ್ ಅಂಗಡಿಗೆ ಕರೆದೊಯ್ದರು"
ಕಾಮುಕನ ಕೈಗೆ ತಗ್ಲಾಕೊಂಡಿದ್ದ ನೇಹಾ
"ಅದಾದ ಮೇಲೆ, ನನಗೆ ಒಂದು ಕೋಣೆಗೆ ಕರೆದೊಯ್ದು, ಅವರ ವರ್ತನೆ ಬೇರೆಯಾಯ್ತು. ನನಗೆ ಭಯ ಆಯ್ತು. ಅಳೋಕೆ ಶುರು ಮಾಡಿದೆ. ಜೋರಾಗಿ ಹೊಡೆದ. ಅಳೋಕೆ ಶುರು ಮಾಡಿದ್ರೆ, ನಿನ್ನನ್ನು ಕೊಂದೇ ಬಿಡ್ತಿನಿ ಅಂದ. ಚಾಕು ತೋರಿಸಿ ಹೆದರಿಸಿದ. ಎಲ್ಲಿ ನನ್ನನ್ನು ಸಾಯಿಸಿ ಬಿಡ್ತಾನೋ ಅಂತ ನಾನು ಸುಮ್ಮನಾದೆ. ಅದೇ ಸಮಯಕ್ಕೆ ಯಾರೋ ಒಬ್ಬರು ಮಗುವನ್ನು ಹಿಡಿದುಕೊಂಡು ಕಸ್ಟಮರ್‌ವೊಬ್ಬರು ಬಂದರು. ನಾನು ಅವರನ್ನು ನೋಡಿ ಜೋರಾಗಿ ಅಳಲು ಶುರುಮಾಡಿದೆ. ಆ ಸಮಯದಲ್ಲಿ ನನಗೆ ಸಿಕ್ಕಾಪಟ್ಟೆ ಹೊಡೆದ. ನನಗೆ ತಡೆದುಕೊಳ್ಳೊಕೆ ಆಗಲಿಲ್ಲ. ಜೋರಾಗಿ ಅತ್ತೆ"
"ಹಿಂದೆ ತಿರುಗಿ ಚಾಕು ತೋರಿಸಿದ. ಅಲ್ಲಿಂದ ಜೋರಾಗಿ ಓಡಿದೆ. ಎಲ್ಲಿ ಹೋಗ್ತಿದಿನಿ ಅಂತಾನೇ ಗೊತ್ತಾಗಲಿಲ್ಲ. ಅಷ್ಟು ಓಡಿದೆ. ಅಳುತ್ತಲೇ ಓಡ್ತಿದ್ದೆ. ಯಾರೋ ಒಬ್ಬ ವ್ಯಕ್ತಿ ಬಂದು ನನ್ನ ಕೈ ಹಿಡಿದು ಏನಾಯ್ತು ಎಂದು ಸಮಾಧಾನ ಮಾಡಿದ್ರು. ಯಾರು, ಎಲ್ಲಿಯವಳು ಎಂದೆಲ್ಲ ಕೇಳಿದ್ರು. ಆಗ ನನಗೆ ನಮ್ಮ ಅಪ್ಪನ ಹೆಸರು ಹೇಳಲು ಆಗ್ತಾನೇ ಇರಲಿಲ್ಲ. ಸಂಬಂಧಿಕರ ಹೆಸರನ್ನು ಹೇಳಿದ್ದೆ. ಆದರೆ, ಆಗ ಅದ್ಯಾರಿಗೂ ಗೊತ್ತಿರಲಿಲ್ಲ. ಇಷ್ಟೆಲ್ಲ ಆಗೋದ್ರಲ್ಲಿ ಅರ್ಧ ದಿನ ಆಗೋಗಿದೆ. ಅಪ್ಪ ಅಮ್ಮ, ಎಲ್ಲರೂ ಹುಡುಕಾಡ್ತಿದ್ದಾರೆ. ಒಬ್ಬೊಬ್ಬರೂ ಒಂದೊಂದು ಬೀದಿಯಲ್ಲಿ ಹುಡುಕಾಡಿದ್ದಾರೆ. ಕೊನೆಗೆ ಮನೆಯವರ ಕೈಗೆ ಸಿಕ್ಕೆ"
"ಏನಾಯ್ತು. ಏನು ಮಾಡಿದ ಎಂದೆಲ್ಲ ಪ್ರಶ್ನೆ ಕೇಳಿದ್ರು. ನನಗೆ ಹೇಳೋಕೇ ಆಗ್ತಿಲ್ಲ. ಮುಖದ ಮೇಲೆ ಹೊಡೆತದ ಬರೆ ಬಿದ್ದಿತ್ತು. ಆ ಘಟನೆ ಆದ ಮೇಲಿಂದ ಸಾಕಷ್ಟು ಮಂಕಾಗಿದ್ದೆ. ಶಾಲೆಗೆ ಹೋದ್ರೂ, ಮನೆಯಲ್ಲಿದ್ದರೂ, ಯಾರ ಜೊತೆಗಿದ್ದರೂ ಮಂಕಾಗಿರುತ್ತಿದ್ದೆ. ಬೆಳೀತಾ ಬೆಳೀತಾ ನನಗೆ ಇದರ ಬಗ್ಗೆ ಗೊತ್ತಾಯ್ತು. ನಾನು ಮತ್ತೆ ಡಿಪ್ರೆಷನ್‌ಗೆ ಹೋದೆ. ಈ ಘಟನೆ ಆದಾಗ ನಾನು ನಾಲ್ಕನೇ ತರಗತಿ ಓದುತ್ತಿದ್ದೆ. ಅಂದರೆ 10 ವರ್ಷದವಳಿದ್ದೆ" ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಾಲ್ಯದ ಕೆಟ್ಟ ಗಳಿಗೆಯನ್ನು ಮತ್ತೆ ನೆನಪುಮಾಡಿಕೊಂಡಿದ್ದಾರೆ ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಗೊಂಬೆ ನೇಹಾ ಗೌಡ.
ಇಲ್ಲಿದೆ ನೇಹಾ ಗೌಡ ಸಂದರ್ಶನದ ವಿಡಿಯೋ
