ಟಾಪ್ 3ಕ್ಕೆ ಏರಿದ ಅಮೃತಧಾರೆ; ಉಳಿದ ಸ್ಥಾನದಲ್ಲಿ ಯಾವೆಲ್ಲಾ ಧಾರಾವಾಹಿಗಳಿವೆ?
ಈ ಬಾರಿ 'ಅಮೃತಧಾರೆ' ಟಾಪ್ 3ಕ್ಕೆ ಏರಿದೆ. ಮದುವೆ ಆಗುವುದಿಲ್ಲ ಎಂದುಕೊಂಡಿದ್ದ ಗೌತಮ್ ಹಾಗೂ ಭೂಮಿಕಾ ಇಷ್ಟಪಟ್ಟು ಮದುವೆ ಆಗಿದ್ದಾರೆ. ಆದರೆ ಮದುವೆ ಮುಗಿಯುತ್ತಿದ್ದಂತೆ ಅದೇ ಬಟ್ಟೆಯಲ್ಲಿ ಇಬ್ಬರೂ ಆಫೀಸಿಗೆ ತೆರಳುತ್ತಾರೆ.
ಕಿರುತೆರೆಯಲ್ಲಿ ಇತರ ಕಾರ್ಯಕ್ರಮಗಳಿಗಿಂತ ವೀಕ್ಷಕರು ಹೆಚ್ಚು ನೋಡುವುದು ಪ್ರತಿ ದಿನ ಪ್ರಸಾರವಾಗುವ ಧಾರಾವಾಹಿಗಳು. ಕನ್ನಡದ ಮನರಂಜನೆ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳಿಗೂ ಅದರದ್ದೇ ಆದ ವೀಕ್ಷಕರಿದ್ದಾರೆ. ಆದರೆ ಎಂದಿನಂತೆ ಈ ಬಾರಿ ಕೂಡಾ ಜೀ ಕನ್ನಡ ವಾಹಿನಿಯ ಧಾರಾವಾಹಿಗಳೇ ಟಾಪ್ 5 ಸ್ಥಾನದಲ್ಲಿವೆ.
ಕಳೆದ ವಾರ ಟಾಪ್ 4ರಲ್ಲಿದ್ದ ಅಮೃತಧಾರೆ ಧಾರಾವಾಹಿ ಈ ವಾರ ಟಾಪ್ 3ಕ್ಕೆ ಬಂದಿದೆ. ಉಳಿದ ಸ್ಥಾನದಲ್ಲಿ ಯಾವೆಲ್ಲಾ ಧಾರಾವಾಹಿಗಳಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
1. ಪುಟ್ಟಕ್ಕನ ಮಕ್ಕಳು
ಉಮಾಶ್ರೀ ಪುಟ್ಟಕ್ಕನಾಗಿ ನಟಿಸುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಇತರ ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿ ಟಾಪ್ 1ರಲ್ಲಿದೆ. ಇದುವರೆಗೂ ಧಾರಾವಾಹಿ ಇತರ ಧಾರಾವಾಹಿಗಳಿಗೆ ತನ್ನ ಸ್ಥಾನ ಬಿಟ್ಟುಕೊಟ್ಟಿಲ್ಲ. ಅತ್ತೆ ಬಂಗಾರಮ್ಮನ ವಿರುದ್ಧ ನಿಂತಿರುವ ಮಗಳು ಸ್ನೇಹಾಳನ್ನು ಹೇಗಾದರೂ ಮಾಡಿ ಬದಲಿಸಬೇಕು ಎಂದು ಪುಟ್ಟಕ್ಕ ಯೋಚಿಸುತ್ತಾಳೆ. ಸ್ನೇಹಾ ಕೂಡಾ ಮನೆಯವರ ಬುದ್ಧಿ ಮಾತಿಗೆ ಮಣಿದು ಬಂಗಾರಮ್ಮನ ಸೊಸೆಯಾಗಿ, ಮನೆಗೆ ಹೊಂದಿಕೊಂಡು ನಿರ್ಧಾರ ಮಾಡುತ್ತಾಳೆ. ತನ್ನ ನಿರ್ಧಾರನ್ನು ಪತಿ ಕಂಠಿಗೂ ತಿಳಿಸುತ್ತಾಳೆ. ಆದರೆ ಬಂಗಾರಮ್ಮನ ನಡೆ ಏನು ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.
2. ಸೀತಾರಾಮ
ಆರಂಭವಾಗಿ ಕೆಲವೇ ದಿನಗಳು ಕಳೆದಿದ್ದರೂ 'ಸೀತಾರಾಮ' ಧಾರಾವಾಹಿ ವೀಕ್ಷಕರ ಮನ ಗೆದ್ದಿದೆ. ಟಾಪ್ 5ರಲ್ಲಿದ್ದ ಧಾರಾವಾಹಿ ಈಗ ಟಾಪ್ 2ರ ಸ್ಥಾನ ಕಾಯ್ದುಕೊಂಡಿದೆ. ಸೀತಾ ಹಾಗೂ ರಾಮನ ನಡುವೆ ಒಳ್ಳೆ ಸಲಿಗೆ ಬೆಳೆದಿದೆ. ಹೇಗಾದರೂ ಮಾಡಿ ಸೀತಾಗೆ ಹಣದ ಸಹಾಯ ಮಾಡಬೇಕೆಂದು ಆಕೆಗೆ ಅಡ್ವಾನ್ಸ್ ಸ್ಯಾಲರಿ ಕೊಡಿಸಲು ರಾಮ್ ಮುಂದಾದರೆ ಅದನ್ನು ಭಾರ್ಗವಿ ಚಿಕ್ಕಿ ತಡೆಯುತ್ತಿದ್ದಾಳೆ. ಸೀತಾ ಅಕೌಂಟ್‌ಗೆ ಹೋಗುವ ಹಣ ಆಕೆಯ ಸ್ನೇಹಿತೆ ಪ್ರಿಯಾಗೆ ಹೋಗಿದೆ. ಮನೆ ಉಳಿಸಿಕೊಳ್ಳುವ ಸೀತಾ ಪ್ರಯತ್ನಕ್ಕೆ ರಾಮ್ ಹೇಗೆ ಸಹಾಯ ಮಾಡುತ್ತಾನೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
3. ಅಮೃತಧಾರೆ
ಈ ಬಾರಿ 'ಅಮೃತಧಾರೆ' ಟಾಪ್ 3ಕ್ಕೆ ಏರಿದೆ. ಮದುವೆ ಆಗುವುದಿಲ್ಲ ಎಂದುಕೊಂಡಿದ್ದ ಗೌತಮ್ ಹಾಗೂ ಭೂಮಿಕಾ ಇಷ್ಟಪಟ್ಟು ಮದುವೆ ಆಗಿದ್ದಾರೆ. ಆದರೆ ಮದುವೆ ಮುಗಿಯುತ್ತಿದ್ದಂತೆ ಅದೇ ಬಟ್ಟೆಯಲ್ಲಿ ಇಬ್ಬರೂ ಆಫೀಸಿಗೆ ತೆರಳುತ್ತಾರೆ. ಗೌತಮ್ ಭೂಮಿಕಾ ಮದುವೆ ಎಪಿಸೋಡ್ ವೀಕ್ಷಕರಿಗೆ ಬಹಳ ಮೆಚ್ಚುಗೆ ಆಗಿತ್ತು. ಮುಂದೆ ಇವರ ಜೀವನ ಯಾವ ರೀತಿ ಇರಲಿದೆ ಎಂಬುದನ್ನು ನೋಡಲು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
4. ಗಟ್ಟಿಮೇಳ
ಆರಂಭವಾದಾಗಿನಿಂದ ಮೊದಲ ಸ್ಥಾನ ಕಾಯ್ದುಕೊಂಡಿದ್ದ 'ಗಟ್ಟಿಮೇಳ' ಧಾರಾವಾಹಿ ಇತರ ಧಾರಾವಾಹಿಗಳ ಹಾವಳಿಗೆ ಈಗ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆದರೂ ಟಾಪ್ 5 ಒಳಗೆ ಸ್ಥಾನ ಕಾಯ್ದುಕೊಂಡಿದೆ. ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್ ಸಿಕ್ಕಿದೆ. ಹೊಸ ಹೊಸ ಪಾತ್ರಗಳ ಎಂಟ್ರಿ ಆಗಿದೆ. ಸೆಪ್ಟೆಂಬರ್ 14ಕ್ಕೆ 1167 ಎಪಿಸೋಡ್‌ಗಳನ್ನು ಪೂರೈಸಿದೆ.
5. ಸತ್ಯ
ಟಾಪ್ 4ರ ಸ್ಥಾನದಲ್ಲಿದ್ದ 'ಸತ್ಯ' ಅಮೃತಧಾರೆ ಧಾರಾವಾಹಿ ಆರಂಭವಾದಾಗಿನಿಂದ ಟಾಪ್ 5ಕ್ಕೆ ಕುಸಿದಿದೆ. ಮೊದಲು ಸತ್ಯಾಳನ್ನು ಕಂಡರೆ ಆಗದೆ ಆಕೆಯ ಅತ್ತೆ ಸೀತಮ್ಮ ಈಗ ಬಹಳ ಬದಲಾಗಿದ್ದಾರೆ. ಸತ್ಯ ವೇಷ ಭೂಷಣ ನೋಡಿ ನಾನು ಆಕೆಯ ಬಗ್ಗೆ ತಪ್ಪು ತಿಳಿದಿದ್ದೆ ಎಂದು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಅತ್ತೆ, ಸತ್ಯಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದು ವೀಕ್ಷಕರಿಗೂ ಖುಷಿ ಆಗಿದೆ.
ಒಟ್ಟಿನಲ್ಲಿ ಈ ಐದೂ ಧಾರಾವಾಹಿಗಳು ಪ್ರಬಲ ಪೈಪೋಟಿಯಲ್ಲಿವೆ. ಮುಂದಿನ ವಾರ ಯಾವ ಧಾರಾವಾಹಿ ಸ್ಥಾನಪಲ್ಲಟ ಮಾಡುವುದೋ ಕಾದು ನೋಡಬೇಕು.