Mahanati: ಸ್ವಾಭಿಮಾನಿ ಅಜ್ಜಿಯ ಕಷ್ಟಕ್ಕೆ ಕರಗಿದ ಆಂಕರ್ ಅನುಶ್ರೀ; ಜೀವನ ಪೂರ್ತಿ ಆ ಹಿರಿ ಜೀವಕೆ ಸಿಕ್ತು ವಿಶೇಷ ಭರವಸೆ
ಮಹಾನಟಿ ರಿಯಾಲಿಟಿ ಶೋನ ಶನಿವಾರದ ಸಂಚಿಕೆಯಲ್ಲಿ ರಿಯಾ ಬಗರೆ ನಟಿಸಿದ ಸ್ಕಿಟ್ ಭರವಸೆಯ ಬೆಳಕಾಗಿ, ಸ್ಫೂರ್ತಿಯ ಚಿಲುಮೆಯಾಗಿ ಹೊರಬಂದಿದೆ. ಆ ಕಥೆಯ ರಿಯಲ್ ನಾಯಕಿ 85ರ ಇಳಿವಯಸ್ಸಿನ ಭಾಗ್ಯಲಕ್ಷ್ಮೀ. ಆ ಅಜ್ಜಿಯ ಕಷ್ಟಕ್ಕೆ ಎಲ್ಲರೂ ಕಣ್ಣೀರಾಗಿದ್ದಾರೆ. ಆಂಕರ್ ಅನುಶ್ರೀ, ನಿರ್ದೇಶಕ ತರುಣ್ ಸುಧೀರ್ ಒಂದು ಹೆಜ್ಜೆ ಮುಂದೆ ಹೋಗಿ ಮೆಚ್ಚುವೆ ಕೆಲಸ ಮಾಡಿದ್ದಾರೆ.
Mahanati Show: ಜೀ ಕನ್ನಡದಲ್ಲಿ ಮಹಾನಟಿ ಶೋ ಶುರುವಾಗಿದೆ. 16 ಯುವತಿಯರನ್ನು ಒಂದೆಡೆ ಸೇರಿಸಿ, ಅವರಲ್ಲಿನ ನಟನಾ ಪ್ರತಿಭೆಯನ್ನು ಕರುನಾಡಿಗೆ ತೋರಿಸುವ ಕೆಲಸವಾಗುತ್ತಿದೆ. ಅದರಂತೆ ಈ ವಾರ ನಿಜ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡ ಜೀವಗಳ ಹಿಂದಿನ ಛಲ, ಸ್ವಾಭಿಮಾನ, ಸಾಧನೆಯನ್ನು ಎಲ್ಲರ ಮುಂದಿಡಲಾಗುತ್ತಿದೆ. ಅದರಂತೆ ಕೋಲಾರ ಮೂಲದ 85ರ ಇಳಿವಯಸ್ಸಿನ ಭಾಗ್ಯಲಕ್ಷೀ ಜೀವನವನ್ನೂ ಈ ಶೋನಲ್ಲಿ ಬಿಚ್ಚಿಡಲಾಗಿದೆ. ಸ್ಪರ್ಧಿ ರಿಯಾ ಬಗರೆ ಭಾಗ್ಯಲಕ್ಷ್ಮೀಯಾಗಿ, ರಸ್ತೆ ಬದಿಯಲ್ಲಿ ಅರಳಿ ಬತ್ತಿ ಮಾರುವ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮನಸೆಳೆದರು.
ಈ ಶೋನಲ್ಲಿ ಭಾಗ್ಯಲಕ್ಷ್ಮೀ ಅಜ್ಜಿಯ ನಿಜ ಬದುಕಿನ ಅನಾವರಣವಾಗಿದೆ. ನೋಡ ನೋಡುತ್ತಿದ್ದಂತೆ, ಎಲ್ಲರ ಕಣ್ಣುಗಳಲ್ಲಿ ನೀರು ತುಂಬಿದೆ. ಎಲ್ಲರೂ ಎದ್ದು ನಿಂತು ನಿಜ ಜೀವನದ ಸ್ವಾಭಿಮಾನಿ ಸಾಧಕಿಗೆ ಚಪ್ಪಾಳೆ ತಟ್ಟಿದ್ದಾರೆ. ವೇದಿಕೆಗೆ ಭಾಗ್ಯಲಕ್ಷ್ಮೀ ಅಜ್ಜಿಯನ್ನು ಕರೆತಂದ ಅನುಶ್ರೀ, ಅಮ್ಮ ಈ ಸ್ವಾಭಿಮಾನದ ಬದುಕನ್ನು ನೀವು ಅದ್ಹೇಗೆ ಗೆಲ್ಲುತ್ತಿದ್ದೀರಿ? ಎಂದು ಅನುಶ್ರೀ ಅಜ್ಜಿ ಬಳಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಅಜ್ಜಿ, "ಮನುಷ್ಯನಾಗಿ ಹುಟ್ಟಿದ ಮೇಲೆ ಸ್ವಾಭಿಮಾನದಿಂದಲೇ ಗೆಲ್ಲಬೇಕು. ಇನ್ನೊಬ್ಬರ ಹಣದಿಂದ ಬದುಕಬಾರದು. ನನ್ನ ಜತೆಗೆ ನನ್ನ ಮಗಳಿದ್ದಾಳೆ. ಅವಳು ಚೆನ್ನಾಗಿ ನೋಡಿಕೊಳ್ತಾಳೆ. ಈ ಸಮಯದಲ್ಲಿ ಅವಳು ನನಗೆ ತಾಯಿಯಾಗಿದ್ದಾಳೆ. ಅವಳು ಅರಳಿ ಬತ್ತಿಗಳನ್ನು ಮಾಡ್ತಾಳೆ. ನಾನೇ ಅವುಗಳನ್ನು ಮಾರಿಕೊಂಡು ಬರ್ತಿನಿ. ಮಾರಿದರೆ ದುಡ್ಡು ಬರುತ್ತೆ, ಸುಮ್ಮನೇ ಕೂತರೇ ಯಾರೂ ದುಡ್ಡು ಕೊಡಲ್ಲ"
ಎಲ್ಲವೂ ಪೂರ್ವ ಜನ್ಮದ ಫಲಾಫಲ
ಭಗವಂತ ಮೇಲಿಂದ ಮೇಲೆ ಕಷ್ಟ ಕೊಡ್ತಾನೇ ಇರ್ತಾನೆ. ನೀವು ಯಾವತ್ತೂ ಭಗವಂತನನ್ನು ಬೈದುಕೊಂಡಿಲ್ಲ ಅಜ್ಜಿ? ಎಂದ ಅನುಶ್ರೀ, "ಇಲ್ಲಮ್ಮ ನಾನು ಯಾವತ್ತು ಆತನನ್ನು ಶಪಿಸಲ್ಲ. ಅದು ನಮ್ಮ ಪೂರ್ವ ಜನ್ಮದ ಕರ್ಮಫಲ. ನಾನು ತುಂಬ ರಾಮನಾಮ ಬರೀತಿನಿ. ಆ ರಾಮನ ರಕ್ಷೆಯಲ್ಲಿ ನಾನಿದ್ದೇನೆ. ರಾಮನ ಮೇಲೆ ಹಾಡು ಬರೀತಿದ್ದೆ. ಈಗ ಅದೆಲ್ಲ ಮರೆತು ಹೋಗಿದೆ. ಶತ್ರುಗಳನ್ನೂ ನಾನು ಯಾವತ್ತು ದ್ವೇಷ ಮಾಡಲ್ಲ. ಅದನ್ನು ನಾವು ಮನಸ್ಸಲ್ಲಿಟ್ಟುಕೊಂಡರೇ ನಾವೂ ಬೇಗ ಕೆಟ್ಟವರಾಗ್ತೀವಿ" ಎಂದಿದೆ ಹಿರಿಜೀವ. ಇವತ್ತು ರಾಮನವಮಿ ದಿನ ನಾವು ಈ ಚಿತ್ರೀಕರಣ ಮಾಡ್ತಿದ್ದೇವೆ. ಯಾರಿಗೆ ಗೊತ್ತು ಆ ಶಬರಿಯೇ ಇಲ್ಲಿಗೆ ಬಂದಿರಬಹುದು" ಎಂದು ಅಜ್ಜಿಯನ್ನು ನೋಡಿ ಹೇಳಿದ್ದಾರೆ ಅನುಶ್ರೀ .
ಅಜ್ಜಿಗೆ ಜೀವನಪೂರ್ತಿ ಬಾಡಿಗೆ ಭರಿಸುವ ಭರವಸೆ
"ತಿಂಗಳಿಗೆ 1200 ರೂಪಾಯಿ ವೃದ್ಧಾಪ್ಯ ವೇತನ ಬರುತ್ತೆ. ಬಾಡಿಗೆ 5 ಸಾವಿರ ಕಟ್ಟಬೇಕು. ಮನೆ ಖರ್ಚು ನೋಡಬೇಕು. ಯಾರಿಗೆ ಕೇಳೋಣ, ಆಗಲ್ಲ ಅಲ್ವ? ಸ್ವಾಭಿಮಾನ ಅಡ್ಡಬರುತ್ತೆ. ಕಷ್ಟಪಟ್ಟರೆ ಭಗವಂತ ದಾರಿ ತೋರಿಸ್ತಾನೆ" ಎಂದಿದ್ದಾಳೆ ಅಜ್ಜಿ. ಅಜ್ಜಿಯ ಮಾತಿಗೆ ಭಾವುಕರಾದ ಅನುಶ್ರೀ, "ನಾನು ನಿಮ್ಮನ್ನ ಅಜ್ಜಿ ಅಂತ ಕರೆದೆ ಅಲ್ವಾ? ನಾನು ನಿಮ್ಮ ಮೊಮ್ಮಗಳು ಇದ್ದಂಗೆ ಅಲ್ವಾ? ನೀವು ಏನೂ ಅಂದುಕೊಳ್ಳಲ್ಲ ಅಂದರೆ, ಇನ್ಮೇನೆ ನೀವು ಸಾಯೋವರೆಗೂ ನಿಮ್ಮ ಮನೆ ಬಾಡಿಗೆ ನಾನೇ ಕಟ್ತೀನಿ. ಈ ಒಂದು ಅವಕಾಶ ಮಾಡಿಕೊಡಿ ಎಂದು ಅನುಶ್ರೀ ಕಣ್ಣೀರಾಗಿದ್ದಾರೆ. ನೀವು ಯಾವ ಮನೆಯಲ್ಲಾದರೂ ಇರಿ, ಆ ಮನೆ ಬಾಡಿಗೆ ನಾನೇ ಕಟ್ತೀನಿ" ಎಂದು ಭರವಸೆ ನೀಡಿದ್ದಾರೆ.
ಆ ನಗುವಿಂದಲೇ ನಾನು ಬದುಕಿದ್ದೇನೆ..
ಆ ನಗು ಸದಾ ನಿಮ್ಮ ಮೊಗದಲ್ಲಿರುತ್ತೆ. ಅದನ್ನು ಹೇಗೆ ಕಾಪಾಡಿಕೊಂಡು ಬರ್ತಿದ್ದೀರಿ? ಎಂದು ಮತ್ತೆ ಪ್ರಶ್ನೆ ಮಾಡಿದ್ದಾರೆ ಅನುಶ್ರೀ. ಆ ನಗುವಿಂದಲೇ ನಾನು ಬದುಕಿದ್ದೇನೆ. ಮನುಷ್ಯನಿಗಷ್ಟೇ ಅಲ್ಲ ಪ್ರತಿ ಜೀವಿಗೂ ಕಷ್ಟ ಇರುತ್ತೆ. ತಾಳ್ಮೆ, ಸಹನೆಯಿಂದ ತಡೆದುಕೊಳ್ಳುವವನೇ ನಿಜವಾದ ಮನುಷ್ಯ. ಏನೋ ನಾನು ಬತ್ತಿಗಳನ್ನು ಮಾಡ್ತಿನಿ, ಅವ್ರು ಬಂದಷ್ಟು ಕೊಡ್ತಾರೆ. ಎಲ್ಲರೂ ಪ್ರೀತಿಯಿಂದ ತಗೋತಾರೆ. ನಮ್ಮ ಜತೆ ಯಾರೂ ಇಲ್ಲ. ಆ ದೇವರಿದ್ದಾನೆ" ಎಂದಿದ್ದಾರೆ.
ದಿನಸಿ ಪೂರೈಸುವ ಹೊಣೆ ಹೊತ್ತ ತರುಣ್
ನಿರ್ದೇಶಕ ತರುಣ್ ಅವ್ರು ಅಜ್ಜಿ ಬಳಿ ಬತ್ತಿ ಖರೀದಿಸಿ, ಅದಕ್ಕೆ ಒಂದಷ್ಟು ದುಡ್ಡನ್ನೂ ಕೊಟ್ಟರು. ಬಳಿಕ ಮೈಕ್ ಆಫ್ ಮಾಡಿ, ಯಾರಿಗೂ ಗೊತ್ತಾಗಬಾರದೆಂದು, ಅಜ್ಜಿಗೆ ಇನ್ಮೇಲೆ ಅವರ ಅವರ ಜೀವನಕ್ಕೆ ಬೇಕಾದ ಎಲ್ಲ ದಿನಸಿ ಸಾಮಾಗ್ರಿಗಳನ್ನು ನೀಡುವ ಭರವಸೆ ನೀಡಿದರು. ಇನ್ನೋರ್ವ ಜಡ್ಜ್ ನಿಶ್ವಿಕಾ ನಾಯ್ಡು, ಇನ್ಮೇಲೆ ನೀವೇ ನನಗೆ ಸ್ಫೂರ್ತಿ ಎಂದರು. ರಮೇಶ್ ಅರವಿಂದ್ ಸಹ ಸುಮ್ಮನಾಗಲಿಲ್ಲ, ಐದು ನಿಮಿಷದಲ್ಲಿ ಜೀವನದಲ್ಲಿ ಜೀವನ ಪಾಠ ಮಾಡಿಕೊಟ್ಟರು ಈ ಅಜ್ಜಿ ಎನ್ನುತ್ತಲೇ, ವೀಕೆಂಡ್ ವಿಥ್ ರಮೇಶ್ ಶೋ ರೀತಿಯಲ್ಲಿಯೇ ಅಜ್ಜಿಯನ್ನು ಸಾಧಕಿಗೆ ಹೋಲಿಸಿ ಸಂಭ್ರಮಿಸಿದರು.