Seetha Rama: ಸೀತಾ ರಾಮ ಹೋಗ್ಲಿ ಬಿಡಿ, ನೀವಿಬ್ಬರಾದ್ರೂ ಮದ್ವೆ ಆಗಿ; ಅಶೋಕ, ಪ್ರಿಯಾ ಪಾತ್ರಕ್ಕೆ ಸಿಗುತ್ತಿದೆ ವೀಕ್ಷಕರ ಪ್ರೀತಿ
ಸೀತಾ ರಾಮ ಸೀರಿಯಲ್ನ ಸೀತಾ ಮತ್ತು ರಾಮನ ಕತೆಯ ನಡುವೆ ಅಶೋಕ ಮತ್ತು ಪ್ರಿಯಾಳ ಕಾಂಬಿನೇಷನ್ಗೂ ವೀಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ಸೀರಿಯಲ್ನಲ್ಲಿ ಆದಷ್ಟು ಬೇಗ ನೀವಿಬ್ರೇ ಮದುವೆ ಆಗಿ ಬಿಡಿ ಎನ್ನುವುದರ ಜತೆಗೆ ನಿಮ್ಮಿಬ್ಬರದ್ದು ಚೆಂದದ ಜೋಡಿ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.
Seetha Rama: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್ 50 ಸಂಚಿಕೆಗಳನ್ನು ಪೂರೈಸಿ, ಮುನ್ನುಗ್ಗುತ್ತಿದೆ. ಸೀರಿಯಲ್ ಪ್ರಸಾರವಾದ ಕೆಲವೇ ವಾರಗಳಲ್ಲಿ ಟಾಪ್ ಐದರಲ್ಲಿ ಕಾಣಿಸಿಕೊಂಡು ಇದೀಗ ಎರಡನೇ ಸ್ಥಾನದಲ್ಲಿದೆ. ದಿನದಿಂದ ದಿನಕ್ಕೆ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತಿರುವ ಸೀತಾ ರಾಮ, ಮೇಕಿಂಗ್ ಮತ್ತು ಸ್ಟೋರಿ ವಿಚಾರವಾಗಿಯೂ ಮೋಡಿ ಮಾಡುತ್ತಿದೆ.
ಸೀತಾ ರಾಮ ಮತ್ತು ಸಿಹಿಯದ್ದು ಇಡೀ ಸೀರಿಯಲ್ನ ಪ್ರಮುಖ ಪಾತ್ರಗಳು. ಈ ಮೂರು ಪಾತ್ರಗಳ ಜತೆಗೆ ಧಾರಾವಾಹಿಯಲ್ಲಿ ಕಾಣಿಸುವ ಇನ್ನೂ ಹಲವು ಮುಖಗಳೂ ಇದೀಗ ಫೇಮಸ್ ಆಗಿವೆ. ಭಾರ್ಗವಿ ಪಾತ್ರ ನೋಡಿ ಕಿಡಿಕಾರುವವರು ಒಂದೆಡೆಯಾದರೆ, ಆ ಪೈಕಿ ರಾಮನ ಆಪ್ತ ಸ್ನೇಹಿತನಾಗಿ ಅಶೋಕ (ಅಶೋಕ್) ಪಾತ್ರ ನೋಡುಗರ ಗಮನ ಸೆಳೆಯುತ್ತಿದೆ. ಪ್ರಾಣ ಸ್ನೇಹಿತ ಅಂದ್ರೆ ಹೀಗಿರಬೇಕು ಎಂಬ ಮೆಚ್ಚುಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.
ಇತ್ತ ಸೀತಾಳ ಸ್ನೇಹಿತೆಯಾಗಿ ಪ್ರಿಯಾ (ಮೇಘನಾ ಶಂಕ್ರಪ್ಪ) ಸಹ ತಮಗೆ ಸಿಗುವ ಕಿರು ಅವಧಿಯಲ್ಲಿಯೇ ಚೆಂದದ ನಟನೆ ನೀಡಿ ವೀಕ್ಷಕರನ್ನು ಸೆಳೆದಿದ್ದಾರೆ. ಸೀತಾ ಮತ್ತು ರಾಮನ ಕಥೆ ಒಂದು ಬದಿಯಲ್ಲಿ ಸಾಗಿದರೆ, ಮತ್ತೊಂದು ಬದಿಯಲ್ಲಿ ಅಶೋಕ ಮತ್ತು ಪ್ರಿಯಾಳ ಸನ್ನಿವೇಶಗಳು ವೀಕ್ಷಕರಿಗೆ ಇಷ್ಟವಾಗುತ್ತಿವೆ. ಅಷ್ಟೇ ಅಲ್ಲ ಸೀತಾ ರಾಮ ಜೋಡಿಗೆ ಸಿಕ್ಕಷ್ಟೇ ಪ್ರೀತಿ ಈ ಜೋಡಿಗೂ ನೋಡುಗರು ನೀಡುತ್ತಿದ್ದಾರೆ.
ಸೀತಾ ರಾಮ ಧಾರಾವಾಹಿಯಲ್ಲಿ ಅಶೋಕ ಬಾಸ್ ಆಗಿ ಕಾಣಿಸಿಕೊಂಡಿದ್ದಾನೆ. ನಿಜವಾದ ಬಾಸ್ ರಾಮ್, ಸಾಮಾನ್ಯ ನೌಕರನಾಗಿದ್ದಾನೆ. ಇತ್ತ ಬಾಸ್ ಅಶೋಕನ ಮೇಲೆ ಪ್ರಿಯಾಳಿಗೆ ಒಲವು ಮೂಡಿದೆ. ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ತಮ್ಮ ಮನದ ಬಯಕೆಯನ್ನು ಪ್ರಿಯಾ, ಅಶೋಕನ ಮುಂದೆ ಹೇಳಿಕೊಂಡಿದ್ದಾಳೆ. ಅಶೋಕನಿಗೆ ವಿಶೇಷ ಗಿಫ್ಟ್ ಸಹ ನೀಡಿದ್ದಾಳೆ. ಆದರೆ ಅಶೋಕನ ವಿಚಾರಗಳೇ ಬೇರೆ.
ನೆಟ್ಟಿಗ ವಲಯದಿಂದ ಭಾರೀ ಮೆಚ್ಚುಗೆ
ಸೀತಾ ರಾಮ ಸೀರಿಯಲ್ ಮೂಲಕ ಈ ಜೋಡಿ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಬಗ್ಗೆ ಬಗೆಬಗೆ ಕಾಮೆಂಟ್ಗಳನ್ನು ನೆಟ್ಟಿಗ ಪೋಸ್ಟ್ ಮಾಡುತ್ತಿದ್ದಾನೆ. ಸೀತಾ ರಾಮ ಸೀರಿಯಲ್ನಲ್ಲಿ ಮೇನ್ ಜೋಡಿಗಿಂತ ಇದೇ ಜೋಡಿ ಸೂಪರ್ ಎನ್ನುತ್ತಿದ್ದಾನೆ. ಇಬ್ಬರದ್ದರೂ ಮೇಡ್ ಫಾರ್ ಈಚ್ ಅದರ್ ಎಂದೂ ಹೇಳುತ್ತಿದ್ದಾರೆ.
ಯಾವುದಾದ್ರು ಸೀರಿಯಲ್ ಅಲ್ಲಿ ಸೈಡ್ ಆಕ್ಟರ್ ಲಸ್ ಸ್ಟೋರಿ ಟ್ರೆಂಡಿಂಗ್ನಲ್ಲಿ ಇದೆ ಅಂದ್ರೆ ಇದೇ ಅದು.. ಇಬ್ಬರದ್ದೂ ಸೂಪರ್ ಜೋಡಿ, ಸೀತಾ ರಾಮ ಅವ್ರದ್ದು ಬಿಡಿ, ನೀವಿಬ್ಬರೂ ಮದುವೆ ಆಗಿಬಿಡಿ.. ಸೀರಿಯಲ್ ಜಗತ್ತಿನಲ್ಲಿ ನಿಮ್ಮಿಬ್ಬರದ್ದು ಟ್ರೆಂಡಿಂಗ್ ಲವ್ ಸ್ಟೋರಿ.. ನೋಡೋಕೆ ಇಬ್ಬರದ್ದೂ ತುಂಬ ಕ್ಯೂಟ್ ಜೋಡಿ.. ಹೀಗೆ ಬಗೆಬಗೆಯ ಕಾಮೆಂಟ್ಗಳು ಈ ಜೋಡಿಗೆ ಸಂದಾಯವಾಗುತ್ತಿವೆ.