Bramhagantu Serial: ಋಣಕ್ಕೂ ಗುಣಕ್ಕೂ ಅಂದದ ನಂಟು; ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ಬ್ರಹ್ಮಗಂಟು
ಮುಖದ ಸೌಂದರ್ಯ ಚರ್ಮ ಇರೋ ತನಕ. ಮನಸಿನ ಸೌಂದರ್ಯ ಜನ್ಮ ಇರೋ ತನಕ ಎಂಬ ಮಾತಿನಂತೆ ಅಂದಕ್ಕಿಂತ ಗುಣ ಮುಖ್ಯ ಎಂಬ ಸಂದೇಶ ಸಾರುವ ಕಥೆಯನ್ನು ಹೊತ್ತು ಬರುತ್ತಿದೆ ಹೊಸ ಧಾರಾವಾಹಿ ಬ್ರಹ್ಮಗಂಟು.

Bramhagantu Serial: ಕನ್ನಡ ಕಿರುತೆರೆಯಲ್ಲಿ ಮೊದಲ ಸ್ಥಾನದಲ್ಲಿರುವ ಜೀ ಕನ್ನಡ ಇದೀಗ ತನ್ನ ವೀಕ್ಷಕರಿಗೆ ಹೊಸ ಕಥೆಯೊಂದನ್ನು ಪರಿಚಯಿಸುತ್ತಿದೆ. ಅದುವೇ ಬ್ರಹ್ಮಗಂಟು. ಈ ಹಿಂದೆ ಜೀ ಕನ್ನಡದಲ್ಲಿ ಇದೇ ಹೆಸರಿನಲ್ಲಿ ಸೀರಿಯಲ್ ಪ್ರಸಾರ ಕಂಡಿತ್ತು. ಗೀತಾ ಭಾರತೀ ಭಟ್ ನಾಯಕಿಯಾಗಿ ನಟಿಸಿದ್ದರು. ಇದೀಗ ಅದೇ ಧಾರಾವಾಹಿಯ ಹೊಸ ವರ್ಷನ್ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಜೂನ್ 17 ರಿಂದ ರಾತ್ರಿ 10 ಗಂಟೆಗೆ ಈ ಸೀರಿಯಲ್ ಪ್ರಸಾರವಾಗಲಿದೆ.
ಭರ್ಜರಿ ರೇಟಿಂಗ್ ಮೂಲಕ ಆರಂಭವಾದ, ಉಮಾಶ್ರೀ ಅಭಿನಯದ ‘ಪುಟ್ಟಕ್ಕನ ಮಕ್ಕಳು’ ಈಗಲೂ ನಂಬರ್ ಒನ್ ಧಾರಾವಾಹಿಯಾಗಿ ಮುಂದುವರಿದಿದೆ. ಇದರ ಜತೆಗೆ ಸತ್ಯ, ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿರುವ ಶ್ರೀರಸ್ತು ಶುಭಮಸ್ತು, ಅಮೃತಧಾರೆ ಇತ್ತೀಚೆಗೆ ಹೊಸ ಸೆನ್ಸೇಷನ್ ಸೃಷ್ಟಿಸಿರುವ ಕೂಡು ಕುಟುಂಬದ ಕಥೆ ಲಕ್ಷ್ಮಿ ನಿವಾಸ, ಶ್ರಾವಣಿ ಸುಬ್ರಹ್ಮಣ್ಯ, ಸೀತಾ ರಾಮ ಧಾರಾವಾಹಿಗಳು ಯಶಸ್ವಿಯಾಗಿ ಮುನ್ನಡೆದಿವೆ. ಈ ವಿಭಿನ್ನ ಕತೆಗಳ ಸರಣಿಗೆ ಹೊಸ ಸೇರ್ಪಡೆಯೇ ‘ಬ್ರಹ್ಮಗಂಟು'.
ಅಂದಕ್ಕಿಂತ ಗುಣ ಮುಖ್ಯ ಸಂದೇಶ
‘ಮುಖದ ಸೌಂದರ್ಯ ಚರ್ಮ ಇರೋ ತನಕ. ಮನಸಿನ ಸೌಂದರ್ಯ ಜನ್ಮ ಇರೋ ತನಕ’ ಎಂಬಂತೆ ಅಂದಕ್ಕಿಂತ ಗುಣ ಮುಖ್ಯ ಎಂಬ ಸಂದೇಶ ಸಾರುವ ಕಥೆಯೇ ಈ ಬ್ರಹ್ಮಗಂಟು. ತನಗೆ ಮದುವೆಯೇ ಬೇಡ ಎಂಬ ನಿರ್ಧಾರದಲ್ಲಿರುವ ಸಾಧಾರಣ ರೂಪಿನ ಕಥಾ ನಾಯಕಿ ದೀಪಾ, ತನ್ನ ಸೌಂದರ್ಯದ ಬಗ್ಗೆ ಅತಿಯಾದ ಅಹಂಕಾರ ಹೊಂದಿರುವ ಇವಳ ಅಕ್ಕ ರೂಪಾ ಮದುವೆ ಕಥೆಯೇ ಬ್ರಹ್ಮಗಂಟು ಧಾರಾವಾಹಿ ಹೈಲೈಟ್.
ಅತ್ತಿಗೆ ಸೌಂದರ್ಯಳನ್ನು ಅಮ್ಮನಿಗಿಂತಲೂ ಮಿಗಿಲಾಗಿ ಗೌರವಿಸುವ ಕಥಾನಾಯಕ ಚಿರಾಗ್. ರೂಪಾ ಜತೆ ಚಿರಾಗ್ ಮದುವೆ ನಿಶ್ಚಯ ಮಾಡೋ ಸೌಂದರ್ಯ. ಆಕಸ್ಮಿಕ ಸನ್ನಿವೇಶದಲ್ಲಿ ಅಕ್ಕನ ಬದಲು ಚಿರಾಗ್ ಜತೆ ಮದುವೆಯಾಗೋ ದೀಪಾ. ಒಲ್ಲದ ಗಂಡ, ತಿರಸ್ಕಾರದಿಂದ ನೋಡೋ ಗಂಡನ ಮನೆಯವರ ಮಧ್ಯೆ ಹೊಯ್ದಾಡುವ ದೀಪಾಳ ಬದುಕು. ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ, ಅವರ ಮನಸಿನ ಸೌಂದರ್ಯ ಅನಾವರಣ ಮಾಡುವ ಅಪರೂಪದ ಕಥೆಯೇ ‘ಬ್ರಹ್ಮಗಂಟು’.
ಪಾತ್ರಧಾರಿಗಳು, ತಾಂತ್ರಿಕ ಬಳಗ ಹೀಗಿದೆ
ಧೃತಿ ಕ್ರಿಯೇಶನ್ಸ್ ಮೂಲಕ ಖ್ಯಾತ ಕಲಾವಿದ ದಿಲೀಪ್ ರಾಜ್ - ಶ್ರೀವಿದ್ಯಾ ರಾಜ್ ನಿರ್ಮಾಣದಲ್ಲಿ, ಉದಯ್ ನಿರ್ದೇಶನ, ಪ್ರಭು ಛಾಯಾಗ್ರಹಣ ಈ ಧಾರಾವಾಹಿಗಿದೆ. ಸುಧೀಂದ್ರ ಭಾರದ್ವಾಜ್, ನಿಶ್ಚಿತಾ ಶರತ್, ಸುಶಾಂತ್ ಮುಂಗರವಳ್ಳಿ ಚಿತ್ರಕತೆ, ನಂದಿನಿ ನಂಜಪ್ಪ ಸಂಭಾಷಣೆ ಬರೆದಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ಪ್ರೀತಿ ಶ್ರೀನಿವಾಸ್, ರೋಹಿತ್ ಶ್ರೀನಾಥ್, ಶ್ವೇತಾ ರಾವ್, ಭುವನ್, ದಿಯಾ, ಕಾವ್ಯಾ, ಶರಣ್ಯಾ, ರೋಹಿತ್, ಶಿವಾಜಿ ರಾವ್ ಜಾಧವ್, ಅಭಿನಯಾ, ಸಿತಾರಾ, ಸುರೇಶ್ ರೈ, ಹರ್ಷಾ ಮುಂತಾದವರ ತಾರಾಗಣವಿದೆ.
ಅದೇ ಶೀರ್ಷಿಕೆ ಕಥೆ ಬೇರೆ
ಈ ಹಿಂದೆ ಜೀ ಕನ್ನಡದಲ್ಲಿ ಬ್ರಹ್ಮಗಂಟು ಹೆಸರಿನ ಸೀರಿಯಲ್ ಪ್ರಸಾರ ಕಂಡಿತ್ತು. ಗೀತಾ ಭಾರತಿ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಸುದೀರ್ಘ ನಾಲ್ಕು ವರ್ಷಗಳ ಕಾಲ ಪ್ರಸಾರ ಕಂಡಿದ್ದ ಈ ಸೀರಿಯಲ್, 2021ರಲ್ಲಿ ಕೊನೆಯಾಗಿತ್ತು. ರಮೇಶ್ ಇಂದಿರಾ, ಶ್ರುತಿ ನಾಯ್ಡು ಈ ಸೀರಿಯಲ್ ನಿರ್ಮಾಣ ಮಾಡಿದ್ದರು. ಈಗ ಅದೇ ಹೆಸರಿನಲ್ಲಿ ಮತ್ತೊಂದು ನಂಟು ಗಂಟಿನ ಕಥೆಯ ಜತೆಗೆ ಆಗಮಿಸಿದೆ ಬ್ರಹ್ಮಗಂಟು ಸೀರಿಯಲ್. ಇಲ್ಲಿ ಅಕ್ಕ ತಂಗಿಯ ಕಥೆಯೇ ಹೈಲೈಟ್.
