ಕಾಲೇಜಲ್ಲಿ ನಿಮಗೆ ಲವ್ವರ್ ಇದ್ರಾ? ನಟಿಯ ಪ್ರಶ್ನೆಗೆ ನಾಚಿ ನೀರಾದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಲರ್ಸ್ ಕನ್ನಡ ಧಾರಾವಾಹಿ ನಟಿಯರು ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದಾರೆ. ವಾಹಿನಿಯು ಈ ಪ್ರೋಮೋವನ್ನು ಕೂಡಾ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಕನ್ನಡ ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯು ವಿಭಿನ್ನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಲೇ ಬರುತ್ತಿದೆ. ಹಾಗೇ ತನ್ನ ಬಳಗಕ್ಕೆ ಪ್ರೋತ್ಸಾಹಿಸಲು ಪ್ರತಿ ವರ್ಷವೂ ಅನುಬಂಧ ಹೆಸರಿನ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಈ ಬಾರಿ ಕೂಡಾ ವಾಹಿನಿಯು ಅನುಬಂಧ ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಸೆಪ್ಟೆಂಬರ್ 22, 23, 24ವರೆಗೆ ಕಾರ್ಯಕ್ರಮ ಪ್ರಸಾರ
ಈಗಾಗಲೇ ಅನುಬಂಧ ಅವಾರ್ಡ್ ಕಾರ್ಯಕ್ರಮ ನಡೆದಿದ್ದು ಇದೇ ಶುಕ್ರವಾರದಿಂದ ಭಾನುವಾರದವರೆಗೂ( ಸೆಪ್ಟೆಂಬರ್ 22 ರಿಂದ 24ವರೆಗೂ 3 ದಿನಗಳ ಕಾಲ ಸಂಜೆ 7ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ವಾಹಿನಿಯು ಈ ಕಾರ್ಯಕ್ರಮದ ಪ್ರೋಮೋಗಳನ್ನು ಹಂಚಿಕೊಂಡಿದ್ದು ವೀಕ್ಷಕರಂತೂ ಈ ಶೋ ನೋಡಲು ತುದಿಕಾಲಿನಲ್ಲಿ ಕಾಯುತ್ತಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ನಿರ್ದೇಶಕ ಪ್ರೇಮ್, ಧ್ರುವ ಸರ್ಜಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಧಾರಾವಾಹಿ ಜೋಡಿಗಳು ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ಕಾರ್ಯಕ್ರಮವನ್ನು ಸೃಜನ್ ಲೋಕೇಶ್ ನಿರೂಪಣೆ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಎಲ್ಲಾ ಧಾರಾವಾಹಿ ತಂಡದ ಕಲಾವಿದರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ್ದಾರೆ. ಈ ಬಾರಿ ಯಾವ ಯಾವ ನಟ-ನಟಿಯರು ಅನುಬಂಧ ಅವಾರ್ಡ್ ಪಡೆದಿದ್ದಾರೆ ಎಂಬುದನ್ನು ನೋಡಲು ವೀಕ್ಷಕರು ಕೂಡಾ ಕುತೂಹಲದಿಂದ ಕಾಯುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆಗಳ ಸುರಿಮಳೆ
ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಲರ್ಸ್ ಕನ್ನಡ ಧಾರಾವಾಹಿ ನಟಿಯರು ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದಾರೆ. ವಾಹಿನಿಯು ಈ ಪ್ರೋಮೋವನ್ನು ಕೂಡಾ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತಿಯ ಸುಷ್ಮಾರಾವ್, ಸಿಎಂ ಬಳಿ ತೆರಳಿ, ನನ್ನ ಹೆಸರು ಭಾಗ್ಯ ಅಂತ, ನಿಮಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಬೇಕಿದೆ ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಸಿಎಂ ಸಿದ್ದರಾಮಯ್ಯ ನಗುತ್ತಲೇ, ಏನು ಪ್ರಶ್ನೆಗಳನ್ನು ಕೇಳುತ್ತೀರಿ ಎನ್ನುತ್ತಾರೆ. ನಂತರ ನಟಿಯರು ಒಬ್ಬೊಬ್ಬರಾಗಿ ಪ್ರಶ್ನೆಗಳನ್ನು ಕೇಳುತ್ತಾರೆ.
ಕೆಂಡ ಸಂಪಿಗೆ ಸುಮನಾ, ನಿಮಗೆ ಅಡುಗೆ ಮಾಡಲು ಬರುತ್ತಾ? ಎಂದು ಕೇಳುತ್ತಾರೆ, ಇದಕ್ಕೆ ಸಿಎಂ , ನನಗೆ ಅನ್ನ ಮಾಡಲು ಬರುತ್ತೆ ಎಂದು ಉತ್ತರಿಸುತ್ತಾರೆ. ನೀವು ಹೆಂಡತಿಯಿಂದ ಎಂದಾದರೂ ಬೈಸಿಕೊಂಡಿದ್ದೀರ ಎಂಬ ಪ್ರಶ್ನೆ ಕೂಡಾ ಸಿಎಂಗೆ ಎದುರಾಗುತ್ತದೆ. ಒಲವಿನ ನಿಲ್ದಾಣ ಧಾರಾವಾಹಿಯ ತಾರಿಣಿ, ನೀವು ಲಾ ಕಾಲೇಜಿನಲ್ಲಿ ಓದುವಾಗ ನಿಮಗೆ ಯಾರಾದರೂ ಲವ್ವರ್ ಇದ್ರಾ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಸಿದ್ದರಾಮಯ್ಯ ನಾಚಿ ನೀರಾಗುತ್ತಾರೆ. 33 ಸೆಕೆಂಡ್‌ಗಳ ಪ್ರೋಮೋ ಬಹಳ ಕುತೂಹಲ ಕೆರಳಿಸಿದ್ದು, ಪೂರ್ತಿ ಶೋ ನೋಡಲು ನೀವು ನಾಳೆಯಿಂದ 3 ದಿನಗಳ ಕಾಲ ಅನುಬಂಧ ಅವಾರ್ಡ್ಸ್ 2023 ಕಾರ್ಯಕ್ರಮ ನೋಡಬೇಕು.
ವಿಭಾಗ