ಕನ್ನಡ ಸುದ್ದಿ  /  ಮನರಂಜನೆ  /  ಥೇಟ್‌ ಅಮ್ಮನ ಕೈ ರುಚಿ ತಿಂದಂತೆ ಆಯ್ತು, ಭಾಗ್ಯಾ ಅಡುಗೆಗೆ ಪತ್ರಕರ್ತನ ಹೊಗಳಿಕೆಯ ಸುರಿಮಳೆ; ಭಾಗ್ಯಲಕ್ಷ್ಮೀ ಧಾರಾವಾಹಿ

ಥೇಟ್‌ ಅಮ್ಮನ ಕೈ ರುಚಿ ತಿಂದಂತೆ ಆಯ್ತು, ಭಾಗ್ಯಾ ಅಡುಗೆಗೆ ಪತ್ರಕರ್ತನ ಹೊಗಳಿಕೆಯ ಸುರಿಮಳೆ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಜೂನ್‌ 11ರ ಸಂಚಿಕೆ. ಸಿಬ್ಬಂದಿ ಮನವಿ ಮಾಡಿದ್ದರಿಂದ ಭಾಗ್ಯಾ ಹೋಟೆಲ್‌ಗೆ ವಾಪಸ್‌ ಬರುತ್ತಾಳೆ. ಅಲ್ಲಿ ಪತ್ರಕರ್ತ ತನ್ನ ಅಡುಗೆ ಹೊಗಳಿದ್ದನ್ನು ಕಂಡು ಭಾಗ್ಯಾ ಬಹಳ ಖುಷಿಯಾಗುತ್ತಾಳೆ.

ಥೇಟ್‌ ಅಮ್ಮನ ಕೈ ರುಚಿ ತಿಂದಂತೆ ಆಯ್ತು, ಭಾಗ್ಯಾ ಅಡುಗೆಗೆ ಪತ್ರಕರ್ತನ ಹೊಗಳಿಕೆಯ ಸುರಿಮಳೆ; ಭಾಗ್ಯಲಕ್ಷ್ಮೀ ಧಾರಾವಾಹಿ
ಥೇಟ್‌ ಅಮ್ಮನ ಕೈ ರುಚಿ ತಿಂದಂತೆ ಆಯ್ತು, ಭಾಗ್ಯಾ ಅಡುಗೆಗೆ ಪತ್ರಕರ್ತನ ಹೊಗಳಿಕೆಯ ಸುರಿಮಳೆ; ಭಾಗ್ಯಲಕ್ಷ್ಮೀ ಧಾರಾವಾಹಿ (PC: jio Cinema)

Bhagyalakshmi Serial: ಇನ್ನೊಂದು ಕ್ಷಣ ನಮ್ಮ ಕಣ್ಣ ಮುಂದೆ ನಿಂತರೂ ಪೊಲೀಸರನ್ನು ಕರೆಸುತ್ತೇವೆ ಎಂದು ಸ್ಟಾರ್‌ ಹೋಟೆಲ್‌ ಸೂಪರ್‌ವೈಸರ್‌ ಹಾಗೂ ಮ್ಯಾನೇಜರ್‌ ಎಚ್ಚರಿಕೆ ನೀಡಿದ್ದರಿಂದ ಹೆದರುವ ಭಾಗ್ಯಾ, ಒಂದು ಕ್ಷಣವೂ ಅಲ್ಲಿ ನಿಲ್ಲದೆ ಹೊರಗೆ ಬಂದು ಬಸ್‌ ಹತ್ತುತ್ತಾಳೆ. ಆದರೆ ತನ್ನನ್ನು ಹೋಟೆಲ್‌ ಸಿಬ್ಬಂದಿ ಹಿಂಬಾಲಿಸುತ್ತಿದ್ಧಾರೆ ಎಂದು ತಿಳಿದ ಭಾಗ್ಯಾ ಅವರಿಂದ ತಪ್ಪಿಸಿಕೊಳ್ಳಲು ಬಸ್‌ ಇಳಿದು ಆಟೋ ಹತ್ತುತ್ತಾಳೆ.

ಹೋಟೆಲ್‌ಗೆ ವಾಪಸ್‌ ಬರುವಂತೆ ಭಾಗ್ಯಾಗೆ ಮನವಿ ಮಾಡಿದ ಸಿಬ್ಬಂದಿ

ಆಟೋ ಹತ್ತುವ ಭಾಗ್ಯಾ ಅಲ್ಲಿಂದ ಬೇಗ ಹೊರಡುವಂತೆ ಆಟೋ ಚಾಲಕನ ಬಳಿ ಮನವಿ ಮಾಡುತ್ತಾಳೆ. ಆದರೆ ಭಾಗ್ಯಾ ಗಾಬರಿ ಆಗಿರುವುದನ್ನು ನೋಡಿ ಆಟೋ ಚಾಲಕ ಏಕೆ ಇಷ್ಟು ಗಾಬರಿ ಆಗಿದ್ದೀರಿ ಎಂದು ಪ್ರಶ್ನಿಸುತ್ತಾನೆ. ಬೇಗ ಹೊರಡಿ ಇಲ್ಲವಾದರೆ ಅವರು ನನ್ನನ್ನು ಪೊಲೀಸರ ಕೈಗೆ ಹಿಡಿದುಕೊಡುತ್ತಾರೆ ಎಂದು ಮನವಿ ಮಾಡುತ್ತಾಳೆ. ಪೊಲೀಸ್‌ ಎಂಬ ಪದ ಕೇಳುತ್ತಿದ್ದಂತೆ ಗಾಬರಿ ಆಗುವ ಆಟೋ ಚಾಲಕ, ಹಾಗಾದರೆ ನೀವು ಕಳ್ಳಿನಾ, ಆಟೋದಿಂದ ಕೆಳಗೆ ಇಳಿಯಿರಿ ಎನ್ನುತ್ತಾನೆ. ನಾನು ಖಂಡಿತ ಕಳ್ಳಿ ಅಲ್ಲ, ಹೋಟೆಲ್‌ನಲ್ಲಿ ಕೆಲಸ ಬಿಟ್ಟೆ ಅದಕ್ಕೆ ಅವರು ಪೊಲೀಸರಿಗೆ ಹಿಡಿದುಕೊಡಲು ನೋಡುತ್ತಿದ್ದಾರೆ ಎನ್ನುತ್ತಾಳೆ. ಭಾಗ್ಯಾ ಏನು ಮಾಡಿದರೂ ಆಟೋ ಇಳಿಯದ ಕಾರಣ ಚಾಲಕ ಸರಿ ಬಿಡಿ, ಎಲ್ಲಿಗೆ ಹೇಳಿ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ. ಆಟೋ ಮುಂದಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಹೋಟೆಲ್‌ ಸಿಬ್ಬಂದಿ ಎಲ್ಲರೂ ಆಟೋ ಮುಂದೆ ನಿಂತಿರುವುದನ್ನು ಭಾಗ್ಯಾ ನೋಡಿ ಗಾಬರಿ ಆಗುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಆಟೋಗೆ ಅಡ್ಡ ಬಂದವರನ್ನು ನೋಡಿ ಚಾಲಕ ಬೈಯ್ಯತ್ತಾನೆ. ಆತನಿಗೆ ಸುಮ್ಮನಿರುವಂತೆ ಮನವಿ ಮಾಡುವ ಭಾಗ್ಯಾ, ಆಟೋದಿಂದ ಕೆಳಗೆ ಇಳಿದು ಹೋಟೆಲ್‌ ಸೂಪರ್‌ವೈಸರ್‌ಗೆ ಕೈ ಮುಗಿದು ಸರ್‌ ದಯವಿಟ್ಟು ಕ್ಷಮಿಸಿ, ನಾನು ತಿಳಿಯದೆ ತಪ್ಪು ಮಾಡಿಬಿಟ್ಟೆ, ಇನ್ನೆಂದೂ ಹೀಗೆ ಮಾಡುವುದಿಲ್ಲ, ದಯವಿಟ್ಟು ಪೊಲೀಸ್‌ ಕೇಸ್‌ ಎಂದೆಲ್ಲಾ ಹೋಗಬೇಡಿ, ನನಗೆ ಬಹಳ ಸಮಸ್ಯೆ ಆಗುತ್ತೆ ಎಂದು ಮನವಿ ಮಾಡುತ್ತಾಳೆ. ಆದರೆ ಸೂಪರ್‌ವೈಸರ್‌ ಕೂಡಾ ಕೈ ಮುಗಿಯುವುದನ್ನು ಕಂಡು ಭಾಗ್ಯಾ ಶಾಕ್‌ ಆಗುತ್ತಾಳೆ. ದಯವಿಟ್ಟು ನನ್ನ ಜೊತೆ ಬನ್ನಿ ಇಲ್ಲದಿದ್ದರೆ ನನ್ನ ಕೆಲಸ ಹೋಗುತ್ತೆ ಎಂದು ಮನವಿ ಮಾಡುತ್ತಾನೆ. ಹಿತಾ ಕೂಡಾ ಭಾಗ್ಯಾ ಬಳಿ ಬಂದು ನೀವು ಅಂದುಕೊಂಡಂತೆ ಏನೂ ಇಲ್ಲ , ನಮ್ಮ ಜೊತೆ ಹೋಟೆಲ್‌ಗೆ ಬನ್ನಿ ಎಂದು ಮನವಿ ಮಾಡುತ್ತಾಳೆ. ಭಾಗ್ಯಾ, ಸಿಬ್ಬಂದಿ ಜೊತೆ ಹೋಟೆಲ್‌ಗೆ ವಾಪಸ್‌ ಹೋಗುತ್ತಾಳೆ.

ಭಾಗ್ಯಾ ಕೈ ರುಚಿಗೆ ಚಪ್ಪಾಳೆ ಸುರಿಮಳೆ

ಭಾಗ್ಯಾಳನ್ನು ನೋಡುತ್ತಿದ್ದಂತೆ ಪತ್ರಕರ್ತ ಸಂತೋಷ ವ್ಯಕ್ತಪಡಿಸುತ್ತಾನೆ. ನೀವು ಮಾಡಿಕೊಟ್ಟ ಒತ್ತು ಶ್ಯಾವಿಗೆ ಹಾಗೂ ರಸಾಯನ ನನಗೆ ಬಹಳ ಇಷ್ಟ ಆಯ್ತು. ಇದುವರೆಗೂ ನಾನು ತಿಂದ ಒಳ್ಳೆ ತಿಂಡಿಗಳಲ್ಲಿ ಇದೂ ಒಂದು. ನಿಜವಾಗಿಯೂ ಅಮ್ಮನ ಕೈ ರುಚಿ ತಿಂದಂತೆ ಆಯ್ತು, ಒಂದು ವೇಳೆ ಅಮ್ಮ ಇದ್ದಿದ್ದರೆ ನಿಮ್ಮ ಕೈ ರುಚಿಯ ಬಗ್ಗೆ ಆಕೆಗೆ ಹೇಳುತ್ತಿದ್ದೆ, ಇಂದು ನೀವು ಮಾಡಿಕೊಟ್ಟ ತಿಂಡಿ ಸವಿದು ಬಹಳ ಖುಷಿಯಾಯ್ತು ಎಂದು ಪತ್ರಕರ್ತ ಹೇಳುತ್ತಿದ್ದಂತೆ ಭಾಗ್ಯಾಗೆ ಬಹಳ ಖುಷಿಯಾಗುತ್ತದೆ. ಹೋಟೆಲ್‌ ಸಿಬ್ಬಂದಿಯೂ ಖುಷಿಯಾಗುತ್ತಾರೆ. ಪತ್ರಕರ್ತ ಸೇರಿದಂತೆ ಎಲ್ಲರೂ ಭಾಗ್ಯಾಗೆ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಅಡುಗೆ ನಿಮಗೆ ಯಾರು ಹೇಳಿಕೊಟ್ಟದ್ದು ಎಂದು ಪತ್ರಕರ್ತ ಕೇಳುವ ಪ್ರಶ್ನೆಗೆ ಉತ್ತರಿಸುವ ಭಾಗ್ಯಾ, ಅಮ್ಮನಂತಿರುವ ಅತ್ತೆ ಎನ್ನುತ್ತಾಳೆ. ನೀವು ಒಳ್ಳೆ ಅಡುಗೆ ಮಾಡುವುದು ಮಾತ್ರವಲ್ಲ, ಚೆನ್ನಾಗಿ ಮಾತೂ ಆಡುತ್ತೀರ ಎಂದು ಆತ ಭಾಗ್ಯಾಳನ್ನು ಹೊಗಳುತ್ತಾನೆ.

ಮತ್ತೊಂದೆಡೆ, ತಾಂಡವ್‌ ಮನೆಗೆ ಬಂದು ಅಮ್ಮನನ್ನು ಮಾತನಾಡಿಸುತ್ತಾನೆ. ಆದರೆ ಕುಸುಮಾ ಆತನೊಂದಿಗೆ ಮಾತನಾಡಲು ಇಷ್ಟಪಡುವುದಿಲ್ಲ. ಸೆರಗು ಒಡ್ಡಿ ನಿನ್ನನ್ನು ಬೇಡಿಕೊಂಡರೂ ನೀನು ನನ್ನ ಮಾತು ನಡೆಸಿಕೊಡಲಿಲ್ಲ. ನಿನ್ನ ಕಾಳಜಿ ನನಗೆ ಬೇಕಿಲ್ಲ ಎನ್ನುತ್ತಾಳೆ. ಕುಸುಮಾ, ಹೋಟೆಲ್‌ಗೆ ಕೆಲಸಕ್ಕೆ ಹೋಗುವುದನ್ನು ತಾಂಡವ್‌ ಎಲ್ಲರ ಬಳಿ ಹೇಳುತ್ತಾನೆ. ಆತನ ಮಾತು ಕೇಳಿ ಮನೆಯವರು ಶಾಕ್‌ ಆಗುತ್ತಾರೆ. ಧರ್ಮರಾಜ್‌ ಬೇಸರಗೊಳ್ಳುತ್ತಾನೆ. ಹೌದು ನಾನು ಹೋಟೆಲ್‌ ಕೆಲಸಕ್ಕೆ ಹೋಗುತ್ತಿರುವುದು ನಿಜ. ಈ ಇಳಿ ವಯಸ್ಸಿನಲ್ಲಿ ನಮ್ಮನ್ನು ನೋಡಿಕೊಳ್ಳಬೇಕಾದ ಮಗ ನೋಡಿಕೊಳ್ಳುತ್ತಿಲ್ಲ, ಅದಕ್ಕೆ ಈ ನಿರ್ಧಾರ ಎನ್ನುತ್ತಾಳೆ. ಕುಸುಮಾ ಹೋಟೆಲ್‌ಗೆ ಹೋಗುತ್ತಿರುವುದು ಧರ್ಮರಾಜ್‌ಗೆ ನೋವಾದರೂ, ಮನೆಗಾಗಿ ಕುಸುಮಾ ಮಾಡುತ್ತಿರುವ ತ್ಯಾಗವನ್ನು ಹೊಗಳುತ್ತಾನೆ.

ಪತ್ರಕರ್ತನ ಮೂಲಕ ಭಾಗ್ಯಾಗೆ ಸ್ಟಾರ್‌ ಹೋಟೆಲ್‌ನಲ್ಲಿ ಕೆಲಸ ಖಾಯಂ ಆಗುವುದಾ? ಕುಸುಮಾ, ದರ್ಶಿನಿ ಹೋಟೆಲ್‌ನಲ್ಲಿ ಕೆಲಸ ಕಳೆದುಕೊಳ್ಳುತ್ತಾಳಾ ಅನ್ನೋದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಪಾತ್ರ ವರ್ಗ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ - ಸುಷ್ಮಿತಾ