ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾ ಕೈ ಸೇರಿದ ಶ್ರೇಷ್ಠಾ ತಾಂಡವ್‌ ಮದುವೆ ಲಗ್ನ ಪತ್ರಿಕೆ; ಎಲ್ಲಾ ವಿಚಾರ ಕುಸುಮಾಗೆ ತಿಳಿಯುವ ಸಮಯ ಬಂತಾ? ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾ ಕೈ ಸೇರಿದ ಶ್ರೇಷ್ಠಾ ತಾಂಡವ್‌ ಮದುವೆ ಲಗ್ನ ಪತ್ರಿಕೆ; ಎಲ್ಲಾ ವಿಚಾರ ಕುಸುಮಾಗೆ ತಿಳಿಯುವ ಸಮಯ ಬಂತಾ? ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 11ರ ಎಪಿಸೋಡ್‌. ಶ್ರೇಷ್ಠಾ ತಾಂಡವ್‌ ಮದುವೆ ಲಗ್ನ ಪತ್ರಿಕೆ ಭಾಗ್ಯಾ ಕೈ ಸೇರಿದೆ. ಅದನ್ನು ಪಡೆಯಲು ತಾಂಡವ್‌ ಹರಸಾಹಸ ಮಾಡುತ್ತಿದ್ದಾನೆ. ಭಾಗ್ಯಾಗೆ ಮನೆಗೆ ಡ್ರಾಪ್‌ ಕೊಡುವ ನೆಪದಲ್ಲಿ ಬ್ಯಾಗ್‌ನಿಂದ ಆಹ್ವಾನ ಪತ್ರಿಕೆ ಪಡೆಯಲು ಯತ್ನಿಸುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ಶ್ರೇಷ್ಠಾ ಹಾಗೂ ತಾಂಡವ್‌ ಮದುವೆ ಫಿಕ್ಸ್‌ ಆಗಿದೆ. ಮದುವೆ ಲಗ್ನಪತ್ರಿಕೆ ಕೂಡಾ ತಯಾರಾಗಿದೆ. ಲಗ್ನ ಪತ್ರಿಕೆ ಪೂಜೆ ಮಾಡಿಸಲು ಶ್ರೇಷ್ಠಾ, ತಾಂಡವ್‌ಗೆ ಕರೆ ಮಾಡಿ ದೇವಸ್ಥಾನಕ್ಕೆ ಬರಲು ಹೇಳುತ್ತಾಳೆ. ನಾವು ಬಂದಿರುವುದು ಲಗ್ನಪತ್ರಿಕೆ ಪೂಜೆ ಮಾಡಿಸಲು ಎಂದು ತಿಳಿದ ತಾಂಡವ್‌ ಒಂದು ಕ್ಷಣಕ್ಕೆ ಗಾಬರಿ ಆದರೂ ಆಕೆ ಜೊತೆ ಪೂಜೆ ಮಾಡಿಸಲು ಹೋಗುತ್ತಾನೆ. ಭಯದಿಂದಲೇ ಮದುವೆ ಮಾಡಿಕೊಳ್ಳಲೂ ಸಿದ್ಧನಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಆಹ್ವಾನ ಪತ್ರಿಕೆಯನ್ನು ಪೂಜೆಗೆ ನೀಡಿ ಶ್ರೇಷ್ಠಾ ಹಾಗೂ ತಾಂಡವ್‌ ಪೂಜೆ ಚೀಟಿ ಪಡೆಯಲು ಹೊರಗೆ ಹೋಗುತ್ತಾರೆ. ನಂತರ ಅಲ್ಲಿಗೆ ಭಾಗ್ಯಾ ಬಂದು ತನ್ನ ಆಫರ್‌ ಲೆಟರನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿಸುತ್ತಾಳೆ. ಪೂಜೆ ಮುಗಿದ ನಂತರ ದೇವಸ್ಥಾನದ ಅರ್ಚಕರು ಆಫರ್‌ ಲೆಟರ್‌ ಜೊತೆಗೆ ಮದುವೆ ಆಹ್ವಾನ ಪತ್ರಿಕೆಯನ್ನೂ ಜೊತೆ ಸೇರಿಸಿ ಭಾಗ್ಯಾ ಕೈಗೆ ಕೊಡುತ್ತಾರೆ. ಅಷ್ಟರಲ್ಲಿ ಕುಸುಮಾ ಭಾಗ್ಯಾಗೆ ಕರೆ ಮಾಡುತ್ತಾಳೆ. ಎಲ್ಲಿದ್ದೀಯ? ನಾನು ಮನೆಗೆ ಬರುವುದು ತಡವಾಗಬಹುದು. ಬೇಗ ಬೇಗ ಅಡುಗೆ ಮಾಡು ಎಂದು ಹೇಳುತ್ತಾಳೆ. ಅತ್ತೆ ಬರುವಷ್ಟರಲ್ಲಿ ಮನೆ ಸೇರಬೇಕೆಂಬ ಆತುರದಿಂದ ಭಾಗ್ಯಾ, ಅರ್ಚಕರು ಕೊಡುವ ಎರಡೂ ಕಾರ್ಡನ್ನು ಬ್ಯಾಗ್‌ ಒಳಗೆ ಹಾಕಿಕೊಂಡು ಅಲ್ಲಿಂದ ಅರಳಿ ಮರ ಪ್ರದಕ್ಷಿಣೆ ಹಾಕಲು ಹೋಗುತ್ತಾಳೆ.

ಭಾಗ್ಯಾ ಬ್ಯಾಗ್‌ನಲ್ಲಿ ತಾಂಡವ್‌-ಶ್ರೇಷ್ಠಾ ಮದುವೆ ಆಹ್ವಾನ ಪತ್ರಿಕೆ

ಇತ್ತ ಶ್ರೇಷ್ಠಾ ಹಾಗೂ ತಾಂಡವ್‌ ಮತ್ತೆ ವಾಪಸ್‌ ದೇವಸ್ಥಾನದ ಒಳಗೆ ಬಂದು ಆಹ್ವಾನ ಪತ್ರಿಕೆ ಕೇಳುತ್ತಾರೆ. ಆಗಲೇ ಯಾರೋ ನಿಮ್ಮ ಆಹ್ವಾನ ಪತ್ರಿಯನ್ನು ತೆಗೆದುಕೊಂಡು ಹೋದರು. ಅವರು ನಿಮ್ಮ ಸಂಬಂಧಿಕರಿರಬಹುದು ಎಂದು ನಾನು ಅವರ ಕೈಗೆ ಕೊಟ್ಟೆ, ಅವರು ಇಲ್ಲೇ ಅರಳಿ ಮರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಕಂದು ಬಣ್ಣದ ಸೀರೆ ಉಟ್ಟಿದ್ದಾರೆ ಎಂದು ಅರ್ಚಕರು ಹೇಳುತ್ತಾರೆ. ಯಾರಿರಬಹುದು ಎಂಬ ಗಾಬರಿಯಿಂದ ಶ್ರೇಷ್ಠಾ ಹಾಗೂ ತಾಂಡವ್‌ ಭಾಗ್ಯಾ ಇರುವ ಕಡೆ ಹೋಗುತ್ತಾರೆ. ಕಂದು ಬಣ್ಣದ ಸೀರೆ ಉಟ್ಟಿರುವ ಲೇಡಿ, ಹೇಳದೆ ಕೇಳದೆ ಮತ್ತೊಬ್ಬರ ವಸ್ತು ತೆಗೆದುಕೊಂಡು ಬಂದಿದ್ದೀರ ಎಂದು ಕೂಗುತ್ತಾಳೆ. ಅವರನ್ನು ನೋಡಿದ ಭಾಗ್ಯಾ ಶಾಕ್‌ ಆಗುತ್ತಾಳೆ. ಅತ್ತೆ ನಾನು ಕರೆದಾಗ ಒಂದು ದಿನವೂ ದೇವಸ್ಥಾನಕ್ಕೆ ಬರದ ನೀವು ಇಂದು ಏಕೆ ದೇವಸ್ಥಾನಕ್ಕೆ ಬಂದಿದ್ದೀರಿ ಎಂದು ಕೇಳುತ್ತಾಳೆ.

ಭಾಗ್ಯಾ ಪ್ರಶ್ನೆಗೆ ಉತ್ತರಿಸುವ ಶ್ರೇಷ್ಠಾ, ನಾನು ದೇವಸ್ಥಾನಕ್ಕೆ ಬರುತ್ತಿದ್ದೆ, ನನ್ನ ಕಾರು ಕೆಟ್ಟಿತ್ತು , ಅದೇ ಸಮಯಕ್ಕೆ ತಾಂಡವ್‌ ಸಿಕ್ಕಿದ್ರು ಜೊತೆಗೆ ಕರೆ ತಂದೆ ಎನ್ನುತ್ತಾಳೆ. ನೀವು ನಾನು ಉಟ್ಟಿದ್ದ ಸೀರೆ ಬಣ್ಣ ಹೇಳಿ ಏನೋ ಕೇಳಿದಂತೆ ಇತ್ತು. ಏನು ವಿಚಾರ ಎಂದು ಭಾಗ್ಯಾ ಕೇಳುತ್ತಾಳೆ. ಏನಿಲ್ಲ ಶ್ರೇಷ್ಠಾ ನಿನ್ನ ಕಾಲೆಳೆಯಲು ಹೀಗೆ ಮಾಡಿದ್ದಾಳೆ ಎಂದು ತಾಂಡವ್‌ ಉತ್ತರಿಸುತ್ತಾನೆ. ನಾನು ಕೇಳಿದ್ದು ಶ್ರೇಷ್ಠಾಳನ್ನು ನೀವೇಕೆ ಉತ್ತರಿಸುತ್ತಿದ್ದೀರ? ಅಷ್ಟಕ್ಕೂ ಶ್ರೇಷ್ಠಾ ಎಂದಿಗೂ ನನ್ನ ಜೊತೆ ತಮಾಷೆ ಮಾಡಿದವರಲ್ಲ ಎಂದು ಭಾಗ್ಯಾ ಹೇಳುತ್ತಾಳೆ. ಮಾತು ಮರೆಸುವ ಉದ್ದೇಶದಿಂದ ಶ್ರೇಷ್ಠಾ, ಹಣದ ವಿಚಾರ ತೆಗೆಯುತ್ತಾಳೆ. ಮದುವೆ ಹತ್ತಿರ ಬಂತು ಆದಷ್ಟು ಬೇಗ ನನಗೆ ಹಣ ಅರೇಂಜ್‌ ಮಾಡು ಭಾಗ್ಯಾ ಎನ್ನುತ್ತಾಳೆ. ಭಾಗ್ಯಾ ಕೂಡಾ ಸರಿ ಎನ್ನುತ್ತಾಳೆ.

ಭಾಗ್ಯಾಗೆ ಡ್ರಾಪ್‌ ಕೊಡುವ ನೆಪದಲ್ಲಿ ಬ್ಯಾಗ್‌ ಕಸಿದುಕೊಂಡ ತಾಂಡವ್‌

ಭಾಗ್ಯಾ ಬ್ಯಾಗ್‌ನಲ್ಲಿ ಸೇರಿದ ಆಹ್ವಾನ ಪತ್ರಿಕೆಯನ್ನು ಹೇಗಾದರೂ ಮಾಡಿ ತೆಗೆದುಕೊಳ್ಳಬೇಕೆಂದು ಆಕೆಯನ್ನು ಡ್ರಾಪ್‌ ಮಾಡುವುದಾಗಿ ತಾಂಡವ್ ಕರೆಯುತ್ತಾನೆ. ಬಲವಂತದಿಂದ ಆಕೆಯ ಬ್ಯಾಗ್‌ ಪಡೆಯುತ್ತಾನೆ. ಆದರೆ ತಾಂಡವ್‌ ಬ್ಯಾಗ್‌ನಲ್ಲಿ ಏನೋ ಹುಡುಕುತ್ತಿರುವುದನ್ನು ನೋಡುವ ಭಾಗ್ಯಾ ಏನು ಹುಡುಕುತ್ತಿದ್ದೀರಿ? ನೀವು ನನ್ನ ಮೇಲೆ ಈ ರೀತಿ ಕನಿಕರ ತೋರಿಸುತ್ತಿರುವ ಕಾರಣ ನನಗೆ ಅರ್ಥವಾಗುತ್ತಿಲ್ಲ, ನಾನು ನಡೆದೇ ಹೋಗುತ್ತೇನೆ ಎಂದು ಬ್ಯಾಗ್‌ ಪಡೆದು ಅಲ್ಲಿಂದ ಹೋಗುತ್ತಾಳೆ. ಆಟೋಗೆ ಹಣ ಖರ್ಚು ಮಾಡಬಾರದು ಎಂಬ ಕಾರಣಕ್ಕೆ ಕುಸುಮಾ ಹಾಗೂ ಭಾಗ್ಯಾ ಇಬ್ಬರೂ ನಡೆದುಕೊಂಡೇ ಮನೆ ಸೇರುತ್ತಾರೆ. ಆದರೆ ಕುಸುಮಾ ಬಂದರೂ ಭಾಗ್ಯಾ ಮಾತ್ರ ಇನ್ನೂ ಮನೆಗೆ ಬಂದಿರುವುದಿಲ್ಲ.

ಕುಸುಮಾ ಮನೆಗೆ ಬರುತ್ತಿದ್ದಂತೆ ಸುನಂದಾ ಮತ್ತೆ ಆಕೆ ಮೇಲೆ ಆಪಾದನೆ ಸುರಿಮಳೆ ಸುರಿಸುತ್ತಾಳೆ. ಅದಕ್ಕೆ ದನಿಗೂಡಿಸುವ ತಾಂಡವ್‌, ಮೊದಲೆಲ್ಲಾ ನಿಮ್ಮ ಸೊಸೆ ಮನೆಯಲ್ಲೇ ಬಿದ್ದಿರುತ್ತಿದ್ದಳು. ಈಗ ಹೇಳದೆ ಕೇಳದೆ ಮನೆ ಬಿಟ್ಟು ಹೋಗುತ್ತಾಳೆ. ಬೆಳಗ್ಗೆ ಹೋದವಳು ಇನ್ನೂ ಮನೆಗೆ ಬಂದಿಲ್ಲ ಎಂದರೆ ಏನು ಕಾರಣ ಎಂದು ಕೇಳುತ್ತಾನೆ. ಇಬ್ಬರ ಪ್ರಶ್ನೆಗಳಿಗೆ ಬೇಸರ ವ್ಯಕ್ತಪಡಿಸುವ ಕುಸುಮಾ ಭಾಗ್ಯಾ ಬಂದಾಗ ಅದು ನಿರ್ಧಾರವಾಗುತ್ತದೆ ಎನ್ನುತ್ತಾಳೆ.

ಭಾಗ್ಯಾ ಕೆಲಸ ಹುಡುಕಿ ಹೋಗಿರುವ ವಿಚಾರ ಕುಸುಮಾಗೆ ತಿಳಿಯುವುದಾ? ಮದುವೆ ಆಹ್ವಾನ ಪತ್ರಿಕೆಯನ್ನು ಕುಸುಮಾ ಹಾಗೂ ಮನೆಯವರು ನೋಡುತ್ತಾರಾ ಅನ್ನೋದು ಸೋಮವಾರದ ಎಪಿಸೋಡ್‌ನಲ್ಲಿ ತಿಳಿಯಲಿದೆ.

IPL_Entry_Point