ಮನೆಯಲ್ಲಿ ಮುಸುರೆ ಉಜ್ಜಿಕೊಂಡು ಇದ್ದಿದ್ರೆ ಮರ್ಯಾದೆ ಹೋಗ್ತಿರ್ಲಿಲ್ಲ,ತಾಂಡವ್ ಚುಚ್ಚುಮಾತಿಗೆ ಕಣ್ಣೀರಿಟ್ಟ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 12ರ ಎಪಿಸೋಡ್‌ನಲ್ಲಿ ಶ್ರೇಷ್ಠಾ, ಭಾಗ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಡಿವೋರ್ಸ್ ವಿಚಾರವನ್ನು ಎಲ್ಲರಿಗೂ ತಿಳಿಯುವಂತೆ ಮಾಡುತ್ತಾಳೆ. ಪ್ರತಿಯೊಂದಕ್ಕೂ ಭಾಗ್ಯಾ ಮೇಲೆ ತಪ್ಪು ಹೊರಿಸುವ ತಾಂಡವ್ ಈಗಲೂ ಭಾಗ್ಯಾಳನ್ನು ಹಂಗಿಸುತ್ತಾನೆ.
Bhagyalakshmi Serial: ಪೂಜಾ, ಹಿತಾ, ಸುಂದ್ರಿ ಮಾಡಿದ ನಾಟಕ ಶ್ರೇಷ್ಠಾಗೆ ಗೊತ್ತಾಗಿದೆ. ಇದರ ಜೊತೆಗೆ ಕುಸುಮಾ, ತನ್ನ ತಂದೆಗೆ ಕರೆ ಮಾಡಿ ಮದುವೆ ವಿಚಾರಕ್ಕೆ ಛೀಮಾರಿ ಹಾಕಿದ್ದು ಶ್ರೇಷ್ಠಾಗೆ ಸಿಟ್ಟು ತರಿಸಿದೆ. ಹೇಗಾದರೂ ಮಾಡಿ ಭಾಗ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಶ್ರೇಷ್ಠಾ ನಿರ್ಧರಿಸುತ್ತಾಳೆ.
ಭಾಗ್ಯಾ ವಿರುದ್ದ ಸೇಡು ತೀರಿಸಿಕೊಂಡ ಶ್ರೇಷ್ಠಾ
ಗೆಳತಿಗೆ ಕರೆ ಮಾಡಿ ದುಡ್ಡು ಕೊಟ್ಟು ಭಾಗ್ಯಾಗೆ ಅವಮಾನವಾಗುವಂತೆ ಮಾಡುತ್ತಾಳೆ. ಶ್ರೇಷ್ಠಾಳಿಂದ ದುಡ್ಡು ಪಡೆದ ಕಂಟೆಂಟ್ ಕ್ರಿಯೇಟರ್, ಭಾಗ್ಯಾ ವೈಯಕ್ತಿಕ ಜೀವನದ ಬಗ್ಗೆ ವಿಡಿಯೋ ಮಾಡಿ ಹರಿಯಬಿಡುತ್ತಾಳೆ. ಭಾಗ್ಯಾಗೆ ದೊಡ್ಡ ಕೆಲಸ ಸಿಗುತ್ತಿದ್ದಂತೆ ಬಹಳ ಬದಲಾಗಿದ್ದಾಳೆ. ಶೆಫ್ ಆಗುತ್ತಿದ್ದಂತೆ ಹಣದ ಮದ ತಲೆಗೆ ಏರಿದೆ. ಅದೇ ಕಾರಣಕ್ಕೆ ಗಂಡ ತಾಂಡವ್‌ಗೆ ಭಾಗ್ಯಾ ಡಿವೋರ್ಸ್ ನೋಟಿಸ್ ಕಳಿಸಿದ್ದಾಳೆ ಎಂದು ಯೂಟ್ಯೂಬರ್, ವಿಡಿಯೋವೊಂದನ್ನು ಮಾಡಿ ಅದನ್ನು ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡುತ್ತಾಳೆ. ಈ ವಿಡಿಯೋ ಬಹಳ ವೈರಲ್ ಆಗುತ್ತದೆ.
ತಾಂಡವ್ ಆಫೀಸಿನಲ್ಲಿಯೂ ಇದೇ ವಿಚಾರ, ಭಾಗ್ಯಾ ಕೆಲಸ ಮಾಡುವ ಹೋಟೆಲ್‌ನಲ್ಲೂ ಇದೇ ವಿಚಾರ. ವಿಡಿಯೋ ನೋಡುತ್ತಿದ್ದಂತೆ ತಾಂಡವ್ ಭಾಗ್ಯಾ ಮೇಲೆ ಸಿಟ್ಟಾಗುತ್ತಾನೆ. ಆ ಸಿಟ್ಟನ್ನು ಸಹೋದ್ಯೋಗಿಗಳ ಮೇಲೂ ತೋರುತ್ತಾನೆ. ತಾಂಡವ್ ಬಾಸ್, ಆತನನ್ನು ಚೇಂಬರ್‌ಗೆ ಕರೆದು ಬುದ್ಧಿ ಹೇಳುತ್ತಾರೆ. ಬಾಸ್, ಭಾಗ್ಯಾಳನ್ನು ಹೊಗಳುವುದನ್ನು ಸಹಿಸದ ತಾಂಡವ್ ಅಲ್ಲಿಂದ ಎದ್ದು ಹೋಗುತ್ತಾನೆ. ಇತ್ತ ಹೋಟೆಲ್‌ನಲ್ಲಿ ಕೂಡಾ ಮ್ಯಾನೇಜರ್ ಭಾಗ್ಯಾಗೆ ಸಲಹೆ ನೀಡುತ್ತಾರೆ. ನೀವು ಈಗ ಸೆಲಬ್ರಿಟಿ, ನೀವು ಏನು ಮಾಡಿದರೂ ಸುದ್ದಿಯಾಗುತ್ತದೆ. ಆದರೆ ನಿಮ್ಮ ವೈಯಕ್ತಿಕ ಜೀವನದಿಂದ ನಮ್ಮ ಹೋಟೆಲ್‌ಗೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಿ ಎನ್ನುತ್ತಾರೆ.
ಚುಚ್ಚುಮಾತುಗಳಿಂದ ಭಾಗ್ಯಾ ಮನಸ್ಸು ನೋಯಿಸಿದ ತಾಂಡವ್
ಕುಸುಮಾ, ಧರ್ಮರಾಜ್ ಕೂಡಾ ವಿಡಿಯೋ ನೋಡಿ ಗಾಬರಿ ಆಗುತ್ತಾರೆ. ಈ ವಿಚಾರ ಯಾರಿಗೂ ಗೊತ್ತಾಗಬಾರದು ಎಂದುಕೊಂಡಿದ್ದೆ, ಆದರೆ ಈಗ ಊರಿನವರೆಲ್ಲಾ ನಮ್ಮ ಮನೆಯ ಬಗ್ಗೆ ಮಾತನಾಡುವಂತೆ ಆಗಿದೆ ಎಂದು ಕುಸುಮಾ ಬೇಸರಗೊಳ್ಳುತ್ತಾಳೆ. ಮನೆಗೆ ಬರುವ ಭಾಗ್ಯಾ ಅತ್ತೆ, ಮಾವನನ್ನು ಸಮಾಧಾನ ಮಾಡುತ್ತಾಳೆ. ಅಷ್ಟರಲ್ಲಿ ತಾಂಡವ್ ಮನೆಗೆ ಬರುತ್ತಾನೆ. ಭಾಗ್ಯಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಈಗ ನಿನಗೆ ಖುಷಿ ಆಗಿರಬೇಕು ತಾನೇ, ನಿನ್ನಿಂದ ನನ್ನ ಮಾನ ಮರ್ಯಾದೆ ಹರಾಜಾಯಿತು. ಕೆಲಸಕ್ಕೆ ಹೋಗದೆ ಮನೆಯಲ್ಲಿ ಮುಸುರೆ ಉಜ್ಜಿಕೊಂಡು ಇದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ. ಏನೋ ಸಾಧನೆ ಮಾಡುತ್ತೇನೆಂದು ಕೆಲಸಕ್ಕೆ ಹೋಗಿದ್ದರಿಂದಲೇ ಇಷ್ಟೆಲ್ಲಾ ಆಗಿದ್ದು ಎಂದು ಅರಚಾಡುತ್ತಾನೆ.
ಗಂಡನ ಚುಚ್ಚುನುಡಿ ಭಾಗ್ಯಾಗೆ ಇನ್ನಷ್ಟು ನೋವುಂಟು ಮಾಡುತ್ತದೆ. ಭಾಗ್ಯಾ ಹೀಗೇ ಅಳುತ್ತಾ ಕೂರುವಳೋ, ಅಥವಾ ವಿಡಿಯೋ ಮಾಡಿದ್ದು ಯಾರು ಎಂದು ಕಂಡು ಹಿಡಿಯುವ ಪ್ರಯತ್ನ ಮಾಡುವಳೋ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ