Bhagyalakshmi Serial: ಉಪವಾಸವಿದ್ದು ಅಮ್ಮನನ್ನು ಗೆಲ್ಲಿಸಲು ಹೊರಟ ಮಕ್ಕಳು, ಇಂಗು ತಿಂದ ಮಂಗನಂತಾದ ತಾಂಡವ್ ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್ 13ರ ಎಪಿಸೋಡ್. ತನಗೆ ಅಡುಗೆ ಮಾಡಿಸಲು ಶೆಫ್ ರೂಪಾಳನ್ನು ಕರೆ ತರುವ ತಾಂಡವ್, ರುಚಿಯಾದ ಅಡುಗೆ ಮಾಡಿಸುತ್ತಾನೆ. ಮಕ್ಕಳಿಗೆ ಊಟದ ಆಸೆ ತೋರಿಸಿ ತನ್ನತ್ತ ಸೆಳೆಯುವ ತಾಂಡವ್ ಪ್ರಯತ್ನ ವಿಫಲವಾಗುತ್ತದೆ.

ಭಾಗ್ಯಲಕ್ಷ್ಮೀ ಧಾರಾವಾಹಿ: ಧರ್ಮರಾಜ್ ಸೂರ್ಯವಂಶಿ ಮನೆ ಎರಡು ಭಾಗವಾಗಿದೆ. ಒಂದು ಕಡೆ ತಾಂಡವ್ ಒಬ್ಬಂಟಿಯಾಗಿದ್ದರೆ ಮತ್ತೊಂದೆಡೆ ಕುಸುಮಾ, ಧರ್ಮರಾಜ್ ಇಬ್ಬರೂ ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಇದ್ದಾರೆ. ಜೊತೆಗೆ ಸುನಂದಾ ಹಾಗೂ ಪೂಜಾ ಕೂಡಾ ಇದ್ದಾರೆ. ನಿನ್ನ ಜೊತೆ ಇರುವ ಅಪ್ಪ ಅಪ್ಪ ಮಕ್ಕಳನ್ನು ನನ್ನ ಕಡೆ ಕರೆದುಕೊಂಡು ನಿನ್ನನ್ನು ಒಂಟಿಯಾಗಿ ಮಾಡುತ್ತೇನೆ ಎಂದು ತಾಂಡವ್ ಚಾಲೆಂಜ್ ಮಾಡಿದರೆ, ನಮ್ಮ ಮನೆ ಮೊದಲಿನಂತೆ ಆಗುವಂತೆ ಮಾಡುತ್ತೇನೆಂದು ಭಾಗ್ಯಾ ಸವಾಲು ಹಾಕುತ್ತಾಳೆ.
ಹಬ್ಬದ ದಿನ ಅಡುಗೆ ಮಾಡಲು ಬಾರದ ತಾಂಡವ್, ರುಚಿ ರುಚಿಯಾದ ಅಡುಗೆ ಮಾಡುವ ಮೂಲಕ ಮಕ್ಕಳನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಶೆಫ್ ರೂಪಾಳನ್ನು ಕರೆ ತರುತ್ತಾನೆ. ಜೊತೆಗೆ ಆಕೆಗೆ ಇಲ್ಲ ಸಲ್ಲದ ಸುಳ್ಳು ಹೇಳಿ ಭಾಗ್ಯಾಳಿಂದ ಮಕ್ಕಳು, ತಂದೆ ತಾಯಿಯನ್ನು ನನ್ನ ಕಡೆಗೆ ಕರೆತನ್ನಿ ಎಂದು ಮನವಿ ಮಾಡುತ್ತಾನೆ. ಕುಸುಮಾ ಮನೆಗೆ ಬರುವ ರೂಪಾ ಆರಂಭದಲ್ಲಿ ತಾಂಡವ್ ಒಳ್ಳೆ ಮನುಷ್ಯ , ಭಾಗ್ಯಾ ಕುತಂತ್ರದಿಂದ ಮನೆಯವರನ್ನು ಬೇರೆ ಮಾಡಿದ್ಧಾಳೆ ಎಂದುಕೊಳ್ಳುತ್ತಾಳೆ. ಆದರೆ ರೂಪಾ ತಾಂಡವ್ ವರ್ತನೆಯನ್ನು ಗಮನಿಸುತ್ತಲೇ ಇದ್ದಾಳೆ. ಆದರೂ ಅದನ್ನು ತೋರ್ಪಡದೆ ತಾಂಡವ್ ಪರ ನಿಲ್ಲುತ್ತಾಳೆ. ಈಗ ನಾನು ಅಡುಗೆ ಮಾಡಬೇಕು, ಕೂಡಲೇ ಎಲ್ಲರೂ ಅಡುಗೆ ಮನೆ ಖಾಲಿ ಮಾಡುವಂತೆ ತಾಕೀತು ಮಾಡುತ್ತಾಳೆ.
ಒಲೆಯಲ್ಲಿ ಅಡುಗೆ ಮಾಡಲು ಮುಂದಾದ ಭಾಗ್ಯಾ
ಭಾಗ್ಯಾ ಮಾಡಿದ ಅಡುಗೆಯನ್ನು ಗುಂಡ ಚೆಲ್ಲಿದ್ದರಿಂದ ಎಲ್ಲರೂ ಉಪವಾಸ ಇದ್ದಾರೆ. ಮತ್ತೆ ಅಡುಗೆ ಮಾಡಬೇಕು ಎನ್ನುವಷ್ಟರಲ್ಲಿ ತಾಂಡವ್, ರೂಪಾಳನ್ನು ಕರೆ ತಂದು ಅಡುಗೆ ಮಾಡಲು ಹೇಳುತ್ತಾನೆ. ಭಾಗ್ಯಾ ವಿಧಿ ಇಲ್ಲದೆ ಅಡುಗೆ ಮನೆಯನ್ನು ರೂಪಾಗೆ ಬಿಟ್ಟುಕೊಡಬೇಕಾಗುತ್ತದೆ. ನಾನು ಯಾರನ್ನೂ ಉಪವಾಸ ಇರಲು ಬಿಡುವುದಿಲ್ಲ. ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಬೇಕೇ ಬೇಕು ಎಂಬ ನಿಯಮವಿಲ್ಲ. ನಾನು ಹೇಗಾದರೂ ಅಡುಗೆ ಮಾಡೇ ಮಾಡುತ್ತೇನೆ ಎಂದು ಭಾಗ್ಯಾ ಅಡುಗೆ ಮಾಡಲು ಹೋಗುತ್ತಾಳೆ.
ಇತ್ತ ಎಲ್ಲರೂ ಹೊಟ್ಟೆ ಹಸಿವು ತಾಳಲಾರದೆ ಬೇಸರ ವ್ಯಕ್ತಪಡಿಸುತ್ತಾರೆ. ಇದೇ ಸಮಯವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವ ತಾಂಡವ್, ನನ್ನ ಮನೆಯಲ್ಲಿ ರುಚಿ ರುಚಿಯಾದ ಅಡುಗೆ ತಯಾರಾಗುತ್ತಿದೆ. ತನ್ಮಯ್, ನಿನಗೆ ಇಷ್ಟವಾದ ಪನೀರ್ ಮಸಾಲಾ, ತನ್ವಿ ನಿನಗೆ ಇಷ್ಟವಾದ ಪಾಯಸ ರೆಡಿ ಆಗುತ್ತಿದೆ. ನೀವು ಗೆರೆ ದಾಟಿ ನನ್ನತ್ತ ಬಂದರೆ ನಿಮಗೆ ಎಲ್ಲವನ್ನೂ ಕೊಡುತ್ತೇನೆ ಎನ್ನುತ್ತಾನೆ. ತನ್ವಿ ಹಾಗೂ ತನ್ಮಯ್ ಇಬ್ಬರೂ ಗೆರೆ ಬಳಿ ಬಂದು ದಾಟುವಂತೆ ನಟಿಸಿ ಮತ್ತೆ ಕಾಲು ಹಿಂತೆಗೆದುಕೊಳ್ಳುತ್ತಾರೆ.
ಊಟದ ಆಸೆಗೆ ಸೋಲದ ಮಕ್ಕಳು
ನಾವು ಖಂಡಿತ ನಿಮ್ಮ ಕಡೆ ಬರುವುದಿಲ್ಲ. ನೀವೇ ಈ ಕಡೆ ಬರುವಂತೆ ಮಾಡುತ್ತೇವೆ. ನಿಮ್ಮ ಊಟ ನೀವೇ ತಿನ್ನಿ. ಈ ರೀತಿ ಆಸೆ ತೋರಿಸಿ ನಮ್ಮನ್ನು ನಿಮ್ಮ ಕಡೆ ಕರೆ ತರಲು ಸಾಧ್ಯವಿಲ್ಲ. ಅಮ್ಮ ಗೆಲ್ಲುತ್ತಾಳೆ ಎನ್ನುವುದಾದರೆ ನಾನು ಪನೀರ್ ತಿನ್ನುವುದನ್ನೇ ಬಿಡುತ್ತೇನೆ ಎಂದು ಗುಂಡ ಹೇಳುತ್ತಾನೆ. ಮಕ್ಕಳ ಮಾತು ಕೇಳಿ ತಾಂಡವ್ ಶಾಕ್ ಆಗುತ್ತಾನೆ. ಕುಸುಮಾ ಸುನಂದಾ ಕೂಡಾ ಮಕ್ಕಳ ಮಾತು ಕೇಳಿ ಖುಷಿ ಆಗುತ್ತಾರೆ. ರುಚಿ ರುಚಿಯಾದ ಊಟದ ಆಸೆ ತೋರಿಸಿ ಮಕ್ಕಳನ್ನು ತನ್ನತ್ತ ಸೆಳೆಯುವ ತಾಂಡವ್ ಪ್ರಯತ್ನ ವಿಫಲವಾಗುತ್ತದೆ.
ಮಕ್ಕಳು, ಅಪ್ಪ ಅಮ್ಮನನ್ನು ತನ್ನ ಕಡೆ ಸೆಳೆಯಲು ತಾಂಡವ್ ಬೇರೆ ಏನು ಪ್ಲ್ಯಾನ್ ಮಾಡುತ್ತಾನೆ? ಭಾಗ್ಯಾ ಅಡುಗೆ ಮಾಡಿ ಮಕ್ಕಳ ಹೊಟ್ಟೆ ತುಂಬಿಸುತ್ತಾಳಾ ಕಾದು ನೋಡಬೇಕು.
