ಮೊದಲ ತಿಂಗಳ ಅಡ್ವಾನ್ಸ್ ಸಂಬಳದ ಚೆಕ್ ಕಣ್ಣಿಗೆ ಒತ್ತಿಕೊಂಡು ಡ್ರಾ ಮಾಡಲು ಹೊರಟ ಭಾಗ್ಯಾ ಕೈ ಸೇರುತ್ತಾ 1 ಲಕ್ಷ ರೂ?;ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಪವಾಡ ಎಂಬಂತೆ ಭಾಗ್ಯಾಗೆ 5 ಸ್ಟಾರ್ ಹೋಟೆಲ್‌ನಲ್ಲಿ ಶೆಫ್ ಕೆಲಸ ಸಿಕ್ಕಿದೆ. ಮೊದಲ ತಿಂಗಳ ಅಡ್ವಾನ್ಸ್ ಸಂಬಳವಾಗಿ 1 ಲಕ್ಷ ರೂ ಚೆಕ್ ಕೂಡಾ ದೊರೆತಿದೆ. ಮ್ಯಾನೇಜರ್‌ನಿಂದ ಚೆಕ್ ಪಡೆದ ಭಾಗ್ಯಾ ಹಣ ಡ್ರಾ ಮಾಡಲು ಬ್ಯಾಂಕ್‌ಗೆ ಬಂದಿದ್ದಾಳೆ. ಇತ್ತ ಪೂಜಾ ತಾಯಿಗೆ ಹಣ ಕೊಡಲು ಮಾರು ವೇಷದಲ್ಲಿ ಪಾರ್ಕಿಗೆ ಹೊರಟಿದ್ದಾಳೆ.

Bhagyalakshmi Serial: ಅಂತೂ ದೊಡ್ಡ ಪವಾಡವೇ ನಡೆದಿದೆ. ಯಾರದ್ದೋ ಹೆಸರಿನಲ್ಲಿ ತನಗೇ ಗೊತ್ತಿಲ್ಲದೆ ಕೆಲಸಕ್ಕೆ ಸೇರಿದ್ದ ಭಾಗ್ಯಾಗೆ ಅದೇ ಹೋಟೆಲ್‌ನಲ್ಲಿ ಶೆಫ್ ಕೆಲಸ ಸಿಕ್ಕಿದೆ. ಹೆಚ್ಚಿಗೆ ಓದಿಲ್ಲದೆ, ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡದೆ ಭಾಗ್ಯಾ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ ಪಡೆದಿದ್ದಾಳೆ.
ತನಗೆ ಕೆಲಸ ಸಿಕ್ಕ ಖುಷಿಯಲ್ಲಿ ತಾಂಡವ್ ನನ್ನನ್ನು ಹೀಯಾಳಿಸಿದ್ದು, ಮನೆ ಇಎಂಐ ಕಟ್ಟುವಂತೆ ಹೇಳಿದ್ದು, ಶ್ರೇಷ್ಠಾ ಹಣ ಕೇಳಿದ್ದು ಎಲ್ಲವನ್ನು ಭಾಗ್ಯಾ ನೆನಪಿಸಿಕೊಳ್ಳುತ್ತಾಳೆ. ಹೋಟೆಲ್‌ನಲ್ಲಿ ತನಗೆ ದೊರೆತ ಚೆಕ್ ಕೈಯಲ್ಲಿ ಹಿಡಿದು ಬ್ಯಾಂಕ್ ಮುಂದೆ ಬಂದು ನಿಲ್ಲುತ್ತಾಳೆ. ಇನ್ನು ನನ್ನ ಮಕ್ಕಳಿಗೆ ನಾನು ಕೇಳಿದ್ದು ಕೊಡಿಸಬಹುದು, ಶ್ರೇಷ್ಠಾ ಹಣ ವಾಪಸ್ ಕೊಡಬಹುದು, ಮನೆ ಇಎಂಐ ಕಟ್ಟಬಹುದು. ಒಂದೇ ದಿನದಲ್ಲಿ ಎಷ್ಟೆಲ್ಲಾ ಬದಲಾವಣೆ ಆಗಿ ಹೋಯ್ತು, ನಿಜಕ್ಕೂ ಇದನ್ನೆಲ್ಲಾ ನಂಬಲಾಗುತ್ತಿಲ್ಲ. ಎಂದು ಹೋಟೆಲ್‌ನಲ್ಲಿ ನಡೆದ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳುತ್ತಾಳೆ. ಭಾಗ್ಯಾ ಮಾಡಿಕೊಟ್ಟ ಅಡುಗೆ ತಿಂದು ಪತ್ರಕರ್ತ ಹೊಗಳಿ ಹೋದ ನಂತರ ಹೋಟೆಲ್ ಸಿಬ್ಬಂದಿಗೆ ಭಾಗ್ಯಾ ಮೇಲೆ ಬಹಳ ಗೌರವ ಬರುತ್ತದೆ.
1 ಲಕ್ಷ ರೂ ಅಡ್ವಾನ್ಸ್ ಸಂಬಳದ ಚೆಕ್ ಪಡೆದ ಭಾಗ್ಯಾ
ಭಾಗ್ಯಾಗೆ ಹೋಟೆಲ್ ಮ್ಯಾನೇಜರ್ ಚೆಕ್ ಬರೆದುಕೊಡುತ್ತಾರೆ. ಅದರಲ್ಲಿ 1 ಲಕ್ಷ ಹಣ ಬರೆದಿದ್ದನ್ನು ನೋಡಿ ಭಾಗ್ಯಾ ಶಾಕ್ ಆಗುತ್ತಾಳೆ. ಸರ್ 1 ಲಕ್ಷ ಇದೆ ಎನ್ನುತ್ತಾಳೆ. ಹೌದು ಭಾಗ್ಯಾ ನಮ್ಮ ಹೋಟೆಲ್‌ನಲ್ಲಿ ನಾವು ಶೆಫ್‌ಗಳಿಗೆ ಅಷ್ಟು ಹಣ ನೀಡುತ್ತೇವೆ. ಕಡಿಮೆ ಆಯ್ತಾ? ಎಂದು ಕೇಳುತ್ತಾರೆ. ನನ್ನ ಜೀವನದಲ್ಲಿ ಒಂದು ಪೈಸೆ ದುಡಿಯುತ್ತೇನೋ ಇಲ್ಲವೋ ಎಂದುಕೊಂಡಿದ್ದ ನನಗೆ ಇದು ನಿಜವಾಗಲೂ ದೊಡ್ಡ ಮೊತ್ತ. ನಿಜಕ್ಕೂ ನಿಮ್ಮಿಂದ ಬಹಳ ಸಹಾಯ ಆಯ್ತು ಎಂದು ಭಾಗ್ಯಾ ಮ್ಯಾನೇಜರ್‌ಗೆ ಕೈ ಮುಗಿಯುತ್ತಾಳೆ. ಹಾಗಿದ್ದರೆ ನಾಳೆಯಿಂದ ನೀವು ಹೋಟೆಲ್‌ಗೆ ಕೆಲಸಕ್ಕೆ ಬನ್ನಿ ಎಂದು ಮ್ಯಾನೇಜರ್ ಭಾಗ್ಯಾಗೆ ಹೇಳುತ್ತಾರೆ. ಹೋಟೆಲ್‌ನಲ್ಲಿ ನಡೆದಿದ್ದನ್ನು ನೆನಪಿಸಿಕೊಂಡು ಖುಷಿಪಡುವ ಭಾಗ್ಯಾ ಹಣ ಡ್ರಾ ಮಾಡಲು ಬ್ಯಾಂಕಿಗೆ ಹೋಗುತ್ತಾಳೆ. ಅಲ್ಲಿ ಬ್ಯಾಂಕಿನವರಿಗೆ ಚೆಕ್ ನೀಡಿ ಹಣ ಪಡೆಯಲು ಕಾಯುತ್ತಾಳೆ.
ಇತ್ತ ಪೂಜಾ, ಶ್ರೇಷ್ಠಾ ಒಡವೆಗಳನ್ನು ಅಡ ಇಟ್ಟು ಪಡೆದ 2 ಲಕ್ಷ ರೂ. ಹಣವನ್ನು ತಾಯಿ ಸುನಂದಾಗೆ ಕೊಡಲು ಮಾರು ವೇಷದಲ್ಲಿ ತಯಾರಾಗುತ್ತಾಳೆ. ಪೂಜಾ ಅವತಾರ ಕಂಡು ಶ್ರೇಷ್ಠಾಗೆ ಅನುಮಾನ ಉಂಟಾಗುತ್ತದೆ. ಇವರಿಬ್ಬರೂ ಸೇರಿ ಏನೋ ಪ್ಲ್ಯಾನ್ ಮಾಡುತ್ತಿದ್ದಾರೆ. ಅದೇನೆಂದು ತಿಳಿದುಕೊಳ್ಳಲೇಬೇಕು ಎಂದು ಶ್ರೇಷ್ಠಾ ನಿರ್ಧರಿಸುತ್ತಾಳೆ. ಸುನಂದಾಗೆ ಯಾರೋ ಹಣ ಕೊಡುವಂತೆ ಕರೆ ಮಾಡಿರುವ ವಿಚಾರ ತಿಳಿದ ಕುಸುಮಾ, ಬೇಕಂತಲೇ ಯಾರೋ ಹೀಗೆ ಮಾಡುತ್ತಿದ್ಧಾರೆ. ನಿಮ್ಮ ಜೊತೆ ನಾನೂ ಬರುತ್ತೇನೆ ಎನ್ನುತ್ತಾಳೆ. ಪೂಜಾ, ಸುಂದರಿ ಹಾಗೂ ಸುನಂದಾ, ಕುಸುಮಾ ಪಾರ್ಕಿಗೆ ಬರುತ್ತಾರೆ.
ಮಾರು ವೇಷದಲ್ಲಿ ಪಾರ್ಕಿಗೆ ಬಂದ ಪೂಜಾ
ಹಣ ಕೊಡುವವರು ಹೀಗೆ ಪಾರ್ಕಿಗೆ ಬರಲು ಹೇಳುತ್ತಾರಾ? ಅಷ್ಟು ಹಣ ಕೊಡುತ್ತಿರುವವರಿಗೆ ಒಂದು ಆಫೀಸ್ ಕೂಡಾ ಗತಿ ಇಲ್ಲವೇ? ಅದಕ್ಕೆ ಹೇಳಿದ್ದು ಇದೆಲ್ಲಾ ಮೋಸ ಅಂತ, ನೀವು ಅವರನ್ನು ನಂಬಿ ಇಲ್ಲಿಗೆ ಬಂದಿದ್ದೀರ ಎಂದು ಕುಸುಮಾ ಹೇಳಿದಾಗ ಸುನಂದಾಗೆ ಆಕೆಯ ಮಾತು ನಿಜ ಎನಿಸುತ್ತದೆ. ಪಾರ್ಕಿನಲ್ಲಿ ಸುನಂದಾ ಎಲ್ಲೂ ಕಾಣದಿದ್ದಾಗ ಸುಂದರಿ ಮತ್ತೆ ಆಕೆಗೆ ಕರೆ ಮಾಡುತ್ತಾಳೆ. ಆದರೆ ಕುಸುಮಾ ಕಾಲ್ ರಿಸೀವ್ ಮಾಡಿ ಬೈಯ್ಯಲು ಆರಂಭಿಸುತ್ತಾಳೆ. ಈ ವಿಚಾರವನ್ನು ಪೂಜಾಗೆ ಹೇಳಬೇಕು ಎನ್ನುವಷ್ಟರಲ್ಲಿ ಆಕೆ ಬಹಳ ಮುಂದೆ ಹೋಗಿರುತ್ತಾಳೆ?
ತನಗೆ ಹಣ ಕೊಡಲು ಬಂದಿರುವುದು ಪೂಜಾ ಎಂದು ಕುಸುಮಾ, ಸುನಂದಾಗೆ ತಿಳಿದುಹೋಗುವುದಾ? ತನ್ನ ಒಡವೆ ಕಳ್ಳತನವಾಗಿರುವುದು ಶ್ರೇಷ್ಠಾಗೆ ಗೊತ್ತಾಗುತ್ತಾ? ಸಂಬಳದ ಹಣ ಭಾಗ್ಯಾ ಕೈ ಸೇರಲಿದ್ಯಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ವಿಭಾಗ