ಆಹ್ವಾನ ಪತ್ರಿಕೆ ಇರುವ ಬ್ಯಾಗ್‌ ಕದಿಯಲು ಭಾಗ್ಯಾ ರೂಮ್‌ಗೆ ಅತ್ತೆ ಸುನಂದಾಳನ್ನು ಕಳಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಆಹ್ವಾನ ಪತ್ರಿಕೆ ಇರುವ ಬ್ಯಾಗ್‌ ಕದಿಯಲು ಭಾಗ್ಯಾ ರೂಮ್‌ಗೆ ಅತ್ತೆ ಸುನಂದಾಳನ್ನು ಕಳಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಆಹ್ವಾನ ಪತ್ರಿಕೆ ಇರುವ ಬ್ಯಾಗ್‌ ಕದಿಯಲು ಭಾಗ್ಯಾ ರೂಮ್‌ಗೆ ಅತ್ತೆ ಸುನಂದಾಳನ್ನು ಕಳಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 13ರ ಎಪಿಸೋಡ್‌ನಲ್ಲಿ ಆಹ್ವಾನ ಪತ್ರಿಕೆ ಇರುವ ಬ್ಯಾಗ್‌ ಕದಿಯಲು ಭಾಗ್ಯಾ ರೂಮ್‌ಗೆ ಅತ್ತೆ ಸುನಂದಾಳನ್ನು ಕಳಿಸುತ್ತಾನೆ. ಎಂದೂ ಇಲ್ಲದ ಅಮ್ಮ ಇಂದು ತನ್ನ ರೂಮ್‌ಗೆ ಬಂದಿರುವುದನ್ನು ನೋಡಿ ಭಾಗ್ಯಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ತಾಂಡವ್‌ ಹಾಗೂ ಶ್ರೇಷ್ಠಾ ತಮ್ಮ ಮದುವೆ ಕಾರ್ಡನ್ನು ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಹೋದಾಗ ಭಾಗ್ಯಾ ಆಫರ್‌ ಲೆಟರ್‌ ಜೊತೆಗೆ ಮದುವೆ ಆಹ್ವಾನ ಪತ್ರಿಕೆ ಕೂಡಾ ಮಿಸ್‌ ಆಗಿ ಭಾಗ್ಯಾ ಬ್ಯಾಗ್‌ ಸೇರಿಬಿಟ್ಟಿದೆ. ಅದರಲ್ಲಿ ಫೋಟೋ ಇರುವುದರಿಂದ ತಾಂಡವ್‌, ಹೇಗಾದರೂ ಮಾಡಿ ಬ್ಯಾಗ್‌ನಿಂದ ಅದನ್ನು ಪಡೆಯಲು ಸರ್ಕಸ್‌ ಮಾಡುತ್ತಿದ್ದಾನೆ.

ಭಾಗ್ಯಾಗೆ ಡ್ರಾಪ್‌ ಕೊಡುವ ನೆಪದಲ್ಲಿ ತಾಂಡವ್‌ ಅವಳ ಬ್ಯಾಗ್‌ ಕಿತ್ತುಕೊಳ್ಳುತ್ತಾನೆ. ಆದರೆ ಭಾಗ್ಯಾಗೆ ಅನುಮಾನ ಉಂಟಾಗಿ ತನ್ನ ಬ್ಯಾಗನ್ನು ವಾಪಸ್‌ ಪಡೆದು ನಡೆದುಕೊಂಡೇ ಮನೆ ಸೇರುತ್ತಾಳೆ. ಕುಸುಮಾ ಮನೆಗೆ ಬಂದರೂ ಭಾಗ್ಯಾ ಮಾತ್ರ ಇನ್ನೂ ಮನೆ ಸೇರಿರುವುದಿಲ್ಲ. ಇದನ್ನೇ ನೆಪವಾಗಿಸಿಕೊಂಡ ತಾಂಡವ್‌, ಭಾಗ್ಯಾ ವಿರುದ್ದ ಅಮ್ಮನನ್ನು ಎತ್ತಿ ಕಟ್ಟುತ್ತಾನೆ. ಇಷ್ಟು ದಿನ ಮನೆಯಲ್ಲಿ ಎಲ್ಲವೂ ಚೆನ್ನಾಗಿತ್ತು. ನಿನ್ನ ಸೊಸೆ ಎಲ್ಲೇ ಹೊರಗೆ ಹೋಗಬೇಕಾದರೂ ಅನುಮತಿ ಕೇಳಿ ಹೋಗುತ್ತಿದ್ದಳು, ಆದರೆ ಈಗ ತನ್ನಿಷ್ಟ ಬಂದಂತೆ ಸುತ್ತುತ್ತಾಳೆ ಎಂದು ತಾಂಡವ್‌ ಕೊಂಕು ಮಾತನಾಡುತ್ತಾನೆ. ಇದಕ್ಕೆ ಬೇಸರವಾಗುವ ಕುಸುಮಾ, ಭಾಗ್ಯಾ ಬರುತ್ತಿದ್ದಂತೆ ಎಲ್ಲಿ ಹೋಗಿದ್ದೆ ಎಂದು ಕೋಪದಿಂದಲೇ ಪ್ರಶ್ನಿಸುತ್ತಾಳೆ. ಈಗ ಅತ್ತೆ ಸೊಸೆ ನಡುವೆ ಖಂಡಿತ ಜಗಳವಾಗುತ್ತದೆ ಎಂದು ತಾಂಡವ್‌ ಮನಸ್ಸಿನಲ್ಲೇ ಖುಷಿಯಾಗುತ್ತಾನೆ. ಆದರೆ ಧರ್ಮರಾಜ್‌ ಮಧ್ಯೆ ಬಂದು ಕುಸುಮಾಳನ್ನು ಸುಮ್ಮನಾಗಿಸುತ್ತಾರೆ.‌

ಸೊಸೆ ಪರ ನಿಂತ ಧರ್ಮರಾಜ್‌

ನಮ್ಮ ಸೊಸೆ ಭಾಗ್ಯಾ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಅವಳು ನಮ್ಮನ್ನು ಕೇಳದೆ ಏನೂ ಮಾಡುವುದಿಲ್ಲ. ಅಂತದ್ದರಲ್ಲಿ ಇಂದು ಹೇಳದೆ ಕೇಳದೆ ಹೊರಗೆ ಹೋಗಿದ್ದಾಳೆ ಎಂದರೆ ಏನೂ ಬಲವಾದ ಕಾರಣ ಇರಬೇಕು. ಪಕ್ಕದ ಮನೆಯವರ ಮಾತನ್ನು ಕೇಳಿ ನೀನು ನಮ್ಮ ಸೊಸೆ ಮೇಲೆ ಅನುಮಾನ ಪಡುವುದು ತಪ್ಪು ಎಂದು ಧರ್ಮರಾಜ್‌ ಕುಸುಮಾಗೆ ಹೇಳುತ್ತಾರೆ. ಪತಿ ಮಾತಿಗೆ ಕುಸುಮಾ ಸುಮ್ಮನಾಗುತ್ತಾಳೆ. ಅತ್ತೆ ಸೊಸೆ ನಡುವೆ ಧರ್ಮರಾಜ್‌ ಬಂದು ಪರಿಸ್ಥಿತಿ ಶಾಂತ ಮಾಡಿದ್ದು ತಾಂಡವ್‌ಗೆ ನಿರಾಸೆ ಆಗುತ್ತದೆ.

ಭಾಗ್ಯಾ ಬ್ಯಾಗ್‌ ಕದಿಯಲು ತಾಂಡವ್‌ ಸುನಂದಾಳನ್ನು ಕಳಿಸುತ್ತಾನೆ, ಬ್ಯಾಗ್‌ನಲ್ಲಿ ಏನಿದೆ ನೋಡಬಾರದು ಎಂದೂ ಹೇಳುತ್ತಾನೆ. ಸುನಂದಾ ಭಾಗ್ಯಾ ರೂಮ್‌ಗೆ ಹೋಗಿ ಅವಳ ಬ್ಯಾಗ್‌ ತೆಗೆದುಕೊಂಡು ಹೊರ ಬರುವಷ್ಟರಲ್ಲಿ ಭಾಗ್ಯಾ ಅಲ್ಲಿಗೆ ಬರುತ್ತಾಳೆ. ತಾಂಡವ್‌ ಕಡೆ ಹೋದ ಅಮ್ಮ, ಮತ್ತೆ ತನ್ನ ರೂಮ್‌ಗೆ ಬಂದು ಬ್ಯಾಗ್‌ ನೋಡುತ್ತಿರುವುದನ್ನು ನೋಡಿ ಭಾಗ್ಯಾಗೆ ಅನುಮಾನ ಶುರು ಆಗುತ್ತದೆ. ಮದುವೆ ಕಾರ್ಡ್‌ ಬಗ್ಗೆ ಗೊತ್ತಿಲ್ಲದ ಭಾಗ್ಯಾಗೆ ಯಾರಾದರೂ ಕೆಲಸದ ಆಫರ್‌ ಲೆಟರ್‌ ನೋಡಿದರೆ ಕಷ್ಟ ಎಂದು ಭಯವಾಗುತ್ತದೆ. ಅಷ್ಟರಲ್ಲಿ ಕುಸುಮಾ ಕೂಡಾ ಅಲ್ಲಿಗೆ ಬರುತ್ತಾಳೆ. ಭಾಗ್ಯಾ ತನ್ನ ಬ್ಯಾಗನ್ನು ಬೀರು ಒಳಗೆ ಇಡುತ್ತಾಳೆ. ಅದನ್ನು ನೋಡಿ ಕುಸುಮಾ ಕೂಡಾ ಅನುಮಾನದಿಂದ ಏಕೆ ಬ್ಯಾಗ್‌ ಮುಚ್ಚಿಡುತ್ತಿದ್ದೀಯ ಎಂದು ಕೇಳುತ್ತಾಳೆ. ಅದೇ ಸಮಯಕ್ಕೆ ಭಾಗ್ಯಾ ಕುಸುಮಾ ಕುಂಟುತ್ತಿರುವುದನ್ನು ಗಮನಿಸುತ್ತಾಳೆ.

ತಾನೇ ಬ್ಯಾಗ್‌ ಕದಿಯಲು ಭಾಗ್ಯಾ ರೂಮ್‌ಗೆ ಹೊರಟ ತಾಂಡವ್

ತಾನು ಕೆಲಸ ಹುಡುಕಲು ಹೋಗಿ ನಡೆದುಕೊಂಡು ಬಂದು ಕಾಲಿಗೆ ಸಮಸ್ಯೆ ಆಗಿರುವುದು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಕುಸುಮಾ ಮಾತು ಮರೆಸಲು ನೋಡಿದರೆ, ತನಗೆ ಕೆಲಸ ದೊರೆತಿರುವ ವಿಚಾರ ಅತ್ತೆಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಭಾಗ್ಯಾ ಕೂಡಾ ಮಾತು ಮರೆಸಲು ಪ್ರಯತ್ನಿಸುತ್ತಾಳೆ. ಕೊನೆಗೆ ಭಾಗ್ಯಾ, ಅತ್ತೆ ಕಾಲಿಗೆ ಎಣ್ಣೆ ಹಚ್ಚಲು ಕರೆದೊಯ್ಯುತ್ತಾಳೆ. ಇಬ್ಬರನ್ನೂ ಗಮನಿಸುವ ಧರ್ಮರಾಜ್‌, ಇಬ್ಬರೂ ಬೆಳಗ್ಗೆ ಹೋಗಿ ಸಂಜೆ ಬರುತ್ತಿದ್ದಾರೆ ಏನು ಕಾರಣ ಇರಬಹುದು ಎಂದು ಯೋಚಿಸುತ್ತಾರೆ. ಇತ್ತ ತಾಂಡವ್‌, ಸುನಂದಾಗಾಗಿ ಕಾದು ನಿರಾಸೆಗೆ ಒಳಗಾಗುತ್ತಾನೆ. ಕೊನೆಗೆ ತಾನೇ ಭಾಗ್ಯಾ ರೂಮ್‌ಗೆ ಬ್ಯಾಗ್‌ ತರಲು ಹೋಗುತ್ತಾನೆ.

ಭಾಗ್ಯಾ ರೂಮ್‌ಗೆ ಬ್ಯಾಗ್‌ ತರಲು ಹೋಗುವ ತಾಂಡವ್‌ ಇನ್ವಿಟೇಷನ್‌ ಕಾರ್ಡ್‌ ತೆಗೆದುಕೊಂಡು ಬರುತ್ತಾನಾ? ಅಥವಾ ತಾಂಡವ್‌ ಕಳ್ಳಾಟ ಎಲ್ಲರಿಗೂ ತಿಳಿದುಹೋಗುವುದಾ ಕಾದು ನೋಡಬೇಕು.

Whats_app_banner