Bhagyalakshmi Serial: ನಿನಗಿಂತ ಭಾಗ್ಯಾನೇ ಪರವಾಗಿಲ್ಲ, ಶ್ರೇಷ್ಠಾ ಮೇಲೆ ಅರಚಾಡಿದ ತಾಂಡವ್; ಹೆಂಡತಿ ಕಡೆ ಮನಸ್ಸಾಯ್ತಾ!?
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಡಿಸೆಂಬರ್ 15ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.
Bhagyalakshmi Kannada Serial: ಅಂತರಶಾಲಾ ಡ್ಯಾನ್ಸ್ ಕಾಂಪಿಟೇಶನ್‌ನಲ್ಲಿ ಭಾಗ್ಯಾ ಗೆದ್ದಿದ್ದಾಳೆ. ಸೊಸೆಗೆ ತೊಂದರೆ ಕೊಟ್ಟ ಕನ್ನಿಕಾಗೆ ಕುಸುಮಾ ತಿಳಿ ಹೇಳಿದ್ದಾಳೆ. ಪೋಷಕ ಶಿಕ್ಷಕರ ಸಂಘದ ನಿರ್ದಶಕರು ಕೂಡಾ ಕನ್ನಿಕಾಗೆ ಎಚ್ಚರಿಸಿದ್ದಾರೆ. ಇನ್ನು ಭಾಗ್ಯಾ ಯಾವ ಆತಂಕವೂ ಇಲ್ಲದೆ ಸ್ಕೂಲ್‌ಗೆ ಹೋಗಬಹುದು ಎಂಬ ಖುಷಿಯಿಂದ ಕುಸುಮಾ ಸೊಸೆ ಜೊತೆ ಮನೆಗೆ ಬರುತ್ತಾಳೆ.
ಅಮ್ಮನಿಗೆ ಅದ್ಧೂರಿ ಸ್ವಾಗತ ನೀಡಿದ ಗುಂಡಣ್ಣ
ಮನೆಯಲ್ಲಿ ಭಾಗ್ಯಾಗೆ ಮಗ ಗುಂಡಣ್ಣ ಅದ್ಧೂರಿ ವೆಲ್‌ಕಮ್ ನೀಡುತ್ತಾನೆ. ಅಮ್ಮ ಮನೆಗೆ ಬಂದೊಡನೆ ನೇರವಾಗಿ ಮನೆಯೊಳಗೆ ಬರಲು ಬಿಡದ ಗುಂಡಣ್ಣ ಸುನಂದಾ ಅಜ್ಜಿಗೆ ಹೇಳಿ ಅಮ್ಮನಿಗೆ ಆರತಿ ಬೆಳಗುವಂತೆ ಹೇಳುತ್ತಾನೆ. ಮೊಮ್ಮಗನ ಆಸೆಯಂತೆ ಸುನಂದಾ, ಮಗಳು ಭಾಗ್ಯಾಗೆ ಆರತಿ ಮಾಡುತ್ತಾಳೆ. ಭಾಗ್ಯಾ ಮನೆ ಒಳಗೆ ಬರುತ್ತಿದ್ದಂತೆ ಗುಂಡಣ್ಣ ಆಕೆ ಮೇಲೆ ಹೂ ಮಳೆ ಸುರಿಸುತ್ತಾನೆ. ಮಗನ ಪ್ರೀತಿ ಕಂಡು ಭಾಗ್ಯಾ ಭಾವುಕಳಾಗುತ್ತಾಳೆ. ಕುಸುಮಾ ಕೂಡಾ ಮೊಮ್ಮಗನ ಅರೇಂಜ್‌ಮೆಂಟ್ಸ್ ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಇದು ಪೂಜಾ, ಸುನಂದಾಗೆ ಕೂಡಾ ಖುಷಿ ಆದರೂ ತನ್ವಿ ಮಾತ್ರ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಇರುತ್ತಾಳೆ.
ಗುಂಡಣ್ಣ, ಅಮ್ಮನಿಗಾಗಿ ಡೈನಿಂಗ್ ಟೇಬಲನ್ನು ಕೂಡಾ ಹೂಗಳಿಂದ ಅಲಂಕಾರ ಮಾಡಿರುತ್ತಾನೆ. ಸುನಂದಾ ಅಜ್ಜಿ ಕೈಯಲ್ಲಿ ಕೇಸರಿಬಾತ್ ಮಾಡಿಸಿ ಅದನ್ನೇ ಕೇಕ್‌ನಂತೆ ಕತ್ತರಿಸಲು ಹೇಳುತ್ತಾನೆ. ಇನ್ನೂ ಸೆಲಬ್ರೇಷನ್ ಮುಗಿದಿಲ್ಲ ಇರಿ ಎನ್ನುತ್ತಾ ಅನ್ನದ ಪಾತ್ರೆಯನ್ನು ಅಜ್ಜಿ ಕುಸುಮಾಗೆ ಕೊಟ್ಟು , ನಮ್ಮ ಮನೆಯಲ್ಲಿ ಯಾರಿಗೂ ಖುಷಿ ಇಲ್ಲ. ಬರೀ ಜಗಳವೇ ತುಂಬಿರುತ್ತದೆ. ನಾವೆಲ್ಲರೂ ಕೈ ತುತ್ತು ತಿಂದು ಬಹಳ ದಿನ ಆಯ್ತು. ಎಲ್ಲರಿಗೂ ಕೈ ತುತ್ತು ನೀಡಿ ಎನ್ನುತ್ತಾನೆ. ಮೊಮ್ಮಗನ ಮಾತು ಕೇಳಿ ಕುಸುಮಾಗೆ ಒಂದೆಡೆ ಖುಷಿ, ಒಂದೆಡೆ ಬೇಸರ. ಎಲ್ಲಾ ಸೆಲಬ್ರೇಷನ್ ನಂತರ ತಾಯಿಗೆ ಕ್ಷಮೆ ಕೇಳುವಂತೆ ಕುಸುಮಾ ತನ್ವಿಗೆ ಸೂಚಿಸುತ್ತಾಳೆ. ಒಲ್ಲದ ಮನಸ್ಸಿನಿಂದ ತನ್ವಿ, ಭಾಗ್ಯಾ ಕಾಲಿಗೆ ನಮಸ್ಕರಿಸಿ ಕ್ಷಮೆ ಯಾಚಿಸುತ್ತಾಳೆ.
ಶ್ರೇಷ್ಠಾ ಮುಂದೆ ಹೆಂಡತಿ ಹೊಗಳಿದ ತಾಂಡವ್
ಇತ್ತ ತಾಂಡವ್, ಸ್ಕೂಲ್‌ನಲ್ಲಿ ನಡೆದ ಘಟನೆಯನ್ನು ತಲೆಯಲ್ಲಿ ತುಂಬಿಕೊಂಡೇ ಮನೆಗೆ ಬರುತ್ತಾನೆ. ತಾಂಡವ್, ಅದೇ ವಿಚಾರವನ್ನು ಮನಸಿನಲ್ಲಿಟ್ಟುಕೊಂಡು ಯೋಚನೆ ಮಾಡಿದರೆ ನಾನೂ ಖುಷಿಯಾಗಿರಲು ಸಾಧ್ಯವಿಲ್ಲ ಎಂದುಕೊಳ್ಳುವ ಶ್ರೇಷ್ಠಾ, ತಾಂಡವ್‌ನನ್ನು ಹೊರಗೆ ಡಿನ್ನರ್‌ಗೆ ಕರೆದೊಯ್ಯಬೇಕು ಎಂದು ಪ್ಲ್ಯಾನ್ ಮಾಡಿ ರೆಡಿಯಾಗಿರುತ್ತಾಳೆ. ತಾಂಡವ್, ಮನೆಗೆ ಬರುತ್ತಿದ್ದಂತೆ ಕಾಫಿ ಕೇಳುತ್ತಾನೆ. ಆದರೆ ಶ್ರೇಷ್ಠಾ, ನಾವು ಹೇಗಿದ್ರೂ ಡಿನ್ನರ್‌ಗೆ ಹೋಗ್ತಿದ್ದೀವಲ್ಲ ಅಲ್ಲೇ ಏನಾದರೂ ತಿನ್ನೋಣ ಎನ್ನುತ್ತಾಳೆ. ಅವಳ ಮಾತಿನಿಂದ ಕೋಪಗೊಳ್ಳುವ ತಾಂಡವ್, ಸ್ಕೂಲ್‌ನಲ್ಲಿ ಇಷ್ಟೆಲ್ಲಾ ನಡೆದ ನಂತರವೂ ನಿನ್ನ ಜೊತೆ ನಾನು ಡಿನ್ನರ್ ಡೇಟ್‌ಗೆ ಬರ್ತೀನಿ ಅಂತ ಹೇಗೆ ಅಂದುಕೊಳ್ತೀಯ? ಎಂದು ಅರಚಾಡುತ್ತಾನೆ.
ನಿನಗಿಂತ ಭಾಗ್ಯಾನೇ ಪರವಾಗಿಲ್ಲ, ಅವಳು ಅಮ್ಮನ ಮರ್ಯಾದೆ ಕಾಪಾಡುತ್ತಾಳೆ, ಆದರೆ ನೀನು ಆ ರೀತಿ ಅಲ್ಲ ಎಂದು ಕೋಪಗೊಳ್ಳುವ ತಾಂಡವ್, ರೂಮ್‌ಗೆ ಹೋಗುತ್ತಾನೆ. ತಾಂಡವ್ ವರ್ತನೆಯಿಂದ ಶ್ರೇಷ್ಠಾಗೆ ಕೋಪ ಬಂದರೂ, ಇದು ನನ್ನ ಕೋಪವನ್ನು ಹೊರ ಹಾಕುವ ಸಮಯ ಅಲ್ಲ, ನನ್ನ ಮೇಲೆ ಕೋಪಗೊಂಡು ತಾಂಡವ್ ಮನೆ ಬಿಟ್ಟು ಹೋದ್ರೆ ಕಷ್ಟ ಎಂದುಕೊಳ್ಳುತ್ತಾಳೆ. ಮರುದಿನ ತಾಂಡವ್ ಏಳುತ್ತಲೇ ಶ್ರೇಷ್ಠಾ, ಅವನಿಗಾಗಿ ಕಾಫಿ ರೆಡಿ ಮಾಡಿ ಟೇಬಲ್ ಮೇಲಿಡುತ್ತಾಳೆ, ಅದರಲ್ಲಿ ಸಾರಿ ಎಂಬ ಸ್ಟಿಕರ್ ಅಂಟಿಸಿರುತ್ತಾಳೆ. ಶ್ರೇಷ್ಠಾ ಮಾಡಿದ ಕಾಫಿ ಕುಡಿದು ತಾಂಡವ್ ಆಕೆಯನ್ನು ಹೊಗಳುತ್ತಾನೆ.
ಶ್ರೇಷ್ಠಾ ನಾಟಕದ ಪ್ರೀತಿ ನಡುವೆ ತಾಂಡವ್, ಮನೆಯಿಂದ ಸಂಪೂರ್ಣ ದೂರಾಗುತ್ತಾನಾ? ಅಥವಾ ಮನೆಗೆ ವಾಪಸ್ ಹೋಗುತ್ತಾನಾ ಕಾದು ನೋಡಬೇಕು.