Bhagyalakshmi Serial: ತನ್ನ ತಪ್ಪನ್ನು ಮುಚ್ಚಿಡಲು ಮಗಳನ್ನು ಸುಳ್ಳಿಯನ್ನಾಗಿ ಮಾಡಿದ ಸ್ವಾರ್ಥಿ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 18ರ ಸಂಚಿಕೆ ಹೀಗಿದೆ. ಮಗಳಿಗೆ ಅಪಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ತಾಂಡವ್ ತನ್ವಿಯನ್ನು ನೋಡಲು ಓಡೋಡಿ ಬರುತ್ತಾನೆ. ಆದರೆ ಅವನನ್ನು ಕುಸುಮಾ, ಭಾಗ್ಯಾ ತಡೆಯುತ್ತಾರೆ.
Bhagyalakshmi Kannada Serial: ತನ್ವಿಯನ್ನು ನೋಡಲು ಬಂದ ತಾಂಡವ್‌ಗೆ ಶ್ರೇಷ್ಠಾ ವಿಚಾರಕ್ಕೆ ಪ್ರಶ್ನೆಗಳ ಸುರಿಮಳೆಯೇ ಹರಿಯುತ್ತದೆ. ನನ್ನ ವಿಚಾರವನ್ನು ಶ್ರೇಷ್ಠಾ ಆಂಟಿ ಬಳಿ ಏಕೆ ಹೇಳುತ್ತೀರಿ? ನಮ್ಮ ಮನೆಯಲ್ಲಿ ನಡೆಯುವ ವಿಚಾರಕ್ಕೂ ಶ್ರೇಷ್ಠಾಗೂ ಏನು ಸಂಬಂಧ? ನಾನು ನಿಮಗೆ ಮೆಸೇಜ್ ಮಾಡಿರುವುದು ಶ್ರೇಷ್ಠಾಗೆ ಹೇಗೆ ತಿಳಿಯುತ್ತದೆ? ಎಂದೆಲ್ಲಾ ತನ್ವಿ ಅಪ್ಪನನ್ನು ಪ್ರಶ್ನಿಸುತ್ತಾಳೆ.
ಮಗಳನ್ನೇ ಸುಳ್ಳಿ ಎಂದ ತಾಂಡವ್
ತನ್ವಿ ಮಾತನಾಡುವುದನ್ನು ಕೇಳಿ ಭಾಗ್ಯಾ ಹಾಗೂ ಸುನಂದಾ ತಾಂಡವ್‌ನನ್ನು ಪ್ರಶ್ನಿಸುತ್ತಾರೆ. ತನ್ನ ತಪ್ಪು ಹೊರ ಬರಬಹುದೇನೋ ಎಂಬ ಭಯದಲ್ಲಿ ತಾಂಡವ್ ಮಗಳ ಮೇಲೆ ತಪ್ಪು ಹೊರೆಸಲು ಮುಂದಾಗುತ್ತಾನೆ. ಎಲ್ಲರೂ ಕಣ್ಣಾರೆ ನೋಡಿರುವಂತೆ ಮಾತನಾಡುತ್ತಿದ್ದೀರಿ. ತನ್ವಿ ಆಫೀಸಿಗೆ ಬಂದು ಅರಚಾಡಿದಳು, ಆದ್ದರಿಂದ್ಲೇ ಅಲ್ಲಿ ಎಲ್ಲರಿಗೂ ವಿಚಾರ ತಿಳಿದದ್ದು, ನಾನು ಯಾರಿಗೂ ಹೇಳಲಿಲ್ಲ. ತನ್ವಿ ಎಷ್ಟು ಸುಳ್ಳು ಹೇಳುತ್ತಾಳೆ ನಿಮಗೆಲ್ಲಾ ಗೊತ್ತು. ಶ್ರೇಷ್ಠಾಳನ್ನು ತನ್ನ ತಾಯಿ ಎಂದು ಸುಳ್ಳು ಹೇಳಿಕೊಂಡು ಒಮ್ಮೆ ಸ್ಕೂಲ್‌ಗೆ ಕರೆದೊಯ್ದಿದ್ದಳು, ಜಂಕ್ ಫುಡ್ ತಿಂದು ಸುಳ್ಳು ಹೇಳಿದ್ದಳು, ಅದೇ ರೀತಿ ಈಗಳೂ ಅವಳು ಹೇಳುತ್ತಿರುವುದು ಸುಳ್ಳು ಎಂದು ಮಗಳನ್ನು ದೂರುತ್ತಾನೆ.
ಅಪ್ಪನ ವರ್ತನೆ ಕಂಡ ತನ್ವಿ ನಾನಾ ಸುಳ್ಳು ಹೇಳಿದ್ದು, ಹಾಗಿದ್ರೆ ಈ ಮೆಸೇಜ್ ಮಾಡಿದ್ದು ಯಾರು? ಎಂದು ತಾಂಡವ್ ಮೊಬೈಲ್‌ನಿಂದ ಬಂದ ಮೆಸೇಜ್ ತೋರಿಸುತ್ತಾಳೆ. ಅದರನ್ನು ನೋಡಿ ತಾಂಡವ್ ಶಾಕ್ ಆಗುತ್ತಾನೆ. ನನ್ನ ಮೊಬೈಲ್‌ನಿಂದ ಈ ರೀತಿ ಮೆಸೇಮ್ ಮಾಡಿದ್ದು ಯಾರು? ಎಂದು ಯೋಚಿಸುತ್ತಾನೆ. ಆ ಮೆಸೇಜ್ ಬಗ್ಗೆ ತಿಳಿದ ನಂತರ ಭಾಗ್ಯಾ ಹಾಗೂ ಕುಸುಮಾ ಬೇಸರಗೊಳ್ಳುತ್ತಾರೆ. ತನ್ವಿಗೆ ದುಡ್ಡು ಕೊಡಬೇಡ ಎಂದು ನಾವು ನಿಮ್ಮ ಬಳಿ ಯಾವಾಗ ಹೇಳಿದ್ದೆವು ಎಂದು ಪ್ರಶ್ನಿಸುತ್ತಾರೆ. ಇದೇ ಕಾರಣಕ್ಕೆ ನನಗೆ ನಿಮ್ಮನ್ನು ಕಂಡರೆ ಆಗುವುದಿಲ್ಲ, ಇನ್ಮುಂದೆ ನಮ್ಮನ್ನು ನೋಡಲು ಬರಬೇಡಿ ಎಂದು ತನ್ವಿ ಅಪ್ಪನಿಗೆ ಹೇಳುತ್ತಾಳೆ. ಇಷ್ಟೆಲ್ಲಾ ಆದರೂ ತಾಂಡವ್, ತನ್ನ ತಪ್ಪನ್ನು ಒಪ್ಪಿಕೊಳ್ಳದೆ , ಇದೆಲ್ಲದಕ್ಕೂ ನೀನೇ ಕಾರಣ ಎಂದು ಮತ್ತೆ ಭಾಗ್ಯಾಳನ್ನು ದೂರುತ್ತಾನೆ.
ತಾಂಡವ್‌ಗೆ ಶ್ರೇಷ್ಠಾ ಮೇಲೆ ಅನುಮಾನ
ಇನ್ಮುಂದೆ ನಾನು ಈ ಕಡೆ ಬರುವುದಿಲ್ಲ. ಅಮ್ಮ, ನಿನಗೆ ಊಟಕ್ಕೆ ಸಮಸ್ಯೆ ಆದಾಗ ನನ್ನ ಬಳಿ ಬಾ ಎಂದು ಕುಸುಮಾ ಬಳಿ ಹೇಳಿ ಅಲ್ಲಿಂದ ಹೊರಡುತ್ತಾನೆ. ಆತನನ್ನು ತಡೆಯುವಂತೆ ಸುನಂದಾ ಹೇಳುತ್ತಾಳೆ. ಅದರೆ ಕುಸುಮಾ ಯಾರ ಮಾತಿಗೂ ಜಗ್ಗುವುದಿಲ್ಲ. ಮನೆ ಬಿಟ್ಟು ಹೋಗುವವರನ್ನು ನಾನು ತಡೆಯುವುದಿಲ್ಲ. ಹೋಗಿ ಮನೆ ಬಾಗಿಲು ಹಾಕಿ ಬನ್ನಿ ಎನ್ನುತ್ತಾಳೆ. ಮನೆಯಿಂದ ಹೊರಟ ತಾಂಡವ್, ತನ್ನ ಮೊಬೈಲ್‌ನಿಂದ ಶ್ರೇಷ್ಠಾಳೇ ಈ ರೀತಿ ಮೆಸೇಜ್ ಮಾಡಿರಬಹುದು ಎಂದುಕೊಂಡು ಆಕೆಯ ಬಳಿ ಈ ವಿಚಾರದ ಬಗ್ಗೆ ಕೇಳಲು ನಿರ್ಧರಿಸುತ್ತಾನೆ.
ಸುನಂದಾಗೆ ಮೊಮ್ಮಗಳು ತನ್ವಿ ಹೇಳಿದ ಮಾತುಗಳಿಂದ ಯೋಚನೆ ಶುರುವಾಗುತ್ತದೆ. ಅದನ್ನು ಭಾಗ್ಯಾ ಬಳಿ ಹೇಳುತ್ತಾಳೆ. ಅಮ್ಮ ಮಗಳು ಮಾತನಾಡುವುದನ್ನು ಕೇಳಿದ ಕುಸುಮಾ, ನನ್ನ ಮಗ ಬೇಜವಾಬ್ದಾರಿ ಇರಬಹುದು, ಅವನು ಕೋಪಿಷ್ಠನಾಗಿರಬಹುದು, ಆದರೆ ಯಾವುದೇ ಕಾರಣಕ್ಕೂ ಆತ ಹೆಂಡತಿ ಮಕ್ಕಳನ್ನು ದೂರ ಮಾಡಿ ಬೇರೆ ಹೆಣ್ಣಿನ ಜೊತೆ ಹೋಗುವವನಲ್ಲ, ಈಗ ಕೋಪ ಮಾಡಿಕೊಂಡು ಹೋಗಿದ್ದಾನೆ ನೋಡು, ಇನ್ನು 4 ದಿನಗಳ ನಂತರ ಅವನು ವಾಪಸ್ ಬಂದೇ ಬರುತ್ತಾನೆ ನೋಡುತ್ತಿರು ಎಂದು ಸೊಸೆಯ ಮನ ಒಲಿಸಲು ಯತ್ನಿಸುತ್ತಾಳೆ.
ತನ್ವಿಗೆ ಮೆಸೇಜ್ ಕಳಿಸಿರುವುದು ಶ್ರೇಷ್ಠಾ ಅನ್ನೋದು ತಾಂಡವ್‌ಗೆ ಗೊತ್ತಾಗಲಿದ್ಯಾ? ತಾಂಡವ್ ಇರೋದು ಶ್ರೇಷ್ಠಾ ಜೊತೆ ಅನ್ನೋದು ಎಲ್ಲರಿಗೂ ತಿಳಿಯಲಿದ್ಯಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.