ಪ್ರತಿ ಮಾತಿಗೂ ಏಟು ಕೊಟ್ಟು ಶ್ರೇಷ್ಠಾ ಕೆನ್ನೆ ಕೆಂಪಗಾಗಿಸಿದ ಭಾಗ್ಯಾ, ಹೆಂಡತಿಗೆ ಹೆದರಿ ಅವಿತು ನಿಂತ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalaksmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್ 21ರ ಎಪಿಸೋಡ್‌ನಲ್ಲಿ ವೆಡ್ಡಿಂಗ್ ಫೋಟೋಶೂಟ್ ನಡೆಯುತ್ತಿರುವ ಸ್ಥಳಕ್ಕೆ ಹೋಗುವ ಭಾಗ್ಯಾ, ಶ್ರೇಷ್ಠಾಗೆ ಕಪಾಳಮೋಕ್ಷ ಮಾಡುತ್ತಾಳೆ. ಹೆಂಡತಿ ರೌದ್ರಾವತಾರಕ್ಕೆ ಹೆದರುವ ತಾಂಡವ್ ಬಚ್ಚಿಟ್ಟುಕೊಳ್ಳುತ್ತಾನೆ.

Bhagyalakshmi Serial: ತಾಂಡವ್‌ನನ್ನು ಪಡೆಯಲು ಭಾಗ್ಯಾ ಜೀವನವನ್ನು ಹಾಳು ಮಾಡುತ್ತಿರುವ ಶ್ರೇಷ್ಠಾ, ಲಕ್ಷ್ಮೀ ಮದುವೆಯಲ್ಲಿ 2 ಲಕ್ಷ ರೂ ಕಳ್ಳತನ ಮಾಡಿ ಅದನ್ನು ಭಾಗ್ಯಾಗೆ ಸಾಲವಾಗಿ ನೀಡುತ್ತಾಳೆ. ಆ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಶ್ರೇಷ್ಠಾ ನಿಜ ಬಣ್ಣ ತಿಳಿದ ಪೂಜಾ, ಎಲ್ಲವನ್ನೂ ಕುಸುಮಾ ಹಾಗೂ ಸುನಂದಾಗೆ ಹೇಳುತ್ತಾರೆ. ಆದರೆ ಅವರಿಬ್ಬರೂ ಅದನ್ನು ನಂಬುವುದಿಲ್ಲ.
ಶ್ರೇಷ್ಠಾಗೆ ಕಪಾಳಮೋಕ್ಷ ಮಾಡುವ ಭಾಗ್ಯಾ
ಶ್ರೇಷ್ಠಾಗೆ ಬುದ್ಧಿ ಕಲಿಸಲು ಅವಳ ಮನೆಗೆ ಬಂದು ಉಳಿದುಕೊಂಡಿದ್ದ ಭಾಗ್ಯಾ, ಆಕೆಗೆ ಒಡವೆ ಬಿಡಿಸಿಕೊಟ್ಟು ವಾಪಸ್ ಅಕ್ಕನ ಮನೆಗೆ ಹೋಗುತ್ತಾಳೆ. ಅಕ್ಕನ ಕಾಲು ಹಿಡಿದು ಎಲ್ಲಾ ನಿಜ ವಿಚಾರವನ್ನು ಹೇಳುತ್ತಾಳೆ. ಒಡಹುಟ್ಟಿದವಳ ಮಾತನ್ನು ಭಾಗ್ಯಾ ಅರ್ಥ ಮಾಡಿಕೊಳ್ಳುತ್ತಾಳೆ. ಪೂಜಾ ಹೇಳುತ್ತಿರುವುದು ನಿಜ ಎಂದು ಭಾಗ್ಯಾಗೆ ಗೊತ್ತಾಗುತ್ತದೆ. ಕೂಡಲೇ ಶ್ರೇಷ್ಠಾಳನ್ನು ಭೇಟಿಯಾಗಲು ಹೋಗುತ್ತಾಳೆ. ಆದರೆ ಮನೆಯಲ್ಲಿ ಆಕೆ ಇಲ್ಲದಾಗ, ಫೋಟೋಶೂಟ್ ನಡೆಯುತ್ತಿರುವ ಸ್ಥಳಕ್ಕೆ ಹೋಗುತ್ತಾಳೆ. ಭಾಗ್ಯಾ ಕೋಪದಿಂದ ಕುದಿಯುತ್ತಾಳೆ. ನನ್ನ ಮದುವೆಗೆ ಹಣದ ಕೊರತೆ ಇದೆ. ದಯವಿಟ್ಟು ನಾನು ಕೊಟ್ಟ ಸಾಲವನ್ನು ವಾಪಸ್ ಕೊಡು ಎಂದು ಶ್ರೇಷ್ಠಾ ತನ್ನ ಬಳಿ ಮನವಿ ಮಾಡುವುದನ್ನು ಭಾಗ್ಯಾ ಪದೇ ಪದೆ ನೆನಪಿಸಿಕೊಳ್ಳುತ್ತಾಳೆ.
ಫೋಟೋ ಶೂಟ್ ನಡೆಯುವ ಸ್ಥಳಕ್ಕೆ ಬಂದ ಭಾಗ್ಯಾಳನ್ನು ನೋಡಿ ತಾಂಡವ್, ಹೆದರಿ ಬಚ್ಚಿಟ್ಟುಕೊಳ್ಳುತ್ತಾನೆ. ಹೊರಗೆ ಟಚ್ ಅಪ್ ಮಾಡಿಸಿಕೊಳ್ಳುವ ಶ್ರೇಷ್ಠಾಳನ್ನು ನೋಡುವ ಭಾಗ್ಯಾ, ನಮಸ್ತೆ ಶ್ರೇಷ್ಠಾ ಮೇಡಂ ಎನ್ನುತ್ತಾಳೆ. ಅಲ್ಲಿಗೆ ಭಾಗ್ಯಾ ಬಂದಿದ್ದನ್ನು ಕಂಡು ಶ್ರೇಷ್ಠಾ ಗಾಬರಿ ಆಗುತ್ತಾಳೆ. ನೀನೇನು ಇಲ್ಲಿ ಎನ್ನುತ್ತಾಳೆ. ಭಾಗ್ಯಾ ಯಾವ ಉತ್ತರವೂ ಕೊಡದೆ ಶ್ರೇಷ್ಠಾ ಕೆನ್ನೆಗೆ ಬಾರಿಸುತ್ತಾಳೆ. ಏನೂ ವಿಚಾರ ಹೇಳದೆ ಭಾಗ್ಯಾ ತನಗೆ ಹೀಗೆ ಕಪಾಳಮೋಕ್ಷ ಮಾಡುವುದಕ್ಕೆ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ಏಕೆ ಹೀಗೆ ಹೊಡೆಯುತ್ತಿದ್ದೀಯ ಎಂದು ಪ್ರಶ್ನಿಸುತ್ತಾಳೆ.
ಹೆಂಡತಿ ಅವತಾರ ಕಂಡು ಹೆದರಿದ ತಾಂಡವ್
ಹೌದಾ, ಕಾರಣ ಹೇಳಬೇಕಾ ಹೇಳುತ್ತೇನೆ ಎನ್ನುವ ಭಾಗ್ಯಾ ಪ್ರತಿ ಮಾತಿಗೂ ಆಕೆಯ ಕೆನ್ನೆಗೆ ಬಾರಿಸುತ್ತಾಳೆ. ನಿನ್ನನ್ನು ಆತ್ಮೀಯಳು ಎಂದು ತಿಳಿದು ಕರೆದು ಮನೆಯಲ್ಲಿ ಊಟ ಹಾಕಿದ್ದಕ್ಕೆ ನೀನು ಮಾಡಿದ್ದು ಏನು? ಎನ್ನುತ್ತಾಳೆ. ಭಾಗ್ಯಾ ಅವತಾರ ಕಂಡು ಶ್ರೇಷ್ಠಾ ಗಾಬರಿ ಆಗುತ್ತಾಳೆ. ಇವೆಲ್ಲವನ್ನೂ ಮರೆಯಲ್ಲಿ ನಿಂತು ನೋಡುವ ತಾಂಡವ್ ಕೂಡಾ ಗಾಬರಿ ಆಗುತ್ತಾನೆ. ಭಾಗ್ಯಾ ಈ ರೀತಿ ಏಕೆ ಶ್ರೇಷ್ಠಾಳನ್ನು ಹೊಡೆಯುತ್ತಿದ್ದಾಳೆ ಎಂದುಕೊಳ್ಳುತ್ತಾನೆ. ಅಷ್ಟರಲ್ಲಿ ಫೋಟೋಶೂಟ್ ಮಾಡುವ ನಿರ್ದೇಶಕ ಬಂದು ನಿಮ್ಮ ಗರ್ಲ್‌ಫ್ರೆಂಡನ್ನು ಯಾವುದೋ ಮಹಿಳೆ ಹೊಡೆಯುತ್ತಿದ್ದಾಳೆ ಹೋಗಿ ತಡೆಯಿರಿ ಎನ್ನುತ್ತಾನೆ. ನಾನು ಈಗ ಅಲ್ಲಿ ಹೋದರೆ ನನಗೂ ಏಟು ಬೀಳಬಹುದು ಎಂದು ತಾಂಡವ್ ಹೆದರುತ್ತಾನೆ.
ನಾನು ಕಷ್ಟಪಟ್ಟು ಕೂಡಿಟ್ಟ ಹಣ ವಾಪಸ್ ಕೊಡು ಎಂದು ಭಾಗ್ಯಾ ಶ್ರೇಷ್ಠಾಗೆ ಕೇಳುತ್ತಾಳೆ. ಅದನ್ನು ನಿನ್ನೆಯೇ ಖರ್ಚು ಮಾಡಿದೆ ಎಂದು ಶ್ರೇಷ್ಠಾ ಹೇಳಿದಾಗ ಭಾಗ್ಯಾ ಮತ್ತೆ ಕೆನ್ನೆಗೆ ಬಾರಿಸುತ್ತಾಳೆ. ಯಾರಪ್ಪನ ಮನೆ ದುಡ್ಡು ಅಂತ ಖರ್ಚು ಮಾಡಿದೆ? ನನಗೆ ಈಗಲೇ ದುಡ್ಡು ಬೇಕು, ಇಲ್ಲವಾದರೆ ಇಲ್ಲಿಂದ ನೇರವಾಗಿ ಪೊಲೀಸ್ ಸ್ಟೇಷನ್‌ಗೆ ಹೋಗುತ್ತೇನೆ ಎಂದಾಗ ಶ್ರೇಷ್ಠಾ ಹೆದರುತ್ತಾಳೆ. ನನ್ನ ಬಳಿ ಈಗ ದುಡ್ಡಿಲ್ಲ ಬ್ಯಾಂಕಿಗೆ ಹೋಗಬೇಕು ಎನ್ನುತ್ತಾಳೆ. ಹಾಗಾದರೆ ನಡಿ ಎಂದು ಭಾಗ್ಯಾ, ಶ್ರೇಷ್ಠಾ ಕೈ ಹಿಡಿದು ಎಳೆದುಕೊಂಡು ಹೋಗುತ್ತಾಳೆ.
ಶ್ರೇಷ್ಠಾ, ಭಾಗ್ಯಾ ದುಡ್ಡು ವಾಪಸ್ ಕೊಡುತ್ತಾಳಾ? ತಾಂಡವ್-ಶ್ರೇಷ್ಠಾ ಪ್ರೀ ವೆಡ್ಡಿಂಗ್ ಫೋಟೋಶೂಟ್ ಕಥೆ ಏನು? ಎಲ್ಲದಕ್ಕೂ ಮುಂದಿನ ಎಪಿಸೋಡ್‌ನಲ್ಲಿ ಉತ್ತರ ದೊರೆಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ