ಕಾಂಟಿನೆಂಟಲ್‌ ಫುಡ್‌ ಬಗ್ಗೆ ಗೊತ್ತಿಲ್ಲ, ಇಂಗ್ಲೀಷ್‌ ಬರೋದೂ ಇಲ್ಲ, ಆರ್ಡರ್‌ ತೆಗೆದುಕೊಳ್ಳಲು ಪರದಾಡಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಕಾಂಟಿನೆಂಟಲ್‌ ಫುಡ್‌ ಬಗ್ಗೆ ಗೊತ್ತಿಲ್ಲ, ಇಂಗ್ಲೀಷ್‌ ಬರೋದೂ ಇಲ್ಲ, ಆರ್ಡರ್‌ ತೆಗೆದುಕೊಳ್ಳಲು ಪರದಾಡಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಕಾಂಟಿನೆಂಟಲ್‌ ಫುಡ್‌ ಬಗ್ಗೆ ಗೊತ್ತಿಲ್ಲ, ಇಂಗ್ಲೀಷ್‌ ಬರೋದೂ ಇಲ್ಲ, ಆರ್ಡರ್‌ ತೆಗೆದುಕೊಳ್ಳಲು ಪರದಾಡಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Seiral: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 21ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಕಾಂಟಿನೆಂಟಲ್‌ ಫುಡ್‌ ಬಗ್ಗೆ ಗೊತ್ತಿಲ್ಲದ ಕಾರಣ ಆರ್ಡರ್‌ ತೆಗೆದುಕೊಳ್ಳಲು ಪರದಾಡುತ್ತಾಳೆ. ಮತ್ತೊಮ್ಮೆ ಈ ರೀತಿ ವರ್ತಿಸದಂತೆ ಸೂಪರ್‌ವೈಸರ್‌ ಭಾಗ್ಯಾಗೆ ಎಚ್ಚರಿಕೆ ನೀಡುತ್ತಾರೆ.

 ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ತನಗೇ ಗೊತ್ತಿಲ್ಲದಂತೆ ಭಗಾಯ ಹೆಸರಿನಲ್ಲಿ ಭಾಗ್ಯಾ 5 ಸ್ಟಾರ್‌ ಹೋಟೆಲ್‌ನಲ್ಲಿ ಕೆಲಸ ಆರಂಭಿಸಿದ್ದಾಳೆ. ಎಲ್ಲರೂ ಭಾಗ್ಯಾಳನ್ನು ಭಗಾಯ ಎಂದೇ ನಂಬಿದ್ದಾರೆ. ಆಕೆ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡಿದ್ದಾಳೆ. ಇಂಟರ್ನ್‌ಶಿಪ್‌ ಮುಗಿಸಿ ಇಲ್ಲಿಗೆ ಕೆಲಸಕ್ಕೆ ಬಂದಿದ್ದಳೆ ಎಂದೇ ಎಲ್ಲರೂ ತಿಳಿದಿದ್ದಾರೆ. ಆದರೆ ಎಲ್ಲರಿಗೂ ಭಾಗ್ಯಾ ಯಾರು ಎಂದು ತಿಳಿಯುವ ಸಮಯ ದೂರ ಇಲ್ಲ.

ಭಾಗ್ಯಾಗೆ ಕರೆ ಮಾಡಿ ಹಣ ಕೇಳುವ ಕೆಲಸದ ಬ್ರೋಕರ್‌

ಹೋಟೆಲ್‌ನವರು ಕೊಟ್ಟ ಡ್ರೆಸ್‌ ಧರಿಸುವ ಭಾಗ್ಯಾಗೆ ಅದು ಬಹಳ ಕಿರಿಕಿರಿ ಎನಿಸುತ್ತದೆ. ಕೆಲಸ ಶುರು ಮಾಡಬೇಕು ಎನ್ನುವಷ್ಟರಲ್ಲಿ ಕೆಲಸದ ಬ್ರೋಕರ್‌ ತಾನು ಕೆಲಸ ಕೊಡಿಸದಿದ್ದರೂ ಹಣದ ಆಸೆಯಿಂದ ಭಾಗ್ಯಾಗೆ ಕರೆ ಮಾಡಿ ಫೀಸ್‌ ಕೇಳುತ್ತಾನೆ. ನೀನು ಅಂದು ಕೊಡುತ್ತೇನೆ, ಇಂದು ಕೊಡುತ್ತೇನೆ ಎಂದು ದಿನ ದೂಡಬೇಡ, ಆದಷ್ಟು ಬೇಗ ನನ್ನ ಹಣ ನನಗೆ ಕೊಡು, ಇಲ್ಲದಿದ್ದರೆ ಹೋಟೆಲ್‌ನಲ್ಲಿ ನನಗೆ ಎಲ್ಲರೂ ಗೊತ್ತು. ಅವರಿಗೆ ಹೇಳಿ ನಿನ್ನನ್ನು ಕೆಲಸದಿಂದ ತೆಗೆಸುತ್ತೇನೆ ಎಂದು ಬ್ಲಾಕ್‌ ಮೇಲ್‌ ಮಾಡುತ್ತಾನೆ. ಗೋಪಾಲನ ಮಾತಿಗೆ ಹೆದರಿದ ಭಾಗ್ಯಾ, ಅಣ್ಣಾ ದಯವಿಟ್ಟು ಆ ರೀತಿ ಮಾಡಬೇಡಿ, ಆದಷ್ಟು ಬೇಗ ನಿಮ್ಮ ಹಣವನ್ನು ವಾಪಸ್‌ ನೀಡುತ್ತೇನೆ ಎನ್ನುತ್ತಾಳೆ.

ನಿಮ್ಮಿಂದ ಮತ್ತೊಂದು ಸಹಾಯ ಆಗಬೇಕಿತ್ತು, ಈ ಹೋಟೆಲ್‌ನಲ್ಲಿ ನಿಮಗೆ ಎಲ್ಲರೂ ಪರಿಚಯ ಅಂತ ಹೇಳುತ್ತಿದ್ದೀರಿ, ನನಗೆ ಕೆಲಸ ಮಾಡಲು ಒಂದು ಬಟ್ಟೆ ಕೊಟ್ಟಿದ್ದಾರೆ, ಅದೇನೋ ಡ್ರೆಸ್‌ ಕೋಡ್‌ ಅಂತೆ. ನನಗೆ ಇದೆಲ್ಲಾ ಅಭ್ಯಾಸ ಇಲ್ಲ, ನೀವು ನಿಮ್ಮ ಪರಿಚಯದವರಿಗೆ ಹೇಳಿಸಿ ನನಗೆ ಸೀರೆಯಲ್ಲೇ ಕೆಲಸ ಮಾಡುವಂತೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡುತ್ತಾಳೆ. ಆದರೆ ಕೆಲಸವನ್ನೇ ಕೊಡಿಸದೆ ಸುಳ್ಳು ಹೇಳುತ್ತಿರುವ ಗೋಪಾಲ ಯಾರಿಗೂ ಏನು ತಾನೇ ಹೇಳುತ್ತಾನೆ? ಅದೆಲ್ಲಾ ಆಗುವುದಿಲ್ಲ ಎಲ್ಲಾ ಕಡೆ ಡ್ರೆಸ್‌ಕೋಡ್‌ ಇದ್ದೇ ಇರುತ್ತದೆ ಅದನ್ನು ಫಾಲೋ ಮಾಡಬೇಕು ಎನ್ನುತ್ತಾನೆ.

ಕೆಲಸದ ಬ್ರೋಕರ್‌ ಜೊತೆ ಮಾತನಾಡುವಾಗ ಹೋಟೆಲ್‌ ಸೂಪರ್‌ವೈಸರ್‌ ಬಂದು ಭಾಗ್ಯಾ ಫೋನ್‌ ಕಸಿದುಕೊಳ್ಳುತ್ತಾರೆ. ಮೊದಲ ದಿನ ಕೆಲಸಕ್ಕೆ ತಡವಾಗಿ ಬಂದಿದ್ದೂ ಅಲ್ಲದೆ, ಫೋನಿನಲ್ಲಿ ಮಾತನಾಡುತ್ತಿದ್ದೀಯ ಭಗಾಯ, ಈ ರೀತಿ ಮಾಡುವುದು ಸರಿಯಲ್ಲ. ನಿಮ್ಮ ಲಾಕರ್‌ನಲ್ಲಿ ಪೋನ್‌ ಇಟ್ಟಿರುತ್ತೇನೆ. ಕೆಲಸ ಮುಗಿಸಿ ಹೋಗುವಾಗ ಫೋನ್‌ ತೆಗೆದುಕೊಳ್ಳಿ, ಈಗ ಸದ್ಯಕ್ಕೆ ಟೇಬಲ್‌ ಬಳಿ ಹೋಗಿ ಆರ್ಡರ್‌ ತೆಗೆದುಕೊಳ್ಳಿ ಎನ್ನುತ್ತಾರೆ. ಆತನ ಮಾತಿಗೆ ಗಾಬರಿಯಾದ ಭಾಗ್ಯಾ ಟ್ಯಾಬ್‌ ಪಡೆದು ಟೇಬಲ್‌ ಬಳಿ ಬರುತ್ತಾಳೆ.

ಇಂಗ್ಲೀಷ್‌ ಬರದೆ ಆರ್ಡರ್‌ ತೆಗೆದುಕೊಳ್ಳಲು ಪರದಾಡಿದ ಭಾಗ್ಯಾ

ಆರ್ಡರ್‌ ಕೊಡಲು ಕಾಯುತ್ತಿದ್ದವರು ಭಾಗ್ಯಾಳನ್ನು ನೋಡಿ ಏಕೆ ಲೇಟ್‌? ನಾವು ಬಹಳ ಸಮಯದಿಂದ ಕಾಯುತ್ತಿದ್ದೇವೆ ಎಂದು ಕೇಳುತ್ತಾರೆ. ಇಂಗ್ಲೀಷ್‌ ಅರ್ಥವಾಗದಿದ್ದರೂ ಭಾಗ್ಯಾ ಸಾರಿ ಕೇಳುತ್ತಾಳೆ. ನಂತರ ಅವರಿಬ್ಬರೂ ಕಾಂಟಿನೆಂಟಲ್‌ ಫುಡ್‌ ಆರ್ಡರ್‌ ಮಾಡುತ್ತಾರೆ. ಬುಶೆಟಾ, ತಿರಮಿಸು ಎಂದಿಗೂ ಆ ಪದಗಳನ್ನೇ ಕೇಳದ ಭಾಗ್ಯಾಗೆ ಅವರು ಏನು ಹೇಳುತ್ತಿದ್ದಾರೆಂದು ಅರ್ಥವಾಗುವುದಿಲ್ಲ. ದಯವಿಟ್ಟು ಮತ್ತೊಮ್ಮೆ ಆರ್ಡರ್‌ ಹೇಳಿ ಎಂದು ಮನವಿ ಮಾಡುತ್ತಾಳೆ. ಇದಕ್ಕೆ ಕೋಪಗೊಳ್ಳುವ ಕಸ್ಟಮರ್‌ಗಳು ನಿಮ್ಮ ಸೂಪರ್‌ವೈಸರ್‌ ಕರೆಯಿರಿ ಎಂದು ಅರಚುತ್ತಾರೆ. ಅದನ್ನು ನೋಡಿ ಸೂಪರ್‌ವೈಸರ್‌ ಬಂದು ಸಾರಿ ಕೇಳುತ್ತಾರೆ.

ಭಾಗ್ಯಾಳನ್ನು ಪಕ್ಕಕ್ಕೆ ಕರೆದೊಯ್ಯುವ ಆತ ನೀವು ನಿಜವಾಗಿಯೂ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಮಾಡಿ ಇಂಟರ್ನ್‌ಶಿಪ್‌ ಮುಗಿಸಿ ಇಲ್ಲಿಗೆ ಬಂದಿದ್ದೀರಾ? ಆರ್ಡರ್‌ ತೆಗೆದಕೊಳ್ಳಲು ಬರುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸುತ್ತಾರೆ. ಮತ್ತೆ ಇದು ರಿಪೀಟ್‌ ಆದರೆ ಇದೇ ನಿಮ್ಮ ಕೆಲಸದ ಮೊದಲ ದಿನ, ಕೊನೆಯ ದಿನವಾಗುತ್ತದೆ ಎಂದು ಎಚ್ಚರಿಸುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳುವ ಭಾಗ್ಯಾ ಕೆಲಸ ಉಳಿಸಿಕೊಳ್ಳಲು ಪಣ ತೊಡುತ್ತಾಳೆ.

ಭಾಗ್ಯಾ ಇಂಗ್ಲೀಷ್‌ ಕಲಿಯುತ್ತಾಳಾ? ಇತ್ತ ಕುಸುಮಾ ಕಥೆ ಏನು? ಶ್ರೇಷ್ಠಾ , ತಾಂಡವ್‌ ಭಾಗ್ಯಾ ಕೆಲಸ ಮಾಡುವ ಹೋಟೆಲ್‌ಗೆ ಬರಲಿದ್ದಾರಾ ಕಾದು ನೋಡಬೇಕು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner