Bhagyalakshmi Serial: ಮನೆ ನಡೆಸಲು ಹೋಟೆಲ್‌ನಲ್ಲಿ ಅಡುಗೆ ಕೆಲಸ ಕೇಳಲು ಹೋದ ಭಾಗ್ಯಾ, ಮುಂದೇನಾಯ್ತು?; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್ 22ರ ಎಪಿಸೋಡ್. ಮನೆ ಇಎಂಐ ಕಟ್ಟಲು ಭಾಗ್ಯಾ ಕೆಲಸ ಮಾಡಲು ನಿರ್ಧರಿಸುತ್ತಾಳೆ. ಅದಕ್ಕಾಗಿ ಹೋಟೆಲ್‌ನಲ್ಲಿ ಅಡುಗೆ ಕೆಲಸ ಹುಡುಕಿ ಹೋಗುತ್ತಾಳೆ. ಆದರೆ ಹೋಟೆಲ್ ಮಾಲೀಕನ ವರ್ತನೆ ಕಂಡು ಭಾಗ್ಯಾ ಗಾಬರಿ ಆಗಿ ಅಲ್ಲಿಂದ ಹೊರ ಬರುತ್ತಾಳೆ.
Bhagyalakshmi Serial: ಒಂದೇ ಮನೆಯಲ್ಲಿದ್ದರೂ ಭಾಗ್ಯಾ ಹಾಗೂ ತಾಂಡವ್ ಬೇರೆ ಬೇರೆ ವಾಸಿಸುತ್ತಿದ್ದಾರೆ. ಕುಸುಮಾ, ಮನೆಯನ್ನು 2 ಭಾಗಗಳನ್ನಾಗಿ ಮಾಡಿದ ನಂತರ ತಾಂಡವ್ ಒಂದು ಕಡೆ, ಉಳಿದವರು ಮತ್ತೊಂದು ಕಡೆ ವಾಸಿಸುವಂತೆ ಆಗಿದೆ. ಅಪ್ಪ, ಅಮ್ಮ, ಮಕ್ಕಳು ನನ್ನ ಕಡೆಗೆ ಇಲ್ಲ ಎಂದು ತಾಂಡವ್ ಕೋಪದಿಂದ ಕುದಿಯುತ್ತಿದ್ದಾನೆ.
ನನ್ನನ್ನು ಬಿಟ್ಟು ಹೋದ ಇವರ್ಯಾರೂ ನೆಮ್ಮದಿಯಾಗಿರಬಾರದು ಎಂದು ತಾಂಡವ್ ನಿರ್ಧರಿಸಿದಂತಿದೆ. ಇದೇ ಕಾರಣಕ್ಕೆ ಪರೀಕ್ಷೆಗೆ ಹೊರಟಿರುವ ಭಾಗ್ಯಾಳನ್ನು ಕರೆದು ತಾಂಡವ್, ಅರ್ಧ ಮನೆ ಮಾತ್ರ ನನ್ನದು, ಉಳಿದ ಅರ್ಧ ಮನೆ ನಿಮ್ಮದು ಆದರೆ ಈ ಮನೆಗೆ ಪೂರ್ತಿ ಇಎಂಐ ಏಕೆ ಕಟ್ಟಬೇಕು? ನೀನು ಉಳಿದದ್ದು ಕಟ್ಟು, ಇಲ್ಲವಾದರೆ ನಿನ್ನ ಜೊತೆ ಇರುವವರನ್ನೆಲ್ಲಾ ಕರೆದುಕೊಂಡು ಮನೆ ಬಿಟ್ಟು ಹೋಗು ಎಂದು ಹೇಳುತ್ತಾನೆ. ತಾಂಡವ್ ಕುತಂತ್ರವನ್ನು ಅರ್ಥ ಮಾಡಿಕೊಂಡ ಭಾಗ್ಯಾ, ಸರಿ ಇನ್ಮುಂದೆ ಅರ್ಧ ಇಎಂಐ ನಾನು ಕಟ್ಟುತ್ತೇನೆ ಎನ್ನುತ್ತಾಳೆ. ಹೇಗೆ ಕಟ್ಟುತ್ತೀಯ ಎಂದು ತಾಂಡವ್ ಪ್ರಶ್ನಿಸುತ್ತಾನೆ. ಅದು ನಿನಗೆ ಬೇಡದ ವಿಚಾರ ನನ್ನ ಸೊಸೆ ಹೇಗಾದರೂ ಮಾಡಿ ಹಣ ಕಟ್ಟುತ್ತಾಳೆ. ನಿನಗೆ ಅದರ ಚಿಂತೆ ಬೇಡ ಎಂದು ಕುಸುಮಾ ಹೇಳುತ್ತಾಳೆ. ಭಾಗ್ಯಾ ಹೇಗೆ ಹಣ ಹೊಂದಿಸಬಹುದು ಎಂಬ ವಿಚಾರ ತಾಂಡವ್‌ಗೆ ಗೊಂದಲವಾಗುತ್ತದೆ.
ಭಾಗ್ಯಾಗೆ ಅವಳ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸುವ ಬಾಬಾ
ಪರೀಕ್ಷೆ ಮುಗಿಸಿಕೊಂಡು ಮಗಳಿಗಾಗಿ ಕಾಯುತ್ತಿದ್ದ ಭಾಗ್ಯಾಗೆ ಬಾಬಾ ಎದುರಾಗುತ್ತಾರೆ. ಇನ್ಮುಂದೆ ನಿನ್ನ ಜೀವನ ಬದಲಾಗಲಿದೆ. ನಿನ್ನ ಸಾಮರ್ಥ್ಯ ಏನೆಂದು ನಿನಗೆ ಅರ್ಥವಾಗುವ ಸಮಯ ಬಂದಿದೆ ಎಂದು ಆಶೀರ್ವಾದ ಮಾಡುತ್ತಾರೆ. ಭಾಗ್ಯಾಗೆ ಮನೆ ಹೇಗೆ ನಿಭಾಯಿಸಬೇಕು ಎಂಬುದೇ ದೊಡ್ಡ ಚಿಂತೆಯಾಗುತ್ತದೆ. ಅದೇ ಯೋಚನೆಯಲ್ಲಿರುವಾಗ ತನ್ವಿ ಬರುತ್ತಾಳೆ. ಪರೀಕ್ಷೆ ಹೇಗೆ ಮಾಡಿದೆ ಎಂದು ಭಾಗ್ಯಾ ಮಗಳಿಗೆ ಕೇಳುತ್ತಾಳೆ. ಬಹಳ ಸುಲಭ ಇತ್ತು. ನಾನಂತೂ ಯಾವ ವರ್ಷ ಕೂಡಾ ವಿಜ್ಞಾನ ಪರೀಕ್ಷೆಯನ್ನು ಇಷ್ಟು ಚೆನ್ನಾಗಿ ಬರೆದಿಲ್ಲ ಎಂದು ತನ್ವಿ ಖುಷಿ ಪಡುತ್ತಾಳೆ. ಮನೆಗೆ ಹೋದ ಕೂಡಲೇ ಬಾದಾಮಿ ಹಲ್ವಾ ಮಾಡಿಕೊಡಿ, ಅಡುಗೆಯಲ್ಲಿ ನಿಮ್ಮನ್ನು ಮೀರಿಸುವವರು ಯಾರೂ ಇಲ್ಲ ಎನ್ನುತ್ತಾಳೆ.
ತನ್ವಿ, ತನ್ನ ಅಡುಗೆ ಬಗ್ಗೆ ಹೇಳಿದಾಗ ಭಾಗ್ಯಾಗೆ ನಾನು ಏನು ಕೆಲಸ ಮಾಡಬಹುದು ಎಂಬ ಐಡಿಯಾ ಸಿಗುತ್ತದೆ. ತನ್ವಿಯನ್ನು ಆಟೋ ಹತ್ತಿ ಕಳಿಸಿ ಭಾಗ್ಯಾ ಹೋಟೆಲ್‌ನಲ್ಲಿ ಕೆಲಸ ಹುಡುಕಿ ಹೋಗುತ್ತಾಳೆ. ಬಟ್ಟೆ ಹೊಲಿದು ಹಣ ಸಂಪಾದಿಸುತ್ತೇನೆ ಎಂದು ಹೇಳಿದಾಗ ಕುಸುಮಾ ಕೋಪಗೊಂಡಿದ್ದನ್ನು ಭಾಗ್ಯಾ ನೆನಪಿಸಿಕೊಳ್ಳುತ್ತಾಳೆ. ಆದರೆ ಮನೆ ನಡೆಸಲು ನನಗೆ ಬೇರೆ ದಾರಿ ಇಲ್ಲ ಎಂದು ಅರಿವಾದ ಭಾಗ್ಯಾ ಅತ್ತೆ ಮಾವನಿಗೆ ಮನಸಿನಲ್ಲೇ ಕ್ಷಮೆ ಕೇಳುತ್ತಾಳೆ. ಹೋಟೆಲ್ ಓನರ್ ಬಳಿ ಹೋಗಿ ಕೆಲಸ ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ ಆತ ಕೆಲಸದವರ ಮೇಲೆ ಅರಚಾಡುವುದನ್ನು ಕಂಡ ಭಾಗ್ಯಾ ಗಾಬರಿ ಆಗುತ್ತಾಳೆ. ಕೂಡಲೇ ಅಲ್ಲಿಂದ ಹೊರ ಬರುತ್ತಾಳೆ.
ತಾಂಡವ್‌ಗೆ ಬೆಸ್ಟ್ ಎಂಪ್ಲಾಯ್ ಪ್ರಶಸ್ತಿ
ಇತ್ತ ತಾಂಡವ್ ಆಫೀಸಿನಲ್ಲಿ ಚಿಕ್ಕ ಕಾರ್ಯಕ್ರಮ ಮಾಡುವ ಮೂಲಕ ಆತನಿಗೆ ಬೆಸ್ಟ್ ಎಂಪ್ಲಾಯ್ ಪ್ರಶಸ್ತಿಯನ್ನು ಅನೌನ್ಸ್ ಮಾಡುತ್ತಾರೆ. ತಾಂಡವ್ ಹಾಗೂ ಶ್ರೇಷ್ಠಾ ಕೆಲವೇ ದಿನಗಳಲ್ಲಿ ಮದುವೆ ಆಗುತ್ತಿದ್ದಾರೆ ಎಂಬ ವಿಚಾರವನ್ನು ಸುಂದರಿಯಿಂದ ತಿಳಿದುಕೊಂಡ ಪೂಜಾ ನೇರವಾಗಿ ತಾಂಡವ್ ಆಫೀಸಿಗೆ ಬರುತ್ತಾಳೆ. ನಾನು ಶಿಸ್ತಿನ ಮನುಷ್ಯ ಎಂದೆಲ್ಲಾ ಭಾಷಣ ಮಾಡುವ ತಾಂಡವ್ ಬಗ್ಗೆ ಪೂಜಾ ಕೋಪಗೊಳ್ಳುತ್ತಾಳೆ. ನೇರವಾಗಿ ವೇದಿಕೆ ಮೇಲೆ ಬರುವ ಪೂಜಾ, ಮನೆಯಲ್ಲಿ ಮಾಡಬಾರದ ಕೆಲಸ ಮಾಡಿ ನಾನು ಹಾಗೆ ಹೀಗೆ ಎಂದು ಭಾಷಣ ಮಾಡುತ್ತಿದ್ದೀರ ಎಂದು ಕೇಳುತ್ತಾಳೆ. ಪೂಜಾಳನ್ನು ನೋಡಿ ತಾಂಡವ್ ಶಾಕ್ ಆಗುತ್ತಾನೆ. ನಂತರ ವೇದಿಕೆ ಮೇಲಿಂದ ಪಕ್ಕಕ್ಕೆ ಬರುವ ತಾಂಡವ್ ಎಲ್ಲರ ಮುಂದೆ ಏಕೆ ಹೀಗೆ ನಡೆದುಕೊಳ್ಳುತ್ತಿದ್ದೀಯ ಎಂದು ಕೇಳುತ್ತಾನೆ.
ನೀವು ಮಾಡುತ್ತಿರುವುದು ಸರಿನಾ? ನನ್ನ ಅಕ್ಕ ಇರುವಾಗಲೇ ನೀವು ಈ ಶ್ರೇಷ್ಠಾಳನ್ನು ಹೇಗೆ ಮದುವೆ ಆಗುತ್ತಿದ್ದೀರಿ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ಶ್ರೇಷ್ಠಾ, ಹೌದು ನಾವು ಇನ್ನು 10 ದಿನಗಳಲ್ಲಿ ಮದುವೆ ಆಗುತ್ತಿದ್ದೇವೆ. ಅದೇನು ಮಾಡಲು ಸಾಧ್ಯವೋ ಮಾಡು ಎಂದು ಪೂಜಾಗೆ ಚಾಲೆಂಜ್ ಮಾಡುತ್ತಾಳೆ.
ಶ್ರೇಷ್ಠಾ, ತಾಂಡವ್ ಮನೆಯವರಿಗೆ ಎಲ್ಲವನ್ನೂ ಹೇಳುತ್ತಾಳಾ? ಅಂದುಕೊಂಡಂತೆ ತಾಂಡವ್‌ನನ್ನು ಮದುವೆ ಆಗಲಿದ್ದಾಳಾ ಕಾದು ನೋಡಬೇಕು.