ನನ್ನ ಪಾಲಿಗೆ ನೀವು ಸತ್ತಂತೆ, ಅಪ್ಪ ಅಮ್ಮನೊಂದಿಗೆ ಸಂಬಂಧ ಕಡಿದುಕೊಂಡು ಹೊರಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 23ರ ಎಪಿಸೋಡ್. ತಾಯಿ ಕೆನ್ನೆಗೆ ಹೊಡೆದಿದ್ದಕ್ಕೆ ಕೋಪಗೊಳ್ಳುವ ಶ್ರೇಷ್ಠಾ ನಿಮ್ಮಂಥ ತಂದೆ ತಾಯಿ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎನ್ನುತ್ತಾಳೆ. ಶ್ರೇಷ್ಠಾ ಮಾತಿಗೆ ಯಶೋಧಾ-ಶ್ರೀವರ ಬೇಸರ ವ್ಯಕ್ತಪಡಿಸುತ್ತಾರೆ.
Bhagyalakshmi Serial: ಜಾತಕದ ದೋಷ ಕಳೆಯಲು ಮದುವೆ ಶಾಸ್ತ್ರ ನಡೆಯುವಾಗ ಭಾಗ್ಯಾ ಬಂದು ಅಡ್ಡಿಪಡಿಸಿದ್ದಕ್ಕೆ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ತಾಯಿ ಮಾಡಬೇಕಿದ್ದ ಶಾಸ್ತ್ರವನ್ನು ತಾನು ಮಾಡುವ ಭಾಗ್ಯಾ ಶ್ರೇಷ್ಠಾಗೆ ಬುದ್ಧಿ ಹೇಳುತ್ತಾಳೆ. ಆದರೆ ಶ್ರೇಷ್ಠಾ ಮಾತ್ರ ನಾನು ಏನೂ ತಪ್ಪು ಮಾಡಿಲ್ಲ, ಎಲ್ಲಾ ನನ್ನದೇ ಸರಿ ಎನ್ನುವಂತೆ ವರ್ತಿಸುತ್ತಾಳೆ.
ಶ್ರೇಷ್ಠಾ ವರ್ತನೆಗೆ ಮನನೊಂದ ಯಶೋಧಾ
ಮದುವೆ ಆಗಿ ಮಕ್ಕಳು ಇರುವ ಹುಡುಗನನ್ನು ಮದುವೆ ಆಗುವುದು ಸರಿ ಅಲ್ಲ, ಅವನು ನಿನಗೆ ಮೋಸ ಮಾಡುತ್ತಿದ್ದಾನೆ. ಹೆಂಡತಿ ಮಕ್ಕಳ ಬಳಿಯೂ ಅವನು ಪ್ರಾಮಾಣಿಕತೆಯಿಂದ ಇಲ್ಲ. ಈ ಮದುವೆಗೆ ನಮ್ಮ ಒಪ್ಪಿಗೆ ಇಲ್ಲ, ಮದುವೆ ನಡೆಯಲು ನಾವು ಬಿಡುವುದೂ ಇಲ್ಲ ಎಂದು ಶ್ರೇಷ್ಠಾ ತಾಯಿ ಯಶೋಧಾ ಹೇಳುತ್ತಾಳೆ. ತಾಯಿ ಮಾತಿಗೆ ಕೋಪಗೊಳ್ಳುವ ಶ್ರೇಷ್ಠಾ, ತರುಣ್ ನನಗೆ ಮೋಸ ಮಾಡುತ್ತಿಲ್ಲ. ನಾವಿಬ್ಬರೂ ಇಷ್ಟಪಟ್ಟು ಮದುವೆ ಆಗುತ್ತಿದ್ದೇವೆ. ನನಗೆ ಯಾರ ಒಪ್ಪಿಗೆಯೂ ಬೇಕಿಲ್ಲ. ಯಾರು ಎಷ್ಟೇ ಬೇಡ ಎಂದರೂ ನಾನು ಅವನನ್ನೇ ಮದುವೆ ಆಗುವುದು ಎನ್ನುತ್ತಾಳೆ. ಹೆತ್ತ ಅಪ್ಪ ಅಮ್ಮನಿಗೆ ಈ ರೀತಿ ನೋವು ಕೊಡಬಾರದು, ನೀನು ಈ ರೀತಿ ಬುದ್ಧಿ ಕಲಿಯುತ್ತೀಯ ಎಂದು ಮೊದಲೇ ಗೊತ್ತಿದ್ದರೆ ಹುಟ್ಟುವ ಮೊದಲೇ ಚಿವುಟಿ ಹಾಕುತ್ತಿದ್ದೆ ಎಂದು ಯಶೋಧಾ ಕಣ್ಣೀರಿಡುತ್ತಾಳೆ.
ಅಮ್ಮನ ಮಾತಿಗೆ ಪ್ರತಿಕ್ರಿಯಿಸುವ ಶ್ರೇಷ್ಠಾ , ಇಷ್ಟು ಹೊತ್ತು ಈ ಮಾತು ಏಕೆ ಬರಲಿಲ್ಲ ಎಂದುಕೊಳ್ಳುತ್ತಿದ್ದೆ, ನನ್ನಂಥ ಮಗಳು ಬೇಡ ಎಂದರೆ ಏನು ಅರ್ಥ? ಹಾಗಾದರೆ ಭಾಗ್ಯಾಳಂಥ ಮಗಳು ಬೇಕಿತ್ತಾ ಎನ್ನುತ್ತಾಳೆ. ಯಶೋಧಾ ಹೌದು ಎನ್ನುತ್ತಾಳೆ. ಇವಳಿಗಾಗಿ ನೀನು ನನ್ನನ್ನು ದೂರ ಮಾಡುತ್ತಿದ್ದೀಯ ನಿನ್ನಂಥ ತಾಯಿ ಇದ್ದರೂ ಒಂದೇ , ಇಲ್ಲದಿದ್ದರೂ ಒಂದೇ ಎಂದು ಏಕವಚನದಲ್ಲಿ ಮಾತನಾಡುತ್ತಾಳೆ. ಈ ಮಾತಿಗೆ ಬೇಸರಗೊಳ್ಳುವ ಯಶೋಧಾ, ಒಂದು ತಂಬಿಗೆ ನೀರು ತಂದು ತಲೆ ಮೇಲೆ ಸುರಿದುಕೊಂಡು ಇನ್ಮುಂದೆ ನೀನು ನನ್ನ ಮಗಳೇ ಅಲ್ಲ ಎನ್ನುತ್ತಾಳೆ. ಭಾಗ್ಯಾ, ಕುಸುಮಾ ಯಶೋಧಾಗೆ ಸಮಾಧಾನ ಮಾಡುತ್ತಾರೆ. ಎಲ್ಲರ ಮನೆಯಲ್ಲೂ ಈ ರೀತಿ ಗಲಾಟೆ ಸಹಜ. ಆದರೆ ನೀವು ಬೇಸರ ಮಾಡಿಕೊಳ್ಳಬೇಡಿ. ಕುಳಿತು ನಿಧಾನವಾಗಿ ಮಾತನಾಡೋಣ, ಎಲ್ಲವೂ ಸರಿ ಆಗುತ್ತದೆ ಎನ್ನುತ್ತಾಳೆ.
ಅಪ್ಪ ಎದೆ ನೋವಿನಿಂದ ನರಳಿದರೂ ತಲೆ ಕೆಡಿಸಿಕೊಳ್ಳದ ಶ್ರೇಷ್ಠಾ
ಏನೂ ಸರಿ ಆಗುವುದಿಲ್ಲ, ಎಲ್ಲವೂ ಹೀಗೆ ಇರುತ್ತದೆ ಎಂದು ಕೋಪದಿಂದ ಅರಚುವ ಶ್ರೇಷ್ಠಾ ಅಲ್ಲಿಂದ ಹೊರಡಲು ಸಿದ್ಧಳಾಗುತ್ತಾಳೆ. ಮಗಳನ್ನು ತಡೆಯುವ ಶ್ರೀವರ ಅವಳಿಗೆ ಕೈ ಮುಗಿದು , ಮಗಳೇ ದಯವಿಟ್ಟು ಹೀಗೆಲ್ಲಾ ವರ್ತಿಸಬೇಡ. ನಿನ್ನ ಒಳ್ಳೆಯದಕ್ಕೆ ನಾವು ಇದನ್ನೆಲ್ಲಾ ಹೇಳುತ್ತಿರುವುದು ದಯವಿಟ್ಟು ಹೋಗಬೇಡ ಎಂದು ಮನವಿ ಮಾಡುತ್ತಾರೆ. ಆದರೆ ನಿಷ್ಕರುಣಿ ಶ್ರೇಷ್ಠಾ ತಂದೆ ಮಾತನ್ನೂ ಮನ್ನಿಸುವುದಿಲ್ಲ. ಅವರನ್ನು ತಳ್ಳಿ ಅಲ್ಲಿಂದ ಹೋಗುತ್ತಾಳೆ. ಮಗಳ ವರ್ತನೆ ಕಂಡು ಶ್ರೀವರ ಎದೆ ನೋವಿನಿಂದ ಕುಸಿದು ಬೀಳುತ್ತಾರೆ. ತಂದೆ ತಾಯಿ ಇಷ್ಟು ಮನವಿ ಮಾಡಿದರೂ ನಿನಗೆ ಕರುಣಿ ಇಲ್ಲದೆ ಹೋಗುತ್ತಿದ್ದೀಯ, ಹೀಗೆಲ್ಲಾ ಮಾಡಬೇಡ ಎಂದು ಕುಸುಮಾ, ಭಾಗ್ಯಾ ಶ್ರೇಷ್ಠಾಗೆ ಬುದ್ಧಿ ಹೇಳುತ್ತಾರೆ.
ಈಗಾಗಲೇ ಇವರು ಈ ರೀತಿ ಬಹಳ ಸಾರಿ ನಾಟಕ ಮಾಡಿದ್ದಾರೆ. ಈಗಲೂ ಇವರದ್ದು ನಾಟಕ ಇದನ್ನೆಲ್ಲಾ ನಾನು ನಂಬುವುದಿಲ್ಲ. ಅವರಿಗೆ ನಾನು ಬೇಡವೆಂದರೆ ನನಗೂ ಅವರು ಬೇಡ, ನಾನು ಅವರ ಪಾಲಿಗೆ ಸತ್ತಿದ್ದೇನೆ ಎಂದರೆ ನನ್ನ ಪಾಲಿಗೂ ಅವರು ಸತ್ತಂತೆ. ನನಗೆ ನಿಮ್ಮ ವಸ್ತುಗಳು ಏನೂ ಬೇಡ, ಎಲ್ಲವನ್ನೂ ಎಲ್ಲೇ ಹಾಕಿದ್ದೇನೆ, ತೆಗೆದುಕೊಂಡು ಇಲ್ಲಿಂದ ಹೊರಡಿ ಎನ್ನುತ್ತಾಳೆ. ಶ್ರೇಷ್ಠಾ ವಿಚಾರ ನಂತರ ಮಾತನಾಡೋಣ ಮೊದಲು ಆಸ್ಪತ್ರೆಗೆ ಹೋಗೋಣ ಎಂದು ಭಾಗ್ಯಾ ಹೇಳುತ್ತಾಳೆ. ಶ್ರೀವರನನ್ನು ಆಸ್ಪತ್ರೆಗೆ ಸೇರಿಸಲು ಟ್ಯಾಕ್ಸಿ ಬುಕ್ ಮಾಡುವಂತೆ ಪೂಜಾಗೆ ಹೇಳುತ್ತಾಳೆ. ಇತ್ತ ಮರೆಯಲ್ಲಿ ನಿಂತು ಎಲ್ಲವನ್ನೂ ಗಮನಿಸುವ ತಾಂಡವ್‌ಗೆ, ಶ್ರೇಷ್ಠಾ ವರ್ತನೆ ಕಿರಿಕಿರಿ ಎನಿಸುತ್ತದೆ.
ಶ್ರೀವರ ಆರೋಗ್ಯ ಸುಧಾರಿಸಲಿದೆಯಾ? ಶ್ರೇಷ್ಠಾ ಮುಂದಿನ ನಡೆ ಏನು ಅನ್ನೊದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ