ಮುನಿಸು ಬಿಟ್ಟು ಮತ್ತೆ ಕೆಲಸಕ್ಕೆ ವಾಪಸ್ಸಾದ ಕುಸುಮಾ, ಇತ್ತ ಭಾಗ್ಯಾ ವರ್ತನೆಯಿಂದ ಚೆಫ್‌ಗೆ ಕಿರಿಕಿರಿ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 24ರ ಎಪಿಸೋಡ್: ಕುಸುಮಾ ಮನೆ ಪರಿಸ್ಥಿತಿಯನ್ನು ನೆನೆದು ಮತ್ತೆ ಕೆಲಸಕ್ಕೆ ವಾಪಸ್ ಹೋಗುತ್ತಾಳೆ. ಮತ್ತೊಂದೆಡೆ ಭಾಗ್ಯಾ ತನ್ನ ವರ್ತನೆಯಿಂದ ಚೆಫ್‌ಗೆ ಕಿರಿ ಕಿರಿ ಮಾಡುತ್ತಾಳೆ.

Bhagyalakshmi Serial: ಕುಸುಮಾಳನ್ನು ಕೆಲಸದಿಂದ ಹೊರ ಕಳಿಸುವ ದುರುದ್ದೇಶದಿಂದ ಹೋಟೆಲ್ ಚೆಫ್, ಗ್ರಾಹಕರಿಗೆ ಹಳಸಿದ ಚಟ್ನಿ ಕೊಟ್ಟು ಆ ತಪ್ಪನ್ನು ಕುಸುಮಾ ಮೇಲೆ ಹೊರಿಸುತ್ತಾನೆ. ಗ್ರಾಹಕರು ದೂರು ನೀಡಿದ್ದರಿಂದ ಹೋಟೆಲ್ ಮಾಲೀಕ ಕೋಪಗೊಂಡು ಕುಸುಮಾ ಮೇಲೆ ರೇಗುತ್ತಾನೆ. ಆಕೆ ತಾನು ತಪ್ಪು ಮಾಡಿಲ್ಲವೆಂದರೂ ಆತ ನಂಬುವ ಸ್ಥಿತಿಯಲ್ಲಿ ಇಲ್ಲ.
ಮನೆ ಪರಿಸ್ಥಿತಿ ನೆನೆದು ಮತ್ತೆ ಕೆಲಸಕ್ಕೆ ವಾಪಸ್ಸಾದ ಕುಸುಮಾ
ಕುಸುಮಾ, ಗ್ರಾಹಕರಿಗೆ ಹಳಸಿದ ಚಟ್ನಿ ಕೊಟ್ಟಿರುವ ವಿಚಾರಕ್ಕಿಂತ ಆಕೆ ಗ್ರಾಹಕರೊಂದಿಗೆ ಮಾತನಾಡುವ ರೀತಿ, ತಮ್ಮ ಹೋಟೆಲ್ ಗುಟ್ಟನ್ನು ಬಿಟ್ಟುಕೊಟ್ಟ ಕಾರಣ ಮಾಲೀಕ ಕುಸುಮಾ ಮೇಲೆ ರೇಗಾಡುತ್ತಾನೆ. ನಂಬಿಕೆ ಇಲ್ಲದ ಕಡೆ ನಾನು ಕೆಲಸ ಮಾಡುವುದಿಲ್ಲ ಎಂದು ಕುಸುಮಾ ಅಲ್ಲಿಂದ ಹೊರಡುತ್ತಾಳೆ. ಆದರೆ ರಸ್ತೆಯಲ್ಲಿ ಮನೆ ಪರಿಸ್ಥಿತಿ ಬಗ್ಗೆ ಯೋಚಿಸುತ್ತಾಳೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಶ್ರೇಷ್ಠಾ ಹಣ ವಾಪಸ್ ಕೊಡಬೇಕು, ಮನೆ ಇಎಂಐ ಕಟ್ಟಬೇಕು ಏನು ಮಾಡುವುದು? ದೊರೆತಿರುವ ಕೆಲಸ ಬಿಟ್ಟರೆ ಚೆನ್ನಾಗಿರುವುದಿಲ್ಲ, ಬೇರೆ ಕಡೆ ಕೆಲಸ ಹುಡುಕುವುದೂ ಕಷ್ಟವಾಗಬಹುದು. ಹೇಗೋ ಅನುಸರಿಸಿಕೊಂಡು ಹೋಗೋಣ, ಈ ಕೆಲಸ ಬಿಡುವುದು ಬೇಡ ಎಂದು ನಿರ್ಧರಿಸಿ ಮತ್ತೆ ಹೋಟೆಲ್ ಕಡೆ ಹೋಗುತ್ತಾಳೆ.
ಇತ್ತ, ಬಂದವರೆಲ್ಲಾ ಕೆಲಸ ಬಿಟ್ಟು ಹೋಗುತ್ತಿದ್ದಾರೆ ಎಂದು ಹೋಟೆಲ್ ಮಾಲೀಕ ಬೇಸರ ವ್ಯಕ್ತಪಡಿಸುತ್ತಾನೆ. ಗೋಪಾಲಣ್ಣನಿಗೆ ಹೇಳಿದರೆ ಹೊಸ ಕೆಲಸದವರನ್ನು ಕಳಿಸಬಹುದು ಎಂದು ಕೆಲಸದ ಬ್ರೋಕರ್‌ಗೆ ಕರೆ ಮಾಡಲು ಫೋನ್ ತೆಗೆದುಕೊಳ್ಳುತ್ತಾನೆ. ಅಷ್ಟರಲ್ಲಿ ಕುಸುಮಾ ಅಲ್ಲಿಗೆ ಬರುತ್ತಾಳೆ. ಸರ್ ಯಾರಿಗೂ ಹೇಳಬೇಡಿ ನಾನೇ ಈ ಕೆಲಸ ಮುಂದುವರೆಸುತ್ತೇನೆ, ನನಗೆ ಈ ಕೆಲಸ ಬಹಳ ಮುಖ್ಯ ಎನ್ನುತ್ತಾಳೆ. ಅವಳನ್ನು ನೋಡಿದ ಚೆಫ್ ಅಲ್ಲಿಗೆ ಬಂದು ಕುಸುಮಾ ಕಾಲೆಳೆಯುತ್ತಾನೆ. ಏಕೆ ವಾಪಸ್ ಬಂದಿದ್ದು ಬೆಕ್ಕು ಅಡ್ಡ ಬಂತಾ? ಹೋಗುವಾಗ ಇದ್ದ ಪೌರುಷ ಈಗ ಏಕೆ ಇಲ್ಲ ಎಂದು ಪ್ರಶ್ನಿಸುತ್ತಾನೆ? ಸುಮ್ಮನಿರುವಂತೆ ಹೋಟೆಲ್ ಮಾಲೀಕ ಚೆಫ್‌ಗೆ ಸೂಚಿಸುತ್ತಾನೆ. ಆಯ್ತು ಕುಸುಮಾ ಅನುಸರಿಸಿಕೊಂಡು ಕೆಲಸ ಮಾಡಿಕೊಂಡು ಹೋಗು ಎನ್ನುತ್ತಾನೆ.
ಸಹೋದ್ಯೋಗಿ ಹಿತಾ ಸಹಾಯ ಕೋರಿದ ಭಾಗ್ಯಾ
ಇತ್ತ ಭಾಗ್ಯಾಗೆ ಭಯ ಶುರು ಆಗಿದೆ. ಹೋಟೆಲ್‌ಗೆ ಬಂದ ಶ್ರೇಷ್ಠಾಳನ್ನು ನೋಡಿದ ಭಾಗ್ಯಾ, ಶ್ರೇಷ್ಠಾ ನನ್ನನ್ನು ನೋಡಿದಂತೆ ಕಷ್ಟ ಎಂದು ಅವಳಿಗೆ ಕಾಣದಂತೆ ಅಲ್ಲಿಂದ ವಾಸಪ್ ಬರುತ್ತಾಳೆ. ಸಹೋದ್ಯೋಗಿ ಹಿತಾ ಬಳಿ ಬಂದು ಸಮಸ್ಯೆ ಹೇಳಿಕೊಳ್ಳುತ್ತಾಳೆ. ನಾನು ಕೆಲಸಕ್ಕೆ ಬಂದಿರುವುದು ಯಾರಿಗೂ ಗೊತ್ತಿಲ್ಲ. ಮನೆಯವರಿಗೆ ಗೊತ್ತಾದರೆ ಕಷ್ಟ, ನನ್ನ ಪರಿಚಯದವರು ಇಲ್ಲೇ ಇದ್ದಾರೆ. ನೀವು ಹೋಗಿ ಅವರನ್ನು ಮಾತನಾಡಿಸಲು ಸಾಧ್ಯವೇ ಎಂದು ಮನವಿ ಮಾಡಿಕೊಳ್ಳುತ್ತಾಳೆ. ಭಾಗ್ಯಾ ಕಷ್ಟವನ್ನು ಅರ್ಥ ಮಾಡಿಕೊಂಡ ಹಿತಾ, ಸರಿ ನಿಮ್ಮ ಕಸ್ಟಮರ್ ನಾನು ನೋಡುತ್ತೇನೆ. ಸ್ವಿಮ್ಮಿಂಗ್ ಪೂಲ್ ಬಳಿ ಇಬ್ಬರು ಕುಳಿತಿದ್ದಾರೆ, ಅವರ ಬಳಿ ಹೋಗಿ ಆರ್ಡರ್ ತೆಗೆದುಕೊಳ್ಳಿ ಎನ್ನುತ್ತಾಳೆ. ಭಾಗ್ಯಾಗೆ ಆ ಕೆಲಸ ಕೂಡಾ ಕಷ್ಟ. ಆದರೂ ಅವರ ಬಳಿ ಹೋಗಿ ಏನು ಬೇಕು ಎಂದು ಕೇಳಿ ಅದನ್ನು ಮೆನು ಕಾರ್ಡ್‌ನಲ್ಲಿ ಗುರುತು ಹಾಕಿಕೊಳ್ಳುತ್ತಾಳೆ.
ಭಾಗ್ಯಾ ಈ ರೀತಿ ಪದೇ ಪದೆ ಮೆನು ಕಾರ್ಡ್‌ನಲ್ಲಿ ಎಲ್ಲವನ್ನೂ ಗುರುತು ಹಾಕಿಕೊಳ್ಳುವುದನ್ನು ನೋಡಿ ಆ ಜೋಡಿಗೆ ಕಿರಿಕಿರಿ ಎನಿಸುತ್ತದೆ. ಅಲ್ಲಿಂದ ಕಿಚನ್‌ಗೆ ಹೋಗುವ ಭಾಗ್ಯಾ ಚೆಫ್ ಬಳಿ ಆರ್ಡರ್ ಕೊಡುತ್ತಾಳೆ. ಆದರೆ ಭಾಗ್ಯಾ ಎಲ್ಲವನ್ನೂ ಮೆನು ಕಾರ್ಡಿನಲ್ಲಿ ಗುರುತುಹಾಕಿಕೊಂಡು ಬಂದಿದ್ದನ್ನು ನೋಡಿ ಚೆಫ್ ಕೂಡಾ ಕೋಪಗೊಳ್ಳುತ್ತಾನೆ. ಈ ರೀತಿಯ ಆರ್ಡರ್ ನಾನು ಎಂದಿಗೂ ತೆಗೆದುಕೊಂಡಿಲ್ಲ, ಸರಿ ನಾನು ಎಲ್ಲಾ ರೆಡಿ ಮಾಡಿದ ನಂತರ ಕೂಗುತ್ತೇನೆ ಹೊರಗೆ ಇರಿ ಎನ್ನುತ್ತಾನೆ. ಮತ್ತೊಂದೆಡೆ ಶ್ರೇಷ್ಠಾ ಜೊತೆ ಮದುವೆ ಡೆಕೋರೇಷನ್ ಬಗ್ಗೆ ಮಾತನಾಡುವ ಹಿತಾಗೆ, ತಾಂಡವ್‌ಗೆ ಹೆಂಡತಿ ಮಕ್ಕಳು ಇದ್ದರೂ ಎರಡನೇ ಮದುವೆ ಆಗುತ್ತಿದ್ದಾನೆ ಎಂದು ತಿಳಿದು ಶಾಕ್ ಆಗುತ್ತಾಳೆ. ಇದು ನನ್ನ ವೈಯಕ್ತಿಕ ವಿಚಾರ, ನಾನು ಹೇಳಿದ ಕೆಲಸ ಮಾಡುವುದಷ್ಟೇ ನಿಮ್ಮ ಕೆಲಸ ಎಂದು ಶ್ರೇಷ್ಠಾ ಹಿತಾ ಮೇಲೆ ಕೋಪಗೊಳ್ಳುತ್ತಾಳೆ.
ಕುಸುಮಾ ಏನೂ ತಪ್ಪು ಮಾಡಿಲ್ಲ ಎಂದು ಹೋಟೆಲ್ ಮಾಲೀಕನಿಗೆ ತಿಳಿಯುವುದಾ? ಭಾಗ್ಯಾ ತನ್ನ ವರ್ತನೆಯಿಂದ ಕೆಲಸ ಕಳೆದುಕೊಳ್ಳುತ್ತಾಳಾ ಎಂಬುದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ವಿಭಾಗ