ಕನ್ನಡ ಸುದ್ದಿ  /  ಮನರಂಜನೆ  /  ಮದುವೆ ವಿಚಾರ ತಿಳಿದು ಮಚ್ಚು ಹಿಡಿದು ಶ್ರೇಷ್ಠಾ ಮನೆಗೆ ಬಂದೇಬಿಟ್ಲು ಭಾಗ್ಯಾ, ಹೆದರಿ ನಡುಗಿದ ತಾಂಡವ್‌ ಪ್ರಿಯೆ; ಭಾಗ್ಯಲಕ್ಷ್ಮೀ ಧಾರಾವಾಹಿ

ಮದುವೆ ವಿಚಾರ ತಿಳಿದು ಮಚ್ಚು ಹಿಡಿದು ಶ್ರೇಷ್ಠಾ ಮನೆಗೆ ಬಂದೇಬಿಟ್ಲು ಭಾಗ್ಯಾ, ಹೆದರಿ ನಡುಗಿದ ತಾಂಡವ್‌ ಪ್ರಿಯೆ; ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 25ರ ಎಪಿಸೋಡ್.‌ ಮದುವೆ ವಿಚಾರ ತಿಳಿದು ಕೋಪಗೊಂಡ ಭಾಗ್ಯಾ ಮಚ್ಚು ತಂದು ಕುತ್ತಿಗೆ ಕತ್ತರಿಸುವಂತೆ ಶ್ರೇಷ್ಠಾ ಕನಸು ಕಾಣುತ್ತಾಳೆ. ದುಡ್ಡು ಕದ್ದಿದ್ದಕ್ಕೆ ಭಾಗ್ಯಾ ಈ ಮಟ್ಟಿಗೆ ನನ್ನನ್ನು ಹೊಡೆದಿದ್ದಾಳೆ. ಇನ್ನು ಮದುವೆ ವಿಚಾರ ತಿಳಿದರೆ ಏನು ಮಾಡುತ್ತಾಳೋ ಎಂದು ಗಾಬರಿಯಾಗುತ್ತಾಳೆ.

ಮದುವೆ ವಿಚಾರ ತಿಳಿದು ಮಚ್ಚು ಹಿಡಿದು ಶ್ರೇಷ್ಠಾ ಮನೆಗೆ ಬಂದೇಬಿಟ್ಲು ಭಾಗ್ಯಾ, ಹೆದರಿ ನಡುಗಿದ ತಾಂಡವ್‌ ಪ್ರಿಯೆ; ಭಾಗ್ಯಲಕ್ಷ್ಮೀ ಧಾರಾವಾಹಿ
ಮದುವೆ ವಿಚಾರ ತಿಳಿದು ಮಚ್ಚು ಹಿಡಿದು ಶ್ರೇಷ್ಠಾ ಮನೆಗೆ ಬಂದೇಬಿಟ್ಲು ಭಾಗ್ಯಾ, ಹೆದರಿ ನಡುಗಿದ ತಾಂಡವ್‌ ಪ್ರಿಯೆ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ಶ್ರೇಷ್ಠಾಗೆ ಸರಿಯಾಗಿ ಬುದ್ಧಿ ಕಲಿಸಿ ತಾನು ಕೊಟ್ಟಿದ್ದ 1 ಲಕ್ಷ ರೂ ಹಣವನ್ನು ಭಾಗ್ಯಾ ವಾಪಸ್‌ ಪಡೆದು ತರುತ್ತಾಳೆ. ಭಾಗ್ಯಾ, ಶ್ರೇಷ್ಠಾಗೆ ಹೊಡೆಯುತ್ತಿದ್ದನ್ನು ನೋಡುವ ತಾಂಡವ್‌ ಅವಿತು ನಿಲ್ಲುತ್ತಾನೆ. ಆದರೆ ಮನೆಗೆ ಬಂದವನೇ ಏನೂ ಗೊತ್ತಿಲ್ಲದವನಂತೆ ನೀನು ದೇವಸ್ಥಾನಕ್ಕೆ ಎಂದು ಸುಳ್ಳು ಹೇಳಿ ಎಲ್ಲಿ ಸುತ್ತಾಡುತ್ತಿದ್ದೀಯ ಎಂದು ಭಾಗ್ಯಾಳನ್ನು ಪ್ರಶ್ನಿಸುತ್ತಾನೆ. ಅದರೆ ಭಾಗ್ಯಾ ನೀಡುವ ಖಡಕ್‌ ಉತ್ತರಕ್ಕೆ ತಾಂಡವ್‌ ಶಾಕ್‌ ಆಗುತ್ತಾನೆ.

ಅತ್ತೆ ಕೆಲಸಕ್ಕೆ ಹೋಗುತ್ತಿರುವ ವಿಚಾರ ತಿಳಿದು ಬೇಸರಗೊಂಡ ಭಾಗ್ಯಾ

ಅದೆಲ್ಲಾ ಬಿಡು, ಇವತ್ತು ಇಎಂಐ ಹಣ ಕೊಡುವೆ ಅಂತ ಹೇಳಿದ್ದೆ, ಏಕೆ ಹಣ ಎಲ್ಲೂ ಸಿಗಲಿಲ್ವಾ ಎಂದು ಕೊಂಕು ಮಾತನಾಡುತ್ತಾನೆ. ಭಾಗ್ಯಾ ಬ್ಯಾಗ್‌ನಿಂದ ಹಣ ತೆಗೆದವಳೇ ತಾಂಡವ್‌ ಕೈಗೆ ಹಣ ಕೊಟ್ಟು ಇದರಲ್ಲಿ 2 ತಿಂಗಳ ಇಎಂಐ ಇದೆ, ಕಟ್ಟಿ ಎನ್ನುತ್ತಾಳೆ. ತಾಂಡವ್‌ಗೆ ಭಾಗ್ಯಾ ನಡೆ ನೋಡಿ ಆಶ್ಚರ್ಯ ಎನಿಸುತ್ತದೆ. ಸೊಸೆ ಇಷ್ಟು ಧೈರ್ಯವಾಗಿ ಮಾತನಾಡುವುದನ್ನು ನೋಡಿ ಕುಸುಮಾ, ಧರ್ಮರಾಜ್‌ , ಸುನಂದಾ ಹಾಗೂ ಮಕ್ಕಳಿಗೆ ಖುಷಿಯಾಗುತ್ತದೆ. ಭಾಗ್ಯಾ ರೂಮ್‌ಗೆ ಬಂದು ಗುಂಡಣ್ಣನ ಫೀಸ್‌ಗೆ ಹಣ ಕೊಡುತ್ತಾಳೆ. ಅದನ್ನು ನೋಡುವ ಕುಸುಮಾ ಮಕ್ಕಳಿಗೆ ಏಕೆ ದುಡ್ಡು ಕೊಡುತ್ತಿದ್ದೀಯ ಎಂದು ಪ್ರಶ್ನಿಸುತ್ತಾಳೆ. ಅಜ್ಜಿ, ಅಮ್ಮ ಸುಮ್ಮನೆ ನಮಗೆ ದುಡ್ಡು ಕೊಡುತ್ತಿಲ್ಲ. ಇವತ್ತು ಸ್ಕೂಲ್‌ ಫೀಸ್‌ ಕಟ್ಟಲು ಕೊನೆಯ ದಿನ ಅದಕ್ಕಾಗಿ ಎಂದು ಗುಂಡಣ್ಣ ಹೇಳುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಆದರೆ ಭಾಗ್ಯಾ ಬಳಿ ಇಷ್ಟು ಹಣ ಎಲ್ಲಿಂದ ಬಂತು ಎಂದು ಕುಸುಮಾಗೆ ಅನುಮಾನ ಉಂಟಾಗುತ್ತದೆ. ನಾನು ಪರಿಚಯದವರ ಬಳಿ ಸಾಲ ಮಾಡಿದೆ ಎಂದು ಭಾಗ್ಯಾ ಹೇಳುತ್ತಾಳೆ. ಕುಸುಮಾ, ಕೆಲಸಕ್ಕೆ ಹೋಗುತ್ತಿರುವ ವಿಚಾರ ತಿಳಿದು ಭಾಗ್ಯಾ ಬೇಸರಗೊಳ್ಳುತ್ತಾಳೆ. ನಾನೂ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಬೇಕು ಎನ್ನುವಷ್ಟರಲ್ಲಿ ಕುಸುಮಾ ಮಧ್ಯೆ ಮಾತನಾಡಿ, ನಾನು ಕೆಲಸಕ್ಕೆ ಹೋಗುತ್ತೇನೆಂದು ನೀನು ಹೋಗಬೇಕು ಎಂದುಕೊಳ್ಳಬೇಡ. ಸೂರ್ಯವಂಶಿ ಕುಟುಂಬದ ಸೊಸೆ ಹೊರಗೆ ಹೋಗಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ ಎನ್ನುತ್ತಾಳೆ.

ಕನಸಿನಲ್ಲಿ ಭಾಗ್ಯಾಳನ್ನು ಕಂಡು ಬೆಚ್ಚಿದ ಶ್ರೇಷ್ಠಾ

ಇತ್ತ ತಾಂಡವ್‌, ಶ್ರೇಷ್ಠಾಗೆ ಕರೆ ಮಾಡಿ ಹೇಗಿದ್ದೀಯ ಎಂದು ವಿಚಾರಿಸಿಕೊಳ್ಳುತ್ತಾನೆ. ನಿನ್ನೆ ಅಷ್ಟೆಲ್ಲಾ ಆಗುತ್ತಿದ್ದರೂ ನೀನು ಹೇಡಿಯಂತೆ ಅವಿತು ನಿಂತಿದ್ದೆ, ನಿನಗೆ ನಿಜವಾಗಲೂ ಪ್ರೀತಿ ಇದ್ದಿದ್ದರೆ ಭಾಗ್ಯಾಗೆ ಬುದ್ಧಿ ಹೇಳುತ್ತಿದ್ದೆ ಎಂದು ಫೋನ್‌ ಡಿಸ್ಕನೆಕ್ಟ್‌ ಮಾಡಿ ಕೆಳಗೆ ಬರುತ್ತಾಳೆ. ಅಲ್ಲಿ ಸುಂದರಿ ಹಾಗೂ ಪೂಜಾ ತಿಂಡಿ ತಿನ್ನುತ್ತಿರುತ್ತಾರೆ. ಅವರಿಬ್ಬರೂ ಶ್ರೇಷ್ಠಾಳನ್ನು ನೋಡಿ ಕಾಲೆಳೆಯುತ್ತಾರೆ. ಅಷ್ಟರಲ್ಲಿ ಕಾಲಿಂಗ್‌ ಬೆಲ್‌ ಸದ್ದಾಗುತ್ತದೆ. ಹೊರಗೆ ಬಂದು ನೋಡಿದರೆ ಭಾಗ್ಯಾ ಮಚ್ಚು ಹಿಡಿದು ನಿಂತಿದ್ದಾಳೆ. ಅವಳನ್ನು ನೋಡಿ ಶ್ರೇಷ್ಠಾ ಶಾಕ್‌ ಆಗುತ್ತಾಳೆ. ಮದುವೆ ಆಗಿ ಮರ್ಯಾದೆಯಿಂದ ಸಂಸಾರ ಮಾಡುತ್ತಿರುವ ನನ್ನ ಗಂಡನನ್ನು ಪ್ರೀತಿಸಿ ಮತ್ತೊಂದು ಮದುವೆ ಆಗಲು ಹೊರಟಿದ್ದೀಯ, ನಿನ್ನನ್ನು ಬಿಡುವುದಿಲ್ಲ ಎಂದು ಕೋಪದಿಂದ ಭಾಗ್ಯಾ, ಮಚ್ಚಿನಿಂದ ಶ್ರೇಷ್ಠಾ ಕುತ್ತಿಗೆಗೆ ಹೊಡೆಯುತ್ತಾಳೆ. ಹೆದರಿ ಶ್ರೇಷ್ಠಾ ಅರಚುತ್ತಾಳೆ. ತಾನು ಕಂಡಿದ್ದು ಕನಸು ಎಂದು ಅರ್ಥವಾದಾಗ ನಿಟ್ಟುಸಿರು ಬಿಡುತ್ತಾಳೆ.

ಆದರೆ ಕನಸಿನಲ್ಲಿ ಕಂಡಂತೆ ತಾಂಡವ್‌ ಕರೆ ಮಾಡಿ ಶ್ರೇಷ್ಠಾಳನ್ನು ವಿಚಾರಿಸಿಕೊಳ್ಳುತ್ತಾನೆ. ಕನಸಿನಲ್ಲಿ ಉತ್ತರ ಕೊಟ್ಟಂತೆಯೇ ಉತ್ತರಿಸುತ್ತಾಳೆ. ಕೆಳಗೆ ಇಳಿದು ಬಂದಾಗ ಸುಂದರಿ, ಪೂಜಾ ತಿಂಡಿ ತಿನ್ನುತ್ತಾ ಕುಳಿತಿರುತ್ತಾರೆ. ಅಷ್ಟರಲ್ಲಿ ಕಾಲಿಂಗ್‌ ಬೆಲ್‌ ಸದ್ದಾಗುತ್ತದೆ. ಎಲ್ಲವೂ ಕನಸಿನಲ್ಲಿ ಕಂಡಂತೆ ಆಗುತ್ತಿದೆ. ಹಾಗಾದರೆ ಭಾಗ್ಯಾ ನನ್ನ ತಲೆ ಕತ್ತರಿಸುವುದು ಗ್ಯಾರಂಟಿ ಎಂದುಕೊಂಡು ಶ್ರೇಷ್ಠಾ ಗಾಬರಿ ಆಗುತ್ತಾಳೆ. ಶ್ರೇಷ್ಠಾ ಬೇಸರವಾಗಿರುವುದನ್ನು ನೋಡಿ ತಾಂಡವ್‌ ಕುಸುಮಾ, ಧರ್ಮರಾಜ್‌ ಬಳಿ ಬಂದು ನಿಮ್ಮ ಸೊಸೆ ಕಂಡವರ ಮನೆ ಹೆಣ್ಣು ಮಗಳಿಗೆ ಹೊಡೆದು ಬಂದಿದ್ಧಾಳೆ, ನಾನೇ ಕಣ್ಣಾರೆ ನೋಡಿದೆ ಎನ್ನುತ್ತಾನೆ. ನಿಮಗೆ ಅಲ್ಲೇನು ಕೆಲಸ, ಅಲ್ಲಿ ಏಕೆ ಹೋಗಿದ್ದಿರಿ ಎಂದು ಭಾಗ್ಯಾ ಕೇಳುತ್ತಾಳೆ. ನಾನು ಆಫೀಸ್‌ ಮೀಟಿಂಗ್‌ ಮುಗಿಸಿ ಬರುತ್ತಿದ್ದೆ ಅಷ್ಟರಲ್ಲಿ ಶ್ರೇಷ್ಠಾ ಕರೆ ಮಾಡಿದಳು. ಅವಳ ವುಡ್‌ ಬಿ ನೋಡಲು ಹೋಗಿದ್ದೆ ಎನ್ನುತ್ತಾನೆ.

ಶ್ರೇಷ್ಠಾ ಪರ ವಹಿಸಿಕೊಂಡು ಮಾತನಾಡುತ್ತಲೇ ತಾಂಡವ್‌ ತಾನು ತೋಡಿದ ಹಳ್ಳಕ್ಕೆ ತಾನೇ ಬೀಳುತ್ತಾನಾ? ಭಾಗ್ಯಾ ಕೆಲಸಕ್ಕೆ ಹೋಗುವುದು ಕುಸುಮಾಗೆ ತಿಳಿಯುವುದಾ? ಭಾಗ್ಯಾಗೆ ಹೆದರಿ ಶ್ರೇಷ್ಠಾ ಮದುವೆ ಕ್ಯಾನ್ಸಲ್‌ ಮಾಡುತ್ತಾಳಾ? ಎಲ್ಲಾ ಪ್ರಶ್ನೆಗಳಿಗೂ ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ದೊರೆಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌