ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 29th February 2024 Episode Tanmay Unconscious Rsm

ಸ್ವಾರ್ಥಿ ತಾಂಡವ್‌ನಿಂದ ಪ್ರಜ್ಞೆ ತಪ್ಪಿ ಬಿದ್ದ ತನ್ಮಯ್‌, ಅಮ್ಮನ ಹೆಸರನ್ನೇ ಕನವರಿಸುತ್ತಿರುವ ಗುಂಡಣ್ಣ ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 29ರ ಸಂಚಿಕೆ ಹೀಗಿದೆ. ಅಮ್ಮ ಬೇಕು ಎಂದು ಹಟ ಮಾಡುವ ಗುಂಡಣ್ಣನನ್ನು ತಾಂಡವ್‌ ಹೆದರಿಸಿದಾಗ ತನ್ಮಯ್‌ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಮೊಮ್ಮಗನ ಪರಿಸ್ಥಿತಿ ಕಂಡು ಕುಸುಮಾ ಬೇಸರ ವ್ಯಕ್ತಪಡಿಸುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 29ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 29ರ ಸಂಚಿಕೆ (PC: Colors Kannada)

Bhagyalakshmi Kannada Serial: ಒಂದು ವಾರದ ಕಾಲ ಮನೆ ನಿಭಾಯಿಸುತ್ತೇನೆ ಎಂದು ತಾಂಡವ್‌ ಎರಡೇ ದಿನಕ್ಕೆ ಸೋತಿದ್ದಾನೆ. ಆದರೆ ಯಾವುದೇ ಕಾರಣಕ್ಕೂ ಭಾಗ್ಯಾ ಅಥವಾ ಕುಸುಮಾ ಮುಂದೆ ಆಗಲೀ ನಾನು ಸೋತಿದ್ದೇನೆ ಎಂದು ಹೇಳಿಕೊಳ್ಳಲು ತಾಂಡವ್‌ ತಯಾರಿಲ್ಲ. ತನ್ನ ಸ್ವಾರ್ಥಕ್ಕಾಗಿ ತಾಂಡವ್‌, ಮಕ್ಕಳ ಖುಷಿಯನ್ನು ಕಿತ್ತುಕೊಳ್ಳುತ್ತಿದ್ದಾನೆ.

ಮಕ್ಕಳನ್ನು ನೋಡಿಕೊಳ್ಳಲು ಶ್ರೇಷ್ಠಾಳನ್ನು ಕರೆಸಿದ್ದು ತಾಂಡವ್‌ ಎನ್ನುವ ಸತ್ಯ ಕುಸುಮಾ, ಧರ್ಮರಾಜ್‌ಗೆ ತಿಳಿಯುತ್ತದೆ. ಯಾವುದೇ ಕಾರಣಕ್ಕೂ ಇನ್ಮುಂದೆ ನಮ್ಮ ಮನೆಯ ವಿಚಾರಕ್ಕೆ ನೀನು ತಲೆ ಹಾಕಬಾರದು. ನಿನ್ನ ಮದುವೆ ಫಿಕ್ಸ್‌ ಆಗಿದೆ. ಆದರೂ ತಾಂಡವ್‌ ಹಿಂದೆ ಅಲೆದಾಡುತ್ತಿರುವೆ. ಹೀಗೆ ಆದರೆ ನಿನ್ನನ್ನು ಮದುವೆ ಆಗುತ್ತಿರುವ ಹುಡುಗ ತಪ್ಪು ತಿಳಿದುಕೊಳ್ಳುತ್ತಾನೆ. ನೀನೂ ಒಂದು ಹೆಣ್ಣಾಗಿ ನನ್ನ ಸೊಸೆ ಭಾಗ್ಯಾಗೆ ಬೆಂಬಲ ನೀಡಬೇಕು. ಆದರೆ ಇವನು ಡೈವೋರ್ಸ್‌ ನೀಡುವೆ ಎನ್ನುತ್ತಿದ್ದಾನೆ. ತಾಂಡವ್‌ಗೆ ಬುದ್ಧಿ ಹೇಳುವುದು ಬಿಟ್ಟು, ಅವನಿಗೆ ಸಪೋರ್ಟ್‌ ಮಾಡುವುದು ಎಷ್ಟು ಸರಿ ಎಂದು ಕುಸುಮಾ ಪ್ರಶ್ನಿಸುತ್ತಾಳೆ. ಕುಸುಮಾ ಮಾತಿಗೆ ಉತ್ತರ ಕೊಡಲಾಗದೆ ಒದ್ದಾಡುವ ಶ್ರೇಷ್ಠಾ, ಅಲ್ಲಿಂದ ಸುಮ್ಮನೆ ಹೋಗುತ್ತಾಳೆ.

ಡಿವೋರ್ಸ್‌ ವಿಚಾರ ಕೇಳಿ ಮಕ್ಕಳಿಗೆ ಶಾಕ್

ಶ್ರೇಷ್ಠಾ ಅಲ್ಲಿಂದ ಹೊರಡುತ್ತಿದ್ದಂತೆ ಕುಸುಮಾ, ತಾಂಡವ್‌ನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಇಷ್ಟು ಚಿಕ್ಕ ವಿಚಾರಕ್ಕೆ ಏಕೆ ಹೀಗೆಲ್ಲಾ ಮಾತನಾಡುತ್ತಿದ್ದೀಯ ಎಂದು ತಾಂಡವ್‌ ಕೋಪಗೊಳ್ಳುತ್ತಾನೆ. ಯಾವುದೋ ಹುಡುಗಿಯನ್ನು ಕರೆತಂದು ಭಾಗ್ಯಾ ಸ್ಥಾನ ತುಂಬಲು ಸಾಧ್ಯವಿಲ್ಲ. ಸಾಧ್ಯವಾದರೆ ಎಲ್ಲಾ ಕೆಲಸವನ್ನು ನೀನೇ ಮಾಡು, ಇಲ್ಲವಾದರೆ ಸೋಲು ಒಪ್ಪಿಕೋ. ನನ್ನ ಸೊಸೆ ಮನೆಗೆ ಬರಬೇಕು, ನಿಮ್ಮ ಸಂಸಾರ ಉಳಿಯಬೇಕು. ನನಗೆ ನಿನಗಿಂತ ನನ್ನ ಸೊಸೆಯೇ ಮುಖ್ಯ. ನೀನು ಯಾವಾಗ ಡಿವೋರ್ಸ್‌ ವಿಚಾರ ಮಾತನಾಡಿದೆಯೋ ಆಗಲೇ ಎಲ್ಲಾ ಮುಗಿದುಹೋಯ್ತು ಎಂದು ಕುಸುಮಾ ಬೇಸರಗೊಳ್ಳುತ್ತಾಳೆ. ಎಲ್ಲವನ್ನೂ ಮರೆಯಲ್ಲಿ ನಿಂತು ಕೇಳಿಸಿಕೊಳ್ಳುವ ಗುಂಡಣ್ಣ, ತನ್ವಿಗೆ ಡಿವೋರ್ಸ್‌ ಎಂಬ ಪದ ಕೇಳಿ ಬೇಸರವಾಗುತ್ತದೆ.

ಹಾಗಿದ್ರೆ ಅಪ್ಪ, ಅಮ್ಮನಿಗೆ ಡಿವೋರ್ಸ್‌ ಕೊಡುತ್ತಾರಾ. ನಾನೂ ಅಕ್ಕ ಬೇರೆಯಾಗುತ್ತೇವಾ? ಇನ್ಮುಂದೆ ನಾವೆಲ್ಲಾ ಒಟ್ಟಿಗೆ ಇರಲು ಸಾಧ್ಯವಿಲ್ಲವಾ? ನಾನು ಅಮ್ಮನ ಜೊತೆ ಹೋಗುತ್ತೇನೆ ಎನ್ನುತ್ತಾನೆ. ಪದೇ ಪದೇ ನನಗೆ ಅಮ್ಮ ಬೇಕು ಎಂದು ಗುಂಡಣ್ಣ ಹಟ ಮಾಡುತ್ತಾನೆ. ಗುಂಡಣ್ಣನನ್ನು ಸಮಾಧಾನ ಮಾಡಲು ಎಷ್ಟೇ ಪ್ರಯತ್ನಿಸಿದರೂ ಆಗುವುದಿಲ್ಲ. ಸರಿ ಹಾಗಾದರೆ ನಾವೆಲ್ಲರೂ ಬೇರೆ ಆಗುವುದಿಲ್ಲ. ಒಟ್ಟಿಗೆ ಇರುತ್ತೇವೆ ಎಂದು ಪ್ರಾಮಿಸ್‌ ಮಾಡಿ ಎಂದು ಗುಂಡಣ್ಣ ಕೇಳುತ್ತಾನೆ. ಇಷ್ಟವಿಲ್ಲದಿದ್ದರೂ ತಾಂಡವ್‌ ಭಾಷೆ ಕೊಡುತ್ತಾನೆ. ಅಮ್ಮನನ್ನು ಈಗಲೇ ಇಲ್ಲಿಗೆ ಕರೆಸಿ ಎಂದು ಮತ್ತೆ ಹಟ ಶುರು ಮಾಡುತ್ತಾನೆ. ಆಗುವುದಿಲ್ಲ ಎಂದು ತಾಂಡವ್‌ ಹೇಳಿದಾಗ ಕೋಪಗೊಳ್ಳುವ ತನ್ಮಯ್‌ ನಾನೇ ಅಮ್ಮನ ಬಳಿ ಹೋಗುತ್ತೇನೆ ಎಂದು ಅಲ್ಲಿಂದ ಓಡಿ ಹೋಗುತ್ತಾನೆ.‌

ಪ್ರಜ್ಞೆ ತಪ್ಪುವ ಗುಂಡಣ್ಣ

ತನ್ಮಯ್‌ನನ್ನು ಹೆದರಿಸಲು ತಾಂಡವ್‌ ಹೊಡೆಯಲು ಪ್ರಯತ್ನಿಸುತ್ತಾನೆ. ಆಗ ಗುಂಡಣ್ಣ ಭಯದಿಂದ ಪ್ರಜ್ಞೆ ತಪ್ಪುತ್ತಾನೆ. ರೆಸಾರ್ಟ್‌ನಲ್ಲೇ ಡಾಕ್ಟರ್‌, ಗುಂಡಣ್ಣನಿಗೆ ಚಿಕಿತ್ಸೆ ನೀಡುತ್ತಾರೆ. ಪ್ರಜ್ಞೆ ಬಂದಾಗ ತನ್ಮಯ್‌, ಅಮ್ಮ ಅಮ್ಮ ಎಂದು ಕನವರಿಸುತ್ತಾನೆ. ಮೊಮ್ಮಗನ ಪರಿಸ್ಥಿತಿ ನೋಡಿ ಕುಸುಮಾ ಬೇಸರಗೊಳ್ಳುತ್ತಾಳೆ. ಮೊದಲು ಭಾಗ್ಯಾಗೆ ಕರೆ ಮಾಡಿ ಇಲ್ಲಿಗೆ ಬರಲು ಹೇಳು ಎಂದು ಕುಸುಮಾ ತಾಕೀತು ಮಾಡುತ್ತಾಳೆ. ಅಮ್ಮನ ಬಲವಂತಕ್ಕೆ ತಾಂಡವ್‌, ಭಾಗ್ಯಾಗೆ ಕರೆ ಮಾಡಿ ರೆಸಾರ್ಟ್‌ ಬಳಿ ಬರಲು ಹೇಳುತ್ತಾನೆ.

ಮಕ್ಕಳಿಗೆ ಸಮಸ್ಯೆ ಆಗುತ್ತಿದ್ದರೂ ತಾಂಡವ್‌ ಇದೇ ರೀತಿ ಹಟ ಮುಂದುವರೆಸುತ್ತಾನಾ? ತನ್ಮಯ್‌ ಅಮ್ಮನ ಜೊತೆ ಹೋಗುತ್ತಾನಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯುತ್ತದೆ.