ಕುಸುಮಾ ಸೆರಗು ಒಡ್ಡಿ ಬೇಡಿದರೂ ಕರಗಲಿಲ್ಲ ಕಟುಕನ ಮನಸ್ಸು, ಡಿವೋರ್ಸ್ ಪಡೆದೇ ತೀರುತ್ತೇನೆಂದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 31ರ ಎಪಿಸೋಡ್. ಮನೆ ಎರಡು ಭಾಗ ಮಾಡಬೇಡ, ಸೊಸೆಗೆ ಡಿವೋರ್ಸ್ ಕೊಡಬೇಡ ಎಂದು ಕುಸುಮಾ, ಮಗ ತಾಂಡವ್ ಮುಂದೆ ಸೆರಗು ಒಡ್ಡಿ ಬೇಡಿಕೊಳ್ಳುತ್ತಾಳೆ. ಆದರೂ ಕಟುಕ ತಾಂಡವ್ ಮನಸ್ಸು ಕರಗುವುದಿಲ್ಲ. ಡಿವೋರ್ಸ್ ಕೊಟ್ಟೇ ಕೊಡುತ್ತೇನೆ ಎಂದು ನಿರ್ಧರಿಸುತ್ತಾನೆ.
Bhagyalakshmi Serial: ಡಿವೋರ್ಸ್ ಕೇಳಿದರೂ ಅದರ ಬಗ್ಗೆ ಗಮನವೇ ಕೊಡದ ಭಾಗ್ಯಾಗೆ ಬುದ್ಧಿ ಕಲಿಸುತ್ತೇನೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸ್ ಆಯ್ತು ಎಂದು ಬೀಗುತ್ತಿರುವ ಎಲ್ಲರಿಗೂ ಶಾಕ್ ನೀಡುತ್ತೇನೆ ಎನ್ನುವ ತಾಂಡವ್, ಹೇಳಿದಂತೇ ಮಾಡುತ್ತಾನೆ. ಮಹಿಳಾ ಸಂಘದವರ ಎದುರಿಗೇ ಭಾಗ್ಯಾಗೆ ಮತ್ತೊಂದು ಡಿವೋರ್ಸ್ ನೋಟಿಸ್ ಬರುತ್ತದೆ. ಆ ನೋಟಿಸ್ ಬಗ್ಗೆ ಮಹಿಳಾ ಸಂಘದ ಸದಸ್ಯರೊಬ್ಬರು ಅನುಮಾನ ವ್ಯಕ್ತಪಡಿಸಿದರೂ ಅದರ ಕಡೆ ಹೆಚ್ಚು ಗಮನ ಕೊಡದೆ ಭಾಗ್ಯಾ ಮನೆಯಿಂದ ಹೊರಡುತ್ತಾರೆ.
ಭಾಗ್ಯಾ ವಿಚಾರಣೆಗೆ ಹಾಜರಾಗಲೇಬೇಕು ಎಂದ ತಾಂಡವ್
ಅದು ಕೋರ್ಟಿನಿಂದ ವಿಚಾರಣೆಗೆ ಹಾಜರಾಗುವಂತೆ ಬಂದಿರುವ ನೋಟಿಸ್ ಎಂದು ತಿಳಿದ ಮನೆಯವರು ಗಾಬರಿ ಆಗುತ್ತಾರೆ. ತಾಂಡವ್ ಮನಸ್ಸಿನಲ್ಲಿ ಡಿವೋರ್ಸ್ ವಿಚಾರ ಇನ್ನೂ ಇದೆ ಎಂದು ತಿಳಿದು ಎಲ್ಲರೂ ಬೇಸರಗೊಳ್ಳುತ್ತಾರೆ. ಇದೇನಿದು ತಾಂಡವ್, ಮತ್ತೆ ನೋಟಿಸ್ ಕಳಿಸಿದ್ದೀಯ ಎಂದು ಧರ್ಮರಾಜ್ ತಾಂಡವ್‌ಗೆ ಕೇಳುತ್ತಾರೆ. ಯಾರನ್ನು ಕೇಳಿ ಈ ನಿರ್ಧಾರ ತೆಗೆದುಕೊಂಡಿದ್ದೀಯ? ಎಂದು ಕುಸುಮಾ ಕೇಳುತ್ತಾಳೆ. ಯಾರನ್ನು ಏಕೆ ಕೇಳಬೇಕು? ನನಗೆ ಇವಳ ಜೊತೆ ಬದುಕಲು ಸಾಧ್ಯವೇ ಇಲ್ಲ ಎಂದು ಈಗಾಗಲೇ ಹೇಳಿದ್ದೇನೆ, ಹೇಳಿ ಹೇಳಿ ಸಾಕಾಯ್ತು, ಅದಕ್ಕೆ ನೋಟಿಸ್ ಬಂದರೆ ಅರ್ಥವಾಗುತ್ತೆ ಎಂದು ಈಗ ಇನ್ನೊಂದು ನೋಟಿಸ್ ಕಳಿಸಿದ್ದೇನೆ ಕೋರ್ಟ್‌ಗೆ ಬಂದು ವಿಚಾರಣೆಗೆ ಆಗಲೇಬೇಕು ಎನ್ನುತ್ತಾನೆ. ತಾವು ಬೆಳೆಸಿದ ಮಗ ತಾಂಡವ್, ಹೀಗೆಲ್ಲಾ ಮಾತನಾಡುತ್ತಿದ್ದೇನೆ ಎಂದು ತಿಳಿದ ಕುಸುಮಾ, ಧರ್ಮರಾಜ್ ಇಬ್ಬರೂ ಬೇಸರ ವ್ಯಕ್ತಪಡಿಸುತ್ತಾರೆ.
ಸುನಂದಾ ತಾಂಡವ್ ಬಳಿ ಬಂದು, ನನ್ನ ಮಗಳು ನೀವು ಹೇಳಿದ ಹಾಗೆ ಕೇಳಿದರೆ ಡಿವೋರ್ಸ್ ಕೊಡುವುದಿಲ್ಲ ಎಂದು ಹೇಳಿದ್ದಿರಿ, ಈಗ ನೀವು ಮಾಡುತ್ತಿರುವುದು ಏನು ಎಂದು ಕೇಳುತ್ತಾಳೆ. ನಿಮ್ಮೆಲ್ಲರ ನಾಟಕ ನೋಡಿ ನನಗೆ ಸಾಕಾಗಿದೆ. ಯಾರು ಏನೇ ಹೇಳಿದರೂ ನಾನು ನಿಮ್ಮ ಮಗಳಿಗೆ ಡಿವೋರ್ಸ್ ಕೊಟ್ಟೇ ಕೊಡುತ್ತೇನೆ. ಆ ದಡ್ಡಿ ಜೊತೆ ಬದುಕುವುದೂ ಒಂದೇ ಬಿಡುವುದೂ ಒಂದೇ. ಅವಳಿಗೆ ಡಿವೋರ್ಸ್ ಕೊಡುವುದು ಗ್ಯಾರಂಟಿ , ಯಾರು ಏನು ಹೇಳಿದರೂ ನಾನು ಕೇಳುವುದಿಲ್ಲ ಎನ್ನುವ ತಾಂಡವ್‌ಗೆ ಸುನಂದಾ ಕಪಾಳಮೋಕ್ಷ ಮಾಡುತ್ತಾಳೆ.
ಮಗನ ಮುಂದೆ ಸೆರಗು ಒಡ್ಡಿ ಬೇಡುವ ಕುಸುಮಾ
ತನ್ವಿ, ತನ್ಮಯ್ ಕೂಡಾ ಅಪ್ಪನ ವರ್ತನೆ ಕಂಡು ಬೇಸರಗೊಳ್ಳುತ್ತಾರೆ. ಕೋರ್ಟ್‌ನಿಂದ ನೋಟಿಸ್ ಬಂದಿದೆ ಎಂದರೆ ಎಲ್ಲಾ ಮುಗಿಯಿತು ಎಂದು ಅರ್ಥ, ನನಗೆ ಎಲ್ಲಾ ಗೊತ್ತಾಗುತ್ತದೆ. ಸ್ಕೂಲ್‌ನಲ್ಲಿ ಟೈಮ್ ಟೇಬಲ್ ಹಾಕಿಕೊಳ್ಳುವಂತೆ ಇನ್ಮುಂದೆ ನಾವು ಟೈಮ್ ಟೇಬಲ್ ಹಾಕಿಕೊಂಡು ನಿಮ್ಮನ್ನು ಭೇಟಿ ಮಾಡಬೇಕಾ ಎಂದು ತನ್ವಿ ಅಮ್ಮನನ್ನು ಕೇಳುತ್ತಾಳೆ. ಮಕ್ಕಳ ಮಾತಿಗೆ ಏನು ಉತ್ತರ ನೀಡಬೇಕೆಂದು ಭಾಗ್ಯಾಗೆ ಅರ್ಥವಾಗುವುದಿಲ್ಲ. ತಾಂಡವ್ ಬಳಿ ಬರುವ ಕುಸುಮಾ, ಮಗನ ಮುಂದೆ ಸೆರಗು ಒಡ್ಡಿ ಬೇಡಿಕೊಳ್ಳುತ್ತಾಳೆ. ನಾನು ಆರಿಸಿ ತಂದ ಸೊಸೆ ಅವಳು, ದಯವಿಟ್ಟು ಯಾರಿಗೂ ನೋವು ಕೊಡಬೇಡ, ನನ್ನ ಮನೆ ದೀಪವನ್ನು ಆರಿಸಬೇಡ, ನನ್ನ ಮಾತನ್ನು ನಡೆಸಿಕೊಡು ಎಂದು ಬೇಡಿಕೊಳ್ಳುತ್ತಾಳೆ.
ಆದರೆ ಕುಸುಮಾ ಮಾತಿಗೆ ತಾಂಡವ್ ಮನಸ್ಸು ಕರಗುವುದಿಲ್ಲ. ಯಾರು ಏನು ಕೇಳಿದರೂ ನನ್ನ ನಿರ್ಧಾರ ಬದಲಿಸುವುದಿಲ್ಲ. ನೋಡು ನಿನ್ನಿಂದ ಎಂಥ ಪರಿಸ್ಥಿತಿ ಬಂದಿದೆ. ನನ್ನ ಅಮ್ಮ ನನ್ನ ಮುಂದೆ ಸೆರಗು ಒಡ್ಡಿ ಬೇಡಿಕೊಳ್ಳುವಂತೆ ಆಯ್ತು ಎಂದು ಆಗಲೂ ಭಾಗ್ಯಾಳನ್ನು ದೂಷಿಸುತ್ತಾನೆ. ನೋವಿನಿಂದ ಗೋಳಾಡುವ ಎಲ್ಲರಿಗೂ ಭಾಗ್ಯಾ ಧೈರ್ಯ ಹೇಳುತ್ತಾಳೆ. ಈ ಮನೆ ಎರಡು ಭಾಗವಾಗಲು ನಾನು ಬಿಡುವುದಿಲ್ಲ, ಅವರು ಡಿವೋರ್ಸ್ ಕೇಳಿದ್ದಾರೆ ಅಷ್ಟೇ. ಅದರೆ ನಾನು ಕೊಡುವುದಿಲ್ಲ, ಕೋರ್ಟ್ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಎಲ್ಲರಿಗೂ ಸಮಾಧಾನ ಮಾಡುತ್ತಾಳೆ.
ವಿಭಾಗ