Bhagyalakshmi Serial: ಲೆಟ್ಸ್ ಡ್ಯಾನ್ಸ್ ಜೊತೆ ಜೊತೆ, ತಾಂಡವ್ ಜೊತೆ ಹೆಜ್ಜೆ ಹಾಕಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್ 6ರ ಸಂಚಿಕೆ ಹೀಗಿದೆ. ಭಾಗ್ಯಾ ಸೌಂದರ್ಯಕ್ಕೆ ಬೆರಗಾಗುವ ತಾಂಡವ್ ಈಗ ಹೆಂಡತಿ ಜೊತೆ ಡ್ಯಾನ್ಸ್ ಮಾಡುತ್ತಿದ್ದಾನೆ. ಲೆಟ್ಸ್ ಡ್ಯಾನ್ಸ್ ಹಾಡಿನ ತಾಳಕ್ಕೆ ಹೆಜ್ಜೆ ಹಾಕುವ ಭಾಗ್ಯಾಳನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
Bhagyalakshmi Kannada Serial: ಮಕ್ಕಳನ್ನು ಖುಷಿಪಡಿಸಲು ಮನೆ ಮಂದಿಯೊಂದಿಗೆ ರೆಸಾರ್ಟ್‌ಗೆ ಬರುವ ತಾಂಡವ್ ಪ್ಲಾನ್ ಸಂಪೂರ್ಣ ಹಾದಿ ತಪ್ಪಿದೆ. ಒಂದು ವಾರ ಚಾಲೆಂಜ್ ಹಾಕಿದ್ದ ಭಾಗ್ಯಾ ಕೂಡಾ ರೆಸಾರ್ಟ್‌ಗೆ ಬಂದಿದ್ದಾಳೆ. ಮಕ್ಕಳ ಖುಷಿಯಾಗಿ ತಾಂಡವ್ ಕೂಡಾ ಶ್ರೇಷ್ಠಾ ಕಣ್ಣ ಮುಂದೆಯೇ ಭಾಗ್ಯಾ ಜೊತೆ ಓಡಾಡುತ್ತಿದ್ದಾನೆ.
ಇಷ್ಟವಿಲ್ಲದಿದ್ರೂ ಭಾಗ್ಯಾ ಜೊತೆ ಡ್ಯಾನ್ಸ್ ಮಾಡಲು ಒಪ್ಪುವ ತಾಂಡವ್
ನೈಟ್ ಪಾರ್ಟಿಗೆ ಪೂಜಾ, ಶ್ರೇಷ್ಠಾ ಜೊತೆ ಸೇರಿ ಭಾಗ್ಯಾಳನ್ನು ಸುಂದರವಾಗಿ ರೆಡಿ ಮಾಡಿದ್ದಾಳೆ. ನನ್ನ ಕಣ್ಣ ಮುಂದೆಯೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಏನೂ ಮಾಡಲಾಗದೆ ಶ್ರೇಷ್ಠಾ ಹಲ್ಲು ಕಡಿಯುತ್ತಾ ಸುಮ್ಮನಿದ್ದಾಳೆ. ಕೆಂಪು ಸೀರೆ ಉಟ್ಟು, ದೇವತೆಯಂತೆ ಕಾಣುತ್ತಿರುವ ಭಾಗ್ಯಾಳನ್ನು ನೋಡಿ ಒಮ್ಮೆ ತಾಂಡವ್ ಶಾಕ್ ಆಗುತ್ತಾನೆ. ಎವೆಯಿಕ್ಕದೆ ಹೆಂಡತಿಯನ್ನೇ ನೋಡುತ್ತಾನೆ. ತಾಂಡವ್‌ನನ್ನು ನೋಡಿ ಕುಸುಮಾ ಹಾಗೂ ಮನೆಯವರು ಖುಷಿಯಾಗುತ್ತಾರೆ. ಕಾರ್ಯಕ್ರಮದಲ್ಲಿ ಭಾಗ್ಯಾ, ತಾಂಡವ್ ಕಪಲ್ ಡ್ಯಾನ್ಸ್ ಮಾಡಲು ವೇದಿಕೆ ಬಳಿ ಹೋಗುತ್ತಾರೆ. ಆ ಕ್ಷಣವನ್ನು ಸೆರೆ ಹಿಡಿಯಲು ಮಕ್ಕಳು ಕೂಡಾ ಎದುರು ನೋಡುತ್ತಿರುತ್ತಾರೆ.
ಮೊದಲಿನಿಂದಲೂ ಭಾಗ್ಯಾಳನ್ನು ನಿಕೃಷ್ಟವಾಗಿ ಕಾಣುವ ತಾಂಡವ್, ಇಂಥ ಡ್ಯಾನ್ಸ್ ಇವಳಿಗೆ ಹೇಗೆ ಬರುತ್ತೆ. ಇವಳ ಜೊತೆ ಡ್ಯಾನ್ಸ್ ಮಾಡಿ ಅವಮಾನ ಎದುರಿಸುವುದಕ್ಕಿಂತ ಇಲ್ಲಿಂದ ಹೋಗುವುದೇ ಒಳ್ಳೆಯದು ಎಂದುಕೊಂಡು ಅಲ್ಲಿಂದ ಹೊರಡಲು ಮುಂದಾಗುತ್ತಾನೆ. ಆದರೆ ಭಾಗ್ಯಾ ಮಾತ್ರ ಮಕ್ಕಳ ಸಂತೋಷಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧಳಾಗಿದ್ದಾಳೆ. ಶ್ರೇಷ್ಠಾ ಕೂಡಾ ಭಾಗ್ಯಾಗೆ ಈ ರೀತಿಯ ಡ್ಯಾನ್ಸ್ ಬರುವುದಿಲ್ಲ ಎಂದುಕೊಳ್ಳುತ್ತಾಳೆ. ನನಗೆ ಡ್ಯಾನ್ಸ್ ಬರುವುದಿಲ್ಲ, ಆದರೆ ಮಕ್ಕಳಿಗಾಗಿ ಡ್ಯಾನ್ಸ್ ಮಾಡಲೇಬೇಕು. ಕೊನೆಯವರೆಗೂ ಕೈ ಬಿಡಬೇಡಿ, ನಾವು ಮಕ್ಕಳಿಗಾಗಿ ಗೆಲ್ಲಬೇಕು ಎಂದು ಭಾಗ್ಯಾ, ತಾಂಡವ್ ಬಳಿ ಮನವಿ ಮಾಡುತ್ತಾಳೆ. ಇಷ್ಟವಿಲ್ಲದಿದ್ದರೂ ತಾಂಡವ್, ಮಕ್ಕಳಿಗಾಗಿ ಒಪ್ಪಿಕೊಳ್ಳುತ್ತಾನೆ.
ಭಾಗ್ಯಾ-ತಾಂಡವ್ ಡ್ಯಾನ್ಸ್‌ಗೆ ಎಲ್ಲರಿಂದ ಮೆಚ್ಚುಗೆ
ಲೆಟ್ಸ್ ಡ್ಯಾನ್ಸ್ ಜೊತೆ ಜೊತೆ ಹಾಡು ಆರಂಭವಾಗುತ್ತದೆ. ನನಗೆ ಎಲ್ಲಾ ಬರುತ್ತದೆ ಎಂದು ಬೀಗುವ ತಾಂಡವ್ ಹೆಜ್ಜೆ ಹಾಕಲಾಗದೆ ಒದ್ದಾಡುತ್ತಾನೆ. ಆದರೆ ಏನೂ ಬರುವುದಿಲ್ಲ ಎಂದುಕೊಂಡ ಭಾಗ್ಯಾ ಎಲ್ಲರೂ ಆಶ್ಚರ್ಯಪಡುವಂತೆ ಡ್ಯಾನ್ಸ್ ಮಾಡುತ್ತಾಳೆ. ಭಾಗ್ಯಾ ಅಷ್ಟು ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುವುದನ್ನು ನೋಡಿ ತಾಂಡವ್, ಶ್ರೇಷ್ಠಾ ಇಬ್ಬರೂ ಶಾಕ್ ಆಗುತ್ತಾರೆ. ಹಾಡು ಮುಗಿಯುವವರೆಗೂ ಕೈ ಬಿಡದೆ ಇಬ್ಬರೂ ಡ್ಯಾನ್ಸ್ ಮಾಡುತ್ತಾರೆ. ದೂರದಿಂದ ಇವರಿಬ್ಬರನ್ನೂ ನೋಡುವ ಮಕ್ಕಳು, ಸುನಂದಾ, ಕುಸುಮಾ, ಧರ್ಮರಾಜ್, ಪೂಜಾ ಎಲ್ಲರೂ ಬಹಳ ಖುಷಿಯಾಗುತ್ತಾರೆ. ಅಮ್ಮ ನಿನಗೆ ಇಷ್ಟೆಲ್ಲಾ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ಏಕೆ ಸುಮ್ಮನಿದ್ದೀಯ ಎಂದು ತನ್ವಿ ಕೂಡಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ.
ಭಾಗ್ಯಾಳತ್ತ ಆಕರ್ಷಿತನಾಗುವ ತಾಂಡವ್ ಇನ್ನಾದರೂ ತನ್ನ ತಪ್ಪುಗಳನ್ನು ಅರ್ಥ ಮಾಡಿಕೊಂಡು ಭಾಗ್ಯಾಳನ್ನು ಮನೆಗೆ ಕರೆದೊಯ್ಯುತ್ತಾನಾ? ಕಾರ್ಯಕ್ರಮ ಹಾಳು ಮಾಡಲು ಶ್ರೇಷ್ಠಾ ಏನು ಪ್ಲಾನ್ ಮಾಡುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.