ಪತ್ರಕರ್ತನಿಗಾಗಿ ಮ್ಯಾಂಗಿಫೆರಾ ಮೂಸಾ ನ್ಯೂಡಲ್ಸ್ ತಯಾರಿಸಲು ಹೊರಟ ಭಾಗ್ಯಾ ಯಶಸ್ವಿಯಾಗ್ತಾಳಾ?; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್ 7ರ ಎಪಿಸೋಡ್‌ನಲ್ಲಿ ಭಾಗ್ಯಾ, ಪತ್ರಕರ್ತನ ಬಳಿ ಮ್ಯಾಂಗಿಫೆರಾ ಮೂಸಾ ನ್ಯೂಡಲ್ಸ್ ತಯಾರಿಸಿಕೊಡುವುದಾಗಿ ಹೇಳುತ್ತಾಳೆ. ಈ ಹೋಟೆಲ್ ಕಿಚನ್‌ನಲ್ಲಿ ನಿಮಗೆ ಅಡುಗೆ ಮಾಡಲು ಬರುತ್ತಾ ಎಂದು ಭಾಗ್ಯಾಳನ್ನು ಹೋಟೆಲ್ ಮ್ಯಾನೇಜರ್ ಹೀಯಾಳಿಸುತ್ತಾನೆ.
Bhagyalakshmi Serial: ಒತ್ತು ಶಾವಿಗೆ ಹಾಗೂ ಮಾವಿನ ರಸಾಯನ ತರಲು ಪಕ್ಕದ ಹೋಟೆಲ್‌ಗೆ ಹೋದ ಭಾಗ್ಯಾ ಬರಿಕೈಲಿ ವಾಪಸ್ ಬಂದಿದ್ದನ್ನು ನೋಡಿ ಸೂಪರ್‌ವೈಸರ್ ಕೋಪಗೊಳ್ಳುತ್ತಾನೆ. ಹೋಟೆಲ್‌ಗೆ ಪತ್ರಕರ್ತರೊಬ್ಬರು ಫುಡ್ ರಿವ್ಯೂ ಬರೆಯಲು ಬಂದಿದ್ದು, ಅವರಿಗೆ ಆ ಫುಡ್ ಸರ್ವ್ ಮಾಡಬೇಕು ಇಲ್ಲದಿದ್ದರೆ ಅವರು ಕೋಪಗೊಳ್ಳುತ್ತಾರೆ ಎಂದು ರೇಗುತ್ತಾನೆ. ನಾನು ಆ ಫುಡ್ ತಯಾರಿಸುತ್ತೇನೆ ಎಂದು ಭಾಗ್ಯಾ ಹೇಳಿದರೂ ಸೂಪರ್‌ವೈಸರ್ ಒಪ್ಪುವುದಿಲ್ಲ.
ಭಾಗ್ಯಾಳನ್ನು ದೂಷಿಸುವ ಹೋಟೆಲ್ ಮ್ಯಾನೇಜರ್
ಅಷ್ಟರಲ್ಲಿ ಭಾಗ್ಯಾ, ಭಗಾಯ ಅಲ್ಲ ಎಂದು ತಿಳಿಯುತ್ತದೆ. ನಾನು ಇದನ್ನು ಮೊದಲೇ ಹೇಳಬೇಕೆಂದು ಬಹಳ ಪ್ರಯತ್ನ ಪಟ್ಟೆ, ಬೇರೆಯವರ ಹೆಸರಿನಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನನಗೂ ತಿಳಿದದ್ದು ಇತ್ತೀಚೆಗೆ ಎಂದು ಭಾಗ್ಯಾ ಎಷ್ಟು ಹೇಳಿದರೂ ಸೂಪರ್‌ವೈಸರ್ ಕೇಳುವುದಿಲ್ಲ. ಮೋಸ ಮಾಡಿ ಇಲ್ಲಿ ಕೆಲಸ ಮಾಡುತ್ತಿದ್ದೀರ. ಇನ್ನೊಂದು ಕ್ಷಣ ಇಲ್ಲಿ ಇದ್ದರೂ ನಾನು ಸುಮ್ಮನಿರುವುದಿಲ್ಲ, ಪೊಲೀಸರನ್ನು ಕರೆಸುತ್ತೇನೆ ಎಂದು ಸೂಪರ್‌ವೈಸರ್ ಭಾಗ್ಯಾಗೆ ಎಚ್ಚರಿಸುತ್ತಾನೆ. ನಾನು ಬಹಳ ಕಷ್ಟದಲ್ಲಿದ್ದೇನೆ. ನನಗೆ ಈ ಕೆಲಸ ಬೇಕೇ ಬೇಕು. ಇದೇ ಕೆಲಸ ಆಗಬೇಕು ಅಂತೇನಿಲ್ಲ, ಈ ಹೋಟೆಲ್‌ನಲ್ಲಿ ಯಾವ ಕೆಲಸ ಕೊಟ್ಟರೂ ನಾನು ಮಾಡುತ್ತೇನೆ ಎಂದು ಭಾಗ್ಯಾ ಮನವಿ ಮಾಡಿದರೂ ಯಾರೂ ಕೇಳುವುದಿಲ್ಲ. ನನ್ನ ಹಣೆಬರಹವೇ ಇಷ್ಟು ಎಂದು ಭಾಗ್ಯಾ ಆ ಹೋಟೆಲ್‌ನಿಂದ ಹೊರಡುತ್ತಾಳೆ.
ಅಷ್ಟರಲ್ಲಿ ಹೋಟೆಲ್‌ಗೆ ಫುಡ್ ರಿವ್ಯೂ ಬರೆಯಲು ಬಂದ ಪತ್ರಕರ್ತನಿಗೆ ಹೋಟೆಲ್ ಮ್ಯಾನೇಜರ್ ಹಾಗೂ ಸೂಪರ್‌ವೈಸರ್ ಮನವಿ ಮಾಡುತ್ತಾರೆ, ಇಂದು ಏನೋ ಸಮಸ್ಯೆ ಆಗಿದೆ, ಸರ್ ದಯವಿಟ್ಟು ಕ್ಷಮಿಸಿ, ನಾವು ಪ್ರತಿದಿನ ಯಾವ ಐಟಮ್ ಕೂಡಾ ತಪ್ಪಿಸುವುದಿಲ್ಲ, ಆದರೆ ನೀವು ಟೇಸ್ಟ್ ಮಾಡಬೇಕಿರೋ ಮ್ಯಾಂಗಿಫೆರಾ ಮೂಸಾ ನ್ಯೂಡಲ್ಸ್ ಇಂದು ಸರ್ವ್ ಮಾಡಲಾಗುತ್ತಿಲ್ಲ. ನೀವು ದಯವಿಟ್ಟು ನಮ್ಮ ಹೋಟೆಲ್ ಬಗ್ಗೆ ನೆಗೆಟಿವ್ ರಿವ್ಯೂ ಬರೆಯಬೇಡಿ ಅದರ ಬದಲಿಗೆ ಬೇರೆ ಸ್ಪೆಷಲ್ ಫುಡ್ ಇದೆ ಅದನ್ನು ಸರ್ವ್ ಮಾಡುತ್ತೇವೆ ಎಂದು ಮನವಿ ಮಾಡುತ್ತಾರೆ. ನಾನು ಈ ಹೋಟೆಲ್‌ಗೆ ಬಂದದ್ದು ಇಲ್ಲಿನ ಸ್ಪೆಷಲ್ ಫುಡ್ ತಿನ್ನೋದಕ್ಕೆ, ಪ್ಯಾಂಟ್ ಬಹಳ ಚೆನ್ನಾಗಿದೆ ಅಂತ ಅದನ್ನು ತಲೆ ಮೇಲೆ ಹಾಕಿಕೊಂಡು ಓಡಾಡಲು ಆಗುತ್ತಾ, ಅದನ್ನು ಎಲ್ಲಿ ಹಾಕಿಕೊಳ್ಳಬೇಕೋ ಅಲ್ಲಿ ಹಾಕಬೇಕು ತಾನೇ, ಅದೇ ರೀತಿ ಮ್ಯಾಂಗಿಫೆರಾ ಮೂಸಾ ನ್ಯೂಡಲ್ಸ್ ತಿನ್ನಲು ಬಂದಿದ್ದೇನೆ. ಅದ್ದರಿಂದ ಅದನ್ನೇ ತಿನ್ನಬೇಕು ಎಂದು ಆತ ಹೇಳಿದಾಗ ಸೂಪರ್‌ವೈಸರ್, ಮ್ಯಾನೇಜರ್ ಇಬ್ಬರೂ ಗಾಬರಿ ಆಗುತ್ತಾರೆ.
ಫುಡ್ ತಯಾರಿಸಿಕೊಡುತ್ತೇನೆಂದು ಮನವಿ ಮಾಡುವ ಭಾಗ್ಯಾ
ಅಷ್ಟರಲ್ಲಿ ಭಾಗ್ಯಾ ಅವರ ಮುಂದೆ ಹಾದು ಹೋಗುವುದನ್ನು ನೋಡಿದ ಮ್ಯಾನೇಜರ್, ಭಾಗ್ಯಾಳನ್ನು ಕರೆದು, ನೋಡಿ ಸರ್ ಈಕೆಯಿಂದಲೇ ನಮಗೆ ಈ ಸಮಸ್ಯೆ ಆಗಿದ್ದು, ಆದ್ದರಿಂದ ಈಕೆಯನ್ನು ಕೆಲಸದಿಂದಲೇ ತೆಗೆದಿದ್ದೇವೆ ಎನ್ನುತ್ತಾನೆ, ಭಾಗ್ಯಾಗೆ ಆತ ಏನು ಮಾತನಾಡುತ್ತಿದ್ದಾನೆಂದು ಅರ್ಥವಾಗುವುದಿಲ್ಲ. ನಿಮ್ಮಿಂದ ನಮ್ಮ ಹೋಟೆಲ್‌ಗೆ ಸಮಸ್ಯೆ ಆಗುತ್ತಿದೆ ಎಂದು ಆತ ಪದೇ ಪದೆ ಹೇಳುವುದನ್ನು ಕೇಳಿದ ಭಾಗ್ಯಾಗೆ ಕಿರಿಕಿರಿ ಎನಿಸುತ್ತದೆ. ನೀವು ಏನು ಮಾತನಾಡುತ್ತಿದ್ದೀರಿ ನನಗೆ ಅರ್ಥ ಆಗುತ್ತಿಲ್ಲ. ನನ್ನಿಂದ ಈ ಹೋಟೆಲ್‌ಗೆ ಏನು ಸಮಸ್ಯೆ ಆಗಿದೆ? ನಾನು ಇಲ್ಲಿ ಕೆಲಸ ಮಾಡಿದ್ದು 2 ದಿನಗಳಾದರೂ ಈ ಹೋಟೆಲ್ ನನಗೆ ಅನ್ನ ಕೊಟ್ಟಿದೆ. ನೀವು ತಿನ್ನಬೇಕು ಎನ್ನುತ್ತಿರುವ ಫುಡ್ ನಾನು ತಯಾರಿಸುತ್ತೇನೆ ಎನ್ನುತ್ತಾಳೆ.
ನೀವು ಎಲ್ಲಿಂದಲೋ ಬಂದವರು, ಈ ದೊಡ್ಡ ಹೋಟೆಲ್ ಕಿಚನ್‌ನಲ್ಲಿ ನಿಮಗೆ ಅಡುಗೆ ಮಾಡಲು ಹೇಗೆ ಗೊತ್ತಾಗುತ್ತೆ ಎಂದು ಮ್ಯಾನೇಜರ್ ಹೀಯಾಳಿಸುತ್ತಾನೆ. ನಾನು ಎಲ್ಲಿಂದಲೋ ಬಂದವಳಲ್ಲ. ಅತ್ತೆ, ಮಾವ, ಗಂಡ , ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿ ಬಡಿಸಿದ್ದೇನೆ. ಊಟದ ರುಚಿ ಬದಲಾಗುವುದು ಅಡುಗೆ ಮಾಡುವ ಸ್ಥಳದಿಂದ ಅಲ್ಲ, ಅದನ್ನು ಮಾಡುವ ಕೈಗಳಿಂದ ನೀವು ನನಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡುತ್ತಾಳೆ. ಭಾಗ್ಯಾಗೆ ಒತ್ತು ಶ್ಯಾವಿಗೆ ಮಾಡಲು ಹೋಟೆಲ್ ಮ್ಯಾನೇಜರ್ ಅವಕಾಶ ಮಾಡಿಕೊಡುತ್ತಾರಾ? ಅದನ್ನು ತಿಂದು ಪತ್ರಕರ್ತ ಒಳ್ಳೆ ರಿವ್ಯೂ ಕೊಡುತ್ತಾನಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ವಿಭಾಗ