ಅಮ್ಮನಿಗೆ ಇಂಗ್ಲೀಷ್ ಪಾಠ ಆರಂಭಿಸಿದ ತನ್ವಿ, ಈ ಮುಖಕ್ಕೆ ಇಂಗ್ಲೀಷ್ ಬೇರೆ ಕೇಡು ಎಂದು ಹೀಯಾಳಿಸಿದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 11ರ ಎಪಿಸೋಡ್‌ನಲ್ಲಿ ತನ್ವಿ ಭಾಗ್ಯಾಗೆ ಇಂಗ್ಲೀಷ್ ಕಲಿಸುತ್ತಾಳೆ. ಅವಳನ್ನು ನೋಡುವ ತಾಂಡವ್ , ಭಾಗ್ಯಾಗೆ ಇಂಗ್ಲೀಷ್ ಕಲಿಯುವ ಒಣಶೋಕಿ ಬೇಕಾ ಎಂದು ಕುಸುಮಾ ಬಳಿ ಕೇಳುತ್ತಾನೆ.

Bhagyalakshmi Serial: ಹಿತಾ, ಪೂಜಾ, ಸುಂದರಿ ಮೂವರೂ ಸೇರಿ ಶ್ರೇಷ್ಠಾ ಹಾಗೂ ತಾಂಡವ್‌ಗೆ ಬುದ್ಧಿ ಕಲಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ಮುಂದೆ ಸಮಸ್ಯೆ ಆಗಬಹುದು ಎಂಬ ಅರಿವಿದ್ದರೂ ಶ್ರೇಷ್ಠಾ-ತಾಂಡವ್ ತಾವು ಮದುವೆ ಆಗೇ ಆಗುತ್ತೇವೆ ಎಂದು ದುರಹಂಕಾರ ತೋರುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಎಲ್ಲಾ ಸತ್ಯ ಬಹಿರಂಗವಾಗಲಿದೆ.
ಭಾಗ್ಯಾಗೆ ಮಗಳ ಇಂಗ್ಲೀಷ್ ಪಾಠ
ಹೋಟೆಲ್‌ನಲ್ಲಿ ಕನ್ನಡ ಮಾತನಾಡುವ ಭಾಗ್ಯಾಗೆ ತನ್ವಿ ಇಂಗ್ಲೀಷ್ ಕಲಿಸಲು ಆರಂಭಿಸಿದ್ದಾಳೆ. ಅಮ್ಮ ಎಲ್ಲರಂತೆ ಚೆನ್ನಾಗಿ ಇಂಗ್ಲೀಷ್ ಕಲಿಯಬೇಕು ಎಂದು ಆಕೆಗೆ ಒಂದೊಂದೇ ಪದಗಳು, ವಾಕ್ಯಗಳನ್ನು ಹೇಳಿಕೊಡುತ್ತಿದ್ದಾಳೆ. ಭಾಗ್ಯಾ ಕೂಡಾ ಆಸಕ್ತಿಯಿಂದಲೇ Give me That, i dont need that, i was in the hotel, Tanvi is teaching english to Bhagya ಎಂಬ ವಾಕ್ಯಗಳನ್ನು ಕಲಿಯುತ್ತಿದ್ದಾಳೆ. ತನ್ವಿ, ಅಮ್ಮನಿಗೆ ಇಂಗ್ಲೀಷ್ ಹೇಳಿಕೊಡುವಾಗ ಕುಸುಮಾ ಅಲ್ಲಿಗೆ ಬರುತ್ತಾಳೆ. ಎಲ್ಲರೂ ಇಲ್ಲಿ ಒಟ್ಟಿಗೆ ಕುಳಿತು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಾಳೆ. ಅತ್ತೆಯನ್ನು ನೋಡಿ ಭಾಗ್ಯಾ ಗಾಬರಿ ಆಗುತ್ತಾಳೆ.
ಅಡುಗೆ ಮನೆಯಲ್ಲಿ ಸ್ವಲ್ಪ ಕೆಲಸ ಬಾಕಿ ಇದೆ ಅತ್ತೆ, ಈಗಲೇ ಹೋಗಿ ಮುಗಿಸುತ್ತೇನೆ ಎಂದು ಭಾಗ್ಯಾ ಎದ್ದು ಹೊರಡುತ್ತಾಳೆ. ಅವಳನ್ನು ತಡೆಯುವ ಕುಸುಮಾ, ಹೆದರಬೇಡ, ನೀನು ಚೆನ್ನಾಗಿ ಇಂಗ್ಲೀಷ್ ಕಲಿ, ಆದರೆ ಎಲ್ಲಾ ಕೆಲಸ ಮುಗಿಸಿ ಕಲಿ ಎನ್ನುತ್ತಾಳೆ. ಇದನ್ನು ನೋಡಿ ತಾಂಡವ್, ಕೊಂಕಾಗಿ ನಗುತ್ತಾನೆ. ಅವನನ್ನು ಗಮನಿಸುವ ಕುಸುಮಾ, ನಿನಗೆ ಚೆನ್ನಾಗಿ ಇಂಗ್ಲೀಷ್ ಬರುತ್ತೆ ತಾನೇ, ನಿನ್ನ ಅಮ್ಮನಿಗೆ ಚೆನ್ನಾಗಿ ಹೇಳಿಕೊಡು, ನಿನ್ನ ಅಪ್ಪನನ್ನೂ ಮೀರಿಸಬೇಕು ಎಂದು ತನ್ವಿಗೆ ಹೇಳುತ್ತಾಳೆ. ಎಲ್ಲರೂ ಒಟ್ಟಿಗೆ ಹಾಲ್‌ನಲ್ಲಿ ಇರುವಾಗ ಅಲ್ಲಿಗೆ ಬರುವ ತಾಂಡವ್, ಭಾಗ್ಯಾಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ, ಇನ್ನು ಅವಳ ಮುಖಕ್ಕೆ ಇಂಗ್ಲೀಷ್ ಬೇರೆ ಕೇಡು, ಅವಳಿಗೆ ಈ ಇಂಗ್ಲೀಷ್ ಒಣ ಶೋಕಿ ಎಲ್ಲಾ ಬೇಕಾ ಎಂದು ಹೀಯಾಳಿಸುತ್ತಾನೆ.
ಭಾಗ್ಯಾ ಬಗ್ಗೆ ಕೊಂಕು ಮಾತನಾಡುವ ತಾಂಡವ್
ಅವಳು ಇಂಗ್ಲೀಷ್ ಕಲಿತರೆ ನಿನಗೆ ಏನು ಸಮಸ್ಯೆ ಎಂದು ಧರ್ಮರಾಜ್ ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಕುಸುಮಾ, ಖಂಡಿತ ಸಮಸ್ಯೆ ಇದೆ. ತಾಂಡವ್ ಹಾಕುವ ಎಲ್ಲಾ ಸವಾಲಿನಲ್ಲೂ ಭಾಗ್ಯಾ ಗೆದ್ದಿದ್ದಾಳೆ. ಎಸ್‌ಎಸ್‌ಎಲ್‌ಸಿ ಪಾಸ್ ಆಗುವುದಿಲ್ಲ ಎಂದು ಹಂಗಿಸಿದ್ದ ಆದರೆ ಭಾಗ್ಯಾ ಪಾಸ್ ಆದಳು, ಕೆಲಸ ಪಡೆಯುವುದು, ಸಂಪಾದನೆ ಮಾಡುವುದು ಕಷ್ಟ ಎಂದಿದ್ದ, ಭಾಗ್ಯಾ ಅದನ್ನೂ ಮಾಡಿದಳು. ಈಗ ಇಂಗ್ಲೀಷ್ ಕಲಿತರೆ ಅವಳು ನನಗಿಂತ ಮೇಲೆ ಏರುತ್ತಾಳೆ ಎಂಬ ಭಯ ಇವನನ್ನು ಕಾಡುತ್ತಿದೆ ಎಂದು ಕುಸುಮಾ ಹೇಳುತ್ತಾಳೆ.
ಇನ್ನು, ತಾಂಡವ್ ಹೀಯಾಳಿಸಿದ್ದಕ್ಕೆ ಬೇಸರಗೊಳ್ಳುವ ಸುನಂದಾ ಲಗ್ಗೇಜ್ ಸಹಿತ ಮನೆಯಿಂದ ಹೊರಡಲು ಸಿದ್ಧಳಾಗುತ್ತಾಳೆ. ಸುನಂದಾಳನ್ನು ನೋಡಿ ಎಲ್ಲರೂ ಬೇಸರಗೊಳ್ಳುತ್ತಾರೆ. ಆದರೆ ತಾಂಡವ್ ಮಾತ್ರ ಮತ್ತೆ ಸುನಂದಾಳನ್ನು ಹೀಯಾಳಿಸುತ್ತಾನೆ. ನನ್ನ ಮನೆಯಲ್ಲೇ ಇದ್ದುಕೊಂಡು ಬಿಟ್ಟಿ ಊಟ ತಿಂದು, ನನ್ನ ಬಗ್ಗೆಯೇ ಚಾಡಿ ಹೇಳುವ ನಿಮಗೆ ಈಗಲಾದರೂ ನಿಮ್ಮ ಮನೆಗೆ ವಾಪಸ್ ಹೋಗಬೇಕೆಂದು ಅನಿಸಿತಲ್ಲ ಎನ್ನುತ್ತಾನೆ.
ತಾಂಡವ್ ಕೊಂಕು ಮಾತಿಗೆ ಕುಸುಮಾ ಯಾವ ರೀತಿ ಪ್ರತಿಕ್ರಿಯಿಸುತ್ತಾಳೆ? ಶ್ರೇಷ್ಠಾ ಹಾಗೂ ತಾಂಡವ್‌ಗೆ ಬುದ್ಧಿ ಕಲಿಸಲು ಪೂಜಾ, ಹಿತಾ ಮಾಡಿರುವ ಪ್ಲ್ಯಾನ್ ಏನು ಎನ್ನುವುದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ