ಭಾಗ್ಯಲಕ್ಷ್ಮೀ ಧಾರಾವಾಹಿ: ಕಿಶನ್‌ ಜತೆ ಪೂಜಾಳ ಮದುವೆಗೆ ಸಿಕ್ತು ಎಲ್ಲರ ಒಪ್ಪಿಗೆ, ತಾಂಡವ್‌ ನೆಮ್ಮದಿಗೆ ಭಂಗ ತಂದ ಭಾಗ್ಯ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಲಕ್ಷ್ಮೀ ಧಾರಾವಾಹಿ: ಕಿಶನ್‌ ಜತೆ ಪೂಜಾಳ ಮದುವೆಗೆ ಸಿಕ್ತು ಎಲ್ಲರ ಒಪ್ಪಿಗೆ, ತಾಂಡವ್‌ ನೆಮ್ಮದಿಗೆ ಭಂಗ ತಂದ ಭಾಗ್ಯ

ಭಾಗ್ಯಲಕ್ಷ್ಮೀ ಧಾರಾವಾಹಿ: ಕಿಶನ್‌ ಜತೆ ಪೂಜಾಳ ಮದುವೆಗೆ ಸಿಕ್ತು ಎಲ್ಲರ ಒಪ್ಪಿಗೆ, ತಾಂಡವ್‌ ನೆಮ್ಮದಿಗೆ ಭಂಗ ತಂದ ಭಾಗ್ಯ

ಕಲರ್ಸ್‌ ಕನ್ನಡದ ʻಭಾಗ್ಯಲಕ್ಷ್ಮೀʼ ಧಾರಾವಾಹಿಯ 789ನೇ ಸಂಚಿಕೆಯಲ್ಲಿ ಕುಸುಮಾ ನಡೆಸಿದ ಪರೀಕ್ಷೆಯಲ್ಲಿ ಜಿಮ್‌ ಮಾಲೀಕ ಕಿಶನ್‌ ಪಾಸಾಗಿದ್ದಾನೆ. ಈ ವಿಚಾರವನ್ನು ಪೂಜಾಗೂ ಹೇಳಿ ಮದುವೆ ವಿಚಾರ ಪ್ರಸ್ತಾಪಿಸಿ ಆಕೆಯಿಂದಲೂ ಓಕೆ ಮಾಡಿಸಿದ್ದಾರೆ. ಇತ್ತ ನೆಮ್ಮದಿ ಬಯಸುತ್ತಿದ್ದ ತಾಂಡವ್‌ ನೆಮ್ಮದಿಗೆ ಮತ್ತೆ ಭಂಗ ತಂದಿದ್ದಾಳೆ ಭಾಗ್ಯ.

ಭಾಗ್ಯಲಕ್ಷ್ಮೀ ಧಾರಾವಾಹಿ: ಕುಸುಮಾ ನಡೆಸಿದ ಸತ್ವ ಪರೀಕ್ಷೆಯಲ್ಲಿ ಗೆದ್ದ ಕಿಶನ್‌, ತಾಂಡವ್‌ ನೆಮ್ಮದಿಗೆ ಭಂಗ ತಂದ ಭಾಗ್ಯ
ಭಾಗ್ಯಲಕ್ಷ್ಮೀ ಧಾರಾವಾಹಿ: ಕುಸುಮಾ ನಡೆಸಿದ ಸತ್ವ ಪರೀಕ್ಷೆಯಲ್ಲಿ ಗೆದ್ದ ಕಿಶನ್‌, ತಾಂಡವ್‌ ನೆಮ್ಮದಿಗೆ ಭಂಗ ತಂದ ಭಾಗ್ಯ (jio Hotstar)

ಪೂಜಾಳ ಮದುವೆಯಾಗಬೇಕಿರುವ ಹುಡುಗ ಹೇಗಿರಬೇಕು ಎಂದುಕೊಂಡಿದ್ದಾರೋ, ಅಂತ ಹುಡುಗನೇ ಸಿಕ್ಕಿದ್ದಾನೆ. ಜಿಮ್‌ ಮಾಲೀಕ ಕಿಶನ್‌ ನೋಡಿದ ಕುಸುಮಾ, ಜಿಮ್‌ ಸೇರಿಕೊಳ್ಳುವ ನೆಪದಲ್ಲಿ ಕಿಶನ್‌ ಹೇಗೆ? ಆತನ ವರ್ತನೆ ಹೇಗಿರುತ್ತೆ? ಕೋಪ ಮಾಡಿಕೊಂಡಾಗ ಹೇಗಿರ್ತಾನೆ, ಲವ್‌ ಬಗೆಗಿನ ಆತನ ಮಾತು.. ಹೀಗೆ ಎಲ್ಲವನ್ನೂ ಕಂಡು ಫಿದಾ ಆಗಿದ್ದಾಳೆ ಕುಸುಮಾ. ಇನ್ನೇನು ಜಿಮ್‌ನಲ್ಲಿ ಹೆವಿ ವೇಟ್‌ ಎತ್ತುವ ಭರದಲ್ಲಿ, ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಾಗ, ಕಿಶನ್‌ ತೋರಿದ ಕಾಳಜಿಗೂ ಕುಸುಮಾ ಖುಷಿಯಾಗಿದ್ದಾಳೆ. ಇದೆಲ್ಲವನ್ನು ಮನೆಗೆ ಬಂದು ಭಾಗ್ಯ ಬಳಿಯೂ ಹೇಳಿಕೊಂಡಿದ್ದಾಳೆ.

ಆದರೆ ಭಾಗ್ಯಾಗೆ ತಾಂಡವ್‌ನದ್ದೇ ಚಿಂತೆ. ಕಿಶನ್‌ ಒಳ್ಳೆಯವನೇ ಇರಬಹುದು, ಆದರೆ ಆತನ ಬುದ್ದಿ ಹೇಗಿದೆಯೋ ಏನೋ. ಯಾಕಂದ್ರೆ ತಾಂಡವ್‌ ವಿಚಾರದಲ್ಲಿ ಈಗಾಗಲೇ ಅನುಭವಿಸಿದ್ದು ಸಾಕಾಗಿದೆ ಎಂದಿದ್ದಾಳೆ ಭಾಗ್ಯ. ಆಕೆಯ ಮಾತಿಗೆ ನೀನು ತಾಂಡವ್‌ಗೂ ಆ ಹುಡುಗನಿಗೂ ಹೋಲಿಕೆ ಮಾಡಬೇಡ. ಇಬ್ಬರಿಗೂ ಅಜಗಜಾಂತರ ವ್ಯತ್ಯಾಸ ಇದೆ. ಮನಸ್ಸು ಅಪ್ಪಟ ಬಂಗಾರ, ಸಂಸ್ಕಾರವಂತ, ಒಳ್ಳೆಯ ಮನಸ್ಸು, ಹೆಣ್ಣುಮಕ್ಕಳಿಗೆ ಕೊಡುವ ಗೌರವ.. ನಮ್ಮ ಪೂಜಾಗೆ ಯೋಗ್ಯವಾದ ಹುಡುಗ. ಹೇಳಿ ಮಾಡಿಸಿದ ಹುಡುಗ. ನಾವಾಗಿಯೇ ಹುಡುಕಿದ್ದರೂ, ಅಂಥ ಹುಡುಗ ಸಿಗೋದು ಅನುಮಾನ ಎಂದಿದ್ದಾಳೆ ಕುಸುಮಾ.

ಇತ್ತ ತಾಂಡವ್‌ ಮತ್ತು ಶ್ರೇಷ್ಠಾ ನಡುವೆ ಮಾತುಕತೆ ನಡೆದಿದೆ. ತಾಂಡವ್‌ ಭಾಗ್ಯಾಳ ವಿಚಾರಕ್ಕೆ ಕೊಂಚ ಗಲಿಬಿಲಿಗೊಂಡಿದ್ದಾನೆ. ನನ್ನ ಮನಃಶಾಂತಿಯನ್ನೇ ಆಕೆ ಕಿತ್ತುಕೊಂಡಿದ್ದಾಳೆ ಎಂದು ಶ್ರೇಷ್ಠಾ ಮುಂದೆ ಹೇಳುತ್ತಿದ್ದಾನೆ. ಅಷ್ಟಕ್ಕೂ ಈಗ ಏನು ಮಾಡಬೇಕು ಎಂದು ಶ್ರೇಷ್ಠಾ ಕೇಳಿದ್ದಾಳೆ. ಆ ಭಾಗ್ಯಾಳ ನೆಮ್ಮದಿ ಹಾಳಾಗಬೇಕು, ಆವಾಗಲೇ ನನ್ನ ಮನಸ್ಸು ಸಮಾಧಾನ ಆಗೋದು ಎಂದಿದ್ದಾನೆ. ಆಕೆಯ ನೆಮ್ಮದಿಯನ್ನ ನಾನೇ ಹಾಳು ಮಾಡ್ತಿನಿ ಎಂದು, ನೇರವಾಗಿ ಭಾಗ್ಯಾಗೆ ಫೋನ್‌ ಮಾಡಿದ್ದಾಳೆ ಶ್ರೇಷ್ಠಾ.

ಪೂಜಾ ಯಾರ್ಯಾರೋ ಜೊತೆ ಓಡಾಡ್ತಿದ್ದಾಳಂತೆ. ಅವಳಿಗೆ ಸ್ವಲ್ಪ ಡಿಸೆಂಟ್‌ ಆಗಿರಲು ಹೇಳು. ಸುಮ್ಮನೆ ಮನೆ ಮರ್ಯಾದೆ ಹಾಳು ಎಂದಿದ್ದಾಳೆ ಶ್ರೇಷ್ಠಾ. ಶ್ರೇಷ್ಠಾ ಮಾತು ಕೇಳಿದ ಭಾಗ್ಯ ಜೋರಾಗಿ ನಕ್ಕಿದ್ದಾಳೆ. ನನ್ನ ತಂಗಿನೇನು ನೀನು ಅಂದುಕೊಂಡಿದ್ದೀಯಾ. ಮನೆ ಮರ್ಯಾದೆನಾ ಬೀದೀಲಿ ಹರಾಜು ಹಾಕೋಕೆ. ನಾಚಿಕೆ ಮಾನ ಮರ್ಯಾದೆ ಇಲ್ಲದೆ ಇನ್ನೊಬ್ಬರ ಮನೆ ಹಾಳು ಮಾಡುವವಳು ನೀನು. ನಿನ್ನ ಬಳಿ ಬುದ್ದಿ ಹೇಳಿಸಿಕೊಳ್ಳುವ ದರ್ದು ನನಗಿಲ್ಲ. ನೀನ್ಯಾರೋ ಗುಣ ಸರಿ ಇಲ್ಲದಿರೋನನ್ನು ಒಪ್ಪಿಕೊಂಡಿದ್ದೀಯಾ ಅಂತ ನಮ್ಮ ಪೂಜಾ ಹಾಗೆ ಮಾಡ್ತಾಳಾ? ಎಂದು ಜೋರು ಧ್ವನಿಯಲ್ಲಿಯೇ ಕ್ಲಾಸ್‌ ತೆಗೆದುಕೊಂಡಿದ್ದಾಳೆ.

ತಾಂಡವ್‌ ನೆಮ್ಮದಿ ಕೆಡಿಸಿದ ಭಾಗ್ಯ

ಅಷ್ಟರಲ್ಲಿ ತಾಂಡವ್‌ ಸಹ ಭಾಗ್ಯಾ ಜೊತೆ ಮಾತಿಗಿಳಿದಿದ್ದಾನೆ. ನೀವು ನಮ್ಮ ಮನೆಗೆ ಬಂದು ಕಿಶನ್‌ ಬಗ್ಗೆ ಹೇಳದಿದ್ದರೆ, ನಮಗೇ ಲಾಸ್‌ ಆಗ್ತಿತ್ತು. ಅಷ್ಟೊಳ್ಳೆ ಹುಡುಗ ಸಿಕ್ಕಿದ್ದಾನೆ ಎಂದಿದ್ದಾಳೆ. ಒಳ್ಳೆಯ ಹುಡುಗ ಆಗಿದ್ದರೆ, ಪಾರ್ಕ್‌ಗೆ ಹೋಗುತ್ತಿರಲಿಲ್ಲ ಎಂದು ತಾಂಡವ್‌ ಹೇಳುತ್ತಿದ್ದಂತೆ, ನೀವು ಅವನ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದಿದ್ದಾಳೆ. ಪೂಜಾನ ಮದುವೆ ಆಗುವವನನ್ನು ಅಳಿಯೋಕೆ ನಮ್ಮ ಬಳಿ ಒಂದು ಮಾನದಂಡ ಇದೆ. ಆ ಹುಡುಗ ಯಾವುದೇ ಕಾರಣಕ್ಕೂ ನಿಮ್ಮ ಥರ ಇರಬಾರದು. ನಿಮ್ಮ ಯಾವ ಗುಣಗಳೂ ಆತನಿಗಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಫೋನ್‌ ಇಟ್ಟಿದ್ದಾಳೆ. ಇತ್ತ ಫೋನ್‌ ಬಿಸಾಕಿ, ಮತ್ತಷ್ಟು ನೆಮ್ಮದಿ ಹಾಳು ಮಾಡಿಕೊಂಡಿದ್ದಾನೆ ತಾಂಡವ್.

ಮದುಗೆ ಸಿಕ್ತು ಎಲ್ಲರ ಒಪ್ಪಿಗೆ

ಇತ್ತ ಕುಸುಮಾ ಮತ್ತು ಭಾಗ್ಯ, ಕಿಶನ್‌ ವಿಚಾರವನ್ನು ಪೂಜಾ ಮುಂದೆ ಪ್ರಸ್ತಾಪ ಮಾಡಿದ್ದಾರೆ. ನೀವು ತೋರಿಸುವ ಹುಡುಗನನ್ನೇ ಮದುವೆ ಆಗುವುದಾಗಿ ಪೂಜಾ ಹೇಳಿದ್ದರಿಂದ, ಕಿಶನ್‌ ನಿನಗೆ ಹೇಳಿ ಮಾಡಿಸಿದ ಜೋಡಿ ಎಂದಿದ್ದಾರೆ. ಇವರಿಬ್ಬರ ಮಾತಿಗೆ ಪೂಜಾ ಸಹ ಖುಷಿಯಾಗಿದ್ದಾಳೆ. ಇನ್ನೇನಿದ್ದರೂ ಮದುವೆ ಸಂಭ್ರಮ ಎಂದು ಹೇಳಿದ್ದಾರೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ 789ನೇ ಸಂಚಿಕೆ ಮುಕ್ತಾಯ ಕಂಡಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌,

ಧರ್ಮರಾಜ್‌ - ಶಶಿಧರ್‌ ಕೋಟೆ,

ಭಾಗ್ಯಾ - ಸುಷ್ಮಾ ಕೆ ರಾವ್‌,

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌,

ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ,

ಪೂಜಾ - ಆಶಾ ಅಯ್ಯನರ್‌,

ಶ್ರೇಷ್ಠಾ - ಕಾವ್ಯಾ ಗೌಡ,

ತನ್ವಿ - ಅಮೃತಾ ಗೌಡ,

ಗುಂಡಣ್ಣ - ನಿಹಾರ್‌ ಗೌಡ,

ಸುಂದರಿ - ಸುನೇತ್ರಾ ಪಂಡಿತ್‌

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.