ಸುದೀಪ್‌ ಅವ್ರದ್ದು ಒಳ್ಳೆಯ ನಿರ್ಧಾರವೇ, ಆದ್ರೆ ಆ ದೊಡ್ಡ ಪ್ರಭಾವಳಿಯ ಸ್ಥಾನ ತುಂಬಬಲ್ಲ ಬೇರೆಯವ್ರು ಯಾರಿದ್ದಾರೆ? ಯಕ್ಷಪ್ರಶ್ನೆಗೆ ಸಿಗದ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  ಸುದೀಪ್‌ ಅವ್ರದ್ದು ಒಳ್ಳೆಯ ನಿರ್ಧಾರವೇ, ಆದ್ರೆ ಆ ದೊಡ್ಡ ಪ್ರಭಾವಳಿಯ ಸ್ಥಾನ ತುಂಬಬಲ್ಲ ಬೇರೆಯವ್ರು ಯಾರಿದ್ದಾರೆ? ಯಕ್ಷಪ್ರಶ್ನೆಗೆ ಸಿಗದ ಉತ್ತರ

ಸುದೀಪ್‌ ಅವ್ರದ್ದು ಒಳ್ಳೆಯ ನಿರ್ಧಾರವೇ, ಆದ್ರೆ ಆ ದೊಡ್ಡ ಪ್ರಭಾವಳಿಯ ಸ್ಥಾನ ತುಂಬಬಲ್ಲ ಬೇರೆಯವ್ರು ಯಾರಿದ್ದಾರೆ? ಯಕ್ಷಪ್ರಶ್ನೆಗೆ ಸಿಗದ ಉತ್ತರ

ಸುದೀಪ್‌ಗೆ ಸುದೀಪೇ ಸಾಟಿ. ಸಿನಿಮಾರಂಗದಲ್ಲಿನ ಅಪಾರ ಅನುಭವ, ಅವರು ಮಾತನಾಡುವ ರೀತಿ, ವೇದಿಕೆ ಮೇಲೆ ನಿಂತರೆ ಅವರ ಗತ್ತು, ಗಮ್ಮತ್ತು, ಬಾಯಿಂದ ಹೊರಡುವ ತೂಕದ ಮಾತುಗಳನ್ನು ಸರಿದೂಗಿಸಲು ಮತ್ತೊಬ್ಬರಿಂದ ಅಸಾಧ್ಯ. ಆದರೆ, ಶೋ ಮುಂದುವರಿಯಲೇ ಬೇಕು. ಅವರಿಲ್ಲದಿದ್ದರೆ ಇನ್ನೊಬ್ಬರು ಅದರ ಜವಾಬ್ದಾರಿ ಹೊರಲೇಬೇಕು. ಆ ಬಹು ದೊಡ್ಡ ಜವಾಬ್ದಾರಿ ಯಾರು ಹೊರಲಿದ್ದಾರೆ?

ಬಿಗ್‌ ಬಾಸ್‌ಗೆ ವಿದಾಯ ಹೇಳಿದ ಕಿಚ್ಚ; ಸುದೀಪ್‌ ಸ್ಥಾನ ತುಂಬೋ ಮತ್ತೊಬ್ಬರು ಯಾರಿದ್ದಾರೆ?
ಬಿಗ್‌ ಬಾಸ್‌ಗೆ ವಿದಾಯ ಹೇಳಿದ ಕಿಚ್ಚ; ಸುದೀಪ್‌ ಸ್ಥಾನ ತುಂಬೋ ಮತ್ತೊಬ್ಬರು ಯಾರಿದ್ದಾರೆ?

Bigg Boss Kannada Show: ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವುದು ಬಿಗ್‌ಬಾಸ್‌ ಕನ್ನಡ ಕಾರ್ಯಕ್ರಮ. ಕಳೆದ 10 ವರ್ಷಗಳಿಂದ ಈ ಶೋನ ನಿರೂಪಣೆಯ ದೊಡ್ಡ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ಇಂದಿಗೂ ಅದನ್ನು ನಡೆಸಿಕೊಂಡು ಬಂದವರು ಕಿಚ್ಚ ಸುದೀಪ್.‌ ಇದೀಗ 11ನೇ ಸೀಸನ್‌ ನಡೆಯುತ್ತಿದೆ. ಅಲ್ಲಿಯೂ ಅವರಿದ್ದಾರೆ. ಆದ್ರೆ, ಈ ಹನ್ನೊಂದನೇ ಸೀಸನ್ನೇ ಅವರ ಕೊನೇ ಸೀಸನ್‌! ಸಾಕು, ನಾನಿನ್ನು ಸಿನಿಮಾ ಕಡೆ ಹೊರಳುವೆ ಎಂದು ಸುದೀಪ್‌ ಹೇಳಿಯಾಗಿದೆ. ಅಲ್ಲಿಗೆ, ವೀಕ್ಷಕ ತಲೆ ಮೇಲೆ ಕೈಹೊತ್ತು ಕೂತಿದ್ದಾನೆ.

ನಾವು ನೋಡುವ ಕನ್ನಡದ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಸುದೀಪೇ ಬಿಗ್‌ಬಾಸ್‌! ಹೀಗೆ ಅಂದುಕೊಂಡವರು ಎಷ್ಟೋ ಮಂದಿ. ಆ ಮಟ್ಟದ ಪರಿಣಾಮ ಬೀರಿದ್ದಾರವರು. ಬಿಗ್‌ ಮನೆಯಲ್ಲಿ ಸ್ಪರ್ಧಿಗಳು ಏನೇ ಮಾಡಿದರೂ, ಕೊನೆಗೆ ವೀಕ್ಷಕ ಕಾಯುವುದು ವಾರಾಂತ್ಯದ ಏಪಿಸೋಡ್‌ಗೇ ಹೆಚ್ಚು. ಏಕೆಂದರೆ ಅಲ್ಲಿ ಕಿಚ್ಚ ಸುದೀಪ್‌ ಇರ್ತಾರೆ. ಹಾಗಂತ ಅವರಿಲ್ಲಿ ಈ ಶೋನ ಕೇವಲ ಹೋಸ್ಟ್‌ ಮಾತ್ರವಲ್ಲ. ನಿರೂಪಕನೂ ಅಲ್ಲ. ಬದಲಾಗಿ ಆತ್ಮ ಎನಿಸಿಕೊಂಡಿದ್ದಾರೆ. ಇದು ನನ್ನದೇ ಶೋ ಎಂಬಷ್ಟರ ಮಟ್ಟಿಗೆ ಹೆಗಲ ಮೇಲೆ ಹೊತ್ತು ಸಾಗಿ ಬಂದಿದ್ದಾರೆ.

ದಳಪತಿ ವಿಜಯ್‌ ಮಾಡಿದ್ದೂ ಇದೇ.. 

ಕಾಲಿವುಡ್ ನಟ ದಳಪತಿ ವಿಜಯ್‌ಗೆ ತಮಿಳುನಾಡಿನಲ್ಲಿ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ದೇಶ, ವಿದೇಶದಲ್ಲಿಯೂ ಅವರ ಸಿನಿಮಾಗಳಿಗೆ ಜನ ಕಾಯ್ತಾರೆ. ಅವರ ಪ್ರತಿ ಸಿನಿಮಾಗಳು ನೂರಾರು ಕೋಟಿ ಕಮಾಯಿ ಮಾಡುತ್ತವೆ. ಹೀಗೆ ಸಿನಿಮಾರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ, ಸಿನಿಮಾ ಜೀವನಕ್ಕೆ ನಿವೃತ್ತಿ ಘೋಷಿಸಿ, ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದಾರೆ. ಸದ್ಯ ಅವರ ಕೈಯಲ್ಲಿರುವುದು ಒಂದೇ ಒಂದು ಸಿನಿಮಾ ಮಾತ್ರ. ಆ ಚಿತ್ರಕ್ಕೆ ಕನ್ನಡದ ನಿರ್ಮಾಪಕರೇ ಬಂಡವಾಳ ಹೂಡುತ್ತಿದ್ದಾರೆ. 2026ರ ತಮಿಳುನಾಡಿನ ಚುನಾವಣೆ ಮೇಲೆ ಅವರು ಕಣ್ಣಿಟ್ಟಿದ್ದಾರೆ.

ಕಿಚ್ಚನದ್ದು ಜಾಣ ನಡೆ..

ಈ ವಿಷ್ಯಾ ಇಲ್ಲ್ಯಾಕೆ ಬಂತು ಅಂದ್ರೆ, ಕಿಚ್ಚ ಸುದೀಪ್‌ ಚಿತ್ರರಂಗದಲ್ಲಿ ಸ್ಟಾರ್‌ ನಟ. ಕಿರುತೆರೆಯಲ್ಲಿ ಸೀಸನ್‌ 11ರ ಬಿಗ್‌ಬಾಸ್‌ ಶೋನ ವಾರಾಂತ್ಯದ ಗ್ರ್ಯಾಂಡ್‌ ಓಪನಿಂಗ್‌ ಏಪಿಸೋಡ್‌ ದಾಖಲೆಯ ಟಿಆರ್‌ಪಿ ಪಡೆದುಕೊಂಡಿದೆ. ವಾರದ ದಿನಗಳಿಗೂ ಟಿಆರ್‌ಪಿ ರಭಸವಾಗಿಯೇ ಹರಿದು ಬರುತ್ತಿದೆ. ಹೀಗೆ ಅಪಾರ ವೀಕ್ಷಕ ಬಳಗದಿಂದ ಮೆಚ್ಚುಗೆ ಸಿಕ್ಕ ಈ ಸಂದರ್ಭದಲ್ಲಿಯೇ ಜಾಣ ನಡೆಯತ್ತ ಹೆಜ್ಜೆಹಾಕಿದ್ದಾರೆ. ವಿವೇಕದ ನಿರ್ಧಾರ ಕೈಗೊಂಡು, ಇದು ನನ್ನ ಕೊನೆಯ ಬಿಗ್‌ಬಾಸ್‌ ಶೋ ಎಂದು ಘೋಷಣೆ ಮಾಡಿಯೇ ಬಿಟ್ಟಿದ್ದಾರೆ.

ಸುದೀಪ್‌ ನಂತರದ ಸ್ಥಾನ ಯಾರಿಗೆ?

ಈಗ ಅಚ್ಚರಿಯ ಬೆಳವಣಿಗೆಯಲ್ಲಿ ಸುದೀಪ್‌ ಅವರ ನಿರ್ಧಾರ ಕೆಲವರಿಗೆ ಶಾಕಿಂಗ್‌ ಎನಿಸಿದರೆ, ಇನ್ನು ಕೆಲವರು ಇದು ಒಳ್ಳೆಯ ನಿರ್ಧಾರ ಎನ್ನುತ್ತಿದ್ದಾರೆ. ಇನ್ನಾದರೂ ನಿಮ್ಮ ಬತ್ತಳಿಕೆಯಿಂದ ಮತ್ತಷ್ಟು ಮಗದಷ್ಟು ಸಿನಿಮಾಗಳು ಬರಲಿ ಎಂದು ಹಾರೈಸುತ್ತಿದ್ದಾರೆ. ಇತ್ತ ಬಿಗ್‌ಬಾಸ್‌ ಕನ್ನಡದ ಕಥೆ ಏನು? ಸುದೀಪ್‌ ಸ್ಥಾನ ತುಂಬಬಲ್ಲ, ಕಿಚ್ಚನ ಸರಿಸಮದ ಪ್ರಭಾವಳಿ ಇರುವ ಕಲಾವಿದರು ಯಾರಿದ್ದಾರೆ? ಥಟ್ಟನೇ ಹೀಗೊಂದು ವಿಚಾರ ತಲೆಗೆ ಹೋದರೂ, ಯಾರ ಹೆಸರೂ ಸುದೀಪ್‌ ಲೆವೆಲ್‌ಗೆ ಮಾಚ್‌ ಆಗುವುದೇ ಇಲ್ಲ!

ಬಿಗ್‌ ಬಾಸ್‌ ಆರಂಭಕ್ಕೂ ಮೊದಲೇ ಕಿಚ್ಚ ಸುದೀಪ್‌ ಈ ಸಲದ ಬಿಗ್‌ಬಾಸ್‌ ಶೋ ನಿರೂಪಣೆ ಮಾಡಲ್ಲ ಎಂಬ ಸುದ್ದಿ ಹರಿದಾಡಿತ್ತು. ಆ ಸಮಯಲ್ಲಿಯೇ ಒಂದಷ್ಟು ಕನ್ನಡ ನಟ ಹೆಸರುಗಳು ತೇಲಿ ಬಂದಿದ್ದವು. ರಮೇಶ್‌ ಅರವಿಂದ್‌ ಬರ್ತಾರೆ, ಗೋಲ್ಡನ್‌ ಸ್ಟಾರ್‌ ಗಣೇಶ್‌ ನಡೆಸಿಕೊಡಲಿದ್ದಾರೆ, ರಿಷಬ್‌ ಶೆಟ್ಟಿ ಸಹ ಆಗಮಿಸುವುದು ಪಕ್ಕಾ ಎಂದೇ ಹೇಳಲಾಗಿತ್ತು. ಇದೀಗ ಇವೇ ಹೆಸರುಗಳು ಮತ್ತೆ ಮುನ್ನೆಲೆಗೆ ಬಂದಿವೆ. ಇವರೆಲ್ಲರೂ ತಮ್ಮ ನಟನೆ ಜತೆಗೆ ವೇದಿಕೆ ಕಾರ್ಯಕ್ರಮವನ್ನು ಚೆನ್ನಾಗಿ ನಿಭಾಯಿಸಿದ ಅನುಭವ ಇದೆ. ಆದರೆ, ಬಿಗ್‌ ಬಾಸ್‌ ಬೇಡುವ ಆ ಗತ್ತು ಈ ಮೇಲಿನವರಿಂದ ಬಯಸುವುದು ಅಸಾಧ್ಯ.

ಸುದೀಪ್‌ಗೆ ಸುದೀಪೇ ಸಾಟಿ. ಸಿನಿಮಾರಂಗದಲ್ಲಿನ ಅಪಾರ ಅನುಭವ, ಅವರು ಮಾತನಾಡುವ ರೀತಿ, ವೇದಿಕೆ ಮೇಲೆ ನಿಂತರೆ ಅವರ ಗತ್ತು, ಗಮ್ಮತ್ತು, ಬಾಯಿಂದ ಹೊರಡುವ ತೂಕದ ಮಾತುಗಳನ್ನು ಸರಿದೂಗಿಸಲು ಮತ್ತೊಬ್ಬರಿಂದ ಅಸಾಧ್ಯ. ಆದರೆ, ಶೋ ಮುಂದುವರಿಯಲೇ ಬೇಕು. ಅವರಿಲ್ಲದಿದ್ದರೆ ಇನ್ನೊಬ್ಬರು ಅದರ ಜವಾಬ್ದಾರಿ ಹೊರಲೇಬೇಕು. ಆ ಬಹು ದೊಡ್ಡ ಜವಾಬ್ದಾರಿ ಯಾರು ಹೊರಲಿದ್ದಾರೆ? ಸದ್ಯಕ್ಕೆ ಕರುನಾಡಿನ ಬಿಗ್‌ಬಾಸ್‌ ವೀಕ್ಷಕರಿಗೆ ಮಾತ್ರವಲ್ಲದೆ, ಕಲರ್ಸ್‌ ಕನ್ನಡ ವಾಹಿನಿಗೂ ಇದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

Whats_app_banner