Lakshmi Nivasa Serial: ಜಾಹ್ನವಿ ಮೇಲೆ ಹೆಚ್ಚಾಯ್ತು ಅನುಮಾನ, ಇಡೀ ಮನೆಗೆ ಮೈಕ್ ಅಳವಡಿಸಿ, ಗುಟ್ಟಾಗಿ ಆಕೆಯ ಮಾತು ಕೇಳಲು ಹೊರಟ ಜಯಂತ್!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಈಗ ಸೈಕೋ ಜಯಂತನ ಒಂದೊಂದೇ ಅಸಲಿಯತ್ತು ನೋಡುಗರ ಕಣ್ಣಿಗೆ ಬೀಳುತ್ತಿದೆ. ಅತಿಯಾದ ಪ್ರೀತಿ, ಕಾಳಜಿ ಪತ್ನಿ ಜಾಹ್ನವಿಯ ಗಮನಕ್ಕೂ ಬಂದಿದೆ. ಮತ್ತೊಂದೆಡೆ ಆಕೆಯ ಮೇಲೆ ಹದ್ದಿನ ಕಣ್ಣಿಟ್ಟಿರುವ ಜಯಂತ್, ಮನೆಯಲ್ಲಿದ್ದಾಗ ಆಕೆ ಏನು ಮಾತನಾಡ್ತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಲು ಮುಂದಾಗಿದ್ದಾನೆ.
Lakshmi Nivasa Serial: ಪ್ರೀತಿ ವಿಚಾರದಲ್ಲಿ ಯಾವುದೂ ಅತಿಯಾಗಬಾರದು. ಅತಿಯಾದ ಪ್ರೀತಿಯೂ ಕೆಲವೊಮ್ಮೆ ನೋವು ತರುವುದುಂಟು, ಅದು ಮುಂದೆ ಬೇರೆ ಬೇರೆ ಕಾರಣಕ್ಕೆ ದ್ವೇಷವಾಗಿ ಬದಲಾಗುವುದೂ ಉಂಟು. ಈಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಅದೇ ಆಗ್ತಿದೆ. ಪತ್ನಿ ಜಾಹ್ನವಿ ಮೇಲೆ ಜಯಂತ್ ಅತಿಯಾದ ಪ್ರೀತಿ ತೋರುತ್ತಿದ್ದಾನೆ. ಆಕೆಯ ಚಲನ ವಲನಗಳನ್ನು ತನ್ನ ಕೆಲಸದ ಅವಧಿಯಲ್ಲೂ ಸೂಕ್ಷ್ಮವಾಗಿ ಸಿಸಿಟಿವಿ ಮೂಲಕ ಕುಳಿತಲ್ಲೇ ಗಮನಿಸುತ್ತಿದ್ದಾನೆ. ಸುಮ್ಮನೆ ಕೂತರೆ, ಯಾಕೆ ಸುಮ್ಮನೆ ಕೂತಿದ್ದಾಳೆ?, ಯಾರ ಜತೆಗಾದ್ರೂ ಫೋನ್‌ನಲ್ಲಿ ಮಾತನಾಡಿದ್ರೆ, ಇಷ್ಟು ಹೊತ್ತು ಯಾರ ಜತೆ ಮಾತನಾಡುತ್ತಿದ್ದಾಳೆ? ಎಂದೆಲ್ಲ ಮನದಲ್ಲೇ ನೂರು ಪ್ರಶ್ನೆ ಹಾಕಿಕೊಳ್ಳುತ್ತಿದ್ದಾನೆ ಜಯಂತ್.
ಇತ್ತ ಜಾಹ್ನವಿ ಮನೆಯವ್ರೂ ಸಹ ಒಳ್ಳೆಯ ಅಳಿಯ ಸಿಕ್ಕ ಅನ್ನೋ ಖುಷಿಯಲ್ಲಿದ್ದಾರೆ. ಆತನ ನಡೆ ನುಡಿ, ಮಾತನಾಡುವ ಗುಣ ಎಲ್ಲರಿಗೂ ಹಿಡಿಸಿದೆ, ನಮ್ಮ ಜಾನುಗೆ ತಕ್ಕ ಗಂಡೇ ಸಿಕ್ಕ ಎಂದು ಬೀಗುತ್ತಿದ್ದಾರೆ. ಆದರೆ, ಜಯಂತನ ಒಂದೊಂದೇ ಗುಣಗಳು ಜಾನು ಗಮನಕ್ಕೂ ಬರುತ್ತಿದೆ. ಅದು ಅತೀ ಅನಿಸಿದರೂ, ಜಯಂತನ ಪ್ರೀತಿ ಅದೆಲ್ಲವನ್ನು ಮರೆಸುತ್ತಿದೆ. ದೊಡ್ಡ ಬಂಗಲೆ, ಮನೆಯಲ್ಲಿ ಯಾರೂ ಇಲ್ಲದ ಒಂಟಿ ಜೀವನ ಜಾಹ್ನವಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ಹೊಸ ಜೀವನ ಈಗಷ್ಟೇ ಆರಂಭವಾಗಿರುವುದರಿಂದ ಜಾಹ್ನವಿಗೂ ಇದು ಬಂಗಾರದ ಪಂಜರ ಎಂಬ ನಿಜಾಂಶ ಇನ್ನೂ ಅರಿವಿಗೆ ಬಂದಿಲ್ಲ.
ಅಮ್ಮನ ಬಳಿ ಗಂಟೆಗಟ್ಟಲೇ ಮಾತನಾಡಿ ಪತಿಗಾಗಿ ಸರ್ಪ್ರೈಸ್ ಎನ್ನುವಂತೆ ಪಲಾವ್ ಮಾಡಿಟ್ಟಿದ್ದಳು ಜಾನು. ನೇರವಾಗಿ ಮನೆಗೆ ಬಂದ ಜಯಂತ್, ಪತ್ನಿ ಮಾಡಿದ ಪಲಾವ್ ತಿನ್ನದೇ, ಸಿಂಕ್‌ನಲ್ಲಿನ ಪಾತ್ರೆಗಳನ್ನು ತೊಳೆಯಲು ಮುಂದಾಗಿದ್ದಾನೆ. ಇದು ಜಾಹ್ನವಿಗೂ ಕೊಂಚ ಕಸಿವಿಸಿ ಅನಿಸಿದೆ. ಅಯ್ಯೋ, ಇದನ್ನೆಲ್ಲ ನಾನು ಮಾಡ್ತಿನಿ, ನೀವು ಊಟ ಮಾಡಬನ್ನಿ ಎಂದು ಕರೆದಿದ್ದಾಳೆ. ಇಲ್ಲ, ನನಗೆ ಎಲ್ಲವೂ ಕ್ಲೀನ್ ಆಗಿರಬೇಕು, ಹೀಗಿರುವುದರನ್ನು ನೋಡಲು ನನ್ನಿಂದಾಗದು ಎಂದಿದ್ದಾನೆ. ಆಗ ನಾನೇ ತೊಳೆಯುತ್ತೇನೆ ಎಂದು ಜಾನು ಮುಂದಾಗಿದ್ದಾಳೆ. ಇಬ್ಬರೂ ಒಟ್ಟಿಗೆ ಸೇರಿ ಪಾತ್ರೆ ತೊಳೆದಿದ್ದಾರೆ.
ಜಾಹ್ನವಿಯ ಕಾಲ್ ಲಿಸ್ಟ್ ನೋಡಿದ ಜಯಂತ್
ಊಟದ ಬಳಿಕ ಜಾಹ್ನವಿ ಮತ್ತು ಜಯಂತ್ ಕೋಣೆ ಸೇರಿದ್ದಾರೆ. ಜಯಂತ್‌ಗೆ ಮಾತ್ರ ಸಮಾಧಾನವಿಲ್ಲ. ಜಾನು ಒಂದು ಗಂಟೆ ಯಾರ ಜತೆ ಮಾತನಾಡಿರಬಹುದು ಎಂಬ ಅನುಮಾನ ಆತನ ತಲೆಯಲ್ಲಿ ಕೊರೆಯುತ್ತಿದೆ. ಅದನ್ನು ಹೇಗಾದರೂ ಮಾಡಿ ಪರಿಹರಿಸಿಕೊಳ್ಳಲು ಮುಂದಾಗಿದ್ದಾನೆ. ಮಲಗುವ ಕೋಣೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ನಾನು ಬಳಸುವುದಿಲ್ಲ. ನಿಮ್ಮ ಮೊಬೈಲ್ ಕೊಡಿ, ಹೊರಗಡೆ ಇಟ್ಟು ಬರ್ತಿನಿ ಎಂದಿದ್ದಾನೆ. ಆಕೆಯೂ ಕೊಟ್ಟಿದ್ದಾಳೆ. ಹೊರಗಡೆ ಬಂದವನೇ, ಪತ್ನಿ ಮೊಬೈಲ್‌ನ ಕಾಲ್ ಲಿಸ್ಟ್ ಚೆಕ್ ಮಾಡಿದ್ದಾನೆ. ಅಮ್ಮನ ಜತೆ ಜಾಹ್ನವಿ ಒಂದು ಗಂಟೆ ಮಾತನಾಡಿದ್ದು ಕನ್ಫರ್ಮ್ ಆಗಿದೆ. ಜಯಂತ್ ಕೊಂಚ ನಿಟ್ಟುಸಿರು ಬಿಟ್ಟಿದ್ದಾನೆ.
ಮನೆಯವರ ಜತೆ ಹೆಚ್ಚು ಮಾತನಾಡಬೇಡಿ..
ಅಮ್ಮನ ಜತೆಗೆ ಗಂಟೆಗಟ್ಟಲೇ ಮಾತನಾಡುವ ನೀವು, ಗಂಡನ ಜತೆಗೂ ಒಂದಷ್ಟು ಹೊತ್ತು ಮಾತನಾಡಬಹುದಲ್ಲ. ಇನ್ಮೇಲಿಂದ ಮನೆಯವರ ಜತೆಗೆ ಕಡಿಮೆ ಮಾತನಾಡು, ಅಪ್ಪ ಅಮ್ಮನ ಜತೆಗೆ ಹೆಚ್ಚು ಮಾತನಾಡಿದ್ರೆ, ಪತಿ ಮೇಲೆ ಪ್ರೀತಿ ಇಲ್ಲ ಎಂದರ್ಥ ಎಂದಿದ್ದಾನೆ. ಇಲ್ಲ ಇಲ್ಲ ಹಾಗೇನೂ ಇಲ್ಲ, ಯಾರು ಅಪ್ಪ ಅಮ್ಮನ ಜತೆ ಹೆಚ್ಚು ಮಾತನಾಡ್ತಾರೋ, ಅವರಿಗೆ ಪತಿ ಮೇಲೆಯೂ ಅದಕ್ಕಿಂತ ಜಾಸ್ತಿ ಪ್ರೀತಿ ಇರುತ್ತೆ ಎಂದಿದ್ದಾಳೆ. ಮತ್ತೊಂದು ಕಡೆ ಪತಿ ಹೀಗ್ಯಾಕೆ ಎಂಬ ಸಣ್ಣ ಅನುಮಾನವೂ ಜಾಹ್ನವಿಗೆ ಬಂದಿದೆಯಾದರೂ, ಅದನ್ನು ಪತಿ ಜತೆಗೆ ಮಾತನಾಡಲು ಆಕೆ ಕಡೆಯಿಂದ ಸಾಧ್ಯವಾಗ್ತಿಲ್ಲ.
ಮನೆಗೆ ಮೈಕ್ ಅಳವಡಿಸುವ ನಿರ್ಧಾರ
ಬೆಳಗೆದ್ದು ವ್ಯಾಯಾಮ ಮಾಡ್ತಿದ್ದಾಗ, ನಿಮಗೆ ಸುಸ್ತಾಗಿದೆ, ಟೀ ಮಾಡಿಕೊಂಡು ಬರ್ಲಾ ಎಂದು ಕೇಳ್ತಾಳೆ. ಜಾಹ್ನವಿಯ ಈ ಮಾತಿಗೆ, ಬೇಕಾಗಿಲ್ಲ ನಾನೇ ಹೋಗಿ ಕುಡೀತಿನಿ ಎಂದಿದ್ದಾನೆ. ನೀವ್ಯಾಕೆ ವ್ಯಾಯಾಮ ಮಾಡಬಾರದು ಎಂದೂ ಹೇಳಿದ್ದಾನೆ. ಅಷ್ಟೊತ್ತಿಗೆ, ಇರೀ ನಾನು ಟೀ ಮಾಡಿ ತರುವೆ ಎಂದು ಹೊರಟಿದ್ದಾಳೆ ಜಾಹ್ನವಿ. ಬೇಡ ನೀವು ಮೊದಲು ಫ್ರೇಶ್ ಆಗಿ, ನಾನೇ ಟೀ ಮಾಡಿಕೊಂಡು ಬರ್ತಿನಿ ಎಂದಿದ್ದಾನೆ ಜಯಂತ್. ಈ ನಡುವೆ ಜಯಂತ್ ಆಫೀಸ್‌ಗೆ ಬಂದಿದ್ದಾನೆ. ಅತ್ತ ಜಾಹ್ನವಿ ಮನೆಯವರ ಜತೆಗೆ ಮತ್ತೆ ಫೋನ್‌ನಲ್ಲಿ ಅಮ್ಮನ ಜತೆಗೆ ಮಾತನಾಡುತ್ತಿದ್ದಾಳೆ. ಇದನ್ನು ಆಫೀಸ್‌ನಲ್ಲೇ ಕುಳಿತು ಗಮನಿಸುತ್ತಿದ್ದಾನೆ ಜಯಂತ್. ಮನೆಯವ್ರ ಜತೆಗೆ ಮಾತನಾಡುವುದು ಅಷ್ಟೊಂದು ಇರುತ್ತಾ? ಏನ್ ಮಾತನಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ನಾನು ನಾಳೆನೇ ಮನೆಗೆ ಮೈಕ್ ಹಾಕಿಸಬೇಕು ಎಂದಿದ್ದಾನೆ. ಜಯಂತನ ಈ ಅತಿಯಾದ ಪ್ರೀತಿ ಜಾನುಗೆ ಮುಳುವಾಗುತ್ತಾ?
ವಿಭಾಗ