Lakshmi Nivasa Serial: ಜಾಹ್ನವಿಯ ಗಮನಕ್ಕೂ ಬರ್ತಿದೆ ಜಯಂತನ ಅಸಲಿ ಮುಖ; ಮಗು ಚಿವುಟಿ ತೊಟ್ಟಿಲನ್ನೂ ತೂಗಿದ ಸೈಕೋ!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಅಕ್ಷರಶಃ ಬಂಗಾರದ ಪಂಜರದಲ್ಲಿದ್ದಾಳೆ. ಒಟ್ಟಂಟಿಯಾಗಿ ಕಾಲ ಕಳೆಯುತ್ತಿದ್ದಾಳೆ. ಹೀಗಿರುವಾಗಲೇ ಮನೆಯಿಂದ ಆಚೆ ಬರಲು ಪ್ರಯ್ನಿಸಿದರೂ, ಅದಕ್ಕೆ ಪತಿಯ ಒಪ್ಪಿಗೆ ಬೇಕು. ಈ ನಡುವೆ ದಿನದಿಂದ ದಿನಕ್ಕೆ ಪತಿಯಲ್ಲಿನ ಬದಲಾವಣೆಗಳನ್ನು ಜಾಹ್ನವಿ ಗಮನಿಸುತ್ತಿದ್ದಾಳೆ. ಆತನ ಅಸಲಿ ಮುಖದ ಅನಾವರಣವಾಗ್ತಿದೆ.
Lakshmi Nivasa Serial: ಹೊರಗಿನ ಪ್ರಪಂಚಕ್ಕೆ ಒಳ್ಳೆಯ ನಡತೆ, ಗುಣವಂತ ಹುಡುಗ ಎನಿಸಿಕೊಂಡವನು ಉದ್ಯಮಿ ಜಯಂತ್. ಆದರೆ, ಆತನಿಗೆ ತನ್ನದೇ ಆದ ಒಂದು ಪ್ರಪಂಚವಿದೆ. ಅಲ್ಲಿ ಆತನೇ ಆ ಪ್ರಪಂಚದ ಸೃಷ್ಟಿಕರ್ತ. ಇನ್ನೊಬ್ಬರ ಆಗಮನವಾದರೆ, ಅದು ಏಳು ಸುತ್ತಿನ ಕೋಟೆಯನ್ನೇ ಪ್ರವೇಶಿಸಿದಂತೆ, ಅದರಿಂದ ಆಚೆ ಬರುವುದು ಅಷ್ಟು ಸುಲಭವಲ್ಲ. ಆ ಐಶಾರಾಮಿ ಮನೆಯಲ್ಲಿ ಎಲ್ಲವೂ ಇದೆ. ಅಲ್ಲಿ ಯಾವುದಕ್ಕೂ ಕೊರತೆ ಕಾಣಿಸದು. ಅದೇ ಕೋಟೆಯೊಳಗೆ ಜಾಹ್ನವಿ ಸಿಲುಕಿದ್ದಾಳೆ. ಆಕೆಗಲ್ಲಿ ಸ್ವಾತಂತ್ರ್ಯವಿಲ್ಲ. ಹೊರ ಪ್ರವೇಶಿಸಲು ಬಾಗಿಲುಗಳೂ ಲಾಕ್, ಆಕೆಯ ಚಲನವಲನಗಳ ಮೇಲೂ ಪತಿಯ ಹದ್ದಿನ ಕಣ್ಣಿದೆ. ಒಂದರ್ಥದಲ್ಲಿ ಇದು ಬಂಗಾರದ ಪಂಜರ!
ಬಾಗಿಲು ತೆರೆಯಲು ಯತ್ನಿಸಿದ ಜಾನು
ಜಯಂತ್ ಆಫೀಸ್‌ನಲ್ಲಿ ತನ್ನ ಸಹೋದ್ಯೋಗಿಗಳ ಜತೆಗೆ ಮೀಟಿಂಗ್ ಮಾಡುತ್ತಿದ್ದಾನೆ. ಹೀಗಿರುವಾಗಲೇ ಆತನ ಫೋನ್ ಎಮೆರ್ಜೆನ್ಸಿ ಅಲಾರಾಮ್ ಹೊಡೆಲಾರಂಭಿಸಿದೆ. ಇದನ್ನು ನೋಡಿದ ಜಯಂತ್, ಅಚ್ಚರಿಯಿಂದಲೇ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಿದ್ದಾನೆ. ಮನೆಯಲ್ಲಿ ಕೂತು ಕೂತು ಬೇಸರಗೊಂಡ ಜಾಹ್ನವಿ, ಬಾಗಿಲು ತೆರೆಯಲು ಪ್ರಯತ್ನಿಸಿದ್ದಾಳೆ. ಆದರೆ, ಬಾಗಿಲು ಮಾತ್ರ ಯಾವುದೇ ಕಾರಣಕ್ಕೂ ತೆರೆಯಲಿಲ್ಲ. ಹೊರಗಡೆ ಯಾರಾದರೂ ಇದ್ದಾರಾ ಎಂದೂ ನೋಡಿದ್ದಾಳೆ. ಅಲ್ಲಿಯೂ ಯಾರೂ ಕಾಣಲಿಲ್ಲ. ಏಕೆಂದರೆ, ಆ ಬಾಗಿಲು ತೆರೆಯಬೇಕೆಂದರೆ, ಜಯಂತ್ ಪಾಸ್‌ವರ್ಡ್ ಹಾಕಿದ್ರೆ ಮಾತ್ರ!
ಪತ್ನಿ ಕೆಲಸಕ್ಕೆ ಪತಿಯ ಅಸಮಾಧಾನ
ಹೀಗಿರುವಾಗಲೇ ಮನೆಯಲ್ಲಿ ಒಬ್ಬಳೇ ಕೂತು ಏನು ಮಾಡಲಿ ಎಂದು ಯೋಚಿಸತೊಡಗಿದ್ದಾಳೆ. ಆಗ ಮನೆಯ ವಸ್ತುಗಳ ಮೇಲೆ ಆಕೆಯ ಕಣ್ಣು ಬಿದ್ದಿದೆ. ಏನಾದ್ರೂ ಬದಲಾವಣೆ ಮಾಡಿದ್ರೆ ಹೇಗೆ ಎಂದುಕೊಂಡಿದ್ದಾಳೆ. ಹೂಕುಂಡಗಳನ್ನು, ದೇವರ ವಿಗ್ರಹಗಳನ್ನು ಅದಲು ಬದಲು ಮಾಡಿದ್ದಾಳೆ. ಸೋಫಾಸೆಟ್ ಮೇಲಿನ ತಲೆದಿಂಬುಗಳ ಸ್ಥಳ ಬದಲಾಯಿಸಿದ್ದಾಳೆ. ಟಿವಿ ಮುಂಭಾಗದ ಶೋಗಿಡಗಳನ್ನು ಬೇರೆ ಕಡೆ ಸ್ಥಳಾಂತರಿಸಿದ್ದಾಳೆ. ಹೀಗಿರುವಾಗಲೇ ಆಫೀಸ್ ಮುಗಿಸಿ ಮನೆಗೆ ಮರಳಿದ್ದಾನೆ ಜಯಂತ್. ಬಾಗಿಲಿಗೆ ಪಾಸ್‌ವರ್ಡ್ ಹಾಕಿ ಒಳ ಪ್ರವೇಶಿಸಿದ್ದಾನೆ. ಹಾಗೇ ಒಳ ಹೋದ ಜಯಂತ್ ಪತ್ನಿ ಮುಖ ನೋಡಿ ನಗುಬೀರಿದ್ದಾನೆ.
ಸೈಕೋ ಬುದ್ಧಿ ಅನಾವರಣ!
ಬಾಗಿಲಿನಿಂದಲೇ ಪತಿಯ ಕಣ್ಣುಮುಚ್ಚಿ, ತಾನು ಏನೆಲ್ಲ ಮಾಡಿದ್ದೇನೆ ಎಂಬುದನ್ನು ತೋರಿಸಿದ್ದಾಳೆ ಜಾನು. ಅರೇ ಕ್ಷಣ ಜಯಂತ್ ಶಾಕ್‌ಗೆ ಒಳಗಾಗಿದ್ದಾನೆ. ಮನೆಯಲ್ಲಿನ ಬದಲಾವಣೆ ಅಸಮಾಧಾನ ತಂದಿದೆ. ಕೋಪದಲ್ಲಿ, ಜಾಹ್ನವಿ ಅವ್ರೆ ಯಾಕೆ ಅದಲು ಬದಲು ಮಾಡಿದ್ರಿ, ಯಾವ್ಯಾವ ವಸ್ತು ಎಲ್ಲೆಲ್ಲಿ ಇರಬೇಕೋ ಅಲ್ಲೇ ಇರಬೇಕು ಎಂದಿದ್ದಾನೆ. ಜಾಹ್ನವಿ ಏನೆಲ್ಲ ಬದಲು ಮಾಡಿದ್ದಳೋ ಅದೆಲ್ಲವನ್ನು ಮೊದಲಿನಂತೆಯೇ ಇರಿಸಿದ್ದಾನೆ ಜಯಂತ್. ನಾನು ಯಾವ ವಸ್ತುವನ್ನು ಎಲ್ಲಿ ಇಟ್ಟಿರುತ್ತೇನೋ ಅದು ಅಲ್ಲಿಯೇ ಇರಬೇಕು. ಇಲ್ಲದಿದ್ರೆ ನನಗೆ ಕಷ್ಟ ಆಗುತ್ತೆ ಎಂದಿದ್ದಾನೆ.
ಬೇಸರದಲ್ಲಿಯೇ ಕೋಣೆಗೆ ನಡೆದ ಜಾನು
ಮನೆ ಎಂದ ಮೇಲೆ ವಸ್ತುಗಳ ಅದಲು ಬದಲಾಗುವುದು ಸಹಜ ಅಲ್ವಾ? ಎಂದಿದ್ದಾಳೆ. ನಿಮಗೆ ಇವು ವಸ್ತುಗಳಿರಬಹುದು. ನನಗೆ ಇವುಗಳ ಜತೆ ಒಂದೊಳ್ಳೆ ಸಂಬಂಧವಿದೆ. ನಿಮ್ಮ ವಸ್ತುವನ್ನು ಬಂದು ಯಾರಾದ್ರೂ ಕಿತ್ತುಕೊಂಡರೆ ನಿಮಗೆ ಸರಿ ಅನಿಸುತ್ತಾ? ಇದೂ ಹಾಗೇನೆ. ಇದಕ್ಕೆ ಬೇಸರದಲ್ಲಿಯೇ ಪ್ರತಿಕ್ರಿಯಿಸಿದ ಜಾಹ್ನವಿ, ಚಿಕ್ಕ ವಿಷಯವನ್ನು ಯಾಕೆ ದೊಡ್ಡದು ಮಾಡ್ತಿದ್ದೀರಾ ಎಂದಿದ್ದಾಳೆ. ನಾಳೆ ಯಾರಾದ್ರೂ ನಿಮ್ಮನ್ನು ಕಿತ್ತುಕೊಳ್ತೀನಿ ಅಂದ್ರೆ, ಇದು ಚಿಕ್ಕ ವಿಷಯ ಅಂತ ಬಿಟ್ಟು ಬಿಡ್ಲಾ. ಈ ವಸ್ತುಗಳೇ ನನಗೆ ಇಷ್ಟು ಮುಖ್ಯ ಅಂದ ಮೇಲೆ, ನೀವು ಎಷ್ಟು ಇಷ್ಟ ಅಂತ ತಿಳಿದುಕೊಳ್ಳಿ ಎನ್ನುತ್ತಿದ್ದಂತೆ, ಜಾಹ್ನವಿ ಬೇಸರದಲ್ಲಿಯೇ ಕೋಣೆ ಕಡೆಗೆ ಹೊರಟಿದ್ದಾಳೆ.
ಬೆಳದಿಂಗಳ ಊಟದ ಸರ್ಪ್ರೈಸ್
ಯಾವ ವಸ್ತು ಎಲ್ಲೆಲ್ಲಿ ಇರಬೇಕೋ ಅಲ್ಲಿಯೇ ಇರಿಸಿದ್ದಾನೆ ಜಯಂತ್. ಇತ್ತ ಜಾಹ್ನವಿ ಮನೆಯಲ್ಲಿ ಬೆಳದಿಂಗಳ ಊಟಕ್ಕೆ ಎಲ್ಲರೂ ಮನೆಯ ಹೊರಗೆ ಬಂದಿದ್ದಾರೆ. ಜಾಹ್ನವಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಆಕೆ ಫೋನ್ ತೆಗೆಯದಿದ್ದಾಗ, ಅಳಿಯ ಜಯಂತ್‌ಗೆ ಕರೆ ಮಾಡಿದ್ದಾರೆ ಅತ್ತೆ ಲಕ್ಷ್ಮೀ. ಬೆಳದಿಂಗಳ ಊಟದ ಬಗ್ಗೆ ಹೇಳಿದ್ದಾಳೆ. ಜಾಹ್ನವಿಯ ಕೋಪ ತಣಿಸೋಕೆ ಇದೇ ಒಳ್ಳೆಯ ಐಡಿಯಾ ಎಂದು ತಿಳಿದ ಜಯಂತ್, ಹತ್ತು ನಿಮಿಷ ಸಮಯ ಕೊಡಿ ನಾನೇ ನಿಮಗೆ ಫೋನ್ ಮಾಡುವೆ ಎಂದಿದ್ದಾನೆ. ಇತ್ತ ನೇರವಾಗಿ ಕೋಣೆಗೆ ಬಂದು ಜಾನುಗೆ, ಬೇಗ ರೆಡಿಯಾಗಿ ನಿಮಗೊಂದು ಸರ್ಪ್ರೈಸ್ ಇದೆ ಎಂದಿದ್ದಾನೆ.
ಮಗು ಚಿವುಟಿ, ತೊಟ್ಟಿಲು ತೂಗಿದ ಜಯಂತ್
ಹಾಗೆ ರೆಡಿಯಾಗಿ ಬಂದ ಜಾಹ್ನವಿಗೆ ಡೈನಿಂಗ್ ಟೇಬಲ್ ಮೇಲೆ ಕೂರಿಸಿ ಊಟ ಬಡಿಸಿದ್ದಾನೆ. ಜತೆಗೆ ಅತ್ತೆಗೆ ವಿಡಿಯೋ ಕಾಲ್ ಮಾಡಿ, ಜಾಹ್ನವಿ ಕೈಗೆ ಫೋನ್ ಕೊಟ್ಟಿದ್ದಾನೆ. ಬೆಳದಿಂಗಳು ಊಟ ಮಾಡುವ ಸಲುವಾಗಿ ಬಂದ್ವಿ. ನಿನ್ನ ನೆನಪಾಯ್ತು, ಅದಕ್ಕೆ ನಿನ್ನ ಬಿಟ್ಟು ಮಾಡುವುದು ಹೇಗೆ ಅಂತ ವಿಡಿಯೋ ಕಾಲ್ ಮಾಡಿದ್ವಿ ಎಂದಿದ್ದಾಳೆ ಅಮ್ಮ. ಮನೆಯವರ ಜತೆಗೆ ಮಾತನಾಡಿಸಿದ್ದಕ್ಕೆ ಖುಷಿಯಾಗಿದ್ದಾಳೆ ಜಾಹ್ನವಿ. ಇತ್ತ ಪತಿ ಜಯಂತ್, ಪತ್ನಿಗೂ ಊಟ ಮಾಡಿಸಿದ್ದಾನೆ. ಒಟ್ಟಿನಲ್ಲಿ ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸ ಜಯಂತನಿಂದಾಗ್ತಿದೆ.
ವಿಭಾಗ