‘ಜಯಂತನಿಗೆ ಪ್ರೀತಿ ಕೊಟ್ಟಷ್ಟೇ ಬೈಗುಳವೂ ಸಿಕ್ಕಿದೆ, ಪಾತ್ರ ಎಲ್ಲರ ಮನಸ್ಸು ಮುಟ್ಟಿದೆ’; ದೀಪಕ್‌ ಸುಬ್ರಮಣ್ಯ INTERVIEW
ಕನ್ನಡ ಸುದ್ದಿ  /  ಮನರಂಜನೆ  /  ‘ಜಯಂತನಿಗೆ ಪ್ರೀತಿ ಕೊಟ್ಟಷ್ಟೇ ಬೈಗುಳವೂ ಸಿಕ್ಕಿದೆ, ಪಾತ್ರ ಎಲ್ಲರ ಮನಸ್ಸು ಮುಟ್ಟಿದೆ’; ದೀಪಕ್‌ ಸುಬ್ರಮಣ್ಯ Interview

‘ಜಯಂತನಿಗೆ ಪ್ರೀತಿ ಕೊಟ್ಟಷ್ಟೇ ಬೈಗುಳವೂ ಸಿಕ್ಕಿದೆ, ಪಾತ್ರ ಎಲ್ಲರ ಮನಸ್ಸು ಮುಟ್ಟಿದೆ’; ದೀಪಕ್‌ ಸುಬ್ರಮಣ್ಯ INTERVIEW

ಲಕ್ಷ್ಮೀ ನಿವಾಸ ಸೀರಿಯಲ್‌ ಜಯಂತ್‌ ಪಾತ್ರ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಗುಣವಂತನೆಂದು ಗುಣಗಾನ ಮಾಡಿದ್ದ ವೀಕ್ಷಕರು, ಈಗ ಬೈಗುಳಗಳನ್ನು ನೀಡುತ್ತಿದ್ದಾರೆ. ಈ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಸ್ವತಃ ಜಯಂತ್‌ ಪಾತ್ರಧಾರಿ ದೀಪಕ್‌ ಸುಬ್ರಮಣ್ಯ HT ಕನ್ನಡದ ಜತೆಗೆ ಆ ಖುಷಿಯನ್ನು ಹಂಚಿಕೊಂಡಿದ್ದಾರೆ.

‘ಜಯಂತನಿಗೆ ಪ್ರೀತಿ ಕೊಟ್ಟಷ್ಟೇ ಬೈಗುಳವೂ ಸಿಕ್ಕಿದೆ, ಪಾತ್ರ ಎಲ್ಲರ ಮನಸ್ಸು ಮುಟ್ಟಿದೆ’; ದೀಪಕ್‌ ಸುಬ್ರಮಣ್ಯ INTERVIEW
‘ಜಯಂತನಿಗೆ ಪ್ರೀತಿ ಕೊಟ್ಟಷ್ಟೇ ಬೈಗುಳವೂ ಸಿಕ್ಕಿದೆ, ಪಾತ್ರ ಎಲ್ಲರ ಮನಸ್ಸು ಮುಟ್ಟಿದೆ’; ದೀಪಕ್‌ ಸುಬ್ರಮಣ್ಯ INTERVIEW

Lakshmi Nivasa Serial Deepak Subramanya: ಲಕ್ಷ್ಮೀ ನಿವಾಸ ಧಾರಾವಾಹಿ ಸದ್ಯ ಕರುನಾಡ ಮನೆ ಮಂದಿಯ ನೆಚ್ಚಿನ ಧಾರಾವಾಹಿಗಳಲ್ಲೊಂದು. ಅದರಲ್ಲೂ ಜಯಂತನ ಪಾತ್ರವನ್ನೂ ನೋಡುಗರಿಗೆ ಬಲು ಇಷ್ಟ. ಗುಣವಂತ ಅನ್ನೋ ಪಟ್ಟವೂ ಈ ಪಾತ್ರಕ್ಕೆ ಸಿಕ್ಕಿತ್ತು. ಅದ್ಯಾವಾಗ ಜಾಹ್ನವಿ ಜತೆಗೆ ಜಯಂತನ ಮದುವೆ ಆಯ್ತೋ, ಅಲ್ಲಿಗೆ ಪ್ರೇಕ್ಷಕನ ಎದೆಯೇ ಝಲ್‌ ಎಂದಿತ್ತು. ಈ ಜಯಂತ್‌ ಸೈಕೋನಾ? ಇಂಥದ್ದೊಂದು ಪ್ರಶ್ನೆ ಮೂಡತೊಡಗಿತು. ಆ ವರ್ತನೆ ಅಸಹನೀಯ ಎನಿಸತೊಡಗಿತು. ಇಷ್ಟಪಟ್ಟವರೇ ಬೈಯ ತೊಡಗಿದರು. ಈಗ ಇದೇ ಸೀರಿಯಲ್‌ನ ಜಯಂತ್‌ ಪಾತ್ರಧಾರಿ ದೀಪಕ್‌ ಸುಬ್ರಮಣ್ಯ ಈ ಯಶಸ್ಸಿನ ಬಗ್ಗೆ HT ಕನ್ನಡದ ಜತೆಗೆ ಮಾತನಾಡಿದ್ದಾರೆ. ರಂಗಭೂಮಿ ದಿನಗಳ ಬಗ್ಗೆಯೂ ಮೆಲುಕು ಹಾಕಿದ್ದಾರೆ.

ಟಿಪಿಕಲ್‌ ಮಿಡಲ್‌ ಕ್ಲಾಸ್‌ ನಮ್ಮದು

ನಾನು ಮೂಲತಃ ರಂಗಕಲಾವಿದ. 2004ರಲ್ಲಿ ಥಿಯೇಟರ್‌ಗೆ ನನ್ನ ಪ್ರವೇಶವಾಯ್ತು. ಹವ್ಯಾಸಿ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದೆ. ಹವ್ಯಾಸಕ್ಕೋಸ್ಕರ ನಾಟಕ ಮಾಡ್ತಿದ್ದೆ. ನನ್ನ ನಟನೆ ಕಲಿಕೆಯ ರೂಪ ಪಡೆದಿದ್ದೂ ಅಲ್ಲಿಯೇ. ಪಾತ್ರದ ಕಲಿಕೆ, ಓದು ಎಲ್ಲಿವೂ ಅಲ್ಲಿಯೇ ಶುರುವಾಯ್ತು. 2007- 08ರಲ್ಲಿ ಫ್ರೊಫೆಷನಲ್‌ ಟೀಮ್‌ ಜತೆಗೆ ಸೇರಿದೆ. ಕ್ಲಾಸಿಕ್‌ ನಾಟಕಗಳ ಜತೆಗೆ ಕಾರ್ನಾಡರ ನಾಟಕಗಳನ್ನೂ ಮಾಡುವ ಅವಕಾಶ ಸಿಕ್ಕಿತು. ಇದರಲ್ಲಿ ಏನೋ ಇದೆ ಅನ್ನೋ ಭಾವ ನನ್ನನ್ನು ಆಗ ಕಾಡಿತ್ತು. ಇಲ್ಲಿ ಒಂದು ಸಲ ಮುಳುಗಬೇಕು ಅನ್ನೋ ತುಡಿತ ನನ್ನಲ್ಲಿತ್ತು. ಅಂದುಕೊಂಡಂತೆ ಥಿಯೇಟರ್‌ನ ಸಮುದ್ರಕ್ಕಿಳಿದೆ. ಟಿಪಿಕಲ್‌ ಮಿಡಲ್‌ ಕ್ಲಾಸ್‌ನಿಂದ ಬಂದವನಾದ್ದರಿಂದ, ತಿಂಗಳಿಗೆ ಆದಾಯವೂ ಬೇಕಿತ್ತು. ಕೆಲಸ ಮಾಡಿಕೊಂಡೇ ಇದರಲ್ಲೂ ಗುರುತಿಸಿಕೊಂಡೆ.

2012ರಿಂದ ನಟನೆ ಫುಲ್‌ಟೈಮ್‌ ಆಯ್ತು

ಬಿಇ ಎಲೆಕ್ಟ್ರಾನಿಕ್‌ ಅಂಡ್‌ ಕಮ್ಯೂನಿಕೇಷನ್‌ ಮಾಡಿದ್ದೇನೆ. ನನ್ನದೇ ಆದ ಒಂದು ಕಂಪನಿ ಮಾಡಿಕೊಂಡಿದ್ದೆ. ಈ ನಡುವೆ 2012ರಲ್ಲಿ ನಟನೆಯನ್ನೇ ಫುಲ್‌ಟೈಮ್‌ ಆಗಿ ತೆಗೆದುಕೊಂಡೆ. ನಟನೆ, ಕಲೆ ವಿಚಾರದಲ್ಲಿ ನಿಖರವಾದ ಗುರಿಬೇಕು. ಗುರು ಬೇಕು. ಹಾಗಾಗಿ ನನ್ನ ಸುತ್ತಮುತ್ತಲಿನವರನ್ನು ಕೇಳಿದೆ. ರಂಗಶಂಕರದಲ್ಲಿ ನಮ್ಮದೇ ತಂಡ ಕಟ್ಟಿಕೊಂಡು ಒಂದಷ್ಟು ಪ್ರಯೋಗಗಳಿಗೆ ಒಗ್ಗಿಕೊಂಡೆವು. ಸಿನಿಮಾ ಕಡೆ ಹೋಗಿರಲಿಲ್ಲ ಎಂಬುದಕ್ಕಿಂತ ಆಗಿನ್ನೂ ನಮಗೆ ಆ ಅವಕಾಶ ಸಿಕ್ಕಿರಲಿಲ್ಲ. ಅದನ್ನು ಪಡೆದುಕೊಳ್ಳುವ ಹುಮ್ಮಸ್ಸಿರಲಿಲ್ಲ. ಆಗ ನಾಟಕವೇ ನಮಗೆ ಪ್ರಪಂಚವಾಗಿತ್ತು.

ಹಲವು ಸಿನಿಮಾಗಳಲ್ಲೂ ನಟಿಸಿದ್ದೇನೆ..

ಶುದ್ಧಿ ಸಿನಿಮಾ ಮಾಡಿದೆ. ಅಯನ ಮಾಡಿದೆ. ಹೊಸ ದಿನಚರಿ, ಲೈಫೋ ಲೈಫು, ಅಂಬುಜಾ, ಸಾರಾಂಶ ಸಿನಿಮಾಗಳಲ್ಲಿ ನಟಿಸಿದೆ. ನಾಟಕದಲ್ಲೂ ನಟನೆ ಇದೆ. ಸಿನಿಮಾದಲ್ಲೂ ನಟನೆ ಇದೆ. ಇವೆರಡರಲ್ಲೂ ಹೇಗಿದೆ ನಟನೆ ಎಂಬುದನ್ನು ಕಲಿತೆ. ಇದೆಲ್ಲದರ ನಡುವೆ ಕಿರುತೆರೆಯಲ್ಲೂ ಯಾಕೆ ನಟಿಸಬಾರದು ಎಂಬ ಆಲೋಚನೆ ಬಂತು. ಆಗ ದಾಸ ಪುರಂದರ ಸೀರಿಯಲ್‌ ಅವಕಾಶ ಸಿಕ್ಕಿತು. ಅದಕ್ಕಾಗಿ ಸಾಕಷ್ಟು ಪ್ರಿಪರೇಷನ್‌ ನಡೆಸಿದ್ದೆ. ಅದು ನನ್ನ ಜೀವನದ ಅದ್ಭುತ ಪಯಣ. ದಾಸರ ಕೊಡುಗೆ ಹೇಗಿತ್ತು ಎಂಬುದನ್ನು ನಾನು ಅರಿತೆ. ಅದಾದ ಮೇಲೆ ಸೀರಿಯಲ್‌ ಸಾಕು ಎಂದೇ ಕೈ ಬಿಟ್ಟಿದ್ದೆ. ಆಗ ಸಿಕ್ಕಿದ್ದೇ ಲಕ್ಷ್ಮೀ ನಿವಾಸ.

ಕಿರುತೆರೆ ಬೇಡ ಎಂದಾಗ ಸಿಕ್ಕ ಅವಕಾಶವೇ ಲಕ್ಷ್ಮೀ ನಿವಾಸ

ಲಕ್ಷ್ಮೀ ನಿವಾಸ ಸೀರಿಯಲ್‌ಗೂ ಆಡಿಷನ್‌ ಕೊಟ್ಟೆ. ತುಂಬ ಅದ್ಭುತವಾದ ಪಾತ್ರ. ಆ ಥರದ ಪಾತ್ರ ನನಗೆ ಕೊಡ್ತಾರೆ ಅಂತ ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಒಬ್ಬ ನಟನಿಗೆ ಎಷ್ಟು ವೈವಿಧ್ಯತೆಯ ಪಾತ್ರ ಸಿಗುತ್ತೋ ಅದರಿಂದ ಆತ ಮತ್ತಷ್ಟು ಮೊನಚಾಗುತ್ತಾನೆ. ಅದರ ಜತೆಗೆ ಈ ಪಾತ್ರ ನನಗೆ ಹೊಸದಲ್ಲ, ನಾಟಕಗಳಲ್ಲಿ ಈ ರೀತಿಯ ಎಷ್ಟೋ ಪಾತ್ರ ಮಾಡಿದ್ದೇನೆ. ಆದರೆ ಕಿರುತೆರೆಯಲ್ಲಿ ನಿಭಾಯಿಸುವುದು ಇಂಟ್ರೆಸ್ಟಿಂಗ್‌ ಅನಿಸಿತು. ಹಾಗಾಗಿ ಒಪ್ಪಿಕೊಂಡೆ.

ಜಯಂತನ ಪಾತ್ರ ಪ್ರತಿಯೊಬ್ಬರಲ್ಲೂ ಇದೆ

ಗಂಡಾಗಲಿ, ಹೆಣ್ಣಾಗಲಿ ಎಲ್ಲ ಮನಸ್ಥಿತಿಗಳು ಅವರ ಮನಸ್ಸಿನಲ್ಲಿರುತ್ತೆ. ಅದನ್ನು ಒಂದು ಹಂತದವರೆಗೂ ನಾವು ಎಕ್ಸ್‌ಪ್ರೆಸ್‌ ಮಾಡ್ತೀವಿ. ಆ ಹಂತ ಆದ ಮೇಲೆ ಇದರಿಂದ ಯಾರಿಗೋ ಬೇಜಾರಾಗುತ್ತೆ ಅನ್ನೋ ಕಾರಣಕ್ಕೆ ಅದನ್ನು ಕಟ್ಟಿಡುತ್ತೇವೆ. ಒಮ್ಮೊಮ್ಮೆ ನಾನೇ ಮನುಷ್ಯನಾಗಿ ಈ ಗಡಿ ದಾಟಬಾರದು ಎಂದೂ ಅನಿಸುತ್ತದೆ. ಈ ಎರಡರ ಗೆರೆಯ ಮಧ್ಯೆ ಜಯಂತನ ಪಾತ್ರವಿದೆ ಎಂದು ನನಗನಿಸುತ್ತೆ. ಜನರು ನೋಡುತ್ತಿದ್ದಾಗ, ನಾನೂ ಇದೇ ಥರ ಯೋಚಿಸಿದ್ದೆ, ಆದರೆ, ನಾನು ಇದನ್ನು ಮಾಡಲಿಲ್ಲ. ಈ ಸ್ತರದಲ್ಲಿ ಜಯಂತನನ್ನು ನಿಲ್ಲಿಸಬೇಕು ಎಂಬ ಆಸೆಯಿದೆ.

ಗುಣವಂತನಿಗೆ ಈಗ ಬೈಗುಳಗಳು ಸಿಗ್ತಿವೆ

ಜನರು ಆ ಪಾತ್ರವನ್ನು ಆ ಪ್ರೀತಿಯನ್ನು ಅಪ್ಪಿಕೊಂಡಿದ್ದಾರೆ. ಒಂದು ಸಣ್ಣ ಬದಲಾವಣೆ ಆದ್ರೂ ಬೇಜಾರಾಗಿದ್ದಾರೆ. ಜಯಂತ್‌ ಅಂದರೆ ಹೀಗೆ, ಜಯಂತ್‌ ಅಂದ್ರೆ ಇತರರಿಗೂ ಮಾದರಿ ಅನಿಸಿತ್ತು. ಹೀಗಿರಬೇಕು ಅಳಿಯ, ಗಂಡ ಅಂದ್ರೆ ಹೀಗಿರಬೇಕು ಅನ್ನೋ ಮನಸ್ಥಿತಿ ಈಗ ಅದು ಬದಲಾಗಿದೆ. ಎಷ್ಟು ಪ್ರೀತಿ ಕೊಟ್ರೋ ಅಷ್ಟೇ ಬೈಗುಳವೂ ಬಂದಿದೆ. ಎರಡನ್ನೂ ನಾನು ಸ್ವೀಕರಿಸುತ್ತೇನೆ. ನನಗೀಗ ಜವಾಬ್ದಾರಿಯೂ ಹೆಚ್ಚಾಗಿದೆ. ಒಬ್ಬ ನಟನಾಗಿ ಇದು ಸರ್ವೇ ಸಾಮಾನ್ಯ. ಒಂದು ಪಾತ್ರಕ್ಕೆ ನಾನು ಎಷ್ಟು ನ್ಯಾಯ ಒದಗಿಸುತ್ತಿದ್ದೇನೆ ಅನ್ನೋದು ಅಷ್ಟೇ ಮುಖ್ಯ.

ಒಳ್ಳೆಯವನಾಗಿಯೇ ಉಳಿದರೆ ಪಾತ್ರವೇ ಸತ್ತಂತೆ

ಜನ ಹೇಳ್ತಾರೆ, ಹಾಗೇ ಆಗಬಾರದಿತ್ತು, ಜಯಂತನನ್ನು ಕೆಟ್ಟದಾಗಿ ತೋರಿಸಬೇಡಿ ಎಂದು ನೋಡುಗರು ಬಯಸುತ್ತಾರೆ. ಆದರೆ, ಕಥೆ ಅಂದ ಮೇಲೆ ಅಲ್ಲಿ ಬದಲಾವಣೆ ಬೇಕು. ಎಲ್ಲ ಪಾತ್ರಗಳಲ್ಲೂ ಒಂದಿಲ್ಲೊಂದು ಗ್ರೇ ಶೇಡ್‌ ಇರುತ್ತೆ. ಅದನ್ನು ತೋರಿಸಲೇಬೇಕು. ಒಳ್ಳೆಯವನ ರೀತಿ ಆ ಪಾತ್ರವನ್ನು ಕೂರಿಸಿಬಿಟ್ಟಿದ್ದರೆ, ನಟನೆಗೆ ಅವಕಾಶವೇ ಇರುತ್ತಿರಲಿಲ್ಲ. ಅಲ್ಲಿಗೆ ಸೀಮಿತ ಆಗುತ್ತಿತ್ತು. ಈ ಬದಲಾವಣೆ ಇರೋದ್ರಿಂದ, ಒಬ್ಬ ಮನುಷ್ಯನ ಬೇರೆ ಬೇರೆ ಚಹರೆಗಳನ್ನು ತೋರಿಸುವಂಥ ಚಾನ್ಸ್‌ ಮಿಸ್‌ ಆಗ್ತಿತ್ತು. ಈ ಥರದ ನಿಜ ಸ್ಥಿತಿಗಳನ್ನು ನಾವು ಈಗಾಗಲೇ ನಮ್ಮ ಸುತ್ತಮುತ್ತ ನೋಡಿದ್ದೇವೆ.

ಕಲಿಕೆ ನಿರಂತರ

ಸದ್ಯ ಸೀರಿಯಲ್‌ ಜತೆಗೆ ಸಿನಿಮಾಗಳೂ ನಡೆಯುತ್ತಿವೆ. ಬೇರೆ ಭಾಷೆಯ ಸಿನಿಮಾಗಳ ಆಫರ್‌ ಸಹ ಬಂದಿವೆ. ಆದರೆ, ಸದ್ಯ ನನ್ನ ಗಮನ ನನ್ನ ಸುತ್ತ ಮುತ್ತ ಬೆಳೆದವರ ಮೇಲಿದೆ. ಅವರೆಲ್ಲ ಈಗ ಒಂದು ಹಂತ ತಲುಪಿದ್ದಾರೆ. ಅವರ ಜತೆಗೆ ಸಿನಿಮಾ ಕೆಲಸಗಳಲ್ಲಿ ಭಾಗಿಯಾಗಬೇಕಿದೆ. ಕಲಿಕೆ ನಿರಂತರ. ರಂಗಭೂಮಿ, ಕಿರುತೆರೆ, ಸಿನಿಮಾ ಎಲ್ಲ ಕಡೆಗೂ ಕೆಲಸ ಮಾಡಲಿದ್ದೇನೆ.

Whats_app_banner