ತಂಗಿಯರಿಗಾಗಿ ನೋವು ನುಂಗಿ ನಗು ಹಂಚುವ ಶಿವಣ್ಣನ ಕಥೆಯೇ ಈ ಅಣ್ಣಯ್ಯ; ಬದಲಾದ ಸಮಯದಲ್ಲಿ ಪುಟ್ಟಕ್ಕನ ಮಕ್ಕಳು, ಶ್ರೀರಸ್ತು ಶುಭಮಸ್ತು
ಜೀ ಕನ್ನಡದಲ್ಲಿ ಶನಿವಾರವಷ್ಟೇ ಸತ್ಯ ಸೀರಿಯಲ್ ಮುಕ್ತಾಯವಾಗಿದೆ. ಆ ಬೆನ್ನಲ್ಲೇ ಇನ್ನೊಂದು ಹೊಸ ಸೀರಿಯಲ್ ಅಣ್ಣಯ್ಯ ಆಗಮಿಸುತ್ತಿದೆ. ಈ ಸೀರಿಯಲ್‌ಗಾಗಿ ಪುಟ್ಟಕ್ಕನ ಮಕ್ಕಳು ತನ್ನ ಸ್ಕಾಟ್ ಬದಲಿಸಿದೆ. ಶ್ರೀರಸ್ತು ಶುಭಮಸ್ತು ಸಮಯದಲ್ಲೂ ಬದಲಾವಣೆಯಾಗಿದೆ.
Annayya Serial: ಕನ್ನಡದ ಜನತೆಗೆ ಮನರಂಜನೆಯ ರಸದೌತಣ ನೀಡಿ, ನಂಬರ್ ಒನ್ ಪಟ್ಟದಲ್ಲಿ ಗಟ್ಟಿಯಾಗಿ ನಿಂತಿರುವ ಚಾನಲ್ ಜೀ ಕನ್ನಡ. ವಿಭಿನ್ನ ಕಥಾಹಂದರದ ಧಾರಾವಾಹಿಗಳು, ಭರ್ಜರಿ ರಿಯಾಲಿಟಿ ಶೋಗಳ ಮೂಲಕ ಜನಮನ ಗೆದ್ದಿರುವ ಈ ವಾಹಿನಿಗೆ ಇದೀಗ 'ಅಣ್ಣಯ್ಯ'ನ ಆಗಮನವಾಗ್ತಿದೆ. ನಾಗೇಂದ್ರ ಶಾ, ನಿಶಾ ರವಿಕೃಷ್ಣನ್, ವಿಕಾಶ್ ಉತ್ತಯ್ಯ ಮೊದಲಾದವರು ನಟಿಸಿರುವ, ಹಲವು ವಿಶೇಷತೆಗಳನ್ನು ಹೊಂದಿರುವ ಈ ಕಥೆ ಆಗಸ್ಟ್ 12 ಸೋಮವಾರ ರಂದು ಶುಭಾರಂಭಗೊಳ್ಳಲಿದೆ. ಪ್ರಮೋದ್ ಶೆಟ್ಟಿ ಮತ್ತು ಸುಪ್ರೀತಾ ಶೆಟ್ಟಿ ಅವರ ಶಿವೆ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಮೂಲಕ ಈ ಧಾರಾವಾಹಿ ಮೂಡಿಬರಲಿದೆ.
ಏನಿದು ಅಣ್ಣಯ್ಯ ಸೀರಿಯಲ್ ಕಥೆ?
ನಾಲ್ಕು ಜನ ತಂಗಿಯರಿಗೆ ತಾಯಿಯ ಮಮತೆ ತೋರುತ್ತಾ, ಅವರ ಓದು- ಮದುವೆ ಅನ್ನೋ ಕನಸು ಕಾಣುತ್ತಾ, ಕಿರಾಣಿ ಅಂಗಡಿಯ ಕೆಲಸ ಮಾಡುತ್ತಾ ನಗುನಗುತಾ ಬದುಕಿರೋನೆ ಈ ಅಣ್ಣಯ್ಯ. ಮಾಕಾಳಮ್ಮನ ಪರಮ ಭಕ್ತನಾಗಿರೋ ಅಣ್ಣಯ್ಯನಿಗೆ ಊರ ಜಾತ್ರೆಯ ಸಂದರ್ಭ ಬರುವ ದೇವಿಯ ಆವೇಶ, ಹಳ್ಳಿಯ ರಾಜಕೀಯ, ಹಬ್ಬದ ಸಂಭ್ರಮ ಧಾರಾವಾಹಿಯಲ್ಲಿ ಅದ್ಧೂರಿಯಾಗಿ ಕಾಣಲಿದೆ.
ನೋವು ನುಂಗಿ ನಗು ಹಂಚೋ ಶಿವಣ್ಣನ ಕುಟುಂಬ ಒಂದೆಡೆಯಾದರೆ, ವಿಷಕಾರೋ ವೀರಭದ್ರನ ಮನೆತನ ಮತ್ತೊಂದೆಡೆ. ವೀರಭದ್ರನ ಮೊದಲನೇ ಹೆಂಡತಿ ಸೌಭಾಗ್ಯಳ ಮಗಳೇ ಪಾರ್ವತಿ. ಅಣ್ಣಯ್ಯನ ಮನಸು ಗೆದ್ದಿರೋ ಡಾಕ್ಟರ್ ಈಕೆ. ಶಿಕ್ಷಣವೇ ಎಲ್ಲಾ ಅಂತಿರೋ ಪಾರ್ವತಿ, ಏನೂ ಓದಿಲ್ಲ ಅಂತಿರೋ ಶಿವನ ಕೈ ಹಿಡೀತಾಳಾ? ವೀರಭದ್ರ ಈ ಸಂಬಂಧಕ್ಕೆ ಅನುಮತಿ ನೀಡ್ತಾನಾ? ತಂಗಿಯರನ್ನು ಓದಿಸಿ, ಮದುವೆ ಮಾಡಿಸೋ ಅಣ್ಣಯ್ಯನ ಕನಸು ನನಸಾಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಧಾರಾವಾಹಿ ಉತ್ತರ ನೀಡಲಿದೆ.
ರಂಗಭೂಮಿ ಹಿನ್ನೆಲೆಯ ಕಲಾವಿದರ ನಟನೆ
ಮೈಸೂರು ಪ್ರಾಂತ್ಯದ ಸೊಗಡು, ಹಳ್ಳಿಯ ಹುಡುಗರ ಕಾಮಿಡಿ ಟಚ್ ಇದರಲ್ಲಿದೆ. ಪಾರು ಧಾರಾವಾಹಿಯ ಹನುಮಂತು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಾಗೇಂದ್ರ ಶಾ ಇಲ್ಲಿ ಬೇರೆಯದೇ ಅವತಾರ ತಾಳಿದ್ದಾರೆ. ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಪಾತ್ರದಲ್ಲಿ ಮಿಂಚಿದ್ದ ನಿಶಾ ರವಿಕೃಷ್ಣನ್ ಇಲ್ಲಿ ವಿಭಿನ್ನ ಪಾತ್ರದೊಂದಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಜೊತೆಗೆ ರಂಗಭೂಮಿ ಹಿನ್ನೆಲೆಯ ಅನುಭವಿ ಕಲಾವಿದರ ತಾರಾಗಣವೂ ಇಲ್ಲಿರಲಿದೆ.
ಬದಲಾದ ಧಾರಾವಾಹಿಗಳ ಸಮಯ
ಶಿವಣ್ಣ- ಪಾರ್ವತಿ ಮತ್ತು ನಾಲ್ಕು ತಂಗಿಯರ ಕಥೆ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7.30 ಕ್ಕೆ ಪ್ರಸಾರಗೊಳ್ಳಲಿದೆ. ಇದುವರೆಗೆ 7.30 ಕ್ಕೆ ಪ್ರಸಾರವಾಗುತ್ತಿದ್ದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಇನ್ಮುಂದೆ ಸಂಜೆ 6.30 ಕ್ಕೆ ಮತ್ತು 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಜೀ ಕನ್ನಡದ ಎಲ್ಲಾ ಪ್ರಯತ್ನಗಳಿಗೆ ಬೆನ್ನುತಟ್ಟಿರೋ ಕನ್ನಡ ಜನತೆ ಈ ಪ್ರಯತ್ನವನ್ನೂ ಬೆಂಬಲಿಸುವ ಭರವಸೆ ಇದೆ.